ಪ್ರಧಾನಿಗೆ ಗೆಹ್ಲೋಟ್ ಪತ್ರ: ಸರ್ಕಾರ ಉರುಳಿಸುವ ಸಂಚು
ನವದೆಹಲಿ: ರಾಜ್ಯದಲ್ಲಿ ತಮ್ಮ ಸರ್ಕಾರವನ್ನು ಉರುಳಿಸಲು ’ತುಚ್ಛ’ಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಪಾದಿಸಿ 2020 ಜುಲೈ 22ರ ಬುಧವಾರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಬಂಡಾಯ ನಾಯಕ ಸಚಿನ್ ಪೈಲಟ್ ಅವರು ತಮ್ಮ ವಿರುದ್ಧ ಆಪಾದನೆ ಮಾಡಿದ ಕಾಂಗ್ರೆಸ್ ಶಾಸಕ ಗಿರಿರಾಜ ಸಿಂಗ್‌ಗೆ ೧ ರೂಪಾಯಿ ಪರಿಹಾರ ಮತ್ತು ಕ್ಷಮೆ ಕೋರಿಕೆ ಆಗ್ರಹಿಸಿ ಲೀಗಲ್ ನೋಟಿಸ್ ನೀಡಿದ್ದಾರೆ.
ಪ್ರಧಾನಿಗೆ ಬರೆದ ತಮ್ಮ ಪತ್ರದಲ್ಲಿ ಗೆಹ್ಲೋಟ್ ಅವರು ರಾಜ್ಯದಲ್ಲಿ ತಮ್ಮ ಸರ್ಕಾರವನ್ನು ಉರುಳಿಸಲು ತುಚ್ಛ ಪ್ರಯತ್ನಗಳು ನಡೆಯುತ್ತಿವೆ ಎಂದು ಆಪಾದಿಸಿದ್ದಾರೆ.
ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಶಾಸಕರನ್ನು ಬೇಟೆಯಾಡಲು ಭಾರತೀಯ ಜನತಾ ಪಕ್ಷದಿಂದ ಯತ್ನಗಳು ನಡೆಯುತ್ತಿವೆ ಎಂದು ಆಪಾದಿಸಿದ ಗೆಹ್ಲೋಟ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಹೆಸರನ್ನು ಪ್ರಧಾನಿಗೆ ಬರೆದ ಪತ್ರದಲ್ಲಿ ನಮೂದಿಸಿದ್ದಾರೆ.
ಭಾನುವಾರ ಪ್ರಧಾನಿಯವರಿಗೆ ಬರೆದಿದ್ದಾರೆ ಎನ್ನಲಾಗಿರುವ ಪತ್ರದಲ್ಲಿ ಗೆಹ್ಲೋಟ್ ಅವರು ’ಕುದುರೆ ವ್ಯಾಪಾರದ ಮೂಲಕ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುವ ತುಚ್ಛ ಪ್ರಯತ್ನಗಳು ನಡೆಯುತ್ತಿವೆ. ಇದರ ಬಗ್ಗೆ ನಿಮಗೆ ಎಷ್ಟು ಗೊತ್ತಿದೆಯೋ ಅಥವಾ ನಿಮ್ಮನ್ನು ದಾರಿ ತಪ್ಪಿಸಲಾಗಿದೆಯೋ ಎಂಬುದು ನನಗೆ ಗೊತ್ತಿಲ್ಲ’ ಎಂದು ಗೆಹ್ಲೋಟ್ ಬರೆದಿದ್ದಾರೆ.
’ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಸ್ಥಿರಗೊಳಿಸುವ ಯತ್ನಗಳು ಕೆಲ ಸಮಯದಿಂದ ನಡೆಯುತ್ತಿವೆ. ಇದು ಜನಾದೇಶಕ್ಕೆ ಅವಮಾನ ಮತ್ತು ಸಾಂವಿಧಾನಿಕ ಮೌಲ್ಯಗಳ ಬಹಿರಂಗ ಉಲ್ಲಂಘನೆ. ಕರ್ನಾಟಕ ಮತ್ತು ಮಧ್ಯಪ್ರದೇಶ ಇವುಗಳಿಗೆ ಉದಾಹರಣೆಗಳು’ ಎಂದು ಗೆಹ್ಲೋಟ್ ಪತ್ರದಲ್ಲಿ ವಿವರಿಸಿದ್ದಾರೆ.
ಇದೇ ವೇಳೆ ರಾಜ್ಯಸಭಾ ಚುನಾವಣೆ ಕಾಲದಲ್ಲಿ ತಮ್ಮನ್ನು ಬಿಜೆಪಿಯತ್ತ ಸೆಳೆಯಲು ೩೫ ಕೋಟಿ ರೂಪಾಯಿಗಳ ಆಮಿಷವನ್ನು ಸಚಿನ್ ಪೈಲಟ್ ಅವರು ಒಡ್ಡಿದರು ಎಂಬುದಾಗಿ ಆಪಾದಿಸಿದ ಕಾಂಗ್ರೆಸ್ ಶಾಸಕರ ಗಿರಿರಾಜ್ ಸಿಂಗ್ ಮಾಲಿಂಗ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ ಸಚಿನ್ ಪೈಲಟ್ ’ಸುಳ್ಳು ಆಪಾದನೆಗಾಗಿ’ ೧ ರೂಪಾಯಿ ಪರಿಹಾರ ಮತ್ತು ಕ್ಷಮೆ ಯಾಚನೆ ಮಾಡುವಂತೆ ಆಗ್ರಹಿಸಿದ್ದಾರೆ.
ಪೈಲಟ್ ಅವರ ಮನೆಯಲ್ಲಿ ನಡೆದ ಮಾತುಕತೆಯ ವೇಳೆಯಲ್ಲಿ ಬಿಜೆಪಿಯತ್ತ ಸೆಳೆಯಲು ಪೈಲಟ್ ಅವರು ತಮಗೆ ಹಣದ ಆಮಿಷ ಒಡ್ಡಿದರು ಎಂದು ಗಿರಿರಾಜ್ ಸಿಂಗ್ ಸೋಮವಾರ ಹೇಳಿದ್ದರು. ಬಳಿಕ ತಾವ ಸರ್ಕಾರ ಉರುಳಿಸುವ ಸಂಚಿನ ಬಗ್ಗೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ತಿಳಿಸಿದ್ದಾಗಿ ಮಾಲಿಂಗ ಹೇಳಿದ್ದರು.
ಆಪಾದನೆ ಬಗ್ಗೆ ತಮಗೆ ಬೇಸರವಾಗಿದೆ ಆದರೆ ಅಚ್ಚರಿಯಾಗಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದ ಪೈಲಟ್ ಬಿಜೆಪಿಯತ್ತ ಆಕರ್ಷಿಸಲು ಹಣದ ಆಮಿಷ ಒಡ್ಡಿದ ಆಪಾದನೆ ಬುಡರಹಿತ ಎಂದು ಹೇಳಿದ್ದರು.
ಇದು ತಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಮತ್ತು ರಾಜ್ಯದಲ್ಲಿನ ಪಕ್ಷ ನಾಯಕತ್ವ ಬಗ್ಗೆ ತಾವು ಎತ್ತಿದ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಸ್ಪಷ್ಟ ಯತ್ನ ಎಂದು ಪೈಲಟ್ ಆಪಾದಿಸಿದ್ದರು.
ತಮ್ಮ ಸರ್ಕಾರವನ್ನು ಉರುಳಿಸಲು ಪೈಲಟ್ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದು ಗೆಹ್ಲೋಟ್ ನಿರಂತರ ಆಪಾದನೆಗಳನ್ನು ಮಾಡುತ್ತಿದ್ದಾರೆ.
ಪೈಲಟ್ ಮತ್ತು ೧೮ ಮಂದಿ ಬಂಡಾಯ ಕಾಂಗ್ರೆಸ್ ಶಾಸಕರು ಪ್ರಸ್ತುತ ಹರಿಹಾಣದ ಮಾನೆಸರದಲ್ಲಿ ಇದ್ದಾರೆ.
No comments:
Post a Comment