Friday, June 12, 2020

ಪ್ರಾಣಿಗಳಿಗಿಂತ ಕಡೆ ಕೊರೋನಾ ಸೋಂಕಿತರ ಕಥೆ: ಸುಪ್ರೀಂ ಕೆಂಡ

ಪ್ರಾಣಿಗಳಿಗಿಂತ ಕಡೆ ಕೊರೋನಾ ಸೋಂಕಿತರ ಕಥೆ: ಸುಪ್ರೀಂ ಕೆಂಡ

ನವದೆಹಲಿ: ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ -೧೯ ರೋಗಿಗಳಿಗೆ ನೀಡಲಾದ ಅಸಮರ್ಪಕ ಚಿಕಿತ್ಸೆ ಮತ್ತು ಕೊರೋನಾ ಮೃತ ದೇಹಗಳ ನಿರ್ವಹಣೆ ನಿಟ್ಟಿನಲ್ಲಿ ತಳೆದ ಧೋರಣೆ ಬಗ್ಗೆ 2020 ಜೂನ್ 12ರ ಶುಕ್ರವಾರ ಕೆಂಡಾಮಂಡಲ ಸಿಟ್ಟು ಪ್ರದರ್ಶಿಸಿದ ಸುಪ್ರೀಂಕೋರ್ಟ್ಕೊರೋನಾ ರೋಗಿಗಳ ಸ್ಥಿತಿ ಪ್ರಾಣಿಗಳ ಸ್ಥಿತಿಗಿಂತಲೂ ಶೋಚನೀಯ ಮತ್ತು ಕೆಟ್ಟದ್ದಾಗಿದೆಎಂದು ಹೇಳಿತು.

ಮಾಧ್ಯಮ ವರದಿಗ ಹಿನ್ನೆಲೆಯಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠವು ಆಸ್ಪತ್ರೆಗಳಲ್ಲಿನ ಪರಿಸ್ಥಿತಿಗಳ ಬಗ್ಗೆ ದೆಹಲಿ, ಮಹಾರಾಷ್ಟ್ರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ನಾಲ್ಕು ರಾಜ್ಯಗಳಿಂದ ವಿವರವಾದ ವರದಿಗಳನ್ನು ತರಿಸಿಕೊಂಡಿತ್ತು.

"ಕೋವಿಡ್ -೧೯ ರೋಗಿಗಳಿಗೆ ಪ್ರಾಣಿಗಳಿಗಿಂತಲೂ ನಿಕೃಷ್ಟ ಚಿಕಿತ್ಸೆ ನೀಡಲಾಗುತ್ತದೆ. ಒಂದು ಪ್ರಕರಣದಲ್ಲಿ ಕಸದಲ್ಲಿ ಮೃತ ದೇಹ ಪತ್ತೆಯಾಗಿದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಹೇಳಿತು.

ದೆಹಲಿ ರಾಜ್ಯವು ನ್ಯಾಯಪೀಠದಿಂದ ಭಾರೀ ಟೀಕೆಗೆ ಗುರಿಯಾಯಿತು. ’ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ನಿಕೃಷ್ಟವಾಗಿದ್ದು, ಅವು ಕೋವಿಡ್ -೧೯ ಪರೀಕ್ಷೆಯನ್ನು ಕಡಿಮೆಗೊಳಿಸಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯ ಹಾಸಿಗೆಗಳು ಖಾಲಿ ಇದ್ದರೂ ರೋಗಿಗಳು ಆಸ್ಪತ್ರೆಯಲ್ಲಿ ಪ್ರವೇಶ ಪಡೆಯಲು ಕಂಬದಿಂದ ಕಂಬಕ್ಕೆ  ಸುತ್ತಬೇಕಾದ ಸ್ಥಿತಿ ಇದೆ ಎಂದು ಸುಪ್ರೀಂಕೋರ್ಟ್ ಹೇಳಿತು.

ಮಾಧ್ಯಮ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ದೆಹಲಿಯ ಲೋPನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯ ಲಾಬಿ ಮತ್ತು ನಿರೀಕ್ಷಾ ಪ್ರದೇಶದಲ್ಲಿ ಕೋವಿಡ್ -೧೯ ರೋಗಿಗಳ ಮೃತದೇಹಗಳು ಹೇಗೆ ಅನಾಥವಾಗಿ ಬಿದ್ದಿವೆ ಎಂಬುದನ್ನು ನ್ಯಾಯಾಲಯ ಎತ್ತಿ ತೋರಿಸಿತು.

ಆಸ್ಪತ್ರೆಗಳಲ್ಲಿ ಸಮರ್ಪಕ ಮೂಲಸೌಕರ್ಯಗಳನ್ನು ಖಾತ್ರಿಪಡಿಸಿಕೊಳ್ಳುವುದು ಸರ್ಕಾರಗಳ ಕರ್ತವ್ಯವಾಗಿದ್ದು,  ಕೋವಿಡ್ -೧೯ ರೋಗಿಗಳನ್ನು ಆರೋಗ್ಯ ಕಾರ್ಯಕರ್ತರು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯಗಳಿಗೆ ನೆನಪಿಸಿತು.

ಕೊರೋನಾ ರೋಗಿಗಳ ಚಿಕಿತ್ಸೆ ಮತ್ತು ಕೊರೋನಾದಿಂದ ಸಾವನ್ನಪ್ಪಿದವರ ಮೃತದೇಹಗಳ ನಿರ್ವಹಣೆ ಬಗ್ಗೆ ದೇಶದ ವಿವಿಧ ಭಾಗಗಳಲ್ಲಿ ಅನುಸರಿಸಲಾಗುತ್ತಿರುವ ಅನಪೇಕ್ಷಿತ ವಿಧಾನವನ್ನು ಎತ್ತಿ ತೋರಿಸಿ ಕೇಂದ್ರದ ಮಾಜಿ   ಕಾನೂನು ಸಚಿವ ಮತ್ತು ಹಿರಿಯ ವಕೀಲ ಅಶ್ವಿನಿ ಕುಮಾರ್ ಅವರು ಜೂನ್ ರಂದು ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ (ಸಿಜೆಐ) ಪತ್ರ ಬರೆದಿದ್ದರು.

ಕೋವಿಡ್ -೧೯ ರೋಗಿಯನ್ನು ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ಹಾಸಿಗೆಗೆ ಕಟ್ಟಿ ಹಾಕಲಾದ ಸುದ್ದಿಯ ಬಗ್ಗೆ ಅಶ್ವಿನಿ ಕುಮಾರ್ ಅವರು ಸಿಜೆಐ ಅವರ ಗಮನ ಸೆಳೆದಿದ್ದರು. ಪುದುಚೇರಿಯಲ್ಲಿ ಹೂಳಬೇಕಾಗಿದ್ದ ದೇಹವನ್ನು ಗುಂಡಿಗೆ ಎಸೆದ ಘಟನೆ ಬಗೆಗೂ ಕುಮಾರ್ ಬರೆದಿದ್ದರು.

ಘನತೆಯೊಂದಿಗೆ ಸಾಯುವ ಹಕ್ಕು ಮೂಲಭೂತ ಹಕ್ಕು ಮತ್ತು ಇದು ಯೋಗ್ಯವಾದ ಸಮಾಧಿ / ಶವಸಂಸ್ಕಾರದ ಹಕ್ಕನ್ನೂ ಒಳಗೊಂಡಿದೆ ಎಂದು ಕುಮಾರ್ ತಮ್ಮ ಪತ್ರದಲ್ಲಿ ತಿಳಿಸಿದ್ದರು.

ಕೋವಿಡ್ -೧೯ ಮತ್ತು ದಿಗ್ಬಂಧನದಿಂದ (ಲಾಕ್ಡೌನ್) ಉಂಟಾಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯವು ಸ್ವ ಇಚ್ಛೆಯಿಂದ ವಿಚಾರಣೆಗೆ ದಾಖಲಿಸಿದ ಮೂರನೇ ಪ್ರಕರಣ ಇದಾಗಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವz ಇದೇ ಮೂವರು ನ್ಯಾಯಮೂರ್ತಿಗಳ ಪೀಠವು ಕೋವಿಡ್ -೧೯ ಲಾಕ್ಡೌನ್ನಿಂದಾಗಿ ವಲಸೆ ಕಾರ್ಮಿಕರು ಎದುರಿಸುತ್ತಿರುವ ದುಃಸ್ಥಿತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಲಾಕ್ಡೌನ್ ಪರಿಣಾಮವಾಗಿ ಕೆಲಸ ಕಳೆದುಕೊಂಡ ಸಹಸ್ರಾರು ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ಮರಳಲು ಸಾಧ್ಯವಾಗುವಂತೆ ಪೀಠವು ಆದೇಶಗಳನ್ನು ಜಾರಿ ಮಾಡಿತ್ತು.

ಜೂನ್ ರಂದು ನ್ಯಾಯಪೀಠವು ಎಲ್ಲ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಿರುವುದನ್ನು   ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ೧೫ ದಿನಗಳಲ್ಲಿ ಖಚಿತಪಡಿಸಿಕೊಳ್ಳಬೇಕು ಮತ್ತು ಸರ್ಕಾರಗಳು ಅವರ  ಸಂಕಷ್ಟಗಳನ್ನು ನಿವಾರಿಸಲು ಕಲ್ಯಾಣ ಯೋಜನೆಗಳು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿತ್ತು.

No comments:

Advertisement