ಬಂಡುಕೋರ ಪೈಲಟ್ ಬಣ ಅಸೆಂಬ್ಲಿ
ಜೈಪುರ / ನವದೆಹಲಿ: ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ಪುನರಪಿ ಮನವಿಗಳ ಬಳಿಕ 2020 ಆಗಸ್ಟ್ ೧೪ ರಿಂದ ವಿಧಾನಸಭೆ ಅಧಿವೇಶನ ಕರೆಯಲು ರಾಜಸ್ಥಾನ ರಾಜ್ಯಪಾಲ ಕಲರಾಜ್ ಮಿಶ್ರ ಅವರು ಒಪ್ಪಿಗೆ ನೀಡಿದ ಒಂದು ದಿನದ ಬಳಿಕ ಅಧಿವೇಶನದಲ್ಲಿ ತಾವು ಪಾಲ್ಗೊಳ್ಳುವುದಾಗಿ ಸಚಿನ್ ಪೈಲಟ್ ನೇತೃತ್ವದ ಬಂಡಾಯ ಶಾಸಕರ ಬಣ 2020 ಜುಲೈ 30ರ ಗುರುವಾರ ಹೇಳಿತು.
ಪೈಲಟ್ ಬಣದ ಹೇಳಿಕೆಯು ರಾಜಸ್ಥಾನದ ರಾಜಕೀಯ ಬೆಳವಣಿಗೆಗಳ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿಸಿತು.
ಪ್ರಸ್ತುತ ಹರಿಯಾಣದಲ್ಲಿ ಬೀಡುಬಿಟ್ಟಿರುವ ಸಚಿನ್ ಪೈಲಟ್ ಮತ್ತು ೧೮ ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕ ಮುರಿದ ನಂತರ ಇದೇ ಮೊದಲ ಬಾರಿಗೆ ಜೈಪುರಕ್ಕೆ ಮರಳಲು ರಕ್ಷಣೆ ಕೋರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಗಳ ತಿಳಿಸಿದವು.
’ಅಧಿವೇಶನಕ್ಕೆ ಹಾಜರಾಗುವಿರಾ?’ ಎಂಬ ಪ್ರಶ್ನೆಗೆ ಬಂಡಾಯ ಶಾಸಕರೊಬ್ಬರು, "ಖಂಡಿತ, ನಾವು ಹಾಜರಾಗುತ್ತೇವೆ’ ಎಂದು ಉತ್ತರಿಸಿದರು.
ಜೈಪುರಕ್ಕೆ ಮರಳಲು ಯಾವುದೇ ದಿನಾಂಕವನ್ನು ಬಂಡಾಯ ಶಾಸಕರು ನಿಗದಿಪಡಿಸಿಲ್ಲ. ಸಚಿನ್ ಪೈಲಟ್ ಬಂಡಾಯ ಪ್ರಾರಂಭಿಸಿದ ಜುಲೈ ೧೧ ರಿಂದ ಅವರು ದೆಹಲಿ ಸಮೀಪದ ಮಾನೇಸರ್ನಲ್ಲಿರುವ ಎರಡು ರೆಸಾರ್ಟ್ಗಳಲ್ಲಿ ಶಿಬಿರ ಹೂಡಿದ್ದಾರೆ.
ಬಂಡುಕೋರರು ಅಧಿವೇಶನಕ್ಕೆ ಹಾಜರಾಗದಿದ್ದರೆ, ಅವರು ಸಚೇತಕಾಜ್ಞೆ ಧಿಕ್ಕರಿಸಿದ್ದಕ್ಕಾಗಿ ಸದಸ್ಯತ್ವದಿಂದ ಅನರ್ಹರಾಗುತ್ತಾರೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕಾಂಗ್ರೆಸ್ ದೂರಿನ ಆಧಾರದ ಮೇಲೆ ಅವರನ್ನು ಅನರ್ಹಗೊಳಿಸುವ ಸ್ಪೀಕರ್ ಸಿಪಿ ಜೋಶಿ ಅವರ ಕ್ರಮಗಳ ವಿರುದ್ಧ ಬಂಡಾಯ ಶಾಸಕರು ಪ್ರಸ್ತುತ ಹೋರಾಡುತ್ತಿದ್ದಾರೆ.
ಜೂನ್ ೧೫ ರಂದು ತಮಗೆ ಜಾರಿಗೊಳಿಸಲಾದ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ ಪೈಲಟ್ ತಂಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟ್ ನಡೆಸುತ್ತಿದೆ.
೨೦೦ ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ತಮಗೆ ೧೦೨ ಶಾಸಕರ ಬೆಂಬಲವಿದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಪ್ರತಿಪಾದಿಸಿದ್ದಾರೆ. ಇದು ಸದನದಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ಸಂಖ್ಯೆಗಿಂತ ೧ ಸ್ಥಾನ ಹೆಚ್ಚು ಅಷ್ಟೆ. ಬಂಡುಕೋರರು ತಮ್ಮ ಬಳಿ ಸುಮಾರು ೩೦ ಶಾಸಕರು ಇರುವುದಾಗಿ ಪ್ರತಿಪಾದಿಸಿದ್ದಾರೆ. ಆದರೆ ಇಲ್ಲಿಯವರೆಗೆ ಕೇವಲ ೧೯ ಮಂದಿ ಮಾತ್ರ ಬಂಡಾಯ ಬಣದಲ್ಲಿ ಇರುವುದು ದೃಢಪಟ್ಟಿದೆ.
ಬಂಡಾಯ ಶಾಸಕರು ಸದನಕ್ಕೆ ಹಾಜರಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ,
ಅಶೋಕ ಗೆಹ್ಲೋಟ್ ಸರ್ಕಾರ ಭಾರಿ ತೊಂದರೆಯಲ್ಲಿ ಸಿಲುಕಬಹುದು. ತಮ್ಮ ಪಕ್ಷದ ಸಚೇತಕಾಜ್ಞೆಯನ್ನು ಧಿಕ್ಕರಿಸಿದ್ದಕ್ಕಾಗಿ ಬಂಡುಕೋರರನ್ನು ಅನರ್ಹಗೊಳಿಸಲಾಗುತ್ತದೆ, ಆದರೆ ಹೆಚ್ಚಿನ ಶಾಸಕರು ನಿಯಮಗಳ ಪ್ರಕಾರ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ
ಸರ್ಕಾರ ಮೊದಲು ಬೀಳುತ್ತದೆ.
ಮುಖ್ಯಮಂತ್ರಿ, ವಿಧಾನಸಭೆ ಅಧಿವೇಶನಕ್ಕೆ ಒತ್ತಾಯಿಸುವಾಗ, ರಾಜ್ಯಪಾಲ ಕಲರಾಜ್ ಮಿಶ್ರ ಅವರಿಗೆ ಬರೆದ ನಾಲ್ಕು ಪತ್ರಗಳಲ್ಲಿ ವಿಶ್ವಾಸಮತ ಕೋರಿಕೆ ವಿಚಾರವನ್ನು ಉಲ್ಲೇಖಿಸಿಲ್ಲ. ರಾಜ್ಯಪಾಲರು ತಮ್ಮ ಪತ್ರಗಳಲ್ಲಿ ಸದನ ಬಲಾಬಲ ಪರೀಕ್ಷೆ ಇದೆಯೇ ಎಂದು ಪದೇ ಪದೇ ಪ್ರಶ್ನಿಸಿದ್ದಾರೆ. ಮಿಶ್ರಾ ಅವರು ಮೂರು ಪ್ರಸ್ತಾಪಗಳನ್ನು ವಾಪಸ್ ಕಳುಹಿಸಿದರು, ವಿಧಾನಸಭೆಯನ್ನು ಕರೆಯಲು ೨೧ ದಿನಗಳ ನೋಟಿಸ್ ಅಗತ್ಯ ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದರು. ಆದರೆ ಗೆಹ್ಲೋಟ್ ಸದನ ಬಲಾಬಲ ಪರೀಕ್ಷೆ ಎದುರಿಸಲು ಯೋಜಿಸಿದರೆ ಅಲ್ಪ ಅವಧಿಯ ನೋಟಿಸ್ ನೀಡಿ ಅಧಿವೇಶನ ಕರೆಯಬಹುದು ಎಂದು ರಾಜ್ಯಪಾಲರು ಹೇಳಿದ್ದರು.
"ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಎಂಬುದಾಗಿ ರಾಜ್ಯಪಾಲರು ಬಯಸಿದರೆ, ಹಾಗೆ ಮಾಡುವಂತೆ ಅವರು ನಮ್ಮನ್ನು ನಿರ್ದೇಶಿಸಬೇಕು, ನಾವು ಬಹುಮತ ಹೊಂದಿದ್ದೇವೆ. ನಾವೇ ಏಕೆ ಬಲಾಬಲ ಪರೀಕ್ಷೆಯನ್ನು ಕೇಳಬೇಕು?’ ಎಂದು ರಾಜಸ್ಥಾನ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹೇಶ್ ಜೋಶಿ ಬುಧವಾರ ಹೇಳಿದ್ದರು.
ಕಾಂಗ್ರೆಸ್ ಪಕ್ಷವು ವಿಶ್ವಾಸ ಮತದ ಉಲ್ಲೇಖ ಮಾಡುವುದನ್ನು ತಪ್ಪಿಸಲು ಬಯಸಿದೆ ಎಂದು ಹೇಳಲಾಗುತ್ತಿದೆ. ವಿಶ್ವಾಸ ಮತದ ಪ್ರಸ್ತಾಪ ಮಾಡಿದರೆ ರಾಜಪಾಲರು ಬಲಾಬಲ ಪರೀಕ್ಷೆಗೆ ಷರತ್ತುಗಳನ್ನು ವಿಧಿಸಬಹುದು ಎಂಬುದಾಗಿ ಕಾಂಗ್ರೆಸ್ ಚಿಂತಿಸಿದೆ ಎನ್ನಲಾಗಿದೆ.
ಪೈಲಟ್ ಬಣ ಕೂಡಾ ವಿಶ್ವಾಸ ಮತದ ವಿಚಾರ ಪ್ರಸ್ತಾಪಿಸಿಲ್ಲ. ಹೆಚ್ಚಿನ ಶಾಸಕರು ತಮ್ಮ ಕಡೆಗೆ ಬರುವವರೆಗೆ ಕಾಯುವುದು ಅವರ ತಂತ್ರ ಎಂದು ಹೇಳಲಾಗುತ್ತಿದೆ. ಅಧಿವೇಶನ ಸಮೀಪ ಬಂದಂತೆ ಇತರ ಹಲವರು ತಮ್ಮ ಕಡೆಗೆ ಬರುತ್ತಾರೆ ಎಂದು ಹಲವಾರು ಬಂಡುಕೋರರು ಹಾರೈಸಿದ್ದಾರೆ. ಗೆಹ್ಲೋಟ್ ಅವರ ಜೊತೆಗೆ ಇರುವ ಪ್ರಾದೇಶಿಕ ಭಾರತೀಯ ಬುಡಕಟ್ಟು ಪಕ್ಷದ (ಬಿಟಿಪಿ) ಇಬ್ಬರು ಶಾಸಕರು ಕೂಡಾ ಮನಸ್ಸು ಬದಲಾಯಿಸಬಹುದು ಎಂದು ಅವರು ನಂಬಿದ್ದಾರೆ.
ಗೆಹ್ಲೋಟ್ ಸರ್ಕಾರಕ್ಕೆ ಅಪಾಯವನ್ನುಂಟುಮಾಡುವ ಇನ್ನೊಂದು ಅಂಶ ಬೆಳವಣಿಗೆಯಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಭ್ಯರ್ಥಿಗಳಾಗಿ ಗೆದ್ದು, ಬಳಿಕ ಕಳೆದ ವರ್ಷ ತಮ್ಮ ಪಕ್ಷವನ್ನು ಕಾಂಗ್ರೆಸ್ಸಿನಲ್ಲಿ ವಿಲೀನಗೊಳಿಸಿದ್ದ ಆರು ಶಾಸಕರ ನಡೆ. ಈ ವಿಲೀನವನ್ನು
ಬಿಎಸ್ಪಿ ಮತ್ತು ಬಿಜೆಪಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ರಾಜಸ್ಥಾನ ಹೈಕೋರ್ಟ್ ವಿಧಾನಸಭಾಧ್ಯಕ್ಷರಿಗೆ ನೋಟಿಸ್ ನೀಡಿದೆ.
ಈ ಆರು ಶಾಸಕರು ಕೈತಪ್ಪಿದರೆ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಳ್ಳುವುದು ಖಚಿತವಾಗಿದೆ ಎಮದು ಮೂಲಗಳು ಹೇಳಿವೆ.
No comments:
Post a Comment