Monday, June 15, 2020

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಇದು ಸುವರ್ಣ ನೋಟ

ಕೇರೆ ಹಾವು ಮತ್ತು ಗೂಬೆ ಪರಸ್ಪರ ವೈರಿಗಳು.ಹಾವು – ಮುಂಗುಸಿಗಳ ಹಾಗೆಯೇ. ಕೇರೆ ಹಾವು ಆಸುಪಾಸಿನಲ್ಲಿ ಸುಳಿದಾಡುತ್ತಿದ್ದರೆ ಸಾಕು ಗೂಬೆ ಅದರ ಮೇಲೆರಗಿ ಕುಕ್ಕದೇ ಬಿಡಲು ಸಾಧ್ಯವೇ ಇಲ್ಲ..

ಆದರೆ, ಇತ್ತೀಚೆಗೆ ಒಂದು ದಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ  ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಸುತ್ತಾಡುತ್ತಿದ್ದಾಗ ಕಂಡು ಬಂದದ್ದು ಒಂದು ಅಪರೂಪದ ದೃಶ್ಯ.  ಗೂಬೆಯೊಂದು ಮರದ ರೆಂಬೆಯೊಂದರಲ್ಲಿ ಕುಳಿತಿದೆ. ಅದರ ಸಮೀಪದಲ್ಲೇ ಒಂದು ಕೇರೆ ಹಾವು ಅತ್ತಿತ್ತ ಸುಳಿದಾಡುತ್ತಿದೆ.

ಓಹ್ ಇನ್ನೇನು ಕ್ಷಣಾರ್ಧದಲ್ಲಿ ಗೂಬೆ ಹಾವಿನ ಮೇಲೆರಗುತ್ತದೆ. ಒಂದು ಪುಟ್ಟ ಕದನ ಏರ್ಪಡುತ್ತದೆ ಅಂದು ಕೊಂಡ ಸುವರ್ಣರು ಹೆಗಲ ಮೇಲಿನಿಂದ ಕ್ಯಾಮರಾ ಕೆಳಗಿಳಿಸಿದರು. ಅವರ  ಕ್ಯಾಮರಾ ಮುಂದಿನ ಸಮರ ದೃಶ್ಯದ ದಾಖಲೀಕರಣಕ್ಕೆ ಸಜ್ಜಾಯಿತು..

ಒಂದು, ಎರಡು, ಮೂರು . … ನಿಮಿಷಗಳು ಕಳೆದವು. ಊಹೂಂ ಕದನದ ಯಾವ ಲಕ್ಷಣವೂ ಇಲ್ಲ. ಹಾವು ಹಿಂದೆ ಮುಂದೆ ಸುತ್ತಾಡಿದರೂ, ಗೂಬೆಯದ್ದು ಗಂಭೀರ ಮೌನ!  ಅರೇ, ಇದೇನಿದು

ಲಡಾಖ್ನಲ್ಲಿ ಭಾರತ-ಚೀನಾಗಳ ಸೇನಾ ಚಲನ ವಲನದಂತೆ ಆಯಿತಲ್ಲ? ಬರೇ ಚಲನವಲನ ಮಾತ್ರ. ಗಂಭೀರ ಮೌನ.ಸುತ್ತಾಡುವ ಕೇರೆ ಹಾವು ಗೂಬೆಯ ಕಣ್ಣಿನ ಸಮೀಪಕ್ಕೆ ಬಂದು ದಿಟ್ಟಿಸಿ ನೋಡಿದರೂ ಗೂಬೆಯಿಂದ ಸದ್ದಿಲ್ಲ, ಗದ್ದಲವಿಲ್ಲ. ಹಿಂದಕ್ಕೆ ಮುಂದಕ್ಕೆ ಸುತ್ತಿದರೂ ಮಿಸುಕಾಡದ ಗೂಬೆ.

ಅತ್ತಿತ್ತ ಸುಳಿದ ಹಾವು ಕಡೆಗೆ ಚೀನಾದ ಸೈನಿಕರ ಹಾಗೆ ಹಿಂದಕ್ಕೆ ಸರಿದು ಆಚೆ ಹೊರಟೇ ಹೋಯಿತು. ಗೂಬೆಯೋ ಭಾರತದ ಸೇನೆಯ ಹಾಗೆ ಘನ ಗಾಂಭೀರ್ಯದಿಂದ ಕುಳಿತಲ್ಲೇ ಕುಳಿತುಕೊಂಡಿತ್ತು…

ಸುವರ್ಣರ ಕ್ಯಾಮರಾ ಹೆಗಲಿನಿಂದ ಕೆಳಗೆ ಇಳಿಯಿತು. ಯುದ್ಧ ನಡೆಯಲಿಲ್ಲ. ಎಲ್ಲವೂ ಶಾಂತಿಯೊಂದಿಗೆ ಮುಕ್ತಾಯವಾಯಿತು.

ಅದು ಸರಿ.  ಆದರೆ ಗೂಬೆ ತನ್ನ ಬದ್ಧ ವೈರಿ ಕೇರೆ ಹಾವಿನ ಮೇಲೆ ಏಕೆ ಎರಗಲಿಲ್ಲ ?  ಪ್ರಶ್ನೆ ಸುವರ್ಣರ ತಲೆಯೊಳಗೆ ಗುಂಯ್ ಗುಡುತ್ತಿತ್ತು.

ಅಷ್ಟರಲ್ಲಿ ನೆತ್ತಿಯ  ಮೇಲೆ ತಂಪಾದಂತಾಯಿತು. ನೋಡಿದರೆ, ಬೀಸಿದ ಗಾಳಿಗೆ ಮರದ ಎಲೆಗಳಿಂದ ನೀರ ಹನಿಗಳು ಸುವರ್ಣರ ಮಂಡೆಯ ಮೇಲೆ ಬಿದ್ದಿದ್ದವು. ಹೌದು, ಹಿಂದಿನ ದಿನವಷ್ಟೇ

ಬೆಂಗಳೂರಿನಲ್ಲಿ ಭಾರೀ  ಮಳೆ ಸುರಿದಿತ್ತು.

ಸುವರ್ಣರ ಪ್ರಶ್ನೆಗೆ ಉತ್ತರ ಸಿಕ್ಕಿತುಹೌದು. ಗೂಬೆ ಮಳೆಯಿಂದ ಒದ್ದೆ ಮುದ್ದೆಯಾಗಿ ಕುಳಿತಿದೆ.ಬಹುಶಃ  ರಾತ್ರಿಯಿಂದಲೇ  ಹಾಗೆಯೇ ಕುಳಿತಿರಬಹುದು. ಹಾಗೇ ಸೂರ್ಯ ಮೇಲೆದ್ದು ಕಾಯಕ ಆರಂಭಿಸಿದ್ದಾನೆ.ಲೋಕಕ್ಕೆ  ಬೆಳಗಾಗುತ್ತಿದ್ದಂತೆಯೇ ಗೂಬೆಗೆ ಕತ್ತಲು ಆವರಿಸಿದೆ. ಏಕೆಂದರೆ ಹಗಲು ಅದಕ್ಕೆ ಕಣ್ಣು ಕಾಣುವುದಿಲ್ಲ. ಸುತ್ತ ಬಂದು ಸುತ್ತಾಡಿದ ಕೇರೆ ಹಾವು ಅದರ ಕಣ್ಣಿಗೆ ಬಿದ್ದೇ ಇಲ್ಲ. ಇನ್ನು ಸಮರ ನಡೆಯುವುದು ಎಲ್ಲಿಗೆ? ಕೇರೆ ಸುತ್ತಾಡಿ  ‘ಈ ಮೂಕ ಮುನಿಯ ಸಹವಾಸ’ ತನಗೇಕೆ  ಎಂದು ತನ್ನಷ್ಟಕ್ಕೇ ಹೊರಟು ಹೋಗಿದೆ ಅಷ್ಟೆ.

ವಿಶ್ವನಾಥ ಸುವರ್ಣ ಕ್ಯಾಮರಾ ಸೆರೆ ಹಿಡಿದ ಘಟನೆಯ ದೃಶ್ಯಗಳು ಇಲ್ಲಿವೆ. 

ಸಮೀಪ ದೃಶ್ಯದ ಅನುಭವಕ್ಕಾಗಿ ಫೊಟೋಗಳನ್ನು ಕ್ಲಿಕ್ ಮಾಡಿರಿ.

ಕಥೆಯನ್ನು ಆಲಿಸಲು ಕೆಳಗೆ ಕ್ಲಿಕ್  ಮಾಡಿರಿ:

-ಉದಯನೆ


2 comments:

Doddabanagere Maranna said...

ಅಪರೂಪದ ಚಿತ್ರಗಳು ಮತ್ತು ನಿರೂಪಣೆಯ ಪದಜೋಡಣೆ ಚೀನಾ ಮತ್ತು ಭಾರತದ ಸೇನೆ ಸಾದೃಶಗಳ ಉದಾಹರಣೆ ಸೋಗಸಾಗಿದೆ ಅಭಿನಂದನೆಗಳು ಅಣ್ಣಾ.

PARYAYA.COM said...

ಧನ್ಯವಾದಗಳು, ಡೊಡ್ಡಬಾಣಗೆರೆ ಮಾರಣ್ಣ- ನೆತ್ರಕೆರೆ ಉದಯಶಂಕರ

Advertisement