Friday, May 8, 2020

ಮನೆ ಮನೆಗೆ ಆನ್ ಲೈನ್ ಮೂಲಕ ಮದ್ಯ: ಸುಪ್ರೀಂ ನಿರ್ದೇಶನ

ಮನೆ ಮನೆಗೆ  ಆನ್ ಲೈನ್ ಮೂಲಕ ಮದ್ಯ: ಸುಪ್ರೀಂ ನಿರ್ದೇಶನ
ನವದೆಹಲಿ: ಕೊರೋನಾವೈರಸ್ ತಡೆಗಟ್ಟುವ ಸಲುವಾಗಿ ಮದ್ಯವನ್ನು ನೇರವಾಗಿ ಮಾರಾಟ ಮಾಡುವ ಬದಲಿಗೆ ಮನೆ ಮನೆಗೆ ಸರಬರಾಜು ಮಾಡುವ ಬಗ್ಗೆ ಅಥವಾ ಆನ್ ಲೈನ್ ಮೂಲಕ ಸರಬರಾಜು ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಗಂಭೀರವಾಗಿ ಆಲೋಚಿಸಬೇಕು. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸುಪ್ರೀಂಕೋರ್ಟ್  2020 ಮೇ 08ರ ಶುಕ್ರವಾರ  ನಿರ್ದೇಶನ ನೀಡಿತು.

ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೆ ಅದು ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂಬುದಾಗಿ ದೂರಿದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ಇತ್ಯರ್ಥ ಪಡಿಸುತ್ತಾ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.

ದಿಗ್ಬಂಧನ ಮುಂದುವರೆಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ  ಅಶೋಕ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಬಿಆರ್ ಗವಾಯಿ ಅವರನ್ನು ಒಳಗೊಂಡ ಪೀಠವು ಸೂಚನೆ ನೀಡಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನಾವು ಯಾವುದೇ ಆದೇಶ ನೀಡುವುದಿಲ್ಲ. ಆದರೆ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮದ್ಯವನ್ನು ನೇರವಾಗಿ ಮಾರಾಟ ಮಾಡದೇ ಮನೆಗೆ ಸರಬರಾಜು ಮಾಡುವ ಬಗ್ಗೆ ಆಲೋಚಿಸಬೇಕುಎಂದು ಪೀಠ ತಿಳಿಸಿತು.

ದಿಗ್ಬಂಧನ ವೇಳೆಯಲ್ಲಿ ಮೇ ೧ರಿಂದ ನೇರವಾಗಿ ಮದ್ಯ ಮಾರಾಟ ಮಾಡಲು ಅನುಮತಿ ನೀಡಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಯನ್ನು ಅರ್ಜಿ ಪ್ರಶ್ನಿಸಿತ್ತು.

ಆನ್ ಲೈನ್ ಮೂಲಕ ಮನೆಗಳಿಗೆ ಮದ್ಯ ವಿತರಣೆ ಮಾಡುವ ಬಗೆಗೂ ಸರ್ಕಾರಗಳು ಯೋಚಿಸಬಹುದು ಎಂದು ಅರ್ಜಿದಾರ ಗುರುಸ್ವಾಮಿ ನಟರಾಜ್ ಪರ ವಕೀಲ ಸಾಯಿ ದೀಪಕ್ ಅವರು ಹೇಳಿದರು.

ಮದ್ಯ ಮಾರಾಟ ಮಳಿಗೆ, ಅಂಗಡಿಗಳಲ್ಲಿ ಸಾಮಾಜಿಕ ಅಂತರದ ಪಾಲನೆಯಾಗುತ್ತಿಲ್ಲ. ಕೋವಿಡ್ -೧೯ ಪ್ರಕರಣಗಳು ಹೆಚ್ಚಿರುವ ವರದಿಗಳಿವೆ ಎಂದು ಅವರು ನುಡಿದರು.

ಒಂದು ತಿಂಗಳಿಗೂ ಹೆಚ್ಚು ಅವಧಿಯ ರಾಷ್ಟ್ರವ್ಯಾಪಿ ದಿಗ್ಬಂಧನದಿಂದ ಸಾಧಿಸಿರುವ ಫಲಿತಾಂಶಗಳು ವಿಫಲವಾಗುವತ್ತ ಸಾಗಿದ್ದು, ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ ಎಂದು ದೀಪಕ್ ವಿವರಿಸಿದರು.

ದಿಗ್ಬಂಧನ ಅವಧಿಯಲ್ಲಿ ಅಥವಾ ಭಾರತವು ಕೋವಿಡ್-೧೯ ಮುಕ್ತ ರಾಷ್ಟ್ರ ಎಂಬುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಘೋಷಿಸುವವರೆಗೆ ಮದ್ಯದ ಅಂಗಡಿಗಳಲ್ಲಿ ನೇರವಾಗಿ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದರು.

ಆನ್ ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಅಥವಾ ಮನೆಗೆ ಮದ್ಯ ತಲುಪಿಸುವ ಬಗ್ಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ಇದಕ್ಕೆ ಪೀಠವು ಪ್ರತಿಕ್ರಿಯಿಸಿತು.

ಮದ್ಯದ ನೇರ ಮಾರಾಟದಿಂದ ಜನ ಸಾಮಾನ್ಯದ ಬದುಕಿನ ಮೇಲೆ ದುಷ್ಪರಿಣಾಮವಾಗಬಾರದು ಎಂಬುದಷ್ಟೇ ತಮ್ಮ ಇಚ್ಛೆ. ಗೃಹ ವ್ಯವಹಾರಗಳ ಸಚಿವಾಲಯವು ಸ್ಪಷ್ಟನೆ ನೀಡಿ ಮಾರ್ಗಸೂಚಿ ಪ್ರಕಟಿಸಬೇಕು ಮತ್ತು ರಾಜ್ಯಗಳು ಅದನ್ನು ಪಾಲಿಸಬೇಕು ಎಂಬುದಾಗಿ ತಮ್ಮ ಆಶಯ ಎಂದು ದೀಪಕ್ ಪೀಠಕ್ಕೆ ತಿಳಿಸಿದರು.

ಆಗ ಪೀಠವು ಲಾಕ್ ಡೌನ್ ಅವಧಿಯಲ್ಲಿ ಆನ್ ಲೈನ್ ಮದ್ಯ ಮಾರಾಟ ಬಗ್ಗೆ ಪರಿಗಣಿಸುವಂತೆ ನಿರ್ದೇಶನ ನೀಡುವ ಮೂಲಕ ಪೀಠವು ವಿಷಯವನ್ನು ಇತ್ಯರ್ಥ ಪಡಿಸಿತು.

No comments:

Advertisement