ಭಾರತದಲ್ಲಿ ಕೋವಿಡ್ ಗುಣಮುಖರಾದವರ ಸಂಖ್ಯೆ ೧೦ ಸಹಸ್ರ
ಭಾನುವಾರ ಕೊರೋನಾ ಯೋಧರಿಗೆ ವಾಯುಪಡೆ ಗೌರವ, ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಠಿ
ನವದೆಹಲಿ: ಕೆಲವು ನಿರ್ದಿಷ್ಟ ಪ್ರದೇಶ ಹಾಗೂ ರಾಜ್ಯಗಳಲ್ಲಿ ಕೊರೊನಾ ವೈರಸ್ ಕ್ಷಿಪ್ರ ಗತಿಯಲ್ಲಿ ಹರಡುತ್ತಿರುವುದರ ಮಧ್ಯೆಯೇ, ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆ ೧೦ ಸಾವಿರದ ಗಡಿ ದಾಟಿದ ಸಂತಸಕರ ಸುದ್ದಿ ಬಂದಿದೆ. ಇದೇ ವೇಳೆಗೆ ಭಾರತದ ವಾಯುಪಡೆ 2020 ಮೇ 02ರ ಭಾನುವಾರ ಕೋವಿಡ್ ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಠಿ ಮಾಡುವ ಮೂಲಕ ಕೊರೋನಾಯೋಧರನ್ನು ಗೌರವಿಸಲು ಸಜ್ಜಾಯಿತು.
ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ವಿಭಾಗವು ನೀಡಿರುವ ಮಾಹಿತಿಯ ಪ್ರಕಾರ ಮೇ ೨ ಶನಿವಾರ ಸಂಜೆಯ ಹೊತ್ತಿಗೆ ದೇಶದಲ್ಲಿ ಕೊರೊನಾ ರೋಗಿಗಳ ಒಟ್ಟು ಸಂಖ್ಯೆ ೩೭,೭೭೬ಕ್ಕೆ ಏರಿಕೆಯಾಗಿದೆ. ಈ ಪೈಕಿ ೧೦,೦೧೮ ಮಂಗಿ ಕೋವಿಡ್ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
೧೦,೦೦೦ಕ್ಕೂ ಹೆಚ್ಚು ಮಂದಿ ಗುಣಮುಖರಾದ ಹಿನ್ನೆಲೆಯಲ್ಲಿ ಶನಿವಾರದ ವೇಳೆಗೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ೨೬,೫೩೫ ಎಂಬುದಾಗಿ ದಾಖಲಾಗಿದೆ. ಒಟ್ಟು ಪ್ರಕರಣಗಳ ಪೈಕಿ ಈವರೆಗೆ ೧೨೨೩ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಈ ಮಧ್ಯೆ ಕರ್ನಾಟಕದಲಿ ಶನಿವಾರ ೧೨ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಒಟ್ಟು ಪ್ರಕರಣಗಳು ೬೦೧ಕ್ಕೆ ಏರಿಕೆಯಾಗಿವೆ. ಬೆಂಗಳೂರಿನಲ್ಲಿ ೪, ವಿಜಯಪುರ ಹಾಗೂ ತುಮಕೂರಿನಲ್ಲಿ ತಲಾ ಎರಡು ಮತ್ತು ಬೀದರ್, ಚಿಕ್ಕ ಬಳ್ಳಾಪುರ, ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.
ತಮಿಳುನಾಡಿನ ಕಂಟೈನ್ಮೆಂಟ್ ವಲಯದಲ್ಲಿ ರಿಯಾಯ್ತಿ ಇಲ್ಲ: ಈ ಮಧ್ಯೆ, ತಮಿಳುನಾಡಿನಲ್ಲಿ ಮೇ ೪ರಂದು ಆರಂಭವಾಗುವ ಮೂರನೇ ಹಂತದ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಅವಧಿಯಲ್ಲಿ ಕಂಟೈನ್ಮೆಂಟ್ ವಲಯದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.
ಕಂಟೈನ್ಮೆಂಟ್ ವಲಯದಲ್ಲಿ ಕ್ಷೌರದ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರುಗಳನ್ನು ಹೊರತು ಪಡಿಸಿ, ಸ್ವತಂತ್ರ ಅಂಗಡಿಗಳು ಬೆಳಗ್ಗೆ ೧೧ರಿಂದ ೫ರವರೆಗೆ ಕಾರ್ಯನಿರ್ವಹಿಸಬಹುದು. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಬೆಳಗ್ಗೆ ೬ರಿಂದ ಸಂಜೆ ೫ ಗಂಟೆಯವರೆಗೆ, ರೆಸ್ಟೋರೆಂಟ್ಗಳು ಬೆಳಗ್ಗೆ ೬ರಿಂದ ರಾತ್ರಿ ೯ರವರೆಗೆ ಮನೆಗೆ ಒಯ್ಯುವ ಸೇವೆಗಾಗಿ ಮಾತ್ರವೇ ಕಾರ್ಯ ನಿರ್ವಹಿಸಲಿವೆ.
ವಾಯುಪಡೆ ಪುಷ್ಪವೃಷ್ಠಿ
ಭಾರತಿಯ ವಾಯುಪಡೆಯ ವೇಗವಾಗಿ ಹಾರುವ ಸಮರ ವಿಮಾನಗಳು ಭಾನುವಾರ ಕೊರೋನಾ ಸಾಂಕ್ರಾಮಿಕ ವಿರೋಧಿ ಹೋರಾಟದಲ್ಲಿ ಅವಿರತವಾಗಿ, ನಿಸ್ವಾರ್ಥದಿಂದ ದುಡಿಯುತ್ತಿರುವ ದಿಟ್ಟ ಕೋವಿಡ್-೧೯ ಯೋಧರಿಗೆ ಗೌರವ ಸಲ್ಲಿಲು ಸಜ್ಜಾಗಿವೆ.
ದೆಹಲಿಯಲ್ಲಿ ಬೆಳಗ್ಗೆ ೧೦ರಿಂದ ೧೦.೩೦ರ ವೇಳೆಯಲ್ಲಿ ಕೊರೋನಾ ಯೋಧರಿಗೆ ವೈಮಾನಿಕ ಪುಷ್ಪವೃಷ್ಠಿಯ ಗೌರವ ಸಲ್ಲಿಕೆಯಾಗಲಿದೆ. ಸುಖೋಯ್-೩೦ ಎಂಕೆಐ, ಮಿಗ್-೨೯ ಮತ್ತು ಜಾಗ್ವಾರ್ ವಿಮಾನಗಳನ್ನು ಒಳಗೊಂಡ ವಾಯುಪಡೆಯ ಯುದ್ಧ ವಿಮಾನಗಳು ವಿಮಾನಗಳು ನಿರ್ದಿಷ್ಟ ರಚನೆಯಲ್ಲಿ ರಾಜಪಥದ ಮೇಲೆ ಹಾರುತ್ತಾ ದೆಹಲಿಗೆ ಪ್ರದಕ್ಷಿಣೆ ಹಾಕಲಿವೆ. ನಿವಾಸಿಗಳು ತಮ್ಮ ತಮ್ಮ ಮನೆಗಳ ಛಾವಣಿ ಮೂಲಕ ಈ ವಿಮಾನಗಳನ್ನು ನೋಡಬಹುದು.
ಈ ವಿಮಾನಗಳ ಜೊತೆಗೆ ಹೆಲಿಕಾಪ್ಟರುಗಳು ಕೂಡಾ ಬೆಳಗ್ಗೆ ೯ ಗಂಟೆಗೆ ಪೊಲೀಸ್ ವಾರ್ ಮೆಮೋರಿಯಲ್ ಮೇಲೆ, ೧೦-೧೦.೩೦ರ ಅವಧಿಯಲ್ಲಿ ದೆಹಲಿಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಠಿ ಮಾಡಲಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ದೆಹಲಿಯಲ್ಲಿ ಪುಷ್ಪವೃಷ್ಠಿ ನಡೆಯಲಿರುವ ಆಸ್ಪತ್ರೆಗಳ ಪಟ್ಟಿ ಹೀಗಿದೆ: ೧) ಏಮ್ಸ್, ೨) ದೀನ ದಯಾಳು ಉಪಾಧ್ಯಾಯ ಆಸ್ಪತ್ರೆ, ೩) ಜಿಟಿಬಿ ಆಸ್ಪತ್ರೆ, ೪) ಲೋಕನಾಯಕ ಆಸ್ಪತ್ರೆ, ೫) ಆರ್ಎಂಎಲ್ ಆಸ್ಪತ್ರೆ, ೬) ಸಫ್ದರ್ ಜಂಗ್ ಆಸ್ಪತ್ರೆ, ೭) ಗಂಗಾರಾಮ್ ಆಸ್ಪತ್ರೆ, ೭) ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ, ೮) ಮ್ಯಾಕ್ಸ್ ಸಾಕೇತ್, ೯) ರೋಹಿನಿ ಆಸ್ಪತ್ರೆ, ೧೦) ಅಪೋಲೋ ಇಂದ್ರಪ್ರಸ್ಥ ಆಸ್ಪತ್ರೆ, ೧೧) ಸೇನಾ ಆಸ್ಪತ್ರೆ ಸಂಶೋಧನೆ ಮತ್ತು ರೆಫರಲ್.
೪೬ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಹಡಗುಗಳು ಭಾನುವಾರ ೭,೫೧೬ ಕಿ.ಮೀ. ದೂರದಲ್ಲಿ ವಿದ್ಯುತ್ ದೀಪಗಳ ಪ್ರಕಾಶ ಹಾಗೂ ಹಸಿರು ದೀಪ ಜ್ವಾಲೆಯನ್ನು ಹೊಮ್ಮಿಸುವುದರ ಜೊತೆಗೆ ಕರಾವಳಿಯುದ್ದಕ್ಕೂ ೨೫ ಕಡೆಗಳಲ್ಲಿ ಸೈರನ್ ಮೊಳಗಿಸಲಿವೆ. ಸುಮಾರು ೧೦ ಹೆಲಿಕಾಪ್ಟರ್ಗಳು ೫ ಸ್ಥಳಗಳಲ್ಲಿ ಕೋವಿಡ್ -೧೯ ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಠಿ ನಡೆಸಲಿವೆ.
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೩೪,೨೬,೪೧೩ ಸಾವು ೨,೪೦,೪೯೩
ಚೇತರಿಸಿಕೊಂಡವರು- ೧೦,೯೩,೯೮೬
ಅಮೆರಿಕ ಸೋಂಕಿತರು ೧೧,೩೪,೦೮೪, ಸಾವು ೬೫,೮೮೮
ಸ್ಪೇನ್ ಸೋಂಕಿತರು ೨,೪೫,೫೬೭, ಸಾವು ೨೫,೧೦೦
ಇಟಲಿ ಸೋಂಕಿತರು ೨,೦೭,೪೨೮, ಸಾವು ೨೮,೨೩೬
ಜರ್ಮನಿ ಸೋಂಕಿತರು ೧,೬೪,೧೯೭, ಸಾವು ೬,೭೩೬
ಚೀನಾ ಸೋಂಕಿತರು ೮೨,೮೭೫, ಸಾವು ೪,೬೩೩
ಇಂಗ್ಲೆಂಡ್ ಸೋಂಕಿತರು ೧,೭೭,೪೫೪, ಸಾವು ೨೭,೫೧೦
ಅಮೆರಿಕದಲ್ಲಿ ೧೩೫, ಇರಾನಿನಲ್ಲಿ ೬೫, ಬೆಲ್ಜಿಯಂನಲ್ಲಿ ೬೨, ಸ್ಪೇನಿನಲ್ಲಿ ೨೭೬, ನೆದರ್ ಲ್ಯಾಂಡ್ಸ್ನಲ್ಲಿ ೯೪, ರಶ್ಯಾದಲ್ಲಿ ೫೩, ಸ್ವೀಡನ್ನಲ್ಲಿ ೧೬, ಮೆಕ್ಸಿಕೋದಲ್ಲಿ ೧೧೩, ಒಟ್ಟಾರೆ ವಿಶ್ವಾದ್ಯಂತ ೧,೦೪೫ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.
No comments:
Post a Comment