‘ನಿತ್ಯೋತ್ಸವ’ ಕವಿ ನಿಸಾರ್ ಅಹಮದ್ ಇನ್ನಿಲ್ಲ
ಬೆಂಗಳೂರು:
ಕನ್ನಡದ ಹಿರಿಯ ಸಾಹಿತಿ ‘ನಿತ್ಸೋತ್ಸವ’ ಕವಿ ಕೆ.ಎಸ್.ನಿಸಾರ್ ಅಹಮ್ಮದ್ (೮೪) ಅವರು 2020 ಮೇ 03ರ ಭಾನುವಾರ ನಿಧನರಾದರು. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಿಸಾರ್ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈದಿನ ಅವರು
ಬೆಂಗಳೂರಿನ ಪದ್ಮನಾಭನಗರದ ತಮ್ಮ ಸ್ವಗೃಹದಲ್ಲಿದ್ದ ಕೊನೆಯುಸಿರೆಳೆದರು.
ಇತ್ತೀಚೆಗಷ್ಟೇ ೧೫ ದಿನಗಳ ಹಿಂದೆ ಅಮೆರಿಕದಲ್ಲಿದ್ದ ಅವರ ಪುತ್ರ ಕೂಡ ನಿಧನರಾಗಿದ್ದರು. ಇದರಿಂದ ನಿಸಾರ್ ಅಹಮದ್ ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದರು. ನಿಸಾರ್ ನಿಧನದೊಂದಿಗೆ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿತು.
ಜೋಗದ ಸಿರಿ ಬೆಳಕಿನಲ್ಲಿ...’ ನಿಸಾರ್ ಅಹಮದ್ ಅವರ ಜನಪ್ರಿಯ ಕೃತಿ. ಮನೆಮನೆ ತಲುಪಿದ ಈ ಕೃತಿ ಅವರಿಗೆ ಸಾಕಷ್ಟು ಜನಮನ್ನಣೆಯನ್ನೂ ತಂದುಕೊಟ್ಟಿತ್ತು. ಜನರು ಅವರನ್ನು ಪ್ರೀತಿಯಿಂದ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಎಂದೇ ಗುರುತಿಸಿದ್ದರು.
ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಪೂರ್ಣ ಹೆಸರು ಕೊಕ್ಕರೆ ಹೊಸಳ್ಳಿ ಶೇಖ್ ಹೈದರ ನಿಸಾರ್ ಅಹಮದ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೆಬ್ರುವರಿ ೫, ೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರವರೆಗೆ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
೧೦ ವರ್ಷದವರಿದ್ದಾಗಲೇ ‘ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ೨೧ ಕವನ ಸಂಕಲನಗಳು, ೧೪ ವೈಚಾರಿಕ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳು ಪ್ರಕಟವಾಗಿವೆ.
ಅವುಗಳಲ್ಲಿ ಮನಸು ಗಾಂಧಿ ಬಜಾರು, ನಿತ್ಯೋತ್ಸವ ಹಾಗೂ ಕುರಿಗಳು ಸಾರ್ ಕುರಿಗಳು ಪ್ರಸಿದ್ಧ ಕೃತಿಗಳು.
೧೯೭೮ರಲ್ಲಿ ನಿಸಾರ್ ಅವರ ಮೊದಲ ಕ್ಯಾಸೆಟ್ ‘ನಿತ್ಯೋತ್ಸವ’ ಹೊರಬಂದಿತ್ತು.
ಸುಗಮ
ಸಂಗೀತ ಕ್ಷೇತ್ರದಲ್ಲಿ ಅವರ ರಚನೆಯ ಗೀತೆಗಳು ಯಶಸ್ಸು ಪಡೆದವು. ಆ ಬಳಿಕ ನಿಸಾರ್ ರಚನೆಯ ಕವನಗಳನ್ನು ಹೊತ್ತು ೧೩ ಆಡಿಯೊ ಆಲ್ಬಂಗಳು ಪ್ರಕಟವಾದವು.
ಪ್ರಶಸ್ತಿ, ಗೌರವಗಳು
೨೦೦೬ರ ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ (೧೯೮೧), ನಾಡೋಜ ಪ್ರಶಸ್ತಿ (೨೦೦೩), ಅರಸು ಪ್ರಶಸ್ತಿ (೨೦೦೬)
ಶಿವಮೊಗ್ಗದಲ್ಲಿ ನಡೆದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಪ್ರಮುಖ ಕೃತಿಗಳು
ಕವನ ಸಂಕಲನಗಳು: ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ,
ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು, ನಿತ್ಯೋತ್ಸವ ಕವಿತೆ,
ಗದ್ಯ ಸಾಹಿತ್ಯ: ಅಚ್ಚುಮೆಚ್ಚು, ಇದು ಬರಿ ಬೆಡಗಲ್ಲೊ ಅಣ್ಣ, ಷೇಕ್ಸ್ಪಿಯರ್ನ ಒಥೆಲ್ಲೊದ ಕನ್ನಡಾನುವಾದ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ.
No comments:
Post a Comment