Friday, July 17, 2020

ಪೈಲಟ್, ೧೮ ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಬ್ರೇಕ್

ಪೈಲಟ್, ೧೮ ಕಾಂಗ್ರೆಸ್ ಶಾಸಕರ ವಿರುದ್ಧ
ಕ್ರಮಕ್ಕೆ ಹೈಕೋರ್ಟ್  ಬ್ರೇಕ್

ಜೈಪುರ: ಸಚಿನ್ ಪೈಲಟ್ ಮತ್ತು ೧೮ ಮಂದಿ ಕಾಂಗ್ರೆಸ್ ಶಾಸಕರ ಅನರ್ಹತೆ ಕುರಿತು ಪ್ರಸ್ತುತ ವಾರದಲ್ಲಿ ನೀಡಲಾದ ನೋಟಿಸ್ ಸಂಬಂಧವಾಗಿ ಯಾವುದೇ ಕ್ರಮವನ್ನು ತಡೆ ಹಿಡಿಯುವಂತೆ 2020 ಜುಲೈ 17ರ ಶುಕ್ರವಾರ ರಾಜಸ್ಥಾನ ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರಿಗೆ ನಿರ್ದೇಶನ ನೀಡಿದ ರಾಜಸ್ಥಾನ ಹೈಕೋರ್ಟಿನ ದ್ವಿಸದಸ್ಯ ವಿಭಾಗೀಯ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ ೨೦ರ ಸೋಮವಾರಕ್ಕೆ ಮುಂದೂಡಿತು.

ವಿಧಾನಸಭಾಧ್ಯಕ್ಷರು ನೀಡಿದ್ದ ನೋಟಿಸಿಗೆ ಉತ್ತರಿಸಲು ನೀಡಲಾಗಿದ್ದ ಗಡುವು ಮುಗಿಯುವುದಕ್ಕೆ ಕೆಲವೇ ನಿಮಿಷಗಳ ಮುನ್ನ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತು.

ವಿಧಾನಸಭಾಧ್ಯಕ್ಷರು ತಮಗೆ ನೀಡಿದ್ದ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ, ಸಚಿನ್ ಪೈಲಟ್ ಮತ್ತು ೧೮ ಕಾಂಗ್ರೆಸ್ ಬಂಡಾಯ ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್ ದ್ವಿಸದಸ್ಯ ವಿಭಾಗೀಯ ಪೀಠವು , ಜುಲೈ ೨೧ರ ಸಂಜೆ .೩೦ರವರೆಗೆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ವಿಧಾನಸಭಾಧ್ಯಕ್ಷರಿಗೆ ನಿರ್ದೇಶಿಸಿತು.

ಮಧ್ಯೆ, ಅಶೋಕ ಗೆಹ್ಲೋಟ್ ಸರ್ಕಾರವನ್ನು ಉರುಳಿಸುವ ಯತ್ನಕ್ಕೆ ಸಂಬಂಧಿಸಿದಂತೆ ಶುಕ್ರವಾರ ಎಫ್ ಐಆರ್ ದಾಖಲಿಸಿದ ಪೊಲೀಸರು ಅದರಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹೆಸರನ್ನು ಸೇರ್ಪಡೆ ಮಾಡುವುದರೊಂದಿಗೆ ಪ್ರಕರಣ ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಮಬ್ಬಾಯಿತು. ಆರೋಪವನ್ನು ನಿರಾಕರಿಸಿದ ಗಜೇಂದ್ರ ಸಿಂಗ್, ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ತಾವು ಸಿದ್ಧ ಎಂದು ಘೋಷಿಸಿದರು.

ಸಂಜಯ್ ಜೈನ್ ಎಂಬುದಾಗಿ ಗುರುತಿಸಲಾದ ವ್ಯಕ್ತಿಯೊಬ್ಬರ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಹೊರಿಸಲಾಗಿದು, ಅವರನ್ನು ಬಂಧಿಸಲಾಗಿದೆ. ಜೈನ್ ಬಿಜೆಪಿ ನಾಯಕರಾಗಿದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದರೆ, ಕೇಸರಿ ಪಕ್ಷವು ಇದನ್ನು ನಿರಾಕರಿಸಿದೆ.

ಇದರ ಮಧ್ಯೆ ಕಾಂಗ್ರೆಸ್ ಪಕ್ಷವು ಇಬ್ಬರು ಬಂಡಾಯ ಶಾಸಕರಾದ ಭನ್ವರ್ ಲಾಲ್ ಶರ್ಮ ಮತ್ತು ವಿಶ್ವೇಂದರ್ ಸಿಂಗ್ ಅವರನ್ನು ಅಮಾನತುಗೊಳಿಸಿ, ಇವರಿಬ್ಬರೂ ಬಿಜೆಪಿ ಜೊತೆ ಕೈ ಜೋಡಿಸಿರುವುದಕ್ಕೆ ಮತ್ತು ಸರ್ಕಾರ ಉರುಳಿಸುವ ಯತ್ನದಲ್ಲಿ ಶಾಮೀಲಾಗಿರುವುದಕ್ಕೆ ಸಾಕ್ಷ್ಯಾಧಾರ ಇದೆ ಎಂದು ಪ್ರತಿಪಾದಿಸಿತು.

ಬಂಡಾಯವೆದ್ದಿರುವ, ಪ್ರಸ್ತುತ ವಜಾಗೊಂಡಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ೧೮ ಮಂದಿ ಶಾಸಕರೊಂದಿಗೆ ಗುರುವಾರ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ವಿಧಾನಸಭೆಯಿಂದ ತಮ್ಮನ್ನು ಅನರ್ಹಗೊಳಿಸುವ ಸಂಬಂಧ ರಾಜಸ್ಥಾನ ವಿಧಾನಸಭಾಧ್ಯಕ್ಷರು ನೀಡಿದ  ನೋಟಿಸನ್ನು ಪ್ರಶ್ನಿಸಿದ್ದಾರೆ.

ಪ್ರಕರಣವು ಗುರುವಾರ ಮಧ್ಯಾಹ್ನ ಗಂಟೆಗೆ ಮೊದಲಿಗೆ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಅವರ ಪೀಠದ ಮುಂದೆ ಬಂದಿತ್ತು. ಆದರೆ ಬಂಡಾಯ ಶಾಸಕರ ಪರ ವಕೀಲ ಹರೀಶ ಸಾಳ್ವೆ ಅವರು ಪರಿಷ್ಕೃತ ಮನವಿ ಸಲ್ಲಿಸಲು ಕಾಲಾವಕಾಶ ಕೋರಿದ್ದರು. ಸಂಜೆ ಗಂಟೆಗೆ ಪರಿಷ್ಕೃತ ಅರ್ಜಿಯನ್ನು ಸಲ್ಲಿಸಿದಾಗ, ಪೀಠವು ಪ್ರಕರಣವನ್ನು ದ್ವಿಸದಸ್ಯ ಪೀಠಕ್ಕೆ ಒಪ್ಪಿಸುವಂತೆ ಮುಖ್ಯನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಅವರನ್ನು ಕೋರಿತ್ತು.

ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ ಜೋಶಿ ಪರ ವಕೀಲರು ರಾತ್ರಿ .೩೦ ಗಂಟೆಗೆ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಕೋರಿದರೂ ಪೀಠ ಸಮಾವೇಶಗೊಳ್ಳಲಿಲ್ಲ. ಬಳಿಕ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿ ಪಡಿಸಲಾಯಿತು ಎಂದು ವಕೀಲರು ಹೇಳಿದರು. ವಿಧಾನಸಭಾಧ್ಯಕ್ಷರ ಕಚೇರಿಯನ್ನು ಕಾಂಗ್ರೆಸ್ ನಾಯಕರೂ ಆಗಿರುವ ಅಭಿಷೇಕ್ ಮನು ಸಿಂಘ್ವಿ ಪ್ರತಿನಿಧಿಸಿದ್ದಾರೆ. ಹಿಂದೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಪ್ರತಿನಿಧಿಸಿದ್ದ ಹರೀಶ ಸಾಳ್ವೆ ಮತ್ತು ಮುಕುಲ್ ರೋಹ್ಟಗಿ ಪೈಲಟ್ ಬಣವನ್ನು ಪ್ರತಿನಿಧಿಸಿದ್ದಾರೆ.

ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ಮುಖ್ಯ ಸಚೇತರ ಮಹೇಶ ಜೋಶಿ ಅವರೂ ನ್ಯಾಯಾಲಯಕ್ಕೆ ಹಾಜರಾಗಿ ಯಾವುದೇ ಆದೇಶ ನೀಡುವ ಮುನ್ನ ತಮ್ಮ ವಾದವನ್ನು ಆಲಿಸಬೇಕು ಎಂದು ಕೋರಿದ್ದರು.

೧೯ ಮಂದಿ ಶಾಸಕರಿಗೂ ವಿಧಾನಸಭಾ ಸಚಿವಾಲಯವು ಮಂಗಳವಾರ ನೋಟಿಸ್ಗಳನ್ನು ಕಳುಹಿಸಿ ಉತ್ತರ ನೀಡಲು ಶುಕ್ರವಾರದವರೆಗೆ ಕಾಲಾವಕಾಶ ನೀಡಿತ್ತು.

ಶುಕ್ರವಾರ ಮಧ್ಯಾಹ್ನ ಗಂಟೆಗೆ ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರು ವಿಷಯವನ್ನು ಎತ್ತಿಕೊಳ್ಳುವರು ಎಂದು ನೋಟಿಸ್ಗಳು ತಿಳಿಸಿದ್ದವು. ಶಾಸಕರು ಸೋಮವಾರ ಮತ್ತು ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಎರಡು ಸಭೆಗಳಿಗೆ ಗೈರು ಹಾಜರಾಗುವ ಮೂಲಕ ಸಚೇತಕಾಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂದು ಆಡಳಿತ ಪಕ್ಷವು ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ ಬಳಿಕ ನೋಟಿಸ್ಗಳನ್ನು ಜಾರಿಗೊಳಿಸಿಲಾಗಿತ್ತು.

ಏನಿದ್ದರೂ, ಪಕ್ಷದ ಸಚೇತರ ಆಜ್ಞೆ ಅನ್ವಯವಾಗುವುದು ವಿಧಾನಸಭಾ ಅಧಿವೇಶನ ಜಾರಿಯಲ್ಲಿ ಇರುವಾಗ ಮಾತ್ರ ಎಂದು ಪೈಲಟ್ ಬಣ ವಾದಿಸಿದೆ. ಕಾಂಗ್ರೆಸ್ ಪಕ್ಷವು ಸಂವಿಧಾನದ ೧೦ನೇ ಶೆಡ್ಯೂಲಿನ ಪ್ಯಾರಾ ()() ಅಡಿಯಲ್ಲಿ ಪೈಲಟ್ ಮತ್ತು ಇತರ ಭಿನ್ನಮತೀಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷವು ವಿಧಾನಸಭಾಧ್ಯಕ್ಷರನ್ನು ತನ್ನ ದೂರಿನಲ್ಲಿ ಕೋರಿದೆ.

ತಾವು ಪ್ರತಿನಿಧಿಸುವ ಶಾಸನಸಭೆಯಲ್ಲಿ ಸ್ವಯಂ ಇಚ್ಛೆಯಿಂದ ಸದಸ್ಯರು ಸದಸ್ಯತ್ವ ತ್ಯಜಿಸಿದರೆ ಅಂತಹ ಶಾಸಕರನ್ನು  ಅನರ್ಹಗೊಳಿಸಲು ವಿಧಿಯು ಅವಕಾ ನೀಡುತ್ತದೆ. ಶಾಸಕರ ವರ್ತನೆಯು ಇಂತಹ ಅನುಮಾನ ಮೂಡಿಸಿದಾಗ ವಿಧಿ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹಿಂದೆನಿಸ್ಸಂಧಿಗ್ಧವಾಗಿ ಹೇಳಿದೆ ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ತಿಳಿಸಿತ್ತು.

ನ್ಯಾಯಾಲಯದಲ್ಲಿ ಮಂಡಿಸಿದ ತಮ್ಮ ಪ್ರಾಥಮಿಕ ವಾದದ ವೇಳೆ ಸಾಳ್ವೆ ಅವರು ಶಾಸಕರು ನೋಟಿಸುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಬಯಸಿದ್ದು ಪರಿಷ್ಕೃತ ಅರ್ಜಿ ಸಲ್ಲಿಸಬಯಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದು ಸಚಿನ್ ಪೈಲಟ್ ಜೊತೆಗೆ ವಜಾಗೊಂಡಿದ್ದ ವಿಶೇಂದ್ರ ಸಿಂಗ್ ಮತ್ತು ರಮೇಶ ಮೀನಾ ಅವರಿಗೆ ಸಭಾಧ್ಯಕ್ಷರು ನೋಟಿಸ್ ಕಳುಹಿಸಿದ್ದರು. ಜೊತೆಗೆ ಗೆಹ್ಲೋಟ್ ಸರ್ಕಾರವನ್ನು ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನಿಸಿದ್ದ ದೀಪಿಂದರ್ ಸಿಂಗ್ ಶೆಖಾವತ್, ಭನ್ವರ್ ಲಾಲ್ ಶರ್ಮ ಮತ್ತು ಹರೀಶ ಚಂದ್ರ ಮೀನಾ ಅವರಿಗೂ ನೋಟಿಸ್ ಜಾರಿಯಾಗಿತ್ತು.

೨೦೧೮ರ ವಿಧಾನಸಭಾ ಚುನಾವಣೆಯ ಬಳಿಕ ವರಿಷ್ಠರು ಮುಖ್ಯಮಂತ್ರಿ ಸ್ಥಾನಕ್ಕೆ ಅಶೋಕ ಗೆಹ್ಲೋಟ್ ಅವರನ್ನು ಆಯ್ಕೆ ಮಾಡಿದಂದಿನಿಂದ ಸಚಿನ್ ಪೈಲಟ್ ಭ್ರಮ ನಿರಸನಗೊಂಡಿದ್ದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಸಚಿನ್ ಪೈಲಟ್ ಅವರು ಮಾಡಿದ್ದ ಕೆಲಸವೇ ಪಕ್ಷದ ವಿಜಯಕ್ಕೆ ಕಾರಣವಾಗಿದ್ದು ಮುಖ್ಯಮಂತ್ರಿ ಸ್ಥಾನ ಅವರಿಗೇ ಲಭಿಸಬೇಕಾಗಿತ್ತು ಎಂದು ಪೈಲಟ್ ಬೆಂಬಲಿಗರು ವಾದಿಸಿದ್ದಾರೆ.

No comments:

Advertisement