ಭಾರತ-ಚೀನಾ ಕೋರ್ ಕಮಾಂಡರ್ ಮಟ್ಟದ ಮಾತುಕತೆ
ನವದೆಹಲಿ: ಲಡಾಖ್ ಪ್ರದೇಶದಲ್ಲಿ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಉದ್ವಿಗ್ನತೆ ಶಮನಕ್ಕಾಗಿ ಭಾರತ ಮತ್ತು ಚೀನಾ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನೀ ಕಡೆಯಲ್ಲಿರುವ ಚುಶುಲ್ ಎದುರಿನ ಮೋಲ್ಡೋದಲ್ಲಿ ಕೋರ್ ಕಮಾಂಡರ್ ಮಟ್ಟದ ಸಭೆ ನಡೆಸುತ್ತಿದ್ದಾರೆ ಎಂದು ಭಾರತೀಯ ಸೇನಾ ಮೂಲಗಳು 2020 ಜೂನ್ 22ರ ಸೋಮವಾರ ತಿಳಿಸಿದವು.
ಜೂನ್
೬ರ ಬಳಿಕ ನಡೆಯುತ್ತಿರುವ ಎರಡನೇ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಇದಾಗಿದೆ. ಜೂನ್ ೬ರ ಮಾತುಕತೆಯಲ್ಲಿ ಉಭಯ
ಸೇನೆಗಳೂ ವಿವಿಧ ಕಡೆಗಳಲ್ಲಿ ಘರ್ಷಣೆ ನಿಲ್ಲಿಸಬೇಕು ಎಂದು ಒಪ್ಪಿಕೊಳ್ಳಲಾಗಿತ್ತು. ಉಭಯ ಕಡೆಗಳೂ ತಮ್ಮ ಸೈನಿಕರನ್ನು ಎಲ್‌ಎಸಿಯಲ್ಲಿನ ಮೇ ೪ಕ್ಕೆ ಹಿಂದಿನ
ಸ್ಥಳಗಳಿಗೆ ವಾಪಸ್ ಕಳುಹಿಸಬೇಕು ಎಂದು ಭಾರತ ಸಲಹೆ ಮಾಡಿತ್ತು.
ಭಾರತದ
ಸಲಹೆಗೆ ಚೀನಾ ಕಡೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ ಮತ್ತು ಸುಮಾರು ೧೦,೦೦೦ಕ್ಕೂ ಹೆಚ್ಚು
ಪಡೆಗಳನ್ನು ಜಮಾಯಿಸಿದ್ದ ನೆಲೆಗಳಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವ ಯಾವುದೇ ಸೂಚನೆಗಳನ್ನೂ ಅದು ನೀಡಿರಲಿಲ್ಲ.
ಅಸಾಧಾರಣ
ಸಂದರ್ಭಗಳಲ್ಲಿ ಮದ್ದುಗುಂಡು ಬಳಸಲು ಪಡೆಗಳಿಗೆ ಅಧಿಕಾರ ಇರುವ ಎಲ್‌ಎಸಿಯ ಸ್ಥಳಗಳಲ್ಲಿ ಸೇನಾ ನಿಯೋಜನೆಯ ನಿಯಮಗಳಲ್ಲಿ ಬದಲಾವಣೆ ಮಾಡುವ ಬಗ್ಗೆ ಕೂಡಾ ಭಾರತ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಗಲ್ವಾನ್
ಕಣಿವೆಯಲ್ಲಿ ಮತ್ತು ಇತರ ಸ್ಥಳಗಳಲ್ಲಿ ಸಂಪೂರ್ಣವಾಗಿ ಸೇನೆಯನ್ನು ಹಿಂದಕ್ಕೆ ಕಳುಹಿಸಲು ಜೂನ್ ೬ರ ಮಾತುಕತೆಯಲ್ಲಿ ಒಪ್ಪಿಕೊಳ್ಳಲಾದ
ಮಾತಿಗೆ ಬದ್ಧವಾಗುವಂತೆ ಮತ್ತು ಅದನ್ನು ಗೌರವಿಸುವಂತೆ ಭಾರತವು ಚೀನಾಕ್ಕೆ ಸೂಚಿಸಲಿದೆ ಎಂದೂ ಮೂಲಗಳು ತಿಳಿಸಿವೆ.
ಹಾಲಿ
ಗಡಿ ಪ್ರಕ್ಷುಬ್ಧತೆಯನ್ನು ಶಮನಗೊಳಿಸುವ
ಸಲುವಾಗಿ ಭಾರತ ಮತ್ತು ಚೀನಾ ಕಳೆದ ಒಂದು ತಿಂಗಳಿನಿಂದ ಮಾತುಕತೆಯಲ್ಲಿ ನಿರತವಾಗಿವೆ.
ಆದಾಗ್ಯೂ,
ಕಳೆದ ವಾರ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವೆ ನಡೆದ ಮುಖಾಮುಖಿ ಘರ್ಷಣೆಯಲ್ಲಿ ಭಾರತದ ೨೦ ಸೈನಿಕರು ಹುತಾತ್ಮರಾಗಿದ್ದರು.
ಪೂರ್ವ ಲಡಾಖ್‌ನಲ್ಲಿ ಸೇನೆ ಹಿಂಪಡೆಯುವ ವೇಳೆಯಲ್ಲಿ ಚೀನೀ ಪಡೆಗಳು ಏಕಪಕ್ಷೀಯವಾಗಿ ಯಥಾಸ್ಥಿತಿ ಬದಲಾಯಿಸಲು ಯತ್ನಿಸಿದ ಬಳಿಕ ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ಸಂಭವಿಸಿತ್ತು.
ಹಿಂಸಾತ್ಮಕ ಘರ್ಷಣೆಯಲ್ಲಿ ಚೀನಾ ಕಡೆಯಲ್ಲಿ ಸಾವು ಹಾಗೂ ತೀವ್ರ ಗಾಯಗಳು ಸೇರಿದಂತೆ ಒಟ್ಟು ೪೩ ಸಾವನೋವುಗಳು ಸಂಭವಿಸಿವೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದರು.
No comments:
Post a Comment