Saturday, June 27, 2020

ರಾಹುಲ್ ಗಾಂಧಿಗೆ ಶರದ್ ಪವಾರ್ ಚಾಟಿ: 1962 ನೆನಪಿಡಿ

ರಾಹುಲ್ ಗಾಂಧಿಗೆ ಶರದ್ ಪವಾರ್ ಚಾಟಿ: 1962 ನೆನಪಿಡಿ

ಪುಣೆ/ ಮುಂಬೈ: ರಾಷ್ಟ್ರೀಯ ಭದ್ರತೆಯ ವಿಚಾರಗಳನ್ನು ರಾಜಕೀಯಗೊಳಿಸಬಾರದು ಮತ್ತು ಚೀನಾವು ಭಾರೀ ಪ್ರಮಾಣದ ಭೂಮಿಯನ್ನು ಅತಿಕ್ರಿಮಿಸಿದ ೧೯೬೨ರ ಯುದ್ಧದ ಬಳಿಕ ಏನಾಯಿತು ಎಂದು ಪ್ರತಿಯೊಬ್ಬರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬುದಾಗಿ ಹೇಳುವ ಮೂಲಕ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು 2020 ಜೂನ್ 27ರ ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚಾಟಿ ಬೀಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ನೆಲವನ್ನು ಚೀನೀ ದಾಳಿಗೆ ಒಪ್ಪಿಸಿದ್ದಾರೆ ಎಂಬ ರಾಹುಲ್ ಗಾಂಧಿ ಆಪಾದನೆ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರವಾಗಿ ಪವಾರ್ ಅವರಿಂದ ಕಠಿಣ ಮಾತುಗಳು ಬಂದಿವೆ.

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರv-ಚೀನಾ ಪಡೆಗಳ ಮಧ್ಯೆ ಜೂನ್ ೧೫ರಂದು ನಡೆದ ಹಿಂಸಾತ್ಮಕ ಘರ್ಷಣೆ ನಡೆದಂದಿನಿಂದ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ವಿರುದ್ಧ ತೀವ್ರ ದಾಳಿ ನಡೆಸುತ್ತಿದೆ.

ಲಡಾಖ್‌ನಲ್ಲಿ ಚೀನಾವು ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದೆಯೇ ಎಂಬುದಾಗಿ ಪ್ರಧಾನಿ ಮೋದಿ ಅವರು ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿದೆ.

೧೯೬೨ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ನೆರೆ ರಾಷ್ಟ್ರವೊಂದು ಭಾರತೀಯ ನೆಲದ ಮೇಲೆ ಹಕ್ಕು ಪ್ರತಿಪಾದಿಸಿರುವ ಇಂತಹುದೊಂದು ಘಟನೆ ಘಟಿಸಿದೆ ಎಂದು ಎನ್‌ಸಿಪಿ ಅಧ್ಯಕ್ಷರು ಹೇಳಿದರು.

೧೯೬೨ರಲ್ಲಿ ಚೀನಾವು ೪೫,೦೦೦ ಚದರ ಕಿಮೀಗಳಷ್ಟು ಭಾರತೀಯ ನೆಲವನ್ನು ಆಕ್ರಮಿಸಿದ್ದಾಗ ಏನಾಯಿತು ಎಂಬುದನ್ನ ನಾವು ಮರೆಯಲಾಗದು. ಇಂತಹ ಆಪಾದನೆಗಳನ್ನು ಮಾಡುವ ಮುನ್ನ ಯಾರೇ ಆಗಲಿ ಭೂತಕಾಲದಲ್ಲಿ ಏನಾಗಿತ್ತು ಎಂಬುದನ್ನು ಗಮನಿಸಿಕೊಳ್ಳಬೇಕು. ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯ. ಯಾರು ಕೂಡಾ ಇಲ್ಲಿ ರಾಜಕೀಯ ತರಬಾರದು ಎಂದು ಮಾಜಿ ರಕ್ಷಣಾ ಸಚಿವ ಪವಾರ್ ಸತಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದಲ್ಲಿ ಪವಾರ್ ಅವರ ಎನ್‌ಸಿಪಿಯು ಕಾಂಗ್ರೆಸ್ ಜೊತೆಗೆ ಅಂಗಪಕ್ಷವಾಗಿದೆ.

ಹಿರಿಯ ರಾಜಕಾರಣಿ ವಿವಾದಿತ ಅಕ್ಸಾಯ್ ಚಿನ್ ಪ್ರದೇಶದ ಬಗ್ಗೆ ಉಲ್ಲೇಖಿಸಿದ್ದರು. ಇದು ಚೀನಾದ ನಿಯಂತ್ರಣದಲ್ಲಿದ್ದರೂ ಭಾರತವು ಹಕ್ಕು ಪ್ರತಿಪಾದಿಸಿದೆ.

ಭಾರತ ಮತ್ತು ಚೀನಾದ ವಿವಾದಿತ ಗಡಿಯ ವ್ಯಾಪ್ತಿ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ,೪೮೮ ಕಿಮೀಗಳಷ್ಟು ಇದೆ. ಚೀನಾವು  ಅರುಣಚಲ ಪ್ರದೇಶವು ದಕ್ಷಿಣ ಟಿಬೆಟ್‌ಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಿದ್ದರೆ, ಭಾರತವು ೧೯೬೨ರ ಸಮರಕಾಲದಲ್ಲಿ ಚೀನಾವು ಅತಿಕ್ರಮಿಸಿಕೊಂಡ ಅಕ್ಸಾಯ್ ಚಿನ್ ತನ್ನದು ಎಂದು ಪ್ರತಿಪಾದಿಸುತ್ತಿದೆ.

ಗಲ್ವಾನ್ ಕಣಿವೆ ಬಿಕ್ಕಟ್ಟಿಗಾಗಿ ಕೇಂದ್ರ ಸರ್ಕಾರವನ್ನು ದೂಷಿಸಲಾಗದು ಎಂದೂ ಎನ್‌ಸಿಪಿ ಮುಖ್ಯಸ್ಥ ನುಡಿದರು.

ಚೀನೀ ಸೈನಿಕರು ಭಾರv ನೆಲವನ್ನು ಅತಿಕ್ರಮಿಸಲು ಯತ್ನಿಸಿದಾಗ ನಮ್ಮ ಸೈನಿಕರು ಅವರನ್ನು ಹಿಂದಕ್ಕಟ್ಟಲು ಯತ್ನಿಸಿದರು. ಇದನ್ನು ಯಾರಾದರೂ ಒಬ್ಬರ ಅಥವಾ ರಕ್ಷಣಾ ಸಚಿವರ ವೈಫಲ್ಯ ಎಂಬುದಾಗಿ ಹೇಳುವುದು ಸರಿಯಲ್ಲ. ನಮ್ಮ ಸೇನೆಯ ಜಾಗೃತವಾಗಿ ಇಲ್ಲದೇ ಇದ್ದಿದ್ದರೆ, ಚೀನಾದ ಪ್ರತಿಪಾದನೆಯೇ ನಮಗೆ ಗೊತ್ತಾಗುತ್ತಿರಲಿಲ್ಲ ಎಂದು ಪವಾರ್ ನುಡಿದರು.

ಘರ್ಷಣೆಯು ಸ್ವತಃ ನಾವು ಜಾಗೃತರಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಇಲ್ಲದೇ ಇದ್ದಲ್ಲಿ ನಮಗೆ ಏನೂ ಗೊತ್ತಾಗುತ್ತಲೇ ಇರಲಿಲ್ಲ. ಆದ್ದರಿಂದ ಇಂತಹ ಆಪಾದನೆಗಳನ್ನು ಮಾಡುವುದು ನ್ಯಾಯೋಚಿತ ಅಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಎನ್‌ಸಿಪಿ ನಾಯಕ ಹೇಳಿದರು.

ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಬಂದೂಕು ಬಳಸಬಾರದು ಎಂಬುದಾಗಿ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿರುವುದನ್ನು ಕೂಡಾ ಪವಾರ್ ಉಲ್ಲೇಖಿಸಿದರು.

ಕಮಾಂಡಿಂಗ್ ಅಧಿಕಾರಿ ಸೇರಿದಂತೆ ೧೬ ಬಿಹಾರ ರೆಜಿಮೆಂಟಿನ ೨೦ ಮಂದಿ ಯೋಧರು ಜೂನ್ ೧೫ರಂದು ಗಲ್ವಾನ್ ಕಣಿವೆಯಲ್ಲಿ ಚೀನೀ ಪಡೆಗಳ ಜೊತೆಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾಗಿದ್ದರು.

No comments:

Advertisement