ಪೈಲಟ್ ಜಗಳಕ್ಕೆ
ಒಂದೂವರೆ ವರ್ಷ: ಗೆಹ್ಲೋಟ್
ಜನತೆ ಬೆಲೆ ತೆರಬೇಕಾದದ್ದು ದುರದೃಷ್ಟಕರ: ಬಿಜೆಪಿ
ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರsss ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಸಚಿನ್ ಪೈಲಟ್ ವರು ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದರು, ಕನಿಷ್ಠ ಕಳೆದ ಒಂದೂವರೆ ವರ್ಷದಿಂದ ಪೈಲಟ್ ಜೊತೆಗೆ ಮಾತನಾಡಿಲ್ಲ ಎಂಬ ಸಂಗತಿಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 2020 ಜುಲೈ 18ರ ಶನಿವಾರ ಬಹಿರಂಗ ಪಡಿಸಿದರು.
ಇದೇ ವೇಳೆಗೆ ಬಿಜೆಪಿ ನಾಯಕಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕಾಂಗ್ರೆಸ್ಸಿನ ಒಳಜಗಳಕ್ಕೆ ರಾಜಸ್ಥಾನದ ಜನತೆ ಬೆಲೆ ತೆರಬೇಕಾಗಿ ಬಂದಿರುವುದು ದುರದೃಷ್ಟಕರ ಎಂದು ಹೇಳಿದರು.
‘ಸಚಿವರಾಗಿ ತನ್ನ ಮುಖ್ಯಮಂತ್ರಿ ಜೊತೆ ಮಾತನಾಡುವುದಿಲ್ಲ, ಅವರ ಸಲಹೆಯನ್ನೂ ಪಡೆಯುವುದಿಲ್ಲ, ಯಾವುದೇ ಮಾತುಕತೆ ಕೂಡಾ ಇಲ್ಲ. ಪ್ರಜಾಪ್ರಭುತ್ವದಲ್ಲಿ ಬದ್ಧ ವೈರಿಗಳು ಕೂಡ ಮಾತನಾಡುತ್ತಾರೆ. ಪ್ರಜಾಪ್ರಭುತ್ವದ ಸೌಂದರ್ಯವೇ ಸಂಭಾಷಣೆ. ಕಳೆದ ಒಂದೂವರೆ ವರ್ಷದಲ್ಲಿ ಸೃಷ್ಟಿಯಾದ ಸುದ್ದಿಗಳು ಒಂದು ಪುಸ್ತಕಕ್ಕೆ ಆಗುವಷ್ಟಿದೆ’ ಎಂದು ಗೆಹ್ಲೋಟ್ ಬೇಸರ ವ್ಯಕ್ತಪಡಿಸಿದ್ದಾರೆ.
’ಪೈಲಟ್ ತಾನು ಬಲಿಪಶುವಾಗಿದ್ದೇನೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ರಾಜ್ಯ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ನೀಡಿದ ನೋಟಿಸನ್ನೇ ಅನಗತ್ಯವಾಗಿ ದೊಡ್ಡದು ಮಾಡಿದ್ದಾರೆ. ಅವರೊಬ್ಬರಿಗೇ ಅಲ್ಲ, ೧೦-೧೨ ಮಂದಿ ಶಾಸಕರಿಗೂ ನೋಟಿಸ್ ನೀಡಲಾಗಿದೆ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಹೇಳಿದರು.
’ಸರ್ಕಾರವನ್ನು ಉರುಳಿಸುವ ಸಂಚನ್ನು ಬಿಜೆಪಿ ರೂಪಿಸಿದೆ ಎಂದು ನಮ್ಮ ಪಕ್ಷ ಎಸ್‌ಒಜಿಗೆ ದೂರು ನೀಡಿತ್ತು. ನಾವು ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ, ಆದರೂ ಅವರು ಸ್ಪಷ್ಟನೆ ನೀಡುತ್ತಿದ್ದರು. ಅವರು ಏಕೆ ಸ್ಪಷ್ಟನೆ ನೀಡುತ್ತಿದ್ದರು ಎಂಬುದು ಈಗ ಸ್ಪಷ್ಟವಾಗಿದೆ’ ಎಂದು ಗೆಹ್ಲೋಟ್ ಹರಿಹಾಯ್ದರು.
’ರಾಜ್ಯಸಭಾ ಚುನಾವಣೆಯ ಸಮಯದಲ್ಲಿ ನಾನು ಶಾಸಕರನ್ನು ಹೋಟೆಲಿಗೆ ಕರೆದೊಯ್ಯಬೇಕಾಗಿ ಬಂದಿತ್ತು ಮತ್ತು ಅವರನ್ನು ೧೦ ದಿನಗಳ ಕಾಲ ಅಲ್ಲಿಯೇ ಇಟ್ಟುಕೊಳ್ಳಬೇಕಾಯಿತು. ಅದರ ಬಗ್ಗೆ ನನಗೆ ಬೇಸರವಿದೆ. ಉಪ ಮುಖ್ಯಮಂತ್ರಿಯನ್ನು ಕೆಟ್ಟದಾಗಿ ಬಿಂಬಿಸಲು ನಾನು ಇದನ್ನು ಮಾಡಿದ್ದೇನೆ ಎಂದು ಆಗ ಆರೋಪಿಸಲಾಯಿತು’ ಎಂದು ಗೆಹ್ಲೋಟ್ ವಿವರಿಸಿದರು.
ಛತ್ತೀಸ್‌ಗಢ, ಪಂಜಾಬ್ ಮತ್ತು ಮಧ್ಯ ಪ್ರದೇಶದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನೇ ಮುಖ್ಯಮಂತ್ರಿ ಮಾಡಿದ್ದರೂ ಸಚಿನ್ ಪೈಲಟ್ ಅವರನ್ನು ಏಕೆ ಮುಖ್ಯಮಂತ್ರಿ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿರ್ಧಾರವನ್ನು ವರಿಷ್ಠ ಮಂಡಳಿಗೆ ಬಿಡಲಾಗಿತ್ತು ಎಂದರು..
‘ಹೆಚ್ಚಿನ ಶಾಸಕರು ನನ್ನ ಪರವಾಗಿದ್ದರು ಮತ್ತು ಉಳಿದ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ಥಾನದ ಪರಿಸ್ಥಿತಿ ಭಿನ್ನವಾಗಿತ್ತು. ರಾಜಸ್ಥಾನದಲ್ಲಿ ಜನರು ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಬಯಸಿದ್ದರು’ ಎಂದು ಗೆಹ್ಲೋಟ್ ಪ್ರತಿಪಾದಿಸಿದರು.
ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ಒಮ್ಮೆ ನೀವು ಮಹತ್ವಾಕಾಂಕ್ಷಿಯಾಗಬೇಕು ಎಂದು ನಿರ್ಧರಿಸಿದಾಗ ನಿಮ್ಮ ಆಲೋಚನೆಗಳು ಹಿಂದಡಿ ಇಡುತ್ತವೆ ಎಂದು ಹೇಳಿದರು.
ಹೀಗಿದ್ದೂ, "ಒಂದೊಮ್ಮೆ ಅವರು ವಾಪಸ್ ಬಂದರೆ, ನಾನು ಅವರಿಗೊಂದು ಅಪ್ಪುಗೆ ಕೊಡುತ್ತೇನೆ’ ಎಂದು ಮುಖ್ಯಮಂತ್ರಿ ನುಡಿದರು.
ವಸುಂಧರಾ ರಾಜೆ ಟೀಕೆ
ಈ ಮಧ್ಯೆ, ಕಾಂಗ್ರೆಸ್ ಪಕ್ಷದ ಒಳಜಗಳಕ್ಕೆ ರಾಜಸ್ಥಾನದ ಜನರು ಬೆಲೆ ತೆರಬೇಕಾಗಿ ಬಂದಿರುವುದು ದುರದೃಷ್ಟಕರ ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಶನಿವಾರ ಟ್ವೀಟ್ ಮಾಡಿದರು. ರಾಜ್ಯದ ಆಡಳಿತ ಪಕ್ಷದ ಇಬ್ಬರು ಉನ್ನತ ನಾಯಕರು ಸಾರ್ವಜನಿಕವಾಗಿ ಜಗಳವಾಡುತ್ತಿರುದರಿಂದ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಕೊರೋನವೈರಸ್, ಮಿಡತೆಗಳ ದಾಳಿ, ಮಹಿಳೆಯರ ಮೇಲಿನ ಅಪರಾಧಗಳು ರಾಜ್ಯ ಮತ್ತು ಜನತೆಯನ್ನು ಪೀಡಿಸುತ್ತಿರುವ ಹೊತ್ತಿನಲ್ಲಿ ಆಡಳಿತಾರೂಢ ಪಕ್ಷದ ಆಂತರಿಕ ಕಚ್ಚಾಟ ದುರದೃಷ್ಟಕರ ಎಂದು ವಸುಂಧರಾ ರಾಜೆ ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಈ ರಾಜಕೀಯ ಕಚ್ಚಾಟದಲ್ಲಿ ‘ಬಿಜೆಪಿ ಮತ್ತು ಅದರ ನಾಯಕರ ಹೆಸರುಗಳನ್ನು ಎಳೆಯಬೇಡಿ’ ಎಂದು ಆಡಳಿತ ಪಕ್ಷದ ನಾಯಕರನ್ನು ರಾಜೆ ಆಗ್ರಹಿಸಿದರು.
ಆಡಳಿತ ನಡೆಸುವ ಸರ್ಕಾರಕ್ಕೆ "ಜನರ ಹಿತಾಸಕ್ತಿಗಳು ಅಗ್ರ ಮಾನ್ಯ ಸ್ಥಾನದಲ್ಲಿ ಇರಬೇಕು’ ಎಂದು ಟ್ವೀಟ್ ಮಾಡಿದ ಅವರು ’ರಾಜಸ್ಥಾನ ಮೊದಲು’ (#ರಾಜಸ್ಥಾನ್ ಫಸ್ಟ್) ಪದದೊಂದಿಗೆ ಅದನ್ನು ಮುಕ್ತಾಯಗೊಳಿಸಿದ್ದಾರೆ.
No comments:
Post a Comment