Tuesday, June 23, 2020

ಭದ್ರತಾ ಪಡೆಗೆ ಅವಮಾನ: ಮನಮೋಹನ್ ಸಿಂಗ್‌ಗೆ ನಡ್ಡಾ ತರಾಟೆ

ಭದ್ರತಾ ಪಡೆಗೆ ಅವಮಾನ: ಮನಮೋಹನ್ ಸಿಂಗ್‌ಗೆ ನಡ್ಡಾ  ತರಾಟೆ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷವನ್ನು  2020 ಜೂನ್ 22ರ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಭದ್ರತಾ ಪಡೆಗಳನ್ನು ಪದೇ ಪದೇ ಅವಮಾನಿಸುವುದು ಮತ್ತು ಅವರ ಶೌರ್ಯವನ್ನು ಪ್ರಶ್ನಿಸುವುದನ್ನು ಬಿಟ್ಟು ಬಿಡಬೇಕು ಎಂದು ಆಗ್ರಹಿಸಿದರು.

ಟ್ವಿಟ್ಟರ್ ಖಾತೆಯಲ್ಲಿ ಸಂದೇಶವೊಂದನ್ನು ಪ್ರಕಟಿಸಿದ ನಡ್ಡಾಪಡೆಗಳನ್ನು ಪದೇ ಪದೇ ಅವಮಾನಿಸುವುದನ್ನು, ಅವರ ಶೌರ್‍ಯವನ್ನು ಪ್ರಶ್ನಿಸುವುದನ್ನು ದಯವಿಟ್ಟು ನಿಲ್ಲಿಸಿ. ಟ್ವಿಟ್ಟರ್  ಪ್ರಕಟಣೆಯ ಮೂಲಕ ನೀವು ವಾಯುದಾಳಿ ಮತ್ತು ಸರ್ಜಿಕಲ್ ದಾಳಿ ನಡೆಸಿದ್ದೀರಿ. ದಯವಿಟ್ಟು ವಿಶೇಷವಾಗಿ ಇಂತಹ ಸಂದರ್ಭಗಳಲ್ಲಿ ರಾಷ್ಟ್ರೀಯ ಏಕತೆಯ ನೈಜ ಅರ್ಥವನ್ನು ಅರಿತುಕೊಳ್ಳಿ, ಸುಧಾರಿಸಿಕೊಳ್ಳಲು ಈಗಲೂ ತಡವಾಗಿಲ್ಲಎಂದು ನಡ್ಡಾ ಬರೆದರು.

ಲಡಾಖ್‌ನಲ್ಲಿ ಜೂನ್ ೧೫ರಂದು ಭಾರತ ಮತ್ತು ಚೀನೀ ಪಡೆಗಳ ಮಧ್ಯೆ ನಡೆದ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ ಮನಮೋಹನ್ ಸಿಂಗ್ ಅವರ ಹೇಳಿಕೆಗೆ ನಡ್ಡಾ ಅವರು ಪ್ರತಿಕ್ರಿಯೆ ನೀಡಿದರು. ಘರ್ಷಣೆಯಲ್ಲಿ ೨೦ ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು.

ಶುಕ್ರವಾರ ಸರ್ವಪಕ್ಷ ಸಭೆಯಲ್ಲಿ  ಪ್ರಧಾನಿ ಮೋದಿಯವರು ನೀಡಿದ ಹೇಳಿಕೆಯು ವಿವಾದ ಹುಟ್ಟು ಹಾಕಿದ್ದನ್ನು ಉಲ್ಲೇಖಿಸಿದ ಮನಮೋಹನ್ ಸಿಂಗ್ ಅವರು ತಮ್ಮ ಮಾತುಗಳ ಪರಿಣಾಮ ಏನಾಗುತ್ತದೆ ಎಂಬುದನ್ನು ಪ್ರಧಾನಿ ಮೋದಿ ಅವರು ಸದಾಕಾಲ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದರು.

ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕರ್ನಲ್ ಬಿ ಸಂತೋಷ ಬಾಬು ಮತ್ತು ಇತರ ೧೯ ಯೋಧರಿಗೆ ನ್ಯಾಯದ ಖಾತರಿ ಒದಗಿಸಲು ಸರ್ಕಾರವು ಸಂದರ್ಭಕ್ಕೆ ತಕ್ಕಂತೆ ಮೇಲೇಳಬೇಕು ಎಂದೂ ಮಾಜಿ ಪ್ರಧಾನಿ ಹೇಳಿದ್ದರು.

ಕಾಂಗ್ರೆಸ್ ಪಕ್ಷವು ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಬಿಜೆಪಿ ಇದಕ್ಕೆ ಆಪಾದಿಸಿತ್ತು.

ತಾವು ಪ್ರಧಾನಿಯಾಗಿದ್ದಾಗ ಭಾರತದ ಸಾವಿರಾರು ಕಿಲೋಮೀಟರ್ ಭೂಮಿಯನ್ನು ಚೀನಾಕ್ಕೆ ಒಪ್ಪಿಸಿದ್ದ ಸಿಂಗ್ ಅವರು ಚೀನೀ ಕಾರಸ್ಥಾನಗಳ ಬಗ್ಗೆ ಚಿಂತಿಸಲಿ ಎಂದು ವ್ಯಕ್ತಿಯೊಬ್ಬ ಹಾರೈಸಬಹುದಷ್ಟೆ. ೨೦೧೦-೨೦೧೩ರ ಅವಧಿಯಲ್ಲಿ ಚೀನಾ ನಡೆಸಿದ ೬೦೦ಕ್ಕೂ ಹೆಚ್ಚು ದಾಳಿಗಳ ಅಧ್ಯಕ್ಷತೆಯನ್ನು ಅವರೇ ವಹಿಸಿದ್ದರು!’ ಎಂದೂ ನಡ್ಡಾ ಹೇಳಿದರು.

"ತಪ್ಪು ಮಾಹಿತಿಯು ರಾಜತಾಂತ್ರಿಕತೆ ಅಥವಾ ನಿರ್ಣಾಯಕ ನಾಯಕತ್ವಕ್ಕೆ ಪರ್ಯಾಯವಲ್ಲ ಎಂದು ನಾವು ಸರ್ಕಾರಕ್ಕೆ ನೆನಪಿಸುತ್ತೇವೆ. ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಮಿತ್ರರಾಷ್ಟ್ರಗಳನ್ನು ಸಮಾಧಾನಗೊಳಿಸಬಹುದು, ಆದರೆ ಸತ್ಯವನ್ನು ನಿಗ್ರಹಿಸಲಾಗುವುದಿಲ್ಲ" ಎಂದೂ ಮನಮೋಹನ್ ಸಿಂಗ್ ಹೇಳಿದ್ದರು.

೨೦೨೦ ಏಪ್ರಿಲ್‌ನಿಂದ ಇಲ್ಲಿಯವರೆಗೆ ಅನೇಕ ಆಕ್ರಮಣಗಳನ್ನು ಮಾಡುವ ಮೂಲಕ ಚೀನಾ ಭಾರತದ ಭೂಪ್ರದೇಶಗಳಾದ ಗಲ್ವಾನ್ ಕಣಿವೆ ಮತ್ತು ಪ್ಯಾಂಗೊಂಗ್ ತ್ಸೋ ಸರೋವರದ ಭಾಗಗಳನ್ನು ಪಡೆಯಲು "ನಿರ್ಲಜ್ಜವಾಗಿ ಮತ್ತು ಕಾನೂನುಬಾಹಿರವಾಗಿ" ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದರು.

No comments:

Advertisement