Monday, May 11, 2020

ಹಳ್ಳಿಗಳಿಗೆ ಕೊರೋನಾ ಮುಟ್ಟದಂತೆ ನೋಡುವುದು ದೊಡ್ಡ ಸವಾಲು: ಪ್ರಧಾನಿ

ಹಳ್ಳಿಗಳಿಗೆ ಕೊರೋನಾ ಮುಟ್ಟದಂತೆ ನೋಡುವುದು ದೊಡ್ಡ ಸವಾಲು:  ಪ್ರಧಾನಿ
ನವದೆಹಲಿ: ಹಳ್ಳಿಗಳಿಗೆ ಕೊರೋನಾ ವೈರಸ್ ಮುಟ್ಟದಂತೆ ನೋಡಿಕೊಳ್ಳಬೇಕಾದದ್ದು ಈಗ ನಮ್ಮ ಮುಂದಿರುವ ಅತಿದೊಡ್ಡ ಸವಾಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಮೇ 11ರ ಸೋಮವಾರ ಇಲ್ಲಿ ಹೇಳಿದರು.

ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಮೂರನೇ ಹಂತದ ಮುಕ್ತಾಯಕ್ಕೆ ಒಂದು ವಾರ ಮುಂಚಿತವಾಗಿ ರಾಜ್ಯ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಸಮ್ಮೇಳನದ ಆರಂಭದಲ್ಲೇ ಪ್ರಾಸ್ತಾವಿಕವಾಗಿ ಮಾತನಾಡುತ್ತಾಸಮಗ್ರ ವಿಧಾನ ಅನುಸರಿಸುವ ಮೂಲಕ ಮುಂದಕ್ಕೆ ಸಾಗುವ ಬಗ್ಗೆ ಸರ್ಕಾರ ಚಿಂತಿಸಬೇಕಾಗಿದೆ ಎಂದು ಹೇಳಿದರು.

ಸಮಗ್ರ ಹೋರಾಟದಲ್ಲಿ ಕೋವಿಡ್-೧೯ ಬೆದರಿಕೆ ವಿರುದ್ಧ ಹೋರಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ವಿಶ್ವವು ಹೇಳುತ್ತಿದೆ. ಹೋರಾಟದಲ್ಲಿ ರಾಜ್ಯಗಳು ಮಹತ್ವದ ಪಾತ್ರ ವಹಿಸಿವೆ. ಅವುಗಳು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡಿವೆ ಮತ್ತು ಅಪಾಯವನ್ನು ನಿವಾರಿಸುವ ನಿಟ್ಟಿನಲ್ಲಿ ತಮ್ಮ ಪಾತ್ರಗಳನ್ನು ನಿಭಾಯಿಸಿವೆ. ಎರಡು ಗಜ ದೂರ ಎಂಬ ನಿಯಮ ಸಡಿಲವಾಗಿದ್ದರೆ ಬಿಕ್ಕಟ್ಟು ಹೆಚ್ಚಾಗುತ್ತಿತ್ತುಎಂದು ಪ್ರಧಾನಿ ನುಡಿದರು.

ಜನರು ಇದ್ದಲ್ಲಿಯೇ ಇರಬೇಕು ಎಂಬುದಕ್ಕೆ ನಾವು ಒತ್ತು ನೀಡಿದೆವು. ಆದರೆ ಮನೆಯ ಹೋಗಬೇಕು ಎಂಬುದಾಗಿ ಬಯಸುವುದು ಮನುಷ್ಯ ಸಹಜ ವರ್ತನೆ. ಆದ್ದರಿಂದ ನಾವು ನಮ್ಮ ನಿಧಾರಗಳನ್ನು ಪರಿಷ್ಕರಿಸಬೇಕಾಯಿತು ಅಥವಾ ಬದಲಾಯಿಸಬೇಕಾಯಿತು. ಇದರ ಹೊರತಾಗಿಯೂ ರೋಗವು ಹರಡದಂತೆ ಮತ್ತು ಹಳ್ಳಿಗಳಿಗೆ ಹೋಗದಂತೆ ನಾವು ಖಚಿತಪಡಿಸಿಕೊಳ್ಳಬೇಕಾಗಿದೆ. ಇದು ಈಗ ನಮ್ಮ ಮುಂದಿರುವ ದೊಡ್ಡ ಸವಾಲುಎಂದು ಪ್ರಧಾನಿ ವಲಸೆ ಕಾರ್ಮಿಕರ ಮರುವಲಸೆ ಬಗ್ಗೆ ಉಲ್ಲೇಖಿಸುತ್ತಾ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಸಂಪುಟ ಕಾರ್ಯದರ್ಶಿಯವರು  ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದೂ  ಪ್ರಧಾನಿ ಹೇಳಿದರು.

ಕೊರೋನಾ ಹರಡುವಿಕೆ ಬಗ್ಗೆ ತೀವ್ರವಾದ ನಿಗಾ ಇಡಿ. ಸ್ಥಗಿತಗೊಂಡಿರುವ ಕೆಲಸಗಳನ್ನು ಆರಂಭಿಸಿ. ಸಮತೋಲಿತ ಕಾರ್ಯತಂತ್ರದೊಂದಿಗೆ ಮುಂದುವರೆಯಿರಿ. ಯಾವ ಹಾದಿಯಲ್ಲಿ ಕೆಲಸ ಮಾಡಬೇಕು ಎಂಬುದನ್ನು ನಿರ್ಧರಿಸಿ. ಆರ್ಥಿಕ ವಿಚಾರದ ಬಗೆಗೂ ತಿಳಿಸಿ. ಎಲ್ಲರ ಸಲಹೆಗಳನ್ನು ಆಧರಿಸಿ ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದು ಪ್ರಧಾನಿ ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾವೈರಸ್ ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಮುಖ್ಯಮಂತ್ರಿಗಳ ಜೊತೆ ನಡೆಸುತ್ತಿರುವ ಐದನೇ ವಿಡಿಯೋ ಕಾನ್ಫರೆನ್ಸ್ ಇದು.

ಸಭೆಯಲ್ಲಿ ಹಾಜರಿದ್ದ ಗೃಹ ಸಚಿವ ಅಮಿತ್ ಶಾ ಅವರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ (ಆಪ್) ಮಹತ್ವವನ್ನು ವಿವರಿಸಿದರು ಮತ್ತು ಅದನ್ನು ಡೌನ್ ಲೋಡ್ ಮಾಡಿಕೊಳ್ಳುವುದನ್ನು ಜನಪ್ರಿಯಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಆರೋಗ್ಯ ಸೇತು ಆಪ್ ವೈರಸ್ ಹರಡದಂತೆ ತಡೆಯುವಲ್ಲಿ ನೆರವಾಗುತ್ತದೆ ಎಂದು ಶಾ ಹೇಳಿದರು.

ಹಿಂದಿನ ಸಭೆಗಳಲ್ಲಿ ಪ್ರಧಾನಿಯವರು ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ವಿಸ್ತರಿಸುವ ಬಗ್ಗೆ ಮತ್ತು ಸೋಂಕು ಹರಡುವಿಕೆ ತಡೆಗಟ್ಟುವ ಬಗ್ಗೆ ಮುಖ್ಯಮಂತ್ರಿಗಳಿಂದ ಸಲಹೆಗಳನ್ನು ಪಡೆದುಕೊಂಡಿದ್ದರು.

ಸಂಪುಟ ಕಾರ್ಯದರ್ಶಿ ರಾಜೀವ ಗೌಬಾ ಅವರು ಇದಕ್ಕೂ ಮುನ್ನ ಭಾನುವಾರ ರಾಜ್ಯ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದರು ಮತ್ತುಹಸಿರು ವಲಯಗಳು ಕೋವಿಡ್-೧೯ ಮುಕ್ತವಾಗಿ ಇರುವಂತೆ ಖಚಿತ ಪಡಿಸಿಕೊಳ್ಳಲು ಮತ್ತು ರೋಗ ಪ್ರದೇಶಕ್ಕೆ ಹರಡದಂತೆ ನೋಡಿಕೊಳ್ಳಲು ಸಲಹೆ ಮಾಡಿದರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ನುಡಿದರು.

ಆರೋಗ್ಯ ಕಾರ್ಯಕರ್ತರ ಚಲನವಲನಕ್ಕೆ ಯಾವುದೇ ಅಡೆ ತಡೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದೂ ಅವರು ರಾಜ್ಯಗಳಿಗೆ ಸೂಚಿಸಿದರು.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಭಾನುವಾರ ಮಾತನಾಡುತ್ತಾ ಕಳೆದ ೨೪ ಗಂಟೆಗಳಲ್ಲಿ (ಶನಿವಾರ-ಭಾನುವಾರ ಮಧ್ಯೆ) ೧೦ ರಾಜ್ಯಗಳಲ್ಲಿ ಕೋವಿಡ್-೧೯ ಹೊಸ ಪ್ರಕರಣ ವರದಿಯಾಗಿಲ್ಲ. ಮತ್ತು ಚೇತರಿಕೆ ಪ್ರಮಾಣ ಶೇಕಡಾ ೩೦ನ್ನು ದಾಟಿದೆ ಎಂದು ಹೇಳಿದ್ದರು.

ಕೊರೋನಾವೈರಸ್
ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತವು ಅತ್ಯಂತ ವೇಗವಾಗಿ ಯಶಸ್ವಿನತ್ತ ಸಾಗುತ್ತಿದೆ ಎಂದು ಅವರು ಹೇಳಿದ್ದರು.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳಲ್ಲಿ ,೭೩೬ ಕೊರೋನಾವೈರಸ್ ರೋಗಿಗಳು ಗುಣಮುಖರಾಗಿದ್ದು ಒಂದೇ ದಿನದಲ್ಲಿ ದಾಖಲಾದ ಅತ್ಯಂತ ಹೆಚ್ಚಿನ ಚೇತರಿಕೆ ಸಂಖ್ಯೆ ಇದು ಎಂದು ಹೇಳಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಮೇ ೧ರಂದು ೭೩೩ ಜಿಲ್ಲೆಗಳನ್ನು ಕೆಂಪು ವಲಯ ಎಂಬುದಾಗಿಯೂ, ೨೮೪ ಜಿಲ್ಲೆಗಳನ್ನು ಕಿತ್ತಳೆ ವಲಯ ಎಂಬುದಾಗಿಯೂ, ೩೧೯ ಜಿಲ್ಲೆಗಳನ್ನು ಹಸಿರುವ ವಲಯ ಎಂಬುದಾಗಿಯೂ ವರ್ಗೀಕರಿಸಿತ್ತು. ಪ್ರಕರಣಗಳ ಸಂಖ್ಯೆ, ದುಪ್ಪಟ್ಟು ಪ್ರಮಾಣ (ಡಬ್ಲಿಂಗ್ ರೇಟ್), ಪರೀಕ್ಷಾ ಪ್ರಮಾಣ ಮತ್ತು ನಿಗಾ ಹಿಮ್ಮಾಹಿತಿಯನ್ನು ಪರಿಗಣಿಸಿ ವರ್ಗೀಕರಣವನ್ನು ಮಾಡಲಾಗಿತ್ತು.

ಮೋದಿಗೆ ದೀದಿ  ಎದಿರೇಟು:   ರಾಷ್ಟವನ್ನು ಕೊರೋನಾವೈರಸ್ ಸಾಂಕ್ರಾಮಿಕವು ಅಮುಕಿಕೊಂಡಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರವು ರಾಜಕೀಯ ಆಡುತ್ತಾ ಕೂರಬಾರದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಹೇಳಿದರು.

ಪ್ರಧಾನಿ ನರೇಂರ ಮೋದಿ ಅವರು ಮುಖ್ಯಮಂತ್ರಿಗಳ ಜೊತೆಗೆ ನಡೆಸಿದ ವಿಡಿಯೋ ಕಾನ್ಫರೆನ್ಸಿನಲ್ಲಿ ಪಾಲ್ಗೊಂಡ ಮಮತಾ ಬ್ಯಾನರ್ಜಿ ಸಂದರ್ಭದಲ್ಲಿಯೇ ಪ್ರಧಾನಿಯವರ ಮೇಲೆ ಚಾಟಿ ಬೀಸಿದರು.

ರಾಜ್ಯವಾಗಿ ವೈರಸ್ಸನ್ನು ನಿಗ್ರಹಿಸಲು ನಾವು ನಮಗೆ ಸಾಧ್ಯವಿರುವ ಅತ್ಯುತ್ತಮ ಯತ್ನಗಳನ್ನು ಮಾಡುತ್ತಿದ್ದೇವೆ. ನಿರ್ಣಾಯಕ ಹೊತ್ತಿನಲ್ಲಿ ಕೇಂದ್ರವು ರಾಜಕೀಯ ಮಾಡಬಾರದು. ನಾವು ಅಂತಾರಾಷ್ಟ್ರೀಯ ಗಡಿಗಳು ಮತ್ತು ಇತರ ದೊಡ್ಡ ರಾಜ್ಯಗಳ ಗಡಿಗಳಿಂದ ಸುತ್ತುವರೆಯಲ್ಪಟ್ಟಿದ್ದೇವೆ. ಹೀಗಾಗಿ ನಮ್ಮ ಮುಂದೆ ಬೃಹತ್ ಸವಾಲುಗಳಿವೆಎಂದು ಬ್ಯಾನರ್ಜಿ ಹೇಳಿದರು.

ಎಲ್ಲ ರಾಜ್ಯಗಳಿಗೂ ಸಮಾನ ಮಹತ್ವ ನೀಡಬೇಕು ಮತ್ತು ನಾವು ಭಾರತ ತಂಡವಾಗಿ (ಟೀಮ್ ಇಂಡಿಯಾ) ಒಟ್ಟಿಗೆ ಕೆಲಸ ಮಾಡಬೇಕು. ಒಕ್ಕೂಟ ಸ್ವರೂಪವನ್ನು ಗೌರವಿಸಬೇಕುಎಂದು ಮಮತಾ ನುಡಿದರು.

ಕೇಂದ್ರ ಸರ್ಕಾರವು ಇತ್ತೀಚೆಗೆ ಕೋವಿಡ್-೧೯ ನಿರ್ವಹಣೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ಟೀಕಿಸಿತ್ತು. ಜನಸಂಖ್ಯೆಗೆ ಹೋಲಿಸಿದರೆ ರಾಜ್ಯದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೊರೋನಾವೈರಸ್ ಪರೀಕ್ಷೆ ನಡೆಯುತ್ತಿದೆ ಮತ್ತು ದೇಶದಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಹೆಚ್ಚು (ಶೇಕಡಾ ೧೩.) ಸಾವುಗಳು ದಾಖಲಾಗಿವೆಎಂದು ಕೇಂದ್ರ ಹೇಳಿತ್ತು.

ಏನಿದ್ದರೂ, ಮೂಲಸವಲತ್ತುಗಳ ಕೊರತೆಯ ಕಾರಣದಿಂದ ಮೊದಲ ದಿನಗಳಲ್ಲಿ ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದವು. ಇದರಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿದವು ಎಂದು  ರಾಜ್ಯ ಸರ್ಕಾರವು ಪ್ರತಿಪಾದಿಸಿತ್ತು.

ಭಾರತ ಮತ್ತು ಬಾಂಗ್ಲಾದೇಶ ಗಡಿ ಕ್ರಾಸಿಂಗ್ಗಳಲ್ಲಿ ಗೂಡ್ಸ್ ರೈಲುಗಾಡಿಗಳ ಸಂಚಾರಕ್ಕೆ ಅನುಮತಿ ನೀಡದೇ ಇದ್ದುದಕ್ಕಾಗಿಯೂ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕೇಂದ್ರ ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು. ಇಂತಹ ಕ್ರಮಗಳು ನೆರೆಯ ರಾಷ್ಟ್ರಕ್ಕೆ ಸಂಬಂಧಿಸಿದಂತೆ ದೇಶದ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಬುಡಮೇಲು ಮಾಡಬಹುದು ಎಂದು ಕೇಂದ್ರ ಎಚ್ಚರಿಸಿತ್ತು.

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ರಾಜೀವ ಸಿನ್ಹ ಅವರಿಗೆ ಬರೆದ ಖಾರವಾದ ಪತ್ರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಇಂತಹ ವರ್ತನೆಗಳ ಮೂಲಕ ಪಶ್ಚಿಮ ಬಂಗಾಳವು ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಆದೇಶಗಳನ್ನು ಮತ್ತು ಭಾರತ ಸಂವಿಧಾನದ ೨೫೩, ೨೫೬ ಮತ್ತು ೨೫೭ ಪರಿಚ್ಛೇದಗಳ ಅಡಿಯಲ್ಲಿ ವಿವರಿಸಲಾಗಿರುವ ನಿರ್ದೇಶಕ ತತ್ವಗಳನ್ನು ಉಲ್ಲಂಘಿಸಿದೆ ಎಂದು ಟೀಕಿಸಿದ್ದರು.

ಸಂವಿಧಾನದ ೨೫೩ನೇ ಪರಿಚ್ಛೇದವು ಅಂತಾರಾಷ್ಟ್ರೀಯ ಒಪ್ಪಂದಗಳ ಜಾರಿಗಾಗಿ ಶಾಸನಗಳನ್ನು ರೂಪಿಸುವ ಬಗ್ಗೆ ಹೇಳಿದರೆ, ೨೫೬ ಮತ್ತು ೨೫೭ನೇ ಪರಿಚ್ಛೇದಗಳು ರಾಜ್ಯಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರಗಳನ್ನು ಕೇಂದ್ರಕ್ಕೆ ನೀಡಿವೆ. ಇಂತಹ ನಿರ್ದೇಶನಗಳನ್ನು ರಾಜ್ಯವು ಪಾಲಿಸಲೇ ಬೇಕಾಗುತ್ತದೆ.

ಮೇ ೧ರಂದು ಹೊರಡಿಸಲಾದ ದಿಗ್ಬಂಧನ (ಲಾಕ್ ಡೌನ್) ಕ್ರಮಗಳನ್ನು ರಾಜ್ಯಸರ್ಕಾರಕ್ಕೆ ನೆನಪಿಸಿದ್ದ ರಾಜೀವ ಸಿನ್ಹ, ಇವುಗಳ ಪ್ರಕಾರ ಯಾವುದೇ ರಾಜ್ಯ, ಕೇಂದ್ರಾಡಳಿತ ಪ್ರದೇಶವು ನೆರೆಯ ರಾಷ್ಟ್ರಗಳ ಜೊತೆಗಿನ ಒಪ್ಪಂದದಂತೆ ವ್ಯವಹಾರಕ್ಕಾಗಿ ಗಡಿ ಕ್ರಾಸಿಂಗ್ ಗೆ ಸರಕು ಸಾಗಣೆಯನ್ನು ತಡೆಯುವಂತಿಲ್ಲ ಎಂದೂ ಸಿನ್ಹ ನೆನಪಿಸಿದ್ದರು.

ಪತ್ರದ ಬಳಿಕ ಭಾರತ ಮತ್ತು ಬಾಂಗ್ಲಾದೇಶ ನಡುವಣ ವ್ಯಾಪಾರವು ಕೊರೋನಾವೈರಸ್ ಲಾಕ್ ಡೌನ್ ಅವಧಿಯಲ್ಲಿ ದಕ್ಷಿಣ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿನ ಗೆಡೆ ಮೂಲಕ ಮುಂದುವರೆಯಬಹುದು ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿತ್ತು.

No comments:

Advertisement