ದೆಹಲಿ: ಸೇನಾ ಆಸ್ಪತ್ರೆಯಲ್ಲಿ ೨೪ ಮಂದಿಗೆ ಸೋಂಕು
ನವದೆಹಲಿ: ದೆಹಲಿಯ ಸೇನಾ ಆಸ್ಪತ್ರೆಯಲ್ಲಿ (ಸಂಶೋಧನೆ ಮತ್ತು ರೆಫರಲ್) 2020 ಮೇ 05ರ ಮಂಗಳವಾರ ಕೋವಿಡ್-೧೯ ರೋಗದ ೨೪ ಪ್ರಕರಣಗಳು ವರದಿಯಾದವು. ಇವುಗಳಲ್ಲಿ ಕೆಲವರು ಸೇವಾ ನಿರತ ಸಿಬ್ಬಂದಿ ಸೇರಿದ್ದಾರೆ ಎಂದು ಇಬ್ಬರು ಅಧಿಕಾರಿಗಳು ತಿಳಿಸಿದರು.
ಎಲ್ಲ ೨೪ ಪಾಸಿಟಿವ್ ಪ್ರಕರಣಗಳು ಆಸ್ಪತ್ರೆಯ ಗ್ರಂಥಿ ವಿಜ್ಞಾನ (ಆಂಕೋಲಜಿ) ವಾರ್ಡಿನಿಂದ ವರದಿಯಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಯಾರೇ ಆರೋಗ್ಯ ರಕ್ಷಣಾ ಕಾರ್ಯಕರ್ತರಿಗೆ ಕೋವಿಡ್-೧೯ ಈವರೆಗೂ ಅಂಟಿಲ್ಲ. ಸಂಪರ್ಕ ಇತಿಹಾಸ ಪತ್ತೆ ಸೇರಿದಂತೆ ಸಕಲ ಶಿಷ್ಟಾಚಾರದ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ನುಡಿದರು.
ಪಾಸಿಟಿವ್ ಪ್ರಕರಣಗಳಲ್ಲಿ ಸೇವಾ ನಿರತ ಮತ್ತು ನಿವೃತ್ತ ಸಿಬ್ಬಂದಿಯೂ ಸೇರಿದ್ದಾರೆ. ಅವರನ್ನು ಅವಲಂಬಿಸಿದವರ ಪೈಕಿ ಕೆಲವರನ್ನು ಕೂಡಾ ದೆಹಲಿ ದಂಡು ಪ್ರದೇಶದ ಸೇನಾ ಮೂಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದು ಕೋವಿಡ್ -೧೯ ಸಲುವಾಗಿಯೇ ಮೀಸಲಾಗಿರುವ ಆಸ್ಪತ್ರೆಯಾಗಿದೆ ಎಂದು ಎರಡನೇ ಅಧಿಕಾರಿ ನುಡಿದರು.
ಕಳೆದ ತಿಂಗಳು ಭಾರತೀಯ ನೌಕಾಪಡೆಯ ೨೬ ಮಂದಿ ನಾವಿಕರಿಗೆ ಕೊರೋನಾವೈರಸ್ ಸೋಂಕು ತಗಲುವುದರೊಂದಿಗೆ ಭಾರತೀಯ ಸೇನೆಯಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಏಕೈಕ ಪ್ರಕರಣ ವರದಿಯಾಗಿತ್ತು. ಪಶ್ಚಿಮ ನೌಕಾ ಕಮಾಂಡ್ ಅಡಿಯಲ್ಲಿನ ಸಾಗಣೆ ಮತ್ತು ಆಡಳಿತಾತ್ಮಕ ಬೆಂಬಲ ನೆಲೆಯ ಐಎನ್ ಎಸ್ ಆಂಗ್ರೆಯಲ್ಲಿ ಈ ಘಟನೆ ಘಟಿಸಿತ್ತು. ಎಲ್ಲ ಸೋಂಕಿನ ಪ್ರಕರಣಗಳೂ ಒಬ್ಬನೇ ಒಬ್ಬ ನಾವಿಕನಿಂದ ಹರಡಿತ್ತು.
ಭಾರತೀಯ ಸೇನೆಯ ಹೊರತಾಗಿ, ಇಂಡೋ-ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ೪೫ ಸಿಬ್ಬಂದಿ, ಭಾರತೀಯ ಗಡಿ ಭದ್ರತಾ ಪಡೆಯ (ಬಿಎಸ್ ಎಫ್) ೬೭ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ೩೧ನೇ ಬೆಟಾಲಿಯನ್ನಿನ ಕನಿಷ್ಠ ೧೩೫ ಸಿಬ್ಬಂದಿಗೂ ಕೋವಿಡ್-೧೯ ಸೋಂಕು ತಗುಲಿತ್ತು.
No comments:
Post a Comment