ಭಾರತದಲ್ಲಿ ಏರಿದ ಚೇತರಿಕೆ, ಶೀಘ್ರ ಸಾರ್ವಜನಿಕ ಸಾರಿಗೆ ಆರಂಭ: ನಿತಿನ್ ಗಡ್ಕರಿ
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿಗೆ ತುತ್ತಾದವರ ಚೇತರಿಕೆ ಪ್ರಮಾಣ ಇನ್ನಷ್ಟು ಹೆಚ್ಚಿದ್ದು, 2020 ಮೇ 06ರ ಬುಧವಾರ ಶೇಕಡಾ ೨೯ಕ್ಕೆ ಏರಿದೆ. ಇದೇ ವೇಳೆಗೆ ಶೀಘ್ರದಲ್ಲೇ ಕೆಲವು ಮಾರ್ಗಸೂಚಿಗಳೊಂದಿಗೆ ಸಾರ್ವಜನಿಕ ಸಾರಿಗೆ ಆರಂಭದ ವಿಶ್ವಾಸವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ವ್ಯಕ್ತ ಪಡಿಸಿದರು.
ಭಾರತದಲ್ಲಿ ಒಟ್ಟು ಕೊರೋನಾವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ೪೯,೩೯೧ಕ್ಕೆ
ಏರಿದ್ದು, ಸಾವಿನ ಸಂಖ್ಯೆ ೧೬೯೪ಕ್ಕೆ ಮುಟ್ಟಿದೆ. ಸುಮಾರು ೧೪,೦೦೦ ಮಂದಿ ರೋಗಿಗಳು ಗುಣಮುಖರಾಗಿದ್ದು, ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಚೇತರಿಕೆ ಪ್ರಮಾಣ ಶೇಕಡಾ ೨೯ಕ್ಕೆ ಏರಿತು.
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ೧೬,೭೫೮ಕ್ಕೆ
ತಲುಪಿದ್ದು ಬುಧವಾರ ೧೨೩೩ ಹೊಸ ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲೂ ೭೭೧ ಹೊಸ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ ೩೨೪ ಪ್ರಕರಣಗಳು ಕೇವಲ ಚೆನ್ನೈ ನಗರದಿಂದ ವರದಿಯಾಯಿತು.
ಈ ಮಧ್ಯೆ ಮಾರ್ಚ್ ೨೪ರಂದು ಮೊದಲ ಹಂತದ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಘೋಷಣೆಯಾದ ಬಳಿಕ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಸಾರ್ವಜನಿಕ ಸಾರಿಗೆಯು ಶೀಘ್ರದಲ್ಲೇ ಪುನಾರಂಭಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಾಗಣೆದಾರರಿಗೆ 2020 ಮೇ 06ರ ಬುಧವಾರ ಭರವಸೆ ನೀಡಿದರು.
ಸಾರಿಗೆ ಮತ್ತು ಹೆದ್ದಾರಿಗಳ ಪುನರಾಂಭವು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದ ಸಚಿವರು, ಕೆಲವು ಮಾರ್ಗಸೂಚಿಗಳೊಂದಿಗೆ ಸಾರ್ವಜನಿಕ ಸಾರಿಗೆಯು ಶೀಘ್ರವೇ ಆರಂಭವಾಗಬಹುದು ಎಂದು ನುಡಿದರು.
ಏನಿದ್ದರೂ, ಸಾಮಾಜಿಕ ಅಂತರ ಪಾಲನೆ ಮತ್ತು ಕೈ ತೊಳೆದುಕೊಳ್ಳುವುದು, ಸ್ಯಾನಿಟೈಸಿಂಗ್, ಮುಖಗವಸು ಧರಿಸುವುದು ಇತ್ಯಾದಿ ಎಲ್ಲ ಸುರಕ್ಷತಾ ಕ್ರಮಗಳನ್ನು ಬಸ್ಸು ಮತ್ತು ಕಾರುಗಳ ಚಾಲನೆಯ ಸಮಯದಲ್ಲಿ ಪಾಲಿಸುವುದು ಅತ್ಯಗತ್ಯ ಎಂದು ಅವರು ಎಚ್ಚರಿಸಿದರು.
ಸಚಿವರು ಭಾರತದ ಬಸ್ಸು, ಕಾರು ಆಪರೇಟರುಗಳ ಒಕ್ಕೂಟದ ಸದಸ್ಯರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿನಲ್ಲಿ ಮಾತನಾಡುತ್ತಿದ್ದರು.
ಕೊರೋನಾವೈರಸ್ ಪ್ರಸರಣ ತಡೆಗಾಗಿ ವಿಧಿಸಲಾದ ರಾಷ್ಟ್ರವ್ಯಾಪಿ ಲಾಕ್ ಡೌನ್ನ್ನು ಮೇ ೧೭ರವರೆಗೆ ವಿಸ್ತರಿಸಲಾಗಿದೆ. ಯಾವುದೇ ರೈಲ್ವೇ ಅಥವಾ ವಿಮಾನ ಹಾರಾಟಕ್ಕೆ ಈ ಅವಧಿಯಲ್ಲಿ ಅವಕಾಶ ನೀಡಲಾಗುವುದಿಲ್ಲ.
ಆದಾಗ್ಯೂ, ಕೊರೋನಾ ದಿಗ್ಬಂಧನದ ಪರಿಣಾಮವಾಗಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ತಲುಪಿಸುವ ಸಲುವಾಗಿ ರೈಲ್ವೇಯು ೧೦೦ಕ್ಕೂ ಹೆಚ್ಚು ಶ್ರಮಿಕ ವಿಶೇಷ ರೈಲುಗಾಡಿಗಳನ್ನು ಓಡಿಸುತ್ತಿದೆ.
ದೇಶ ಮತ್ತು ಅದರ ಉದ್ಯಮ ಕ್ಷೇತ್ರವು ಕೊರೋನಾವೈರಸ್ ಮತ್ತು ಆರ್ಥಿಕ ಹಿಂಜರಿಕೆ ಈ ಎರಡೂ ಸಮರಗಳಲ್ಲಿ ವಿಜಯ ಗಳಿಸುವುದು ಎಂಬ ವಿಶ್ವಾಸವನ್ನು ಗಡ್ಕರಿ ವ್ಯಕ್ತ ಪಡಿಸಿದರು.
ಸಾರ್ವಜನಿಕ ಸಾರಿಗೆಯ ಪರಿಸ್ಥಿತಿಯನ್ನು ಸುಧಾರಿಸುವ ಬಗ್ಗೆ ಒಕ್ಕೂಟದ ಸದಸ್ಯರು ಸಲಹೆಗಳನ್ನು ನೀಡಿದರು. ಬಡ್ಡಿ ಪಾವತಿ ವಿನಾಯ್ತಿ, ಸಾರ್ವಜನಿಕ ಸಾರಿಗೆ ಪುನಾರಂಭ, ವಾಹನಗಳ ವಯೋಮಿತಿ ಏರಿಕೆ, ರಾಜ್ಯ ತೆರಿಗೆ ಪಾವತಿ ಮುಂದೂಡಿಕೆ, ಎಂಎಸ್ ಎಂಇ ಅನುಕೂಲಗಳ ವಿಸ್ತರಣೆ, ವಿಮಾ ಪಾಲಿಸಿಗಳ ಸಿಂಧುತ್ವ ವಿಸ್ತರಣೆ ಇತ್ಯಾದಿ ಸಲಹೆಗನ್ನು ಅವರು ನೀಡಿದರು.
ಕೊರೋನಾವೈರಸ್ ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಕಾಯಕವನ್ನು ಮುಂದುವರೆಸಿದ್ದು, ವಿಶ್ವಾದಂತ ಸೋಂಕಿತರ ಸಂಖ್ಯೆ ೩೭ ಲಕ್ಷವನ್ನು
ದಾಟಿದೆ. ೧೨ ಲಕ್ಷಕ್ಕಿಂತಲೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದರೂ, ಜಾಗತಿಕ ಚೇತರಿಕೆ ಪ್ರಮಾಣ ಕೇವಲ ಶೇಕಡಾ ೩೩ರಲ್ಲೇ ಉಳಿದಿದೆ. ಅಮೆರಿಕವು ವಿಶ್ವದಲ್ಲೇ ಅತ್ಯಂತ ಹೆಚ್ಚು ಬಾಧಿತ ರಾಷ್ಟ್ರವಾಗಿದ್ದು, ಟ್ರಂಪ್ ಆಡಳಿತವು ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದರೂ ಆರ್ಥಿಕತೆ ಪುನರಾಂಭದತ್ತ ಗಮನ ಹರಿಸುವಂತೆ ರಾಜ್ಯಗಳ ರಾಜ್ಯಪಾಲರಿಗೆ ಸೂಚನೆಗಳನ್ನು ನೀಡುತ್ತಿದೆ.
ವಿಶ್ವದಲ್ಲಿ ಅತ್ಯಂತ ಹೆಚ್ಚು ಬಾಧಿತ ದೇಶಗಳಲ್ಲಿ ಇಂಗ್ಲೆಂಡ್ ಎರಡನೇ ಸ್ಥಾನ ಪಡೆದಿದೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೩೭,೫೯,೦೫೧ ಸಾವು ೨,೫೯,೫೮೪
ಚೇತರಿಸಿಕೊಂಡವರು- ೧೨,೫೮,೭೪೬
ಅಮೆರಿಕ ಸೋಂಕಿತರು ೧೨,೪೦,೪೧೧, ಸಾವು ೭೨,೪೪೯
ಸ್ಪೇನ್ ಸೋಂಕಿತರು ೨,೫೩,೬೮೨, ಸಾವು ೨೫,೮೫೭
ಇಟಲಿ ಸೋಂಕಿತರು ೨,೧೩,೦೧೩, ಸಾವು ೨೯,೩೧೫
ಜರ್ಮನಿ ಸೋಂಕಿತರು ೧,೬೭,೩೭೨, ಸಾವು ೬,೯೯೩
ಚೀನಾ ಸೋಂಕಿತರು ೮೨,೮೮೩, ಸಾವು ೪,೬೩೩
ಇಂಗ್ಲೆಂಡ್ ಸೋಂಕಿತರು ೧,೯೪,೯೯೦, ಸಾವು ೨೯,೪೨೭
ಅಮೆರಿಕದಲ್ಲಿ ೧೭೮, ಇರಾನಿನಲ್ಲಿ ೭೮, ಬೆಲ್ಜಿಯಂನಲ್ಲಿ ೩೨೩, ಸ್ಪೇನಿನಲ್ಲಿ ೨೪೪, ನೆದರ್ ಲ್ಯಾಂಡ್ಸ್ನಲ್ಲಿ ೩೬, ರಶ್ಯಾದಲ್ಲಿ ೮೬, ಸ್ವೀಡನ್ನಲ್ಲಿ ೮೭, ಮೆಕ್ಸಿಕೋದಲ್ಲಿ ೨೩೬, ಒಟ್ಟಾರೆ ವಿಶ್ವಾದ್ಯಂತ ೧,೫೫೭ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment