ಭಾರತದಲ್ಲಿ ಕೊರೋನಾ ಶಿಖರ ತಲುಪಿಲ್ಲ: ಏಮ್ಸ್ ನಿರ್ದೇಶಕರ ಎಚ್ಚರಿಕೆ
ನವದೆಹಲಿ: ಭಾರತದಲ್ಲಿ ಕೋವಿಡ್-೧೯ ಸಾಂಕ್ರಾಮಿಕವು ಇನ್ನೂ ತನ್ನ ಶಿಖರಕ್ಕೆ ಏರಿಲ್ಲದೇ ಇರಬಹುದು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ 2020 ಮೇ 07ರ ಗುರುವಾರ ಎಚ್ಚರಿಕೆ ನೀಡಿದರು.
‘ಮಾದರಿಗಳ ಮಾಹಿತಿ ಮತ್ತು ಪ್ರಕರಣಗಳು ಹೆಚ್ಚುತ್ತಿರುವ ರೀತಿ ನೋಡಿದರೆ ಅದು ಜೂನ್ ಮತ್ತು ಜುಲೈ ವೇಳೆಗೆ ಉತ್ತುಂಗಕ್ಕೆ ಏರುವ ಸಾಧ್ಯತೆಗಳಿವೆ. ಆದರೆ ಹಲವಾರು ವ್ಯತ್ಯಾಸಗಳೂ ಇವೆ ಮತ್ತು ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಸ್ತರಣೆಯ ಪರಿಣಾಮ ಎಷ್ಟು ಮತ್ತು ಅದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ಕಾಲವೇ ಹೇಳಬೇಕಾಗಿದೆ’ ಎಂದು ಅವರು ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಾ ಹೇಳಿದರು.
ಇನ್ನೂ ಲಸಿಕೆಯನ್ನು ಕಂಡು ಹಿಡಿಯಲು ಸಾಧ್ಯವಾಗದೇ ಇರುವುದರಿಂದ ಸರ್ಕಾರವು ವೈರಸ್ ಪ್ರಸರಣ ಸರಪಳಿಯನ್ನು ಕಡಿಯಲು ದಿಗ್ಬಂಧನವನ್ನೇ ಆಶ್ರಯಿಸಿದೆ.
ಭಾರತದಲ್ಲಿ ಮಾರ್ಚ್ ೨೫ರಂದು ದಿಗ್ಬಂಧನವನ್ನು ಜಾರಿಗೊಳಿಸಲಾಗಿದ್ದು ಆದಿನ ಇದ್ದ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಕೇವಲ ೬೦೦. ಆ ವೇಳೆಗೆ ಸೋಂಕಿಗೆ ಬಲಿಯಾಗಿದ್ದವರ ಸಂಖ್ಯೆ ೧೩ ಮಾತ್ರ.
ದಿಗ್ಬಂಧನ ಆರಂಭವಾದ ೪೩ ದಿನಗಳ ಬಳಿಕ ಗುರುವಾರ ಭಾರತದಲ್ಲಿ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಸುಮಾರು ೫೩,೦೦೦ಕ್ಕೆ ತಲುಪಿದೆ. ಅಂದಾಜು ೧,೮೦೦ ಮಂದಿ ರೋಗಕ್ಕೆ ಬಲಿಯಾಗಿದ್ದಾರೆ.
ಮಹಾರಾಷ್ಟ್ರ ರಾಜ್ಯ ಒಂದರಲ್ಲಿಯೇ ೧೭,೦೦೦ ಕೊರೋನಾ ಪ್ರಕರಣಗಳು ದಾಖಲಾಗಿದ್ದರೆ, ಗುಜರಾತಿನಲ್ಲಿ ೬೫೦೦ಕ್ಕೂ ಹೆಚ್ಚಿನ ಪ್ರಕರಣಗಳು, ದೆಹಲಿಯಲ್ಲಿ ೫,೫೦೦ ಪ್ರಕರಣಗಳು ದಾಖಲಾಗಿದ್ದು ದೇಶದ ಒಟ್ಟು ಕೋವಿಡ್-೧೯ ಪ್ರಕರಣಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಪ್ರಕರಣಗಳು ಈ ಮೂರು ರಾಜ್ಯಗಳಲ್ಲಿಯೇ ವರದಿಯಾಗಿವೆ.
ಕೇರಳ ರಾಜ್ಯವು ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಚೇತರಿಕೆ ಪ್ರಮಾಣ ಮತ್ತು ಅತ್ಯಂತ ಕಡಿಮೆ ಸಾವಿನ ಪ್ರಮಾಣವನ್ನು ದಾಖಲಿಸಿದ್ದರೆ, ಸಿಕ್ಕಿಂ ಈವರೆಗೆ ಒಂದೇ ಒಂದು ಕೊರೋನಾವೈರಸ್ ಪ್ರಕರಣವನ್ನೂ ದಾಖಲಿಸಿಲ್ಲ.
No comments:
Post a Comment