Friday, July 17, 2020

ರಾಜತಾಂತ್ರಿಕ ಭೇಟಿ: ಕುಲಭೂಷಣ್ ಜಾಧವ್ ಗೆ 3ನೇ ಅವಕಾಶ ನೀಡಿದ ಪಾಕ್

ರಾಜತಾಂತ್ರಿಕ ಭೇಟಿ: ಕುಲಭೂಷಣ್ ಜಾಧವ್ ಗೆ
 3ನೇ
ಅವಕಾಶ ನೀಡಿದ ಪಾಕ್

ಇಸ್ಲಾಮಾಬಾದ್: ಭಾರತೀಯ ಅಧಿಕಾರಿಗಳು ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಿದ ಒಂದು ದಿನದ ಬಳಿಕ, ಪಾಕಿಸ್ತಾನದಲ್ಲಿ ಗೂಢಚರ್ಯೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ನೌಕಾಪಡೆ ಅಧಿಕಾರಿಯನ್ನು ಭೇಟಿ ಮಾಡಲು ಇನ್ನೊಂದು ರಾಜತಾಂತ್ರಿಕ ಅವಕಾಶ ನೀಡಲು ತಾನು ನಿರ್ಧರಿಸಿರುವುದಾಗಿ ಪಾಕಿಸ್ತಾನ 2020 ಜುಲೈ 17ರ ಶುಕ್ರವಾರ ಹೇಳಿತು. ಜಾಧವ್ ಭೇಟಿಗೆ ಇದು ಮೂರನೇ ರಾಜತಾಂತ್ರಿಕ ಅವಕಾಶವಾಗಲಿದೆ.

ಬೆಳವಣಿಗೆಯನ್ನು ದೃಢಪಡಿಸಿದ ಪಾಕಿಸ್ತಾನಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ಸಭೆಯ ವೇಳೆಯಲ್ಲಿ ಭದ್ರತಾ ಸಿಬ್ಬಂದಿ ಇರಬಾರದು ಎಂಬ ಭಾರತದ ಬೇಡಿಕೆಯನ್ನು ತಾವು ಒಪ್ಪಿರುವುದಾಗಿ ಹೇಳಿದರು.

ಆದಾಗ್ಯೂ, ಗುರುವಾರ ಜಾಧವ್ ಅವರನ್ನು ಭೇಟಿ ಮಾಡಲು ಬಂದ ಭಾರತೀಯ ಅಧಿಕಾರಿಗಳು ಅವರನ್ನು ಆಲಿಸದೆಯೇ ವಾಪಸಾದರು ಎಂದು ಖುರೇಶಿ ನುಡಿದರು. ’ಜಾಧವ್ ತನ್ನ ಜೊತೆ ಮಾತನಾಡುವಂತೆ ಭಾರತೀಯ ರಾಜತಾಂತ್ರಿಕರನ್ನು ಕೇಳುತ್ತಿದ್ದರು ಮತ್ತು ಅವರು (ಅಧಿಕಾರಿಗಳು) ನೇರ ಹೊರಟು ಹೋದರು ಎಂದು ಖುರೇಶಿ ಪ್ರತಿಪಾದಿಸಿದರು.

ಭಾರತೀಯ ಅಧಿಕಾರಿಗಳ ವರ್ತನೆಚಕಿತಗೊಳಿಸುವಂತಹುದು ಎಂದು ನುಡಿದ ಖುರೇಶಿ, ’ಭಾರತೀಯ ರಾಜತಾಂತ್ರಿಕರಿಗೆ ಜಾಧವ್ ಜೊತೆ ಮಾತನಾಡಲು ಇಷ್ಟವಿಲ್ಲವಾದರೆ, ಅವರು ರಾಜತಾಂತ್ರಿಕ ಭೇಟಿಗೆ ಕೋರುವುದು ಏಕೆ?’ ಎಂದು ಪ್ರಶ್ನಿಸಿದರು.

ಮಧ್ಯಭಾಗದಲ್ಲಿ ಇದ್ದ ಗಾಜಿನ ಗೋಡೆಗೆ ಅವರು ಆಕ್ಷೇಪ ವ್ಯಕ್ತ ಪಡಿಸಿದರು. ನಾವು ಅದನ್ನು ತೆಗೆದುಹಾಕಿದೆವು. ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ಗೂ ಅವರು ಆಕ್ಷೇಪಿಸಿದರು. ಆದ್ದರಿಂದ ಅದನ್ನೂ ಮಾಡಲಿಲ್ಲ. ಅವರ ಎಲ್ಲ ಮನವಿಗಳನ್ನು ನಾವು ಈಡೇರಿಸಿದೆವು, ಆದರೂ ಅವರು ಹೊರಟುಹೋದರು ಎಂದು ಪಾಕಿಸ್ತಾನಿ ವಿದೇಶಾಂಗ ಸಚಿವ ಹೇಳಿದರು.

ಯಾವುದೇ ಅಡೆತಡೆ ರಹಿತ ಭೇಟಿ ಅವಕಾಶವನ್ನು ಜಾಧವ್ ಅವರಿಗೆ ಒದಗಿಸಲಾಗುವ ರಾಜತಾಂತ್ರಿಕ ಭೇಟಿ ಕಾಲದಲ್ಲಿ ಒದಗಿಸಲಾಗುವುದು ಎಂಬುದಾಗಿ ನೀಡಿದ್ದ ಭರವಸೆಯನ್ನು ಪಾಕಿಸ್ತಾನ ಮುರಿದಿದೆ ಭಾರತ ಆಪಾದಿಸಿದೆ.

೨೦೧೬ರಲ್ಲಿ ಬಂಧಿಸಲ್ಪಟ್ಟ ಬಳಿಕ, ಗುರುವಾರ ಜಾಧವ್ ಅವರಿಗೆ ಎರಡನೇ ಬಾರಿಗೆ ರಾಜತಾಂತ್ರಿಕ ಭೇಟಿಯ ಅವಕಾಶವನ್ನು ಪಾಕಿಸ್ತಾನವು ನೀಡಿತ್ತು. ಆದರೆ ಇಬ್ಬರು ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಅವರನ್ನು ಭೇಟಿ ಮಾಡಲು ಹೋದಾಗ, ಪಾಕಿಸ್ತಾನಿ ಅಧಿಕಾರಿಗಳು ಜಾಧವ್ ಸಮೀಪ ನಿಂತು ಹಸ್ತಕ್ಷೇಪದ ವರ್ತನೆ ತೋರಿದರು ಮತ್ತು ಸಂಭಾಷಣೆಯನ್ನು ದಾಖಲಿಸಲು ಕ್ಯಾಮರಾ ಬಳಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

ತಮಗೆ ವಿಧಿಸಲಾಗಿರುವ ಮರಣದಂಡನೆ ವಿರುದ್ಧ  ಜುಲೈ ೨೦ರ  ಗಡುವಿಗೆ ಮುನ್ನ, ಇಸ್ಲಾಮಾಬಾದ್ ಹೈಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿ ದಾಖಲಿಸುವ ಬಗ್ಗೆ ಜಾಧವ್ ಜೊತೆ ಚರ್ಚಿಸಲು ಭಾರತೀಯ ಅಧಿಕಾರಿಗಳು ಜಾಧವ್ ಅವರನ್ನು ಭೇಟಿ ಮಾಡಿದ್ದರು. ವಿಷಯದ ಬಗ್ಗೆ ಮಾತನಾಡಲು ಖಾಸಗಿತನದ ಅಗತ್ಯತೆ ಇತ್ತು.

ರಾಜತಾಂತ್ರಿಕ ಅಧಿಕಾರಿಗಳಿಗೆ ಜಾಧವ್ ಜೊತೆಗೆ ಅವರ ಕಾನೂನುಬದ್ಧ  ಹಕ್ಕುಗಳ ಬಗ್ಗೆ ಮಾತನಾಡಲು ಸಾಧ್ಯವಾಗಲಿಲ್ಲ. ತಮ್ಮ ಕಾನೂನು ಪ್ರಾತಿನಿಧ್ಯಕ್ಕೆ ವ್ಯವಸ್ಥೆ ಮಾಡಲು ಜಾಧವ್ ಅವರ ಲಿಖಿತ ಒಪ್ಪಿಗೆ ಪಡೆಯದಂತೆ ಅವರನ್ನು ನಿರ್ಬಂಧಿಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದರು.

ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಪಾಕಿಸ್ತಾನವು ಒದಗಿಸಿದ ರಾಜತಾಂತ್ರಿಕ ಭೇಟಿಯ ಅವಕಾಶವು ಅರ್ಥಪೂರ್ಣವೂ ಅಲ್ಲ, ವಿಶ್ವಾಸಾರ್ಹವೂ ಅಲ್ಲ ಎಂಬ ನಿರ್ಧಾರಕ್ಕೆ ಬಂದರು. ಬಗ್ಗೆ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ ಬಳಿಕ ಅವರು ಸ್ಥಳದಿಂದ ವಾಪಸಾದರು ಎಂದು ಶ್ರೀವಾಸ್ತವ ನುಡಿದರು.

ಮಧ್ಯೆ, ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರಾದ ಆಯಿಷಾ ಫರೂಕಿ ಅವರು ಸೇನಾ ನ್ಯಾಯಾಲಯವು ಜಾಧವ್ ಅವರಿಗೆ ವಿಧಿಸಿದ ಮರಣದಂಡನೆ ವಿರುದ್ಧ ಇಸ್ಲಾಮಾಬಾದ್ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವ ದೇಶದ ಕೊಡುಗೆಯನ್ನು ಪುನರುಚ್ಚರಿಸಿದರು.

ಪಾಕಿಸ್ತಾನವು ೨೦೧೯ರ ಜುಲೈ ೧೭ರಂದು ಅಂತಾರಾಷ್ಟ್ರೀಯ ನ್ಯಾಯಾಲಯವು (ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್- ಐಸಿಜೆ) ನೀಡಿರುವ ತೀರ್ಪನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಪಾಕಿಸ್ತಾನವು ಬದ್ಧವಾಗಿದೆ ಎಂದೂ ಫರೂಕಿ ಹೇಳಿದರು. ’ಸದರಿ ತೀರ್ಪಿನ ಜಾರಿಯಲ್ಲಿ ಪಾಕಿಸ್ತಾನದ ನ್ಯಾಯಾಲಯ ಜೊತೆಗೆ ಭಾರತವು ಸಹಕರಿಸುವುದು ಎಂಬುದಾಗಿ ತಾನು ಹಾರೈಸಿರುವುದಾಗಿ ಅವರು ನುಡಿದರು.

ಕುಲಭೂಷಣ್ ಜಾಧವ್ ಅವರಿಗೆ ಮೊತ್ತ ಮೊದಲಿಗೆ ರಾಜತಾಂತ್ರಿಕ ಭೇಟಿಯ ಅವಕಾಶವನ್ನು ೨೦೧೯ರ ಸೆಪ್ಟೆಂಬರಿನಲ್ಲಿ ಒದಗಿಸಲಾಗಿತ್ತು. ಅದಕ್ಕೆ ಮುನ್ನ ೨೦೧೭ರ ಡಿಸೆಂಬರಿಲ್ಲಿ ಜಾಧವ್ ಅವರನ್ನು ಭೇಟಿ ಮಾಡಲು ಅವರ ತಾಯಿ ಮತ್ತು ಪತ್ನಿಗೆ ಅವಕಾಶ ನೀಡಲಾಗಿತ್ತು.

No comments:

Advertisement