ರಕ್ಷಣಾ ವ್ಯವಹಾರ ಭ್ರಷ್ಟಾಚಾರತಡೆ
ನವದೆಹಲಿ: ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯ ಜೇಟ್ಲಿ ಅವರಿಗೆ ವಿಧಿಸಲಾಗಿದ್ದ ೪ ವರ್ಷಗಳ ಸೆರೆವಾಸಕ್ಕೆ ದೆಹಲಿ ಹೈಕೋರ್ಟ್ 2020 ಜುಲೈ 30ರ ಗುರುವಾರ ತಡೆಯಾಜ್ಞೆ ನೀಡಿದೆ ಎಂದು ಜಯಾ ಜೇಟ್ಲಿ ಪರ ವಕೀಲರು ತಿಳಿಸಿದರು.
ತಮಗೆ ಸೆರೆವಾಸ ವಿಧಿಸಿದ್ದನ್ನು ಪ್ರಶ್ನಿಸಿ ಜಯಾ ಜೇಟ್ಲಿ ಅವರು ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸುರೇಶ ಕುಮಾರ್ ಕೈಟ್ ಅವರು ಸಿಬಿಐಯ ಪ್ರತಿಕ್ರಿಯೆ ಕೋರಿದರು ಎಂದು ವಕೀಲ ಅಭಿಜಿತ್ ಹೇಳಿದರು.
ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ಪಿಪಿ ಮಲ್ಹೋತ್ರ ಮೂಲಕ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದ ಜಯಾ ಜೇಟ್ಲಿ ವಿಚಾರಣಾ ನ್ಯಾಯಾಲಯವು ತನಗೆ ಶಿಕ್ಷೆ ವಿಧಿಸಿ ಜುಲೈ ೨೧ರಂದು ನೀಡಿದ ಆದೇಶವನ್ನು ಪ್ರಶ್ನಿಸಿದ್ದಾರೆ.
೨೦೦೦-೨೦೦೧ರ ಸಾಲಿನ ರಕ್ಷಣಾ ವ್ಯವಹಾರ ಒಂದಕ್ಕೆ ಸಂಬಂಧಿಸಿದಂತೆ ಜೇಟ್ಲಿ ಮತ್ತು ಇತರ ಇಬ್ಬರು ಆರೋಪಿಗಳು ತಪ್ಪಿತಸ್ಥರು ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು ಎಂದು ವಕೀಲರು ನುಡಿದರು.
ಜೇಟ್ಲಿ ಸಹಿತವಾಗಿ ಮೂವರಿಗೆ ೪ ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯ ಗುರುವಾರ ಸಂಜೆ ೫ ಗಂಟೆಯ ಒಳಗಾಗಿ ತನ್ನ ಮುಂದೆ ಶರಣಾಗುವಂತೆ ಆಜ್ಞಾಪಿಸಿತ್ತು.
ಜಯಾ ಜೇಟ್ಲಿ ಅವರ ಪಕ್ಷದ ಮಾಜಿ ಸಹೋದ್ಯೋಗಿಗಳಾಗಿದ್ದ ಗೋಪಾಲ ಪಚೇರ್ ವಾಲ್ ಮತ್ತು ಮೇಜರ್ ಜನರಲ್ (ನಿವೃತ್ತ) ಎಸ್.ಪಿ. ಮುರುಗೈ ಅವರು ದಂಡನೆಗೆ ಒಳಗಾದ ಇತರ ಇಬ್ಬರು ಶಿಕ್ಷಿತರಾಗಿದ್ದಾರೆ.
No comments:
Post a Comment