ತದ್ರೂಪಿ ಅವಳಿಗಳಿಗೆ ಸಮಾನ ಅಂಕಗಳು!
ಸಿಬಿಎಸ್ಇ ೧೨ ನೇ ತರಗತಿ ಪರೀಕ್ಷೆ
ನೋಯ್ಡಾ: ಅವರಿಬ್ಬರೂ ತದ್ರೂಪಿ ಅವಳಿಗಳು. ಇಬ್ಬರಲ್ಲೂ ಅಧ್ಭುತ ಸಾಮ್ಯತೆ. ವಿಶೇಷವೆಂದರೆ ಸಿಬಿಎಸ್ಇ ನಡೆಸಿದ ೧೨ನೇ ತರಗತಿಯ ಪರೀಕ್ಷೆಯಲ್ಲೂ ಅವರು ಸಮಾನ ಅಂಕಗಳನ್ನು ಗಳಿಸಿದ್ದಾರೆ. ಮಂಡಳಿ ಪರೀಕ್ಷೆಯಲ್ಲಿ ಇಬ್ಬರಿಗೂ ತಲಾ ೯೮.೫ ಅಂಕಗಳು ಬಂದಿವೆ.
ದೆಹಲಿ ಸಮೀಪದ ನೋಯ್ಡಾ ನಿವಾಸಿಗಳಾದ ಮಾನಸಿ ಮತ್ತು ಮಾನ್ಯ ಅವಳಿ ಒಡಹುಟ್ಟಿದವರಾಗಿದ್ದು ಗ್ರೇಟರ್ ನೋಯ್ಡಾದ ಆಸ್ಟರ್ ಪಬ್ಲಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಅವರು ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ತಲಾ ೯೮, ಮತ್ತು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ತಲಾ ೯೫ ಅಂಕಗಳನ್ನು ಗಳಿಸಿದ್ದಾರೆ.
"ಎಲ್ಲರೂ ಒಂದೇ ರೀತಿಯ ನೋಟಕ್ಕಾಗಿ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ನಮ್ಮ ಹೆಸರುಗಳು ಮಾತ್ರ ನಮ್ಮನ್ನು ಪ್ರತ್ಯೇಕಿಸುತ್ತವೆ. ನಾವು ಉತ್ತಮ ಅಂಕ ಗಳಿಕೆ ಬಗ್ಗೆ ವಿಶ್ವಾಸ ಹೊಂದಿದ್ದೆವು. ಆದರೆ ಒಂದೇ ರೀತಿಯ ಅಂಕಗಳನ್ನು ಗಳಿಸುವ ನಿರೀಕ್ಷೆ ಇರಲಿಲ್ಲ. ಪರೀಕ್ಷೆಗಳ ನಂತರ ನಮ್ಮ ಸಾಧನೆಯನ್ನು ವಿಶ್ಲೇಷಿಸಿದಾಗ, ಮಾನ್ಯ ಹೆಚ್ಚು ಅಂಕ ಗಳಿಸಬಹುದು ಎಂದು ನಾವು ಲೆಕ್ಕ ಹಾಕಿದ್ದೆವು’ ಎಂದು ಮಾನಸಿ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ತಿಳಿಸಿದರು.
ಒಡಹುಟ್ಟಿದವರಿಬ್ಬರೂ ಈಗ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಯೋಜಿಸುತ್ತಿದ್ದಾರೆ ಮತ್ತು ಜೆಇಇ ಮೇನ್ಸ್ಗೆ ಹಾಜರಾಗಲು ಕಾಯುತ್ತಿದ್ದಾರೆ, ಪರೀಕ್ಷೆಯು ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸೆಪ್ಟೆಂಬರಿಗೆ ಮುಂದೂಡಿಕೆಯಾಗಿದೆ.
"ಒಂದೇ ರೀತಿಯ ಅವಳಿಗಳು ಒಂದೇ ರೀತಿಯ ಅಂಕಗಳನ್ನು ಗಳಿಸುವ ಬಗ್ಗೆ ನಾನು ಎರಡು ವರ್ಷಗಳ ಹಿಂದೆ ಓದಿದ್ದೇನೆ. ಆದರೆ ಅದು ಕಾಕತಾಳೀಯ ಎಂದು ನಾವು ಭಾವಿಸಿದೆವು. ಆದರೂ, ನಾವು ಅದೇ ರೀತಿ ಅಂಕ ಪಡೆಯುತ್ತೇವೆಂಬ ನಂಬಿಕೆ ನಮಗಿರಲಿಲ್ಲ’ ಎಂದು ಮಾನ್ಯ ಹೇಳಿದರು.
ಹಿಂದಿನ ಪರೀಕ್ಷೆಗಳಲ್ಲಿ ಇಬ್ಬರೂ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಎಂದೂ ಸಮಾನ ಅಂಕ ಗಳಿಸಿರಲಿಲ್ಲ.
"ನಮ್ಮಿಬ್ಬರ ನಡುವೆ ಯಾವಾಗಲೂ ಆರೋಗ್ಯಕರ ಸ್ಪರ್ಧೆ ಇತ್ತು ಮತ್ತು ಅದು ನೆಕ್ ಟು ನೆಕ್ ಸ್ಪರ್ಧೆಯಾಗಿತ್ತು. ಆದಾಗ್ಯೂ, ನಾವು ವಿಭಿನ್ನ ವಿಷಯಗಳ ಬಗ್ಗೆ ಪ್ರಬುದ್ಧತೆ ಹೊಂದಿದ್ದೇವೆ. ನಾನು ರಸಾಯನಶಾಸ್ತ್ರದಲ್ಲಿ ಉತ್ತಮವಾಗಿದ್ದೇನೆ ಮತ್ತು ಮಾನಸಿಗೆ ಭೌತಶಾಸ್ತ್ರದ ಬಗ್ಗೆ ಉತ್ತಮ ಪ್ರಬುದ್ಧತೆ ಇದೆ" ಎಂದು ಅವರು ಹೇಳಿದರು.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅಥವಾ ಸಿಬಿಎಸ್ಇ ಜುಲೈ ೧೩ ರಂದು ೧೨ ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟಿಸಿದೆ. ಈ ವರ್ಷ ಶೇಕಡಾ ೮೮.೭೮ ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ತೇರ್ಗಡೆಯಾಗಿದ್ದಾರೆ. ಇದು ಕಳೆದ ವರ್ಷಕ್ಕಿಂತ ಶೇಕಡಾ ೫.೩೮ ರಷ್ಟು ಹೆಚ್ಚಾಗಿದೆ.
ಬಾಲಕಿಯರಲ್ಲಿ ಉತ್ತೀರ್ಣತೆಯ ಪ್ರಮಾಣ ಶೇಕಡಾ ೯೨.೧೫ ಮತ್ತು ಹುಡುಗರಲ್ಲಿ ಶೇಕಡಾ ೮೬.೧೯ ರಷ್ಟಿದೆ. ಬಾಲಕರಿಗಿಂತ ಬಾಲಕಿಯರು ಶೇಕಡಾ ೫.೯೬ ರಷ್ಟು ಉತ್ತಮ ಸಾಧನೆ ಮಾಡಿದ್ದಾರೆ.
No comments:
Post a Comment