Friday, June 5, 2020

ಲಡಾಖ್ ಬಿಕ್ಕಟ್ಟು: ಶನಿವಾರ ಭಾರತ-ಚೀನಾ ಮಿಲಿಟರಿ ಮಾತುಕತೆ

ಲಡಾಖ್ ಬಿಕ್ಕಟ್ಟು:  ಶನಿವಾರ ಭಾರತ-ಚೀನಾ  ಮಿಲಿಟರಿ ಮಾತುಕತೆ

ನವದೆಹಲಿ: ಪ್ರಮುಖ ಸೇನಾ ಮಾತುಕತೆಗಳ ಮೂಲಕ ಭಾರತದೊಂದಿಗೆ ಗಡಿಬಿಕ್ಕಟ್ಟನ್ನುಸರಿಯಾಗಿ ಬಗೆಹರಿಸಲುತಾನು ಬದ್ಧ ಎಂಬ ಚೀನಾ ಹೇಳಿಕೆಯ ನಡುವೆ ಲಡಾಖ್ ಬಿಕ್ಕಟ್ಟು ಇತ್ಯರ್ಥ ನಿಟ್ಟಿನಲ್ಲಿ ಪ್ರಗತಿ ಸಾಧಿಸುವ ಆಶಯದೊಂದಿಗೆ ಭಾರತದ ಸೇನಾ ಅಧಿಕಾರಿಗಳು ಚೀನೀ ಅಧಿಕಾರಿಗಳೊಂದಿಗೆ  2020  ಜೂನ್  06ರ ಶನಿವಾರ ಉನ್ನತ ಮಟ್ಟದ ಅಧಿಕಾರಿಗಳ ಮೊದಲ ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಲೇಹ್ ಮೂಲದ ೧೪ ಕೋರ್ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿಯ ತತ್ಸಮಾನ ಅಧಿಕಾರಿ ಉನ್ನತ ಮಟ್ಟದ ಸೇನಾ ಅಧಿಕಾರಿಗಳ ಮೊದಲ ಸುತ್ತಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ಯಾಂಗೋಂಗ್ ಲೇಕ್ ಸಮೀಪ ಮೇ ೫ರಂದು ಮತ್ತು ಬಳಿಕ ಗಲ್ವಾನ್ ನದಿ ಪಾತ್ರದ ಸಮೀಪ ಸಂಭವಿಸಿದ ಘರ್ಷಣೆಗಳ ಬಳಿಕ ನಡೆಯುತ್ತಿರುವ ಉನ್ನತ ಮಟ್ಟದ ಮೊದಲ ಸೇನಾ ಮಾತುಕತೆ ಇದಾಗಿದೆ.

ಉಭಯ ಸೇನೆಗಳ ಮೇಜರ್ ಜನರಲ್ ಮಟ್ಟದ ಅಧಿಕಾರಿಗಳ ನೇತೃತ್ವದ ನಿಯೋಗಗಳ ಮಧ್ಯೆ ಜೂನ್ ೨ರಂದು ನಡೆದ ಕೊನೆಯ ಸುತ್ತಿನ ಮಾತುಕತೆ ಅಪೂರ್ಣವಾಗಿತ್ತು.

ಗಡಿ ಬಿಕ್ಕಟ್ಟನ್ನು ಕೊನೆಗೊಳಿಸಲು ಶನಿವಾರ ಭಾರತ ಮತ್ತು ಚೀನಾದ ಹಿರಿಯ ಸೇನಾ ಅಧಿಕಾರಿಗಳ ನಡುವಣ ಪ್ರಮುಖ ಮಾತುಕತೆಗೆ ಮುಂಚಿತವಾಗಿ, ಭಾರತದೊಂದಿಗೆ ಸಂಬಂಧಿಸಿದ ಸಮಸ್ಯೆಯನ್ನು ಸರಿಯಾಗಿ ಪರಿಹರಿಸಲು ಬದ್ಧವಾಗಿರುವುದಾಗಿ ಚೀನಾ ಶುಕ್ರವಾರ ಹೇಳಿತು.

ಎರಡೂ ಸೇನೆಗಳ ಲೆಫ್ಟಿನೆಂಟ್ ಜನರಲ್ಗಳ ನೇತೃತ್ವದಲ್ಲಿ ಶನಿವಾರ ಭಾರತೀಯ ಮತ್ತು ಚೀನಾದ ಮಿಲಿಟರಿ ನಡುವೆ ನಡೆಯುವ ಮೊದಲ ವಿಸ್ತೃತ ಮಾತುಕತೆಯ ಸಂದರ್ಭದಲ್ಲಿ ಪೂರ್ವ ಲಡಾಕ್ನಲ್ಲಿ ಸಂಭವಿಸಿರುವ ಒಂದು ತಿಂಗಳ ಕಾಲದ ಕಹಿ ಬಿಕ್ಕಟ್ಟನ್ನು ಕೊನೆಗೊಳಿಸುವ ನಿರ್ದಿಷ್ಟ ಪ್ರಸ್ತಾಪಗಳ ಬಗ್ಗೆ ಎರಡೂ ಕಡೆಯವರು ಚರ್ಚಿಸುವ ನಿರೀಕ್ಷೆಯಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ "ಚೀನಾ ಮತ್ತು ಭಾರತದ ನಡುವಿನ ಗಡಿ ಪ್ರದೇಶದ ಪರಿಸ್ಥಿತಿ ಒಟ್ಟಾರೆ ಸ್ಥಿರ ಮತ್ತು ನಿಯಂತ್ರಣದಲ್ಲಿದೆ" ಎಂದು ಹೇಳಿದರು.

"ನಾವು ಪೂರ್ಣ ಪ್ರಮಾಣದ ಗಡಿ-ಸಂಬಂಧಿತ ಕಾರ್ಯವಿಧಾನಗಳನ್ನು ಹೊಂದಿದ್ದೇವೆ ಮತ್ತು ಸೇನೆ ಮತ್ತು ರಾಜತಾಂತ್ರಿಕ ಮಾರ್ಗUಳಲ್ಲಿ ನಾವು ನಿಕಟ ಸಂವಹನ ನಡೆಸುತ್ತೇವೆ" ಎಂದು ಅವರು ಹೇಳಿದರು. "ಸಂಬಂಧಿತ ಸಮಸ್ಯೆಯನ್ನು ಸರಿಯಾಗಿ ಪರಿಹರಿಸಲು ನಾವು ಬದ್ಧರಾಗಿದ್ದೇವೆ" ಎಂದು ಗೆಂಗ್ ನುಡಿದರು.

ಪೂರ್ವ ಲಡಾಖ್ ಮೂರು ಪ್ರದೇಶಗಳಾದ ಪ್ಯಾಂಗೋಂಗ್ ತ್ಸೋ, ಗಲ್ವಾನ್ ಕಣಿವೆ ಮತ್ತು ಡೆಮ್ಚಾಕ್ನಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ಬಗೆಗಿನ ಮಾತುಕತೆಯಲ್ಲಿ ಭಾರತದ ಕಡೆಯವರು ನಿರ್ದಿಷ್ಟ ಪ್ರಸ್ತಾಪಗಳನ್ನು ಮಂಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಮಾತುಕತೆಗೆ ಭಾರತೀಯ ಮಿಲಿಟರಿ ತೆಗೆದುಕೊಳ್ಳುವ ಪ್ರಸ್ತಾಪಗಳು ಏನೆಂದು ತತ್ ಕ್ಷಣಕ್ಕೆ ತಿಳಿದಿಲ್ಲ ಆದರೆ ಎಲ್ಲಾ ಕ್ಷೇತ್ರಗಳಲ್ಲಿ ಯಥಾಸ್ಥಿತಿ ಮರಳಲು ಅದು ಒತ್ತಾಯಿಸುತ್ತದೆ ಎಂದು ತಿಳಿದುಬಂದಿದೆ. ಸ್ಥಳೀಯ ಕಮಾಂಡರ್ಗಳು ಮತ್ತು ಎರಡು ಸೇನೆಗಳ ಪ್ರಮುಖ ಸಾಮಾನ್ಯ ಶ್ರೇಣಿಯ ಅಧಿಕಾರಿಗಳ ನಡುವೆ ಉಭಯ ಕಡೆಯವರು ಈಗಾಗಲೇ ಕನಿಷ್ಠ ೧೦ ಸುತ್ತಿನ ಮಾತುಕತೆ ನಡೆಸಿದ್ದಾರೆ ಆದರೆ ಮಾತುಕತೆ ಯಾವುದೇ ಧನಾತ್ಮಕ ಫಲಿತಾಂಶವನ್ನು ನೀಡಿಲ್ಲ ಎಂದು ಅವರು ಹೇಳಿದರು.

೨೦೧೭ ಡೋಕ್ಲಾಮ್ ಪ್ರಸಂಗದ ನಂತರ ಎರಡು ಸೈನ್ಯಗಳ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಬಿಕ್ಕಟ್ಟಿಗೆ ಕಾರಣವಾಗುತ್ತಿರುವ ಮುಖಾಮುಖಿಗೆ ಪರಿಹಾರ ಕಂಡುಕೊಳ್ಳಲು ಎರಡು ಕಡೆಯವರು ರಾಜತಾಂತ್ರಿಕ ಮಾತುಕತೆಗಳಲ್ಲಿ ತೊಡಗಿದ್ದಾರೆ.

ಕಳೆದ ತಿಂಗಳ ಆರಂಭದಲ್ಲಿ ಬಿಕ್ಕಟ್ಟು ಪ್ರಾರಂಭವಾದ ನಂತರ, ಪ್ಯಾಂಗೊಂಗ್ ತ್ಸೊ, ಗಲ್ವಾನ್ ಕಣಿವೆ, ಡೆಮ್ಚಾಕ್ ಮತ್ತು ದೌಲತ್ ಬೇಗ್ ಓಲ್ಡಿಯ ಎಲ್ಲಾ ವಿವಾದಿತ ಪ್ರದೇಶಗಳಲ್ಲಿ ಚೀನಾ ಸೇನೆಯ ಆಕ್ರಮಣಕಾರಿ ಭಂಗಿಗಳನ್ನು ಎದುರಿಸಲು ಭಾರತೀಯ ಸೈನ್ಯವು ದೃಢವಾದ ಮಾರ್ಗವನ್ನು ಅಳವಡಿಸಿಕೊಳ್ಳಲು ಎಂದು ಭಾರತೀಯ ಸೇನಾ  ನಾಯಕತ್ವ ನಿರ್ಧರಿಸಿದೆ.

ಚೀನಾದ ಸೇನೆಯು ಪ್ಯಾಂಗೊಂಗ್ ತ್ಸೊ ಮತ್ತು ಗಲ್ವಾನ್ ಕಣಿವೆಯಲ್ಲಿ ಸುಮಾರು ,೫೦೦ ಸೈನಿಕರನ್ನು ನಿಯೋಜಿಸಿರುವುದಾಗಿ ತಿಳಿದುಬಂದಿದೆ ಮತ್ತು ಕ್ರಮೇಣ ತಾತ್ಕಾಲಿಕ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುತಿದೆ. ಹೆಚ್ಚುವರಿ ಪಡೆಗಳು ಮತ್ತು ಫಿರಂಗಿ ಬಂದೂಕುಗಳನ್ನು ಕಳುಹಿಸುವ ಮೂಲಕ ಭಾರತವು ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ಯಾಂಗೊಂಗ್ ತ್ಸೊ ಲೇಕ್ ಸಮೀಪದ ಪ್ರದೇಶದಲ್ಲಿ ಪ್ರಮುಖ ರಸ್ತೆಯನ್ನು ಭಾರತ ನಿರ್ಮಿಸುತ್ತಿರುವುದು ಮತ್ತು ಗಲ್ವಾನ್ ಕಣಿವೆಯಲ್ಲಿ ಡಾರ್ಬುಕ್-ಶಾಯೊಕ್-ದೌಲತ್ ಬೇಗ್ ಓಲ್ಡೀ ರಸ್ತೆಯನ್ನು ಸಂಪರ್ಕಿಸುವ ಇನ್ನೊಂದು ರಸ್ತೆ ನಿರ್ಮಿಸಿದ್ದಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತ ಪಡಿಸುತ್ತಿರುವುದು ಹಾಲಿ ಬಿಕ್ಕಟ್ಟಿಗೆ ಕಾರಣವಾಗಿದೆ.

ಭಾರತ ಮತ್ತು ಚೀನಾದ ಸೈನ್ಯವು ೨೦೧೭ ರಲ್ಲಿ ಡೋಕ್ಲಾಮ್ ಮೂರು ಕೂಡು ಮಾರ್ಗದಲ್ಲಿ (ತ್ರಿ-ಜಂಕ್ಷನ್) ೭೩ ದಿನಗಳ ಬಿಕ್ಕಟ್ಟನ್ನು ಎದುರಿಸಿದ್ದವು. ಇದು ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವೆ ಯುದ್ಧದ ಭೀತಿಯನ್ನು ಹುಟ್ಟುಹಾಕಿತ್ತು.

ಭಾರತ-ಚೀನಾ ಗಡಿಯು ,೪೮೮ ಕಿ.ಮೀ ಉದ್ದದ ಎಲ್ಎಸಿಯನ್ನು ಒಳಗೊಂಡಿದ್ದು, ಆಗಾಗ ಬಿಕ್ಕಟ್ಟು ತಲೆದೋರುತ್ತದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಭಾಗವೆಂದು ಚೀನಾ ಹೇಳಿಕೊಂಡರೆ, ಭಾರತ ಆಕ್ಷೇಪಿಸುತ್ತದೆ. ಗಡಿ ಸಮಸ್ಯೆಯ ಅಂತಿಮ ನಿರ್ಣಯ ಬಾಕಿ ಇರುವುದರಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳುವುದು ಅಗತ್ಯ ಎಂದು ಎರಡೂ ಕಡೆಯವರು ಪ್ರತಿಪಾದಿಸುತ್ತಿದ್ದಾರೆ.

No comments:

Advertisement