Sunday, June 7, 2020

ಸ್ಯಾಂಡಲ್ ವುಡ್ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

ಸ್ಯಾಂಡಲ್ ವುಡ್  ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರನಟ ಚಿರಂಜೀವಿ ಸರ್ಜಾ(೩೯) ತೀವ್ರ ಹೃದಯಾಘಾತದಿಂದ 2020 ಮೇ 7ರ ಭಾನುವಾರ ಸಂಜೆ ಬೆಂಗಳೂರಿನ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು.

ಚಿರಂಜೀವಿ ಅವರು ಹಿರಿಯ ನಟ ದಿವಂಗತ ಶಕ್ತಿಪ್ರಸಾದ್ ಮತ್ತು ಲಕ್ಷ್ಮಿದೇವಮ್ಮ ಅವರ ಮೊಮ್ಮಗ. ಶಕ್ತಿಪ್ರಸಾದ್ ಅವರ ಮಗಳು ಅಮ್ಮಾಜಿ ಹಾಗೂ ವಿಜಯಕುಮಾರ್  ಅವರ ಹಿರಿಯ ಪುತ್ರ. ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಅಕ್ಕನ ಮಗ. ಇವರ ಸೋದರ ಧ್ರುವ ಸರ್ಜಾ ಕೂಡ ಸಿನಿಮಾ ನಟ.

ಚಿರಂಜೀವಿ ಸರ್ಜಾ ಎರಡು ವರ್ಷಗಳ ಹಿಂದೆಯಷ್ಟೇ ಹಿರಿಯ ಕಲಾವಿದರಾದ  ಸುಂದರರಾಜ್  ಮತ್ತು ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್ ಅವರನ್ನು ಮದುವೆಯಾಗಿದ್ದರು. ಈ ಜೋಡಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿತ್ತು.

ಚಿರಂಜೀವಿ ‘ವಾಯುಪುತ್ರ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.  ‘ಗಂಡೆದೆ’, ‘ಚಿರು’, ‘ದಂಡಂ ದಶಗುಣಂ’, ‘ವರದನಾಯಕ’, ‘ಆಟಗಾರ’, ‘ಆಕೆ’, ‘ಸಂಹಾರ’, ‘ಅಮ್ಮ ಐ ಲವ್ ಯು’ ಸೇರಿದಂತೆ ೨೨ ಸಿನಿಮಾಗಳಲ್ಲಿ ಅವರು ನಟಿಸಿದ್ದರು.  ಇವರ ನಟನೆಯಲ್ಲಿ ತೆರೆಕಂಡಿದ್ದ ಕೊನೆಯ ಚಿತ್ರ ‘ಶಿವಾರ್ಜುನ’. ಇತ್ತೀಚೆಗೆ ಇವರು ರಮೇಶ್ ರಾಜ್ ನಿರ್ದೇಶನದ ‘ಧೀರಂ’ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದರು. ಇವರು ನಟಿಸುತ್ತಿದ್ದ ‘ಏಪ್ರಿಲ್’, ‘ರಾಜಮಾರ್ತಾಂಡ’ ಮತ್ತು ‘ಕ್ಷತ್ರಿಯ’ ಸಿನಿಮಾಗಳ ಶೂಟಿಂಗ್  ಕೊರೊನಾದಿಂದಾಗ ಸ್ಥಗಿತಗೊಂಡಿದ್ದವು.

ಸಂಜೆ ೩.೪೮ಕ್ಕೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಟ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದರು.  ಹೃದಯಾಘಾತದಿಂದ ಸಾವನ್ನಪ್ಪಿದ ಅವರಿಗೆ ಕೊರೋನಾ ತಗುಲಿರಬಹುದು ಎಂಬ ಅನುಮಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಗಂಟಲುದ್ರವವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ, ಚಿರು ಸರ್ಜಾಗೆ ಕೊರೋನಾ ನೆಗೆಟಿವ್ ಇದ್ದುದನ್ನು ದೃಢಪಡಿಸಿತು.

ಶನಿವಾರ ಸಂಜೆ ಚಿರಂಜೀವಿ ಸರ್ಜಾಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಇದುವರೆಗೂ ಅವರಿಗೆ ಆ ರೀತಿಯ ಯಾವುದೇ ಸಮಸ್ಯೆ ಕಂಡುಬರದ ಕಾರಣ ಯಾರೂ ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಂದು ಮಧ್ಯಾಹ್ನ ೩ ಗಂಟೆಗೆ ತಪಾಸಣೆಗಾಗಿ ಚಿರು ಅಪೋಲೋ ಆಸ್ಪತ್ರೆಯಲ್ಲಿ ಅಪಾಯಿಂಟ್ ಮೆಂಟ್  ತೆಗೆದುಕೊಂಡಿದ್ದರು. ಆದರೆ, ಆಸ್ಪತ್ರೆಗೆ ಹೊರಡುವ ಮೊದಲೇ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಅವರ ಪಲ್ಸ್ ಕಡಿಮೆಯಾಗಿತ್ತು. ವೈದ್ಯರು ತಕ್ಷಣ ಚಿಕಿತ್ಸೆ ಶುರು ಮಾಡಿದ್ದರಿಂದ ಚಿರುಗೆ ಪ್ರಜ್ಞೆ ಬಂದಿತ್ತು. ಆದರೆ, ಮತ್ತೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಅವರು ಕೊನೆಯುಸಿರೆಳೆದರು.

No comments:

Advertisement