ಅನಾರೋಗ್ಯದ
ವದಂತಿ ತಳ್ಳಿಹಾಕಿದ ಅಮಿತ್ ಶಾ
ನವದೆಹಲಿ: ತಾವು ಆರೋಗ್ಯವಂತರಾಗಿದ್ದು ಯಾವುದೇ ರೋಗಬಾಧೆಯಿಂದ ಬಳಲುತ್ತಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹರಡಿದ ಎಲ್ಲ ವದಂತಿಗಳನ್ನೂ 2020 ಮೇ 09ರ ಶನಿವಾರ
ಮಧ್ಯಾಹ್ನ ಇಲ್ಲಿ ತಳ್ಳಿಹಾಕಿದರು.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವರವಾದ ಪೋಸ್ಟ್ ಒಂದನ್ನು ಪ್ರಕಟಿಸಿದ ಅಮಿತ್ ಶಾ, ಕಳೆದ ಹಲವಾರು ದಿನಗಳಿಂದ ಕೆಲವರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಗೆ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ವಿವರಿಸಿದರು. ಹಲವರು ತಮ್ಮ ಸಾವಿಗಾಗಿ ಪ್ರಾರ್ಥಿಸುತ್ತಿರುವುದಾಗಿಯೂ ಟ್ವೀಟ್ ಮಾಡಿದ್ದಾರೆ ಎಂದು ಅವರು ತಿಳಿಸಿದರು.
’ದೇಶವು ಪ್ರಸ್ತುತ ಕೊರೋನಾವೈರಸ್ಸಿನಂತಹ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಸಮರ ನಡೆಸುತ್ತಿದೆ. ನಾನು ರಾಷ್ಟ್ರದ ಗೃಹ ಸಚಿವನಾಗಿ ತಡ ರಾತ್ರಿಯವರೆಗೂ ಕಾರ್ಯಮಗ್ನನಾಗಿದ್ದುದರಿಂದ ಈ ವದಂತಿಗಳ ಬಗ್ಗೆ ಗಮನ ಹರಿಸಿರಲಿಲ್ಲ. ಕಳೆದ ರಾತ್ರಿ ಇದು ನನ್ನ ಗಮನಕ್ಕೆ ಬಂತು. ಈ ಎಲ್ಲ ವ್ಯಕ್ತಿಗಳೂ ತಮ್ಮ ಕಲ್ಪನಾವಿಲಾಸದಲ್ಲಿ ಖುಷಿ ಪಡುತ್ತಿದ್ದಾರೆ ಎಂದು ನಾನು ಯೋಚಿಸಿದೆ. ಹಾಗಾಗಿ ನಾನು ಯಾವುದೇ ಸ್ಪಷ್ಟನೆ ನೀಡಲಿಲ್ಲ’
ಎಂದು ಶಾ ಹೇಳಿದರು.
‘ಆದರೆ ನನ್ನ ಪಕ್ಷದ ಲಕ್ಷಾಂತರ ಮಂದಿ ಕಾರ್ಯಕರ್ತರು
ಮತ್ತು ನನ್ನ ಹಿತೈಷಿಗಳು ಕಳೆದ ಎರಡು ದಿನಗಳಿಂದ ಅತೀವ ಕಳವಳ ವ್ಯಕ್ತ ಪಡಿಸಿದ್ದಾರೆ. ನಾನು ಅವರ ಕಳವಳವನ್ನು ನಿರ್ಲಕ್ಷಿಸಲಾರೆ. ಆದ್ದರಿಂದ ನಾನು ಸಂಪೂರ್ಣ ಆರೋಗ್ಯವಂತನಾಗಿದ್ದೇನೆ ಮತ್ತು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಲು ನಾನು ಬಯಸಿದ್ದೇನೆ’
ಎಂದು ಶಾ ನುಡಿದರು.
ತಮ್ಮ ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತ ಪಡಿಸಿದ ಎಲ್ಲ ಪಕಷ ಕಾರ್ಯಕರ್ತರು
ಮತ್ತು ಹಿತೈಷಿಗಳಿಗೆ ಗೃಹ ಸಚಿವರು ತಮ್ಮ ಕೃತಜ್ಞತೆಯನ್ನು ವ್ಯಕ್ತ ಪಡಿಸಿದರು.
‘ವದಂತಿಗಳನ್ನು ಹಬ್ಬಿಸಿದವರ ವಿರುದ್ಧ ನನಗೆ ಯಾವುದೇ ಕೆಟ್ಟ ಅಭಿಪ್ರಾಯ ಇಲ್ಲ ಅಥವಾ ಹಗೆತನ ಇಲ್ಲ. ಇಂತಹ ವದಂತಿಗಳು ಒಬ್ಬ ವ್ಯಕ್ತಿಯ ಆರೋಗ್ಯವನ್ನು ಇನ್ನಷ್ಟು ಬಲ ಪಡಿಸುತ್ತದೆ ಎಂಬುದು ನನ್ನ ನಂಬಿಕೆ’
ಎಂದು ಹಿಂದೂ ನಂಬಿಕೆಗಳತ್ತ ಶಾ ಗಮನ ಸೆಳೆದರು.
‘ಆದ್ದರಿಂದ ಇಂತಹ ಎಲ್ಲ ವ್ಯಕ್ತಿಗಳು ಇನ್ನು ಮುಂದಾದರೂ ಇಂತಹ ಅರ್ಥಹೀನ ಕೆಲಸಗಳನ್ನು ಬಿಟ್ಟು, ನನಗೆ ನನ್ನ ಕೆಲಸ ಮಾಡಲು ಬಿಡುತ್ತಾರೆ ಮತ್ತು ಅವರೂ ತಮ್ಮ ಕೆಲಸ ಮಾಡುತ್ತಾರೆ ಎಂದು ನಾನು ಹಾರೈಸುವೆ’
ಎಂದು ಸಚಿವರು ನುಡಿದರು.
ಅಮಿತ್ ಶಾ ಅವರ ಟ್ವೀಟ್ ಪ್ರಕಟವಾದ ಬೆನ್ನಲ್ಲೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಶಾ ಅವರ ಆರೋಗ್ಯ ದ ಬಗ್ಗೆ ಅಮಾನವೀಯ ಟೀಕೆಗಳನ್ನು ಮಾಡಿರುವುದು ’ಅತ್ಯಂತ ಖಂಡನೀಯ’
ಎಂದು ಪ್ರತಿಕ್ರಿಯಿಸಿದರು.
‘ಇಂತಹ ದಾರಿತಪ್ಪಿಸುವ ಟೀಕೆಗಳನ್ನು ಯಾರೇ ವ್ಯಕ್ತಿಯ ಬಗ್ಗೆ ಮಾಡುವುದು ಅಂತಹ ಟೀಕೆ ಮಾಡುವ ವ್ಯಕ್ತಿಗಳ ಮನಃಸ್ಥಿತಿಯನ್ನು ತೋರಿಸುತ್ತದೆ. ನಾನು ಅದನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಅವರಿಗೆ ಬುದ್ದಿಯನ್ನು ನೀಡು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’
ಎಂದು ನಡ್ಡಾ ಟ್ವೀಟ್ ಮಾಡಿದರು.
No comments:
Post a Comment