Wednesday, May 27, 2020

ಚೀನಾ-ಭಾರತ ಗಡಿತಂಟೆ: ಟ್ರಂಪ್ ಮಧ್ಯಸ್ಥಿಕೆ ಕೊಡುಗೆ

ಚೀನಾ-ಭಾರತ ಗಡಿತಂಟೆ: ಟ್ರಂಪ್ ಮಧ್ಯಸ್ಥಿಕೆ ಕೊಡುಗೆ
ನವದೆಹಲಿ: ಭಾರತ ಮತ್ತು ಚೀನಾ ನಡುವಣ ಉದ್ವಿಗ್ನ ಗಡಿ ವಿವಾದವನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ಮೇ 27ರ ಬುಧವಾರ ಹೇಳಿದರು.

ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಪದೇ ಪದೇ ಪ್ರಸ್ತಾಪಿಸಿದ್ದ ಟ್ರಂಪ್ ಈಗ ಟ್ವೀಟ್ ಮೂಲಕ ಭಾರತ- ಚೀನಾ ಮಧ್ಯೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಮಾಡಿದರು.

ತಮ್ಮ ಪ್ರಸ್ತಾಪವನ್ನು ಭಾರತ ಮತ್ತು ಚೀನಾಕ್ಕೆ ತಿಳಿಸಲಾಗಿದೆ ಎಂದು ಟ್ರಂಪ್ ನುಡಿದರು.


"ನಾವು ಭಾರತ ಮತ್ತು ಚೀನಾ ಎರಡಕ್ಕೂ ಮಾಹಿತಿ ನೀಡಿದ್ದೇವೆ, ಉಲ್ಬಣಗೊಂಡಿರುವ ಗಡಿ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧವಿದೆ, ಇಚ್ಛಿಸಿದೆ ಮತ್ತು ಮಧ್ಯಸ್ಥಿಕೆ ವಹಿಸುವ ಸಾಮರ್ಥ್ಯವನ್ನೂ ಹೊಂದಿದೆ, ಧನ್ಯವಾದಗಳು ಎಂದು ಟ್ರಂಪ್ ಟ್ವೀಟ್ ಮಾಡಿದರು.

ಟ್ರಂಪ್ ಇಂಗಿತಕ್ಕೆ ಭಾರತೀಯ ಅಧಿಕಾರಿಗಳಿಂದ ತತ್ಕ್ಷಣದ  ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪ್ರಸ್ತಾಪವನ್ನು ಟ್ರಂಪ್ ಅವರು ಔಪಚಾರಿಕವಾಗಿ ಭಾರತಕ್ಕೆ ತಿಳಿಸಿದ್ದಾರೆಯೇ ಎಂಬುದು ಖಚಿತವಾಗಿಲ್ಲ.

ತಿಂಗಳ ಆರಂಭದಲ್ಲಿ ಸಂಭವಿಸಿದ ಹಿಂಸಾತ್ಮಕ ಘರ್ಷಣೆಗಳಲ್ಲಿ ಉಭಯ ಕಡೆಗಳ ಸೈನಿಕರು ಗಾಯಗೊಂಡ ಬಳಿಕ  ಲಡಾಕ್ ವಲಯದಲ್ಲಿ ಸಹಸ್ರಾರು ಮಂದಿ ಭಾರತೀಯ ಮತ್ತು ಚೀನೀ ಸೈನಿಕರು ನೇgವಾಗಿ  ಮುಖಾಮುಖಿಯಾಗಿದ್ದಾರೆ.

ನೈಜ ನಿಯಂತ್ರಣ ರೇಖೆಯಲ್ಲಿನ (ಎಲ್ಎಸಿ) ಯಥಾಸ್ಥಿತಿ ಬದಲಾವಣೆಗೆ ಯಾವುದೇ ಅನುಮತಿ ಕೊಡುವುದಿಲ್ಲ. ಚೀನಾದ ಕ್ರಮಗಳಿಗೆ ಶಕ್ತಿ ಮತ್ತು ಸಂಯಮ ಜೊತೆಗೆ ಸ್ಪಂದಿಸುವುದಾಗಿ ಭಾರತ ಸರ್ಕಾರ ಮಂಗಳವಾರ  ಸ್ಪಷ್ಟಪಡಿಸಿದೆ.

ದಕ್ಷಿಣ ಏಷ್ಯಾದ ನಿವೃತ್ತರಾಗುತ್ತಿರುವ ಟ್ರಂಪ್ ಆಡಳಿತದ ಪಾಯಿಂಟ್ಪರ್ಸನ್ ಆಲಿಸ್ ವೆಲ್ಸ್  ಹೇಳಿಕೆಯ ಒಂದು ವಾರದ ಬಳಿಕ ಟ್ರಂಪ್ ಕೊಡುಗೆ ಬಂದಿದೆ. ಆಲಿಸ್ ವೆಲ್ಸ್ ಅವರು ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ನಿಲುವನ್ನು ಪ್ರಬಲವಾಗಿ ಬೆಂಬಸಿದ್ದರು ಮತ್ತು ಇಂತಹ ವಿವಾದಗಳು ಚೀನಾ ಒಡ್ಡಿದ ಬೆದರಿಕೆಯನ್ನು ನೆನಪಿಸುತ್ತದೆ" ಎಂದು ಹೇಳಿದ್ದರು.

ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಆಸಿಯಾನ್  ರಾಜ್ಯಗಳಂತಹ ಸಮಾನ ಮನಸ್ಸಿನ ರಾಷ್ಟ್ರಗಳು ಚೀನಾದ ಪ್ರಚೋದನೆಗಳು ಮತ್ತು ಗೊಂದಲದ ನಡವಳಿಕೆಯ ಹಿನ್ನೆಲೆಯಲ್ಲಿ ಒಟ್ಟಾಗಿವೆ ಎಂದು ವೆಲ್ಸ್ ಹೇಳಿದ್ದರು.

"ಗಡಿಯಲ್ಲಿನ ಪ್ರಕ್ಷುಬ್ಧತೆಗಳು ಚೀನಾದ ಆಕ್ರಮಣಶೀಲತೆ ಯಾವಾಗಲೂ ಕೇವಲ ವಾಕ್ಚಾತುರ್ಯವಲ್ಲ ಎಂಬುದನ್ನು ನೆನಪಿಸುತ್ತದೆ. ಹಾಗಾಗಿ ಅದು ದಕ್ಷಿಣ ಚೀನಾ ಸಮುದ್ರದಲ್ಲಿರಲಿ ಅಥವಾ ಭಾರತದ ಗಡಿಯಲ್ಲಿರಲಿ ಚೀನಾದ ಪ್ರಚೋದನೆ ಮತ್ತು ಗೊಂದಲದ ನಡವಳಿಕೆಯನ್ನು ನಾವು ನೋಡುತ್ತಲೇ ಇದ್ದೇವೆ. ಚೀನಾ ತನ್ನ ಬೆಳೆಯುತ್ತಿರುವ ಶಕ್ತಿಯನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬ ಪ್ರಶ್ನೆಗಳನ್ನು ಇದು ಹುಟ್ಟುಹಾಕುತ್ತದೆ ಎಂದೂ ಅವರು ಹೇಳಿದ್ದರು.

"ನಾವು ನೋಡಲು ಬಯಸುವುದು ಎಲ್ಲರಿಗೂ ಪ್ರಯೋಜನವನ್ನು ಒದಗಿಸುವ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಹೊರತು ಚೀನಾಕ್ಕೆ ಅಧೀನದಲ್ಲಿರುವ ವ್ಯವಸ್ಥೆಯನ್ನಲ್ಲ. ಹಾಗಾಗಿ ಸಂದರ್ಭದಲ್ಲಿ, ಗಡಿ ವಿವಾದಗಳು ಚೀನಾ ಒಡ್ಡಿದ ಬೆದರಿಕೆಯನ್ನು ನೆನಪಿಸುತ್ತವೆ ಎಂದು ನಾನು ಭಾವಿಸುತ್ತೇನೆ ಎಂದೂ ವೆಲ್ಸ್ ಹೇಳಿದ್ದರು.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರು ವೆಲ್ಸ್  ಹೇಳಿಕೆಗಳನ್ನು ಅಸಂಬದ್ಧ" ಎಂಬುದಾಗಿ ತಳ್ಳಿಹಾಕಿದ್ದರು ಮತ್ತು ಭಾರತೀಯ ಸೇನೆಯು ಎಲ್ಎಸಿಯಲ್ಲಿ ಅತಿಕ್ರಮಣ ಮಾಡಿದೆ ಎಂಬ ಆರೋಪವನ್ನು ಪುನರುಚ್ಚರಿಸಿತ್ತು.

ಭಾರತವು ಚೀನಾದೊಂದಿಗೆ ಕೆಲಸ ಮಾಡಬೇಕು ಮತ್ತು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವ "ಏಕಪಕ್ಷೀಯ ಕ್ರಮಗಳಿಂದ ದೂರವಿರಬೇಕು" ಎಂದು ಲಿಜಿಯಾನ್ ಹೇಳಿದ್ದರು.
ಎಲ್ಎಸಿಯಲ್ಲಿ ತನ್ನ ಸೈನ್ಯವು ಅತಿಕ್ರಮಣ ಮಾಡಿದೆ ಎಂಬ ಆರೋಪವನ್ನು ಭಾರತ ತಳ್ಳಿಹಾಕಿದೆ. ಬದಲಿಗೆ ಚೀನಾದ ಸೈನ್ಯವು ಎಲ್ಎಸಿಯ ಭಾರತದ ಕಡೆಯಲ್ಲಿನ ತನ್ನ ಚಟುವಟಿಕೆಗಳಿಗೆ ಅಡ್ಡಿ ಪಡಿಸುತ್ತಿದೆ ಎಂದು ಆಪಾದಿಸಿದೆ.

No comments:

Advertisement