ಚೀನಾ ಪ್ರಯೋಗಾಲಯದಿಂದಲೇ ಕೊರೋನಾ ಉಗಮ:ಅಮೆರಿಕ
ಅಲ್ಲಗಳೆದ ಚೀನಾದಿಂದ ವಿಡಿಯೋ ಎದಿರೇಟು
ವಾಷಿಂಗ್ಟನ್: ಕೊರೊನಾ ವೈರಸ್ಸಿನ ಉಗಮ ಸ್ಥಳ ವುಹಾನ್ ನಗರದ ವನ್ಯಜೀವಿ ಮಾಂಸ ಮಾರುಕಟ್ಟೆಯಲ್ಲ, ಅದೇ ವುಹಾನ್ನನ್ ನಗರದ ವೈರಾಣು ಪ್ರಯೋಗಾಲಯ ( ಲ್ಯಾಬೋರೇಟರಿ) ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟಿರುವ ವಾದವನ್ನು ಅಮೆರಿಕದ ಕಾರ್ಯದರ್ಶಿ ಮೈಕ್ ಪಾಂಪಿಯೊ ಬೆಂಬಲಿಸಿದ್ದಾರೆ.
ಈ ಮಧ್ಯೆ ತನ್ನ ವಿರುದ್ಧದ ಆಪಾದನೆಗಳನ್ನೂ ಅಲ್ಲಗಳೆದಿರುವ ಚೀನಾ ತನ್ನ ಹಾಗೂ ಅಮೆರಿಕದ ವರ್ತನೆಗಳನ್ನು ಹೋಲಿಕೆ ಮಾಡಿ ವಿಡಿಯೋ ಒಂದನ್ನು ಬಿಡುಗಡೆ ಮಾಡುವ ಮೂಲಕ ಎದಿರೇಟು ನೀಡಿದೆ..
ಅಮೆರಿಕದ ಕೇಂದ್ರ ಗುಪ್ತದಳದ ಮಾಜಿ ಮುಖ್ಯಸ್ಥರು, ಚೀನಾದೊಂದಿಗೆ ನಡೆಯುತ್ತಿದ್ದ ವ್ಯವಹಾರಗಳ ಮುಂಚೂಣಿ ಅಧಿಕಾರಿಗಳ ಪೈಕಿ ಪ್ರಮುಖರೂ ಆಗಿರುವ ಪಾಂಪಿಯೊ ಅಮೆರಿಕದ ‘ಎಬಿಸಿ’ ಸುದ್ದಿ ವಾಹಿನಿ ನಡೆಸಿದ್ದ ‘ದಿಸ್ ವೀಕ್’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕೊರೊನಾ ವೈರಸ್ ಬಂದಿರುವುದು ಚೀನಾದ ವುಹಾನ್ ನಗರದ ಪ್ರಯೋಗಾಲಯದಿಂದ ಎಂದು ಹೇಳಲು ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ,’ ಎಂದು ಪಾಂಪಿಯೊ ಹೇಳಿದ್ದಾರೆ. ಆದರೆ, ‘ವೈರಸ್ಸನ್ನು ಜೈವಿಕವಾಗಿ ಮಾರ್ಪಾಡು ಮಾಡಿರುವ ಬಗ್ಗೆ ಸಾಕ್ಷ್ಯಗಳಿಲ್ಲ,’ ಎಂಬುದಾಗಿ ಗುಪ್ತದಳ ನೀಡಿರುವ ಮಾಹಿತಿಯನ್ನು ಅವರು ಒಪ್ಪಿಕೊಂಡರು.
‘ವೈರಸ್ ಹೇಗೆ ಹುಟ್ಟಿತು ಎಂಬ ಬಗೆಗಿನ ವರದಿಗಳನ್ನು ಪರಿಶೀಲಿಸಿರುವ ಗುಪ್ತಚರ ಇಲಾಖೆ ಅಧಿಕಾರಿಗಳು ಅವುಗಳನ್ನು ವರ್ಗೀಕರಿಸಿದ್ದಾರೆ. ಕೊರೊನಾ ವೈರಸ್ಸಿನಿಂದ ಸೋಂಕು ತಗುಲಿದ್ದ ಪ್ರಾಣಿಯೊಂದನ್ನು ಪ್ರಯೋಗಾಲಯದಲ್ಲಿ ನಾಶ ಮಾಡಲಾಗಿದೆ. ಆ ವೇಳೆ ಆಕಸ್ಮಿಕವಾಗಿ ಅಲ್ಲಿದ್ದ ಹಲವರು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಕೊರೊನಾ ವೈರಸ್ ಹೇಗೆ ಹರಡಿತು ಎಂಬುದರ ಬಗೆಗಿನ ಹಲವು ಸಿದ್ಧಾಂತಗಳಲ್ಲಿ ಇದೂ ಒಂದು. ಇದನ್ನು ಮತ್ತಷ್ಟು ಅಧ್ಯಯನ ಮಾಡಬೇಕಾಗಿದೆ,’ ಎಂದು ಪಾಂಪಿಯೊ ಹೇಳಿದರು.
ಈ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ವೈರಸ್ಸಿನ ಉಗಮ ವುಹಾನ್ ಲ್ಯಾಬ್ ಎಂಬುದು ನನ್ನ ಬಲವಾದ ನಂಬಿಕೆ,’ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಏನಾದರೂ ಸಾಕ್ಷ್ಯವಿದೆಯೇ ಎಂದು ಕೇಳಿದ ಪ್ರಶ್ನೆಗೆ ‘ಅದನ್ನು ನಾನು ಈಗ ಹೇಳುವಂತಿಲ್ಲ,’ ಎಂದು ಹೇಳಿದ್ದರು.
ಚೀನಾದ ತಿರುಗೇಟು
ಅಮೆರಿಕ ತನ್ನ ಮೇಲೆ ಮಾಡುತ್ತಿರುವ ಆರೋಪಗಳಿಗೆಲ್ಲ ಚೀನಾ ಕಿರುಚಿತ್ರ ತಯಾರಿಸಿ ತಿರುಗೇಟು ನೀಡಿದೆ. (ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ)
ಈ ಮಧ್ಯೆ, ಕೊರೊನಾ ವೈರಸ್ ವಿರುದ್ಧ ಹೋರಾಡಲು ಅಗತ್ಯವಿದ್ದ ವೈದ್ಯಕೀಯ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಲೆಹಾಕುವ ಉದ್ದೇಶದಿಂದ ಚೀನಾ ವೈರಸ್ನ ತೀವ್ರತೆ ಮತ್ತು ಅದು ಸಾಂಕ್ರಾಮಿಕಗೊಳ್ಳುತ್ತಿರುವ ರೀತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿತ್ತು ಎಂಬ ಗುಪ್ತಚರ ಮಾಹಿತಿಯು ಅಮೆರಿಕಕ್ಕೆ ಸಿಕ್ಕಿತ್ತು ಎಂದು ಹೇಳಲಾಗಿದೆ.
ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಚೀನಾದ ನಾಯಕರು ಜನವರಿ ಆರಂಭದಲ್ಲೇ "ಉದ್ದೇಶಪೂರ್ವಕವಾಗಿ ಮುಚ್ಚಿಟ್ಟರು‘ ಎಂದು ಮೇ ೧ ರಂದು ಅಮೆರಿಕದ ಗುಪ್ತಚರ ಇಲಾಖೆಯು ನಾಲ್ಕು ಪುಟಗಳ ವರದಿಯನ್ನು ಸರ್ಕಾರಕ್ಕೆ ನೀಡಿದೆ ಎನ್ನಲಾಗಿದ್ದು, ಈ ವರದಿಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.
‘ಅಮೆರಿಕ ಗುಪ್ತಚರ ಇಲಾಖೆಯ ಈ ವರ್ಗೀಕರಿಸದ ವರದಿಯ ಮೇಲೆ ‘ಅಧಿಕೃತ ಬಳಕೆಗೆ ಮಾತ್ರ’ ಎಂದು ಬರೆಯಲಾಗಿದೆ.
‘ಜನವರಿ ಆರಂಭದಲ್ಲಿ ಚೀನಾ ಔಷಧಗಳ ಆಮದನ್ನು ಹೆಚ್ಚಿಸಿ, ರಫ್ತನ್ನು ಕಡಿಮೆ ಮಾಡಿತ್ತು, ಆದರೆ, ರಫ್ತು ನಿರ್ಬಂಧಗಳನ್ನು ನಿರಾಕರಿಸಿ, ವ್ಯಾಪಾರ ದತ್ತಾಂಶಗಳನ್ನು ಮುಚ್ಚಿಡುವ ಮೂಲಕ ತನ್ನ ಈ ನಡೆಯನ್ನು ಗೌಪ್ಯವಾಗಿರಿಸಿಕೊಳ್ಳಲು ಚೀನಾ ಪ್ರಯತ್ನಿಸಿತ್ತು,’ ಎಂದು ಗುಪ್ತಚರ ಇಲಾಖೆಯ ವರದಿ ಉಲ್ಲೇಖಿಸಿದೆ.
ಕೊರೊನಾ ವೈರಸ್ಸಿನ ಸಾಂಕ್ರಾಮಿಕಗೊಳ್ಳುವ ಗುಣಲಕ್ಷಣಗಳನ್ನು ಚೀನಾ ಜನವರಿ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೂ ತಿಳಿಸಿರಲಿಲ್ಲ. ಈ ಮೂಲಕ ಜಗತ್ತಿನ ಇತರ ದೇಶಗಳಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳುವುದು, ಮಾಸ್ಕ್, ಗೌನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಪ್ರಯತ್ನ ನಡೆಸಿತ್ತು ಎಂದು ವರದಿ ತಿಳಿಸಿದೆ.
ಜನವರಿಯಲ್ಲಿ ಚೀನಾದ ಆಮದು, ರಫ್ತು ಪ್ರಮಾಣವೂ ಸಹಜವಾಗಿರಲಿಲ್ಲ. ಆಮದು-ರಫ್ತು ವಿಚಾರದಲ್ಲಿ ಅದರ ವರ್ತನೆ ಬದಲಾಗಿತ್ತು ಎಂದು ವರದಿ ಹೇಳಿದೆ.
ಚೀನಾವು ಡಿಸೆಂಬರ್ ೩೧ ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಕೊರೊನಾ ವೈರಸ್ಸಿನ ಬಗ್ಗೆ ಮಾಹಿತಿ ನೀಡಿತ್ತು. ಜನವರಿ ೩ ರಂದು ಅಮೆರಿಕದ ರೋಗ ನಿಯಂತ್ರಣಾ ವಿಭಾಗವನ್ನು ಸಂಪರ್ಕಿಸಿತ್ತು. ಜನವರಿ ೮ ರಂದು ಕಾಯಿಲೆಯನ್ನು ನಾವೆಲ್ ಕೊರೊನಾ ವೈರಸ್ ಎಂಬುದಾಗಿ ಹೇಳಿ ಬಹಿರಂಗ ಪಡಿಸಿತ್ತು.
No comments:
Post a Comment