ಹರಿಯಾಣದ ರೆಸಾರ್ಟ್‌ನಲ್ಲಿ ಪತ್ತೆಯಾಗದ ಪೈಲಟ್, ಶಾಸಕರು
ಬರಿಗೈಯಲ್ಲಿ ವಾಪಸಾದ ರಾಜಸ್ಥಾನ ಪೊಲೀಸರು
ನವದೆಹಲಿ: ಹದಿನೆಂಟು ಮಂದಿ ಬಂಡುಕೋರ ಕಾಂಗ್ರೆಸ್ ಶಾಸಕರು ಸಚಿನ್ ಪೈಲಟ್ ಜೊತೆಗೆ ಹರಿಯಾಣ ಮಾನೆಸರದ ಎರಡು ರೆಸಾರ್ಟ್‌ಗಳಲ್ಲಿ ಇದ್ದಾರೆಂಬ ಶಂಕೆಯಲ್ಲಿ ಅಲ್ಲಿಗೆ ತೆರಳಿದ್ದ ರಾಜಸ್ಥಾನದ ಪೊಲೀಸ್ ಅಧಿಕಾರಿಗಳ ತಂಡವು ಅಲ್ಲಿ ಬಂಡಾಯ ಶಾಸಕರು ಪತ್ತೆಯಾಗದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ರಾಜಸ್ಥಾನಕ್ಕೆ ವಾಪಸಾಗಿದ್ದಾರೆ ಎಂದು ಸುದ್ದಿ ಮೂಲಗಳು 2020 ಜುಲೈ 18ರ ಶನಿವಾರ ತಿಳಿಸಿದವು.
ಐಪಿಎಸ್ ವಿಕಾಸ್ ಶರ್ಮ ನೇತೃತ್ವದಲ್ಲಿ ಮಾನೆಸರಕ್ಕೆ ಆಗಮಿಸಿದ್ದ ಎಸ್‌ಒಜಿ ತಂಡವನ್ನು ಹರಿಯಾಣ ಪೊಲೀಸರು ಮೊದಲಿಗೆ ತಡೆದರೂ ಬಳಿಕ ಒಳಕ್ಕೆ ಬಿಟ್ಟಿದ್ದರು. ತಂಡವು ಶಾಸಕ ಭನ್ವರ್ ಲಾಲ್ ಶರ್ಮ ಅವರ ಧ್ವನಿ ಮಾದರಿ ದಾಖಲಿಸುವ ಸಲುವಾಗಿ ಮತ್ತು ಅವರ ವಿರುದ್ಧ ವಾರಂಟ್ ಜಾರಿಗೊಳಿಸುವ ಸಲುವಾಗಿ ಅಲ್ಲಿಗೆ ತೆರಳಿತ್ತು.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ನಡೆದಿದೆ ಎನ್ನಲಾದ ಷಡ್ಯಂತ್ರಕ್ಕೆ ಸಂಬಂಧಿಸಿದ ಎರಡು ಆಡಿಯೋ ಕ್ಲಿಪ್‌ಗಳ ಬಗ್ಗೆ ತನಿಖೆ ನಡೆಸುವ ಸಲುವಾಗಿ ವಿಶೇಷ ಕಾರ್ಯಾಚರಣಾ ತಂಡವು (ಎಸ್‌ಒಜಿ) ಹರಿಯಾಣಕ್ಕೆ ತೆರಳಿತ್ತು.
ಆದಾಗ್ಯೂ ರೆಸಾರ್ಟಿನಲ್ಲಿ ಬಂಡಾಯ ಶಾಸಕರು ಪತ್ತೆಯಾಗಲಿಲ್ಲ. ಹರಿಯಾಣ ಪೊಲೀಸರು ಸಂಪೂರ್ಣವಾಗಿ ಸಹಕರಿಸಲಿಲ್ಲ ಎಂದು ಎಸ್‌ಒಜಿ ಅಧಿಕಾರಿಗಳು ಬಳಿಕ ಪ್ರತಿಪಾದಿಸಿದರು.
ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸೋರಿಕೆಯಾದ ಆಡಿಯೋ ಕ್ಲಿಪ್‌ನ್ನು ಉಲ್ಲೇಖಿಸಿ ರಾಜಸ್ಥಾನದಲ್ಲಿ ಅಶೋಕ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ನಡೆದಿರುವ ಯತ್ನಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಜೋಧಪುರದ ಸಂಸದ ಗಜೇಂದ್ರ ಶೆಖಾವತ್ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಮತ್ತು ಆರೋಪಿತ ಕುದುರೆವ್ಯಾಪಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.
ಆಡಿಯೋ ಟೇಪ್ ಸಂಭಾಷಣೆಯ ಲಿಖಿತರೂಪವನ್ನು ಆಧರಿಸಿ ಜೈಪುರದಲ್ಲಿ ಸುರ್ಜೆವಾಲ ಪತ್ರಿಕಾಗೋಷ್ಠಿ ನಡೆಸಿದ್ದರು ಮತ್ತು ಕಾಂಗ್ರೆಸ್ ಪಕ್ಷವು ಪಕ್ಷದ ಇಬ್ಬರು ಶಾಸಕರಾದ ಭನ್ವರ್ ಲಾಲ್ ಶರ್ಮ ಮತ್ತು ವಿಶ್ವೇಂದ್ರ ಸಿಂಗ್ ಅವರನ್ನು ಅಮಾನತುಗೊಳಿಸಿತ್ತು.
ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಹೆಸರು ಕೂಡಾ ಆಡಿಯೋ ಕ್ಲಿಪ್‌ನಲ್ಲಿ ಪ್ರಸ್ತಾಪಗೊಂಡಿದೆ ಎಂದೂ ಕಾಂಗ್ರೆಸ್ ಆಪಾದಿಸಿತ್ತು. ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರಗೊಂಡಿತ್ತು.
ಆದರೆ ವಿಶೇಷ ಕಾರ್ಯಾಚರಣಾ ತಂಡವು ದಾಖಲಿಸಿದ ಎಫ್ ಐಆರ್ ನಲ್ಲಿ ಗಜೇಂದ್ರ ಸಿಂಗ್ ಎಂಬವರನ್ನು ಯಾವುದೇ ಸಚಿವ ಎಂಬುದಾಗಿ ಗುರುತಿಸಿರಲಿಲ್ಲ. ಟೆಲಿವಿಷನ್ ಚಾನೆಲ್‌ಗಳು ರಾಜಸ್ಥಾನ ಪೊಲೀಸ್ ವಾಹನಗಳು ಮಾನೆಸರ್ ಹೋಟೆಲಿನ ಹೊರಭಾಗದಲ್ಲಿ ಸುಮಾರು ಒಂದು ಗಂಟೆ ಕಾಲ ಬಿಜೆಪಿ ಆಡಳಿತದ ರಾಜ್ಯದಲ್ಲಿನ ಪೊಲೀಸರಿಂದ ತಡೆಯಲ್ಪಟ್ಟು ನಿಂತಿದ್ದುದನ್ನು ಪ್ರಸಾರ ಮಾಡಿದ್ದವು.
ಬಳಿಕ ಪೊಲೀಸ್ ವಾಹನಗಳು ಹೊಟೇಲ್ ಆವರಣದ ಒಳಕ್ಕೆ ಪ್ರವೇಶಿಸುವುದನ್ನು ಟೆಲಿವಿಷನ್‌ಗಳು ಪ್ರಸಾರ ಮಾಡಿದ್ದವು.
ವಿಶೇಷ ಕಾರ್ಯಾಚರಣೆ ತಂಡದ (ಎಸ್ ಒಜಿ) ಹೆಚ್ಚುವರಿ ಮಹಾ ನಿರ್ದೇಶಕ ಅಶೋಕ ರಾಥೋಡ್ ಅವರು, ತಂಡಕ್ಕೆ ರೆಸಾರ್ಟ್‌ನ ಸ್ವಾಗತ ಕೌಂಟರಿನಲ್ಲಿಯೇ ಶಾಸಕ ಅಲ್ಲಿ ಇಲ್ಲ ಎಂಬುದಾಗಿ ತಿಳಿಸಲಾಯಿತು ಎಂದು ಹೇಳಿದರು. ಆಗ ಪೊಲೀಸರು ಬಂಡಾಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ನೇತೃತ್ವದ ಶಾಸಕರ ಪೈಕಿ ಕೆಲವರು ಇದ್ದರೆನ್ನಲಾದ ಮಾನೆಸರದ ಎರಡನೇ ಹೋಟೆಲಿಗೆ ತೆರಳಿದರು.
ಆಡಿಯೋ ಕ್ಲಿಪ್‌ಗಳಲ್ಲಿ ಕೇಳಿಬಂದ ಹೆಸರುಗಳ ವ್ಯಕ್ತಿಗಳಿಂದ ಅವರ ಹೇಳಿಕೆ ಏನು ಎಂಬುದಾಗಿ ಮಾಹಿತಿ ಸಂಗ್ರಹಿಸುವ ಸಲುವಾಗಿ ತಂಡವು ಮಾನೆಸರಕ್ಕೆ ತೆರಳಿತ್ತು. ಆಡಿಯೋ ಕ್ಲಿಪ್‌ಗಳು ನಕಲಿ ಹಾಗೂ ಸೃಷ್ಟಿತ ಎಂಬುದಾಗಿ ಹೇಳಿಕೆಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ರಾಥೋಡ್ ಹೇಳಿದ್ದರು.
ತಂಡಕ್ಕೆ ಪ್ರಾಥಮಿಕವಾಗಿ ಹೋಟೆಲ್ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ್ದನ್ನು ಅನುಸರಿಸಿ ಕಾಂಗ್ರೆಸ್ ನಾಯಕರು ರಾಜಸ್ಥಾನ ಸರ್ಕಾರ ಉರುಳಿಸುವ ಯೋಜನೆಯಲ್ಲಿ ಬಿಜೆಪಿ ಶಾಮೀಲಾಗಿದೆ ಎಂದು ಆಪಾದಿಸಿದ್ದರು.
’ಕಾಂಗ್ರೆಸ್ಸಿನ ಆಂತರಿಕ ಜಗಳದಲ್ಲಿ ತಾನು ಪಾಲ್ಗೊಂಡಿಲ್ಲ ಎಂಬುದಾಗಿ ಬಿಜೆಪಿಯು ಪ್ರತಿಪಾದಿಸುವುದಾದರೆ, ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರವು ಹೋಟೆಲ್ ಒಳಗೆ ಶಾಸಕರಿಗೆ ರಕ್ಷಣೆ ಕೊಡುತ್ತಿರುವುದು ಏಕೆ?’ ಎಂದು ಎಐಸಿಸಿ ಪ್ರಧಾನ ಕಾರ್‍ಯದಶಿ ಅವಿನಾಶ್ ಪಾಂಡೆ ಟ್ವೀಟ್ ಮಾಡಿದ್ದರು.
ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲ ಅವರು ಕೂಡಾ ಇಂತಹುದೇ ಆಪಾದನೆ ಮಾಡಿದ್ದರು. ’ಹರಿಯಾಣ ಪೊಲೀಸರು ಉರುಳಿಸುವ ಆಟದ ತನಿಖೆ ನಡೆಸದಂತೆ ರಾಜಸ್ಥಾನ ಪೊಲೀಸರನ್ನು ತಡೆಯುತ್ತಿರುವುದು ಏಕೆ ? ಇದು ಈ ಸಂಚಿಗೆ ನಗ್ನ ಸಾಕ್ಷಿಯಾಗಿದೆ’ ಎಂದು ಅವರು ಹೇಳಿದ್ದರು.
ರಾಜಸ್ಥಾನ ಹೈಕೋರ್ಟ್ ವಿಧಾನಸಭಾ ಅಧ್ಯಕ್ಷರಿಗೆ ಪೈಲಟ್ ಮತ್ತು ಇತರ ಶಾಸಕರ ವಿರುದ್ಧ ಜಾರಿಗೊಳಿಸಲಾದ ಅನರ್ಹತೆ ನೋಟಿಸ್ ಸಂಬಂಧವಾಗಿ ಮಂಗಳವಾರ ಸಂಜೆವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಶುಕ್ರವಾರ ಆಜ್ಞಾಪಿಸಿ ವಿಚಾರಣೆಯನ್ನು ಮುಂದಿನವಾರಕ್ಕೆ ಮುಂದೂಡುವುದರೊಂದಿಗೆ ಪೈಲಟ್ ಮತ್ತು ಬಂಡಾಯ ಶಾಸಕರಿಗೆ ನಾಲ್ಕು ದಿನಗಳ ನಿರಾಳತೆ ಲಭಿಸಿತ್ತು.
ರಾಜಸ್ಥಾನ ಹೈಕೋರ್ಟ್ ಪೈಲಟ್ ಮತ್ತು ಇತರ ಬಂಡಾಯ ಶಾಸಕರ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಳ್ಳಲಿದ್ದು, ಮಂಗಳವಾರ ಸಂಜೆ ೫.೩೦ರವರೆಗೆ ರಾಜಸ್ಥಾನ ವಿಧಾನಸಭಾ ಅಧ್ಯಕ್ಷರು ಅನರ್ಹತೆ ಅರ್ಜಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ.
No comments:
Post a Comment