ಪ್ರಧಾನಿ ಮೋದಿ- ಮೋರಿಸನ್ ’ವರ್ಚುವಲ್’ ಶೃಂಗಸಭೆ
ಸೇನಾ ನೆಲೆ ಪರಸ್ಪರ ಬಳಕೆಗೆ ಭಾರತ-ಆಸ್ಟ್ರೇಲಿಯಾ ಒಪ್ಪಂದ
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ಪರಸ್ಪರ ಸೇನಾ ನೆಲೆಗಳಿಗೆ ಪ್ರವೇಶ ಪಡೆಯಲು 2020 ಜೂನ್ 04ರ ಗುರುವಾರ ಒಪ್ಪಂದ ಮಾಡಿಕೊಂಡಿವೆ. ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಿನ ಸೇನಾ ವಿನಿಮಯ ಮತ್ತು ಕವಾಯತುಗಳಿಗೆ ದಾರಿ ಮಾಡಿಕೊಡಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಸ್ಟ್ರೇಲಿಯಾದ ಪ್ರಧಾನಿ ಮಾರಿಸನ್ ನಡುವಿನ ವಾಸ್ತವ ಶೃಂಗಸಭೆಯಲ್ಲಿ ಪರಸ್ಪರ ಸಾಗಣೆ (ಲಾಜಿಸ್ಟಿಕ್) ಬೆಂಬಲ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಭಾರತವು ಅಮೆರಿಕದೊಂದಿಗೆ ಇದೇ ರೀತಿಯ ಒಪ್ಪಂದವನ್ನು ಹೊಂದಿದೆ, ಈ ಪ್ರದೇಶದಲ್ಲಿ ಚೀನಾದ ಬೆಳೆಯುತ್ತಿರುವ ಆರ್ಥಿಕ ಮತ್ತು ಮಿಲಿಟರಿ ತೂಕವನ್ನು ಸಮತೋಲನಗೊಳಿಸುವ ವಿಶಾಲ ಭದ್ರತಾ ಸಹಕಾರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಯಿತು.
ಭಾರತ ಮತ್ತು ಆಸ್ಟ್ರೇಲಿಯಾದ ರಕ್ಷಣಾ ಮತ್ತು ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ೨ + ೨ ಸಂವಾದದಲ್ಲಿ ಆಸ್ಟ್ರೇಲಿಯಾದೊಂದಿಗಿನ ಒಪ್ಪಂದದ ರೂಪುರೇಷೆಯನ್ನು ಕಳೆದ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಲಾಗಿತ್ತು.
ಈ ಮಾದರಿಯ ಮೊತ್ತ ಮೊದಲ ಶೃಂಗಸಭೆಯಲ್ಲಿ, ಮೋದಿ ಮತ್ತು ಮಾರಿಸನ್ ಅವರು ಕೊರೋನವೈರಸ್ ಸಾಂಕ್ರಾಮಿಕ, ಸೈಬರ್ ಸುರಕ್ಷತೆ ಮತ್ತು ವ್ಯಾಪಾರವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು.
ಕೊರೋನವೈರಸ್ ಬಿಕ್ಕಟ್ಟನ್ನು "ಅವಕಾಶ" ಎಂಬುದಾಗಿ ನೋಡುತ್ತಿರುವ ಕಾರಣ ಬಹುತೇಕ ಎಲ್ಲ ಕ್ಷೇತ್ರಗಳನ್ನು ಒಳಗೊಂಡ ಸಮಗ್ರ ಸುಧಾರಣೆಯ ಪ್ರಕ್ರಿಯೆಯನ್ನು ಭಾರತದಲ್ಲಿ ಪ್ರಾರಂಭಿಸಲಾಗಿದೆ ಎಂದು ಮೋದಿ ವಿವರಿಸಿದರು.
ಜಾಗತಿಕವಾಗಿ ಸುಮಾರು ೬೫ ಲಕ್ಷ ಜನರನ್ನು ಬಾಧಿಸಿ, ೩.೮೮ ಲಕ್ಷ ಜನರನ್ನು ಬಲಿ ಪಡೆದಿರುವ ಕೋವಿಡ್ -೧೯ರ ಪ್ರತಿಕೂಲಕರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮದಿಂದ ಹೊರಬರಲು ಸಂಘಟಿತ ಮತ್ತು ಸಹಭಾಗಿತ್ವದ ವಿಧಾನಕ್ಕಾಗಿ ಭಾರತ ಮುಂದಾಗಿರುವುದನ್ನು ಪ್ರಧಾನಿ ತಿಳಿಸಿದರು.
ವರ್ಚುವಲ್ ಶೃಂಗಸಭೆಯನ್ನು ಉಲ್ಲೇಖಿಸಿ ಮೋದಿ ಇದನ್ನು "ಭಾರತ-ಆಸ್ಟ್ರೇಲಿಯಾ ಸಹಭಾಗಿತ್ವದ ಹೊಸ ಮಾದರಿ, ವ್ಯವಹಾರ ನಡೆಸುವ ಹೊಸ ಮಾದರಿ" ಎಂದು ಬಣ್ಣಿಸಿದರು. ಮೋದಿಯವರು ವಿದೇಶಿ ನಾಯಕರೊಂದಿಗೆ "ದ್ವಿಪಕ್ಷೀಯ" ವಾಸ್ತವ ಶೃಂಗಸಭೆಯನ್ನು ನಡೆಸಿದ್ದು ಇದೇ ಮೊದಲು.
ಮೋರಿಸನ್ ಅವರೊಂದಿಗಿನ ಮಾತುಕತೆಯನ್ನು "ಮಹೋನ್ನತ ಚರ್ಚೆ" ಎಂದು ಮೋದಿ ಬಣ್ಣಿಸಿದರು, ಇದು ಇಬ್ಬರು ಕಾರ್ಯತಂತ್ರದ ಪಾಲುದಾರರ ನಡುವಿನ ಸಂಬಂಧಗಳ ಸಂಪೂರ್ಣ ವಿಸ್ತಾರವನ್ನು ಒಳಗೊಂಡಿದೆ. "ಈ ಬಿಕ್ಕಟ್ಟನ್ನು ಒಂದು ಅವಕಾಶವಾಗಿ ನೋಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಭಾರತದಲ್ಲಿ, ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಸಮಗ್ರ ಸುಧಾರಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಇದು ಶೀಘ್ರದಲ್ಲೇ ನೆಲಮಟ್ಟದಲ್ಲಿ ಫಲಿತಾಂಶಗಳನ್ನು ನೀಡಲಿದೆ" ಎಂದು ಪ್ರಧಾನಿ ಹೇಳಿದರು.
"ಕಷ್ಟದ ಸಮಯದಲ್ಲಿ ಆಸ್ಟ್ರೇಲಿಯಾದ ಭಾರತೀಯ ಸಮುದಾಯವನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ನೋಡಿಕೊಂಡಿದ್ದಕ್ಕಾಗಿ ಮೋದಿ ಅವರು ಮೋರಿಸನ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತುಕತೆಯ ಒಟ್ಟಾರೆ ಗಮನವು ಆರೋಗ್ಯ ರಕ್ಷಣೆ, ವ್ಯಾಪಾರ ಮತ್ತು ರಕ್ಷಣೆಯಂತಹ ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವುದರ ಮೇಲೆ ಕೇಂದ್ರೃಕೃತವಾಗಿತ್ತು.
ಕೊರೋನವೈರಸ್ ಬಿಕ್ಕಟ್ಟನ್ನು ಎದುರಿಸುವಲ್ಲಿ ಏಕೀಕೃತ ಜಾಗತಿಕ ವಿಧಾನವನ್ನು ಮುಂದಿಡುವಲ್ಲಿ ಜಿ -೨೦ ಪಾತ್ರವನ್ನು ಒಳಗೊಂಡಂತೆ ಮೋದಿಯವರ "ರಚನಾತ್ಮಕ ಮತ್ತು ಅತ್ಯಂತ ಸಕಾರಾತ್ಮಕ" ಪಾತ್ರವನ್ನು ಮೋಡಿಸನ್ ಕೊಂಡಾಡಿದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಇದು ‘ಸೂಕ್ತ ಸಮಯ ಮತ್ತು ಪರಿಪೂರ್ಣ ಅವಕಾ’ ಎಂದು ನಂಬಿದ್ದೇನೆ ಎಂದು ಮೋದಿ ಹೇಳಿದರು. "ನಮ್ಮ ಸ್ನೇಹವನ್ನು ಬಲಪಡಿಸಲು ನಮಗೆ ಅಪಾರ ಸಾಧ್ಯತೆಗಳಿವೆ" ಎಂದು ಮೋದಿ ಹೇಳಿದರು.
‘ನಮ್ಮ ಸಂಬಂಧಗಳು ನಮ್ಮ ಪ್ರದೇಶ ಮತ್ತು ಜಗತ್ತಿಗೆ ಹೇಗೆ ಸ್ಥಿರತೆಯ ಅಂಶವಾಗಬೇಕು ಮತ್ತು ಜಾಗತಿಕ ಒಳಿತಿಗಾಗಿ ನಾವು ಹೇಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂಬಿತ್ಯಾದಿ ಎಲ್ಲ ಅಂಶಗಳು ಪರಿಗಣಿಸಲಾಗಿದೆ’ ಎಂದು ಪ್ರಧಾನಿ ನುಡಿದರು.
ಆಸ್ಟ್ರೇಲಿಯಾದೊಂದಿಗಿನ ತನ್ನ ಸಂಬಂಧವನ್ನು ವ್ಯಾಪಕ ಮತ್ತು ವೇUವಾಗಿ ವಿಸ್ತರಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು. ’ಇದು ಉಭಯ ದೇಶಗಳಿಗೆ ಮಾತ್ರವಲ್ಲ, ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ವಿಶ್ವಕ್ಕೂ ಮುಖ್ಯವಾಗಿದೆ’ ಎಂದು ಅವರು ಹೇಳಿದರು.
"ಜಾಗತಿಕ ಸಾಂಕ್ರಾಮಿಕದ ಈ ಅವಧಿಯಲ್ಲಿ ನಮ್ಮ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಪಾತ್ರವು ಹೆಚ್ಚು ಮಹತ್ವದ್ದಾಗಿದೆ. ಈ ಸಾಂಕ್ರಾಮಿಕ ರೋಗದ ಆರ್ಥಿಕ ಮತ್ತು ಸಾಮಾಜಿಕ ಅಡ್ಡಪರಿಣಾಮಗಳಿಂದ ಹೊರಬರಲು ಜಗತ್ತಿಗೆ ಸಂಘಟಿತ ಮತ್ತು ಸಹಕಾರಿ ವಿಧಾನದ ಅಗತ್ಯವಿದೆ" ಎಂದು ಮೋದಿ ನುಡಿದರು.
೨೦೦೯ ರಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ’ಕಾರ್ಯತಂತ್ರದ ಸಹಭಾಗಿತ್ವ’ ಮಟ್ಟಕ್ಕೆ ನವೀಕರಿಸಲಾಯಿತು. ಅಂದಿನಿಂದ, ಎರಡೂ ದೇಶಗಳು ತಮ್ಮ ಸಹಕಾರವನ್ನು ಹಲವಾರು ಪ್ರಮುಖ ಕ್ಷೇತ್ರಗಳಿಗೆ ವಿಸ್ತರಿಸಿವೆ.
೨೦೧೭ ರಲ್ಲಿ ವಿದೇಶಾಂಗ ನೀತಿಯ ಕುರಿತಾದ ಶ್ವೇತಪತ್ರದಲ್ಲಿ, ಆಸ್ಟ್ರೇಲಿಯಾವು ಭಾರತವನ್ನು "ಹಿಂದೂ ಮಹಾಸಾಗರ ದೇಶಗಳಲ್ಲಿ ಪ್ರಮುಖ ಸಮುದ್ರ ಶಕ್ತಿ" ಮತ್ತು "ಆಸ್ಟ್ರೇಲಿಯಾದ ಮುಂಚೂಣಿ ಪಾಲುದಾರ" ಎಂದು ಗುರುತಿಸಿತ್ತು.
ದ್ವಿಪಕ್ಷೀಯ ಆರ್ಥಿಕ ತೊಡಗಿಸಿಕೊಳ್ಳುವಿಕೆ ಕೂಡಾ ಕಳೆದ ಕೆಲವು ವರ್ಷಗಳಿಂದ ಏರಿಕೆಯಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ೨೦೧೮-೧೯ರಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರವು ಸುಮಾರು ೨೧ ಶತಕೋಟಿ ಅಮೆರಿಕನ್ ಡಾಲರ್ ಆಗಿತ್ತು. ಭಾರತದಲ್ಲಿ ಆಸ್ಟ್ರೇಲಿಯಾದ ಸಂಚಿತ ಹೂಡಿಕೆ ಸುಮಾರು ೧೦.೭೪ ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದರೆ, ಆಸ್ಟ್ರೇಲಿಯಾದಲ್ಲಿ ಭಾರತದ ಒಟ್ಟು ಹೂಡಿಕೆ ೧೦.೪೫ ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಆಸ್ಟ್ರೇಲಿಯಾದ ಸೂಪರ್ ಪಿಂಚಣಿ ನಿಧಿ ಭಾರತದ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯಲ್ಲಿ ೧ ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ ಉಭಯ ದೇಶಗಳು ಕಡಲ ಸಹಕಾರವನ್ನು ವಿಸ್ತರಿಸುವತ್ತ ಗಮನ ಹರಿಸುತ್ತಿವೆ.
ಭಾರತ ಮತ್ತು ಆಸ್ಟ್ರೇಲಿಯಾ ತಮ್ಮ ಮೊದಲ ದ್ವಿಪಕ್ಷೀಯ ನೌಕಾ ಕವಾಯತು ’ಆಸಿಂಡೆಕ್ಸ್’ ಅನ್ನು ೨೦೧೫ ರಲ್ಲಿ ಪ್ರಾರಂಭಿಸಿದವು, ಇದು ವಿಶೇಷವಾಗಿ ಹಿಂದೂ ಮಹಾಸಾಗರದಲ್ಲಿ ರಕ್ಷಣಾ ಮತ್ತು ಕಡಲ ಸಹಕಾರವನ್ನು ಗಾಢವಾಗಿಸುವತ್ತ ಗಮನಹರಿಸಿತು. ಆಸಿಂಡೆಕ್ಸ್-೨೦೧೯ ರ ಮೂರನೇ ಆವೃತ್ತಿ ೨೦೧೯ ರ ಏಪ್ರಿಲ್‌ನಲ್ಲಿ ಬಂಗಾಳಕೊಲ್ಲಿಯಲ್ಲಿ ನಡೆಯಿತು.
ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಭಾರತದ ನಿಲುವನ್ನು ಆಸ್ಟ್ರೇಲಿಯಾ ಬೆಂಬಲಿಸುತ್ತಿದೆ ಮತ್ತು ತನ್ನ ಮಣ್ಣಿನಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಅರ್ಥಪೂರ್ಣ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನವನ್ನು ಆಗ್ರಹಿಸಿದೆ. ಅಜರ್ ಮಸೂದ್ ಅವರನ್ನು ಜಾಗತಿಕ ಭಯೋತ್ಪಾದಕರೆಂದು ಘೋಷಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಆಸ್ಟ್ರೇಲಿಯಾ ಸಹ ಪ್ರಾಯೋಜಕತ್ವ ನೀಡಿತ್ತು.
No comments:
Post a Comment