ಪ್ರಧಾನಿ
ಮೋದಿ ದಿಢೀರ್ ಲಡಾಖ್ ಗೆ: ಚೀನಾಕ್ಕೆ ಸಂದೇಶ
ನವದೆಹಲಿ: ಸದ್ದು ಗದ್ದಲವಿಲ್ಲದೆ ಲಡಾಖ್ಗೆ 2020 ಜುಲೈ 03ರ ಶುಕ್ರವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ನೈಜ ನಿಯಂತ್ರಣ ರೇಖೆಯಲ್ಲಿ ನಿಯೋಜಿತರಾಗಿರುವ ಸೈನಿಕರಿಗೆ ಸ್ಫೂರ್ತಿ ತುಂಬಿದ್ದಲ್ಲದೆ, ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.
’ಗಡಿಯಲ್ಲಿ
ನಿಯೋಜಿತರಾಗಿರುವ ಯೋಧರು ತಮ್ಮ ಶೌರ್ಯದ ಮೂಲಕ ಇಡೀ
ಜಗತ್ತಿದೆ ಸಂದೇಶ ರವಾನಿಸಿದ್ದಾರೆ’ ಎಂದು
ಪ್ರಧಾನಿ ನುಡಿದರು.
ಲಡಾಖ್ನಲ್ಲಿ ನಿಯೋಜಿತರಾಗಿರುವ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ’ನಿಮ್ಮ ಶೌರ್ಯದ ಕಥೆಗಳು ಇಂದು
ದೇಶಾದ್ಯಂತ ಮನೆ ಮನೆಗಳಲ್ಲೂ ಅನುರಣನಗೊಳ್ಳುತ್ತಿವೆ’ ಎಂದು
ಹೇಳಿದರು.
’ವೈರಿಗಳಿಗೂ
ನಿಮ್ಮ ಶೌರ್ಯ- ಕೆಚ್ಚೆದೆಯ ದರ್ಶನವಾಗಿದೆ’ ಎಂದು
ಲಡಾಖ್ನಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನುಡಿದರು.
ಜೂನ್
೧೫ರಂದು ಗಲ್ವಾನ್ನಲ್ಲಿ ಭಾರತ ಮತ್ತು ಚೀನೀ ಯೋಧರ ಮಧ್ಯೆ ನಡೆದ ಹಿಂಸಾತ್ಮಕ ಘರ್ಷಣೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಹುತಾತ್ಮ ಯೋಧರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
’ಲೆಹ್ನಿಂದ ಸಿಯಾಚಿನ್ ಮತ್ತು ಕಾರ್ಗಿಲ್ವರೆಗೆ ಮತ್ತು ಗಲ್ವಾನ್ನ ತಣ್ಣನೆಯ ನೀರಿನವರೆಗೆ
ಪ್ರತಿಯೊಂದು ಪರ್ವತ, ಪ್ರತಿಯೊಂದು ಶಿಖರ ಕೂಡಾ ಭಾರತೀಯ ಯೋಧರ ಶೌರ್ಯಕ್ಕೆ ಸಾಕ್ಷಿಯಾಗಿವೆ. ಅವುಗಳನ್ನು ಜಯಿಸಲು ಪ್ರಯತ್ನಿಸಿ ಬಂದ ಜನರಿಗೆ ನೀವು ತಕ್ಕ ಉತ್ತರ ನೀಡಿದ್ದೀರಿ’ ಎಂದು
ಯೋಧರನ್ನು ಹುರಿದುಂಬಿಸುವ ಮೂಲಕ ಪ್ರಧಾನಿ ಚೀನಾಕ್ಕೆ ನೇರ ಸಂದೇಶ ನೀಡಿದರು.
’ಭಾರತವು
ಯಾವಾಗಲೂ ವಿಶ್ವದಲ್ಲಿ ಶಾಂತಿಯ ಮಾರ್ಗವನ್ನು ಅನುಸರಿಸುತ್ತದೆ. ಆದರೆ ಇದೇ ವೇಳೆಗೆ ದುರ್ಬಲರಾದವರು ಎಂದೂ ಶಾಂತಿಯ ಹೆಜ್ಜೆಗಳನ್ನು ಇಡಲು ಸಾಧ್ಯವಿಲ್ಲ. ಶೌರ್ಯ ಮತ್ತು ಧೈರ್ಯ ಶಾಂತಿಗೆ ಪೂರ್ವ
ಅಗತ್ಯಗಳು’ ಎಂದು
ಮೋದಿ ನುಡಿದರು.
’ನಾವು
ಕೊಳಲು ನುಡಿಸುವ ಭಗವಾನ್ ಕೃಷ್ಣನನ್ನು ಆರಾಧಿಸುವ ಜನರಾಗಿದ್ದೇವೆ, ಆದರೆ ಇದೇ ಸಮಯದಲ್ಲಿ ಕೈಗಳಲ್ಲಿ ’ಸುದರ್ಶನ ಚಕ್ರ’ವನ್ನು ಇಟ್ಟುಕೊಂಡಿರುವ ಭಗವಾನ್ ಕೃಷ್ಣನ್ನು ನಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡು ಅನುಸರಿಸುತ್ತಿರುವ ಜನರು ಕೂಡಾ ನಾವೇ’ ಎಂದು ಪ್ರಧಾನಿ ಹೇಳಿದರು.
ಗಲ್ವಾನ್
ಕಣಿವೆ ಮತ್ತು ಪ್ಯಾಂಗೊಂಗ್ ತ್ಸೊದಲ್ಲಿ ಭಾರತೀಯ ನೆಲವನ್ನು ಅತಿಕ್ರಮಿಸಲು ಯತ್ನಿಸುತ್ತಿರುವ ಮತ್ತು ಹೊಸ ಗಡಿ ವಿವಾದಗಳನ್ನು ಸೃಷ್ಟಿಸಲು ಯತ್ನಿಸುತ್ತಿರುವ ಬೀಜಿಂಗ್ನ್ನು ಉಲ್ಲೇಖಿಸದೆಯೇ ಮಾತನಾಡಿದ ಪ್ರಧಾನಿ ಮೋದಿ, ’ಕಾಲ ಬದಲಾಗಿದೆ. ವಿಸ್ತರಣಾವಾದದ ಯುಗ ಮುಗಿದಿದೆ. ಇದು ಅಭಿವೃದ್ಧಿಯ ಯುಗ, ವಿಸ್ತರಣೆಯ ಯುಗವಲ್ಲ’ ಎಂದು ನುಡಿದರು.
ಗುರಿಯನ್ನು
ಇಟ್ಟುಕೊಂಡೇ ಮಾತನಾಡಿದ ಪ್ರಧಾನಿ ಚೀನಾದ ವಿರುದ್ದ ಕೂರಂಬುಗಳನ್ನು ಎಸೆದರು. ಕೆಲವು ರಾಷ್ಟ್ರಗಳ ವಿಸ್ತರಣಾವಾದ ನೀತಿಗಳು ಜಾಗತಿಕ ಶಾಂತಿಗೆ ಅಡ್ಡಿ ಉಂಟು ಮಾಡುತ್ತಿವೆ ಎಂಬುದಾಗಿ ಹೇಳುವ ಮೂಲಕ ತನ್ನ ೨೧ ನೆರೆ ರಾಷ್ಟ್ರಗಳ
ಜೊತೆ ವಿವಾದಗಳನ್ನು ಹುಟ್ಟು ಹಾಕುತ್ತಾ ಕಾಲು ಕೆದರುತ್ತಿರುವ ಚೀನಾವನ್ನು ಅವರು ಸ್ಪಷ್ಟವಾಗಿ ಉಲ್ಲೇಖಿಸಿದರು.
’ಆದರೆ
ಆಕ್ರಮಣಶೀಲ ಶಕ್ತಿಗಳ ಪರಾಭವಗೊಂಡು ಮಣ್ಣು ಮುಕ್ಕಿದ್ದಷ್ಟೇ ಅಲ್ಲ, ಹಿಂದಕ್ಕೆ ಹೋಗಬೇಕಾಯಿತು’ ಎಂದು
ತಮ್ಮ ಅಚ್ಚರಿದಾಯಕ ದಿಢೀರ್ ಭೇಟಿಯನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಿ ಅಂತಿಮ ಪೆಟ್ಟು ನೀಡಿದರು.
ಪ್ರಧಾನಿ
ಮೋದಿ ಅವರ ಕಾರ್ಯಾಲಯವು ಒಂದು ದಿನದ ಲಡಾಖ್ ಪ್ರವಾಸವನ್ನು ಕಳೆದ ಸಂಜೆ ಅಂತಿಮಗೊಳಿಸಿದ್ದರೂ, ಕೊನೆಯ ಕ್ಷಣದವರೆಗೂ ಅದನ್ನು ಅತ್ಯಂತ ರಹಸ್ಯವಾಗಿ ಇರಿಸಿತ್ತು.
ಪ್ರಧಾನಿ
ಮೋದಿಯವರು ೧೧,೦೦೦ ಅಡಿ
ಎತ್ತರದಲ್ಲಿನ ಲೆಹ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕವೇ ಪ್ರಧಾನಿಯವರ ಲಡಾಖ್ ಭೇಟಿಯ ಸುದ್ದಿ ಗೊತ್ತಾಯಿತು.
೬೯ರ
ಹರೆಯದ ಪ್ರಧಾನಿ ನೇರವಾಗಿ ಲೆಹ್ ಹೊರವಲಯದ ನಿಮುವಿನಲ್ಲಿನ ೧೪ ಕೋರ್ ಕೇಂದ್ರ
ಕಚೇರಿಯಲ್ಲಿ ಉನ್ನತ ಸೇನಾ ಕಮಾಂಡರ್ಗಳತ್ತ ಮಾತುಕತೆಗಾಗಿ
ತೆರಳಿದರು. ದೆಹಲಿಯಲ್ಲೂ ಇದೇ ಮಾದರಿಯ ಮಾತುಕತೆಗಳನ್ನು ಅವರು ಡೆಸಿದರು.
ಈ
ಬಾರಿ, ಪ್ರಧಾನಿ ಮೋದಿಯವರು ಮಾತುಕತೆಯ ವೇಳೆಯಲ್ಲಿ ಝನ್ಸ್ಕರ್ ಮತ್ತು ಕಾರಾಕೋರಂಗಳ ನಕ್ಷೆಗಳನ್ನೂ ವೀಕ್ಷಿಸಿದರು. ಯೋಧರ ಜೊತೆಗೆ ಸಂವಾದ ನಡೆಸಿದ ಮೋದಿ, ತಮ್ಮ ಭಾಷಣಕ್ಕೆ ಮುನ್ನ ಸೈನಿಕರ ಅಭಿಪ್ರಾಯಗಳನ್ನು
ಆಲಿಸಿದರು.
ಲೆಹ್ಗೆ ಆಗಮಿಸುವ ಮೂಲಕ
ಮೋದಿಯವರು ಬೀಜಿಂಗ್ಗೆ ತಮ್ಮ ಸಂದೇಶದ
ಮೊದಲ ಕಂತನ್ನು ರವಾನಿಸಿದ್ದಾರೆ. ಗಡಿ ಬಿಕ್ಕಟ್ಟು ಎದುರಿಸುತ್ತಿರುವ ನೈಜ ನಿಯಂತ್ರಣ ರೇಖೆಯಲ್ಲಿ ’ಹ್ಯಾಂಡ್ಸ್ ಆಫ್ ಸಂಕೇತ ನೀಡಲು ಯತ್ನಿಸುತ್ತಿರುವ ಚೀನೀ ಯತ್ನಗಳಿಗೆ ಭಾರತದ ಧೋರಣೆ ವಿಭಿನ್ನವಾಗಿದೆ.
ಲಡಾಖ್
ಭೇಟಿಯ ಮೂಲಕ ಪ್ರಧಾನಿ ಮೋದಿಯವರು ಚೀನಾದ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರಿಗೆ ತಮ್ಮ ಪಶ್ಚಿಮ ರಂಗದ ಕಮಾಂಡರ್ ಝಾವೋ ಝೋಂಗ್ಕಿ ಅವರಿಗೆ ಯಥಾಸ್ಥಿತಿ
ಪಾಲನೆಗೆ ಸೂಚಿಸಿ ಅಥವಾ ಪಿಎಲ್ಎ ಅತಿರೇಕದ ಉದ್ವಿಗ್ನತೆಯ
ಅನಿವಾರ್ಯ ಪರಿಣಾಮಗಳನ್ನು ಎದುರಿಸಲು
ಸಜ್ಜಾಗಿ ಎಂಬ ಸಂದೇಶವನ್ನು ನೀಡಿದ್ದಾರೆ.
ಭಾರತೀಯ
ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಪೂರ್ವ ಲಡಾಖ್ನ ನಾಲ್ಕು ಸ್ಥಳಗಳಲ್ಲಿ
ಮುಖಾಮುಖಿಯಾಗಿವೆ.
ಪ್ರಧಾನಿ
ಮೋದಿಯವರು ಸೇನೆ, ವಾಯಪಡೆ, ಐಟಿಬಿಪಿ ಮತ್ತು ಗಡಿರಸ್ತೆ ಸಂಸ್ಥೆಯ ಯೋಧರನ್ನು ಉದ್ದೇಶಿಸಿ ಮಾತನಾಡಿದ ನಿಮು ಭಾರತದ ಸಕ್ರಿಯ ಮುಂಚೂಣಿ ನೆಲೆಯನ್ನು ಹೋಲುತ್ತದೆ. ಇಲ್ಲಿ ಫಿರಂಗಿ ಗನ್ಗಳು ಮತ್ತು ಇತರ ಭಾರೀ ಯುದ್ಧೋಪಕರಣಗಳಿದ್ದು, ರಣೋತ್ಸಾಹಿ ಸೈನಿಕರು ಹೆಲ್ಮೆಟ್ ಧರಿಸುವುದರ ಜೊತೆಗೆ ರಕ್ಷಣೆಗಾಗಿ ನಿರ್ಮಿಸಿರುವ ಕಣಿಗಳು ಮತ್ತಿತರ ರಚನೆಗಳಲ್ಲಿ ಕುಳಿತಿದ್ದಾರೆ ಎಂದು ಉನ್ನತ ಸೇನಾ ಕಮಾಂಡರ್ ಒಬ್ಬರು ನುಡಿದರು.
ನಿಮು ಒಂದು ಪಿಕ್ ನಿಕ್ ಸ್ಥಳ ಎಂಬುದಾಗಿ ಕೆಲವು ಖ್ಯಾತನಾಮರು ಹೀಯಾಳಿಸಿದ್ದನ್ನು ಉಲ್ಲೇಖಿಸಿದ ಒಬ್ಬ ಕಮಾಂಡರ್, ’ತಮ್ಮ ಅವಧಿಯನ್ನು ಪಿಕ್ ನಿಕ್ನಂತೆ ಕಳೆದವರಿಗೆ ಇದು ಪಿಕ್ನಿಕ್ ಸ್ಥಳವಾಗಿತ್ತು. ಗಂಭೀರವಾಗಿ ಸೇನಾ ಕಾರ್ಯಾಚರಣೆ ನಡೆಸುವ ಯೋಧರಿಗಲ್ಲ. ಅವರಿಗೆ ಕಾರ್ಗಿಲ್ ಮತ್ತು ಪಾಂಗೊಂಗ್ ತ್ಸೋ ಕೂಡ ಪಿಕ್ ನಿಕ್ ತಾಣಗಳಾಗಿವೆ. ಈ ಸ್ಥಳಗಳನ್ನು ಭವಿಷ್ಯದ ಯುದ್ಧ ವಲಯಗಳು ಎಂಬುದಾಗಿ ಪರಿಗಣಿಸಿದ್ದರೆ, ಅವರು ಹೀಗೆ ಪ್ರತಿಕ್ರಿಯಿಸುವ ಧೈರ್ಯ ಮಾಡುತ್ತಿರಲಿಲ್ಲ’ ಎಂದು ಹೇಳಿದರು.
No comments:
Post a Comment