Monday, July 27, 2020

ಮೋದಿಗೆ ಗೆಹ್ಲೋಟ್ ಫೋನ್, ರಾಷ್ಟ್ರಪತಿಗೂ ದೂರು

ಮೋದಿಗೆ ಗೆಹ್ಲೋಟ್ ಫೋನ್, ರಾಷ್ಟ್ರಪತಿಗೂ ದೂರು

ಜೈಪುರ: ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದಲ್ಲಿ ಬಂಡಾಯ ಎದುರಿಸುತ್ತಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ವಿಧಾನಸಭೆ ಅಧಿವೇಶನ ಕರೆಯುವಲ್ಲಿ ರಾಜ್ಯಪಾಲರು ಮಾಡುತ್ತಿರುವ ವಿಳಂಬದ ಬಗ್ಗೆ ದೂರು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡುತ್ತಾ, ರಾಜ್ಯಪಾಲ ಕಲರಾಜ್ ಮಿಶ್ರ ಅವರ ನಡವಳಿಕೆ, ರಾಜಭವನದ ಹುಲ್ಲು ಹಾಸಿನಲ್ಲಿ ಶಾಸಕ ಧರಣಿ ಹಾಗೂ ಪುನರಪಿ ಮನವಿಗಳ ಹೊರತಾಗಿಯೂ ವಿಧಾನಸಭೆ ಅಧಿವೇಶನ ಕರೆಯಲು ಮಾಡುತ್ತಿರುವ ವಿಳಂಬ ಬಗ್ಗೆ ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಮನವಿ ಸಲ್ಲಿಸಿ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿಸುವುದಾಗಿ ಮುಖ್ಯಮಂತ್ರಿ 2020 ಜುಲೈ 27ರ ಸೋಮವಾರ ಹೇಳಿದರು.

ನಾನು ಭಾನುವಾರ (ನಿನ್ನೆ) ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದ್ದೇನೆ ಮತ್ತು ರಾಜ್ಯಪಾಲರ ವರ್ತನೆಯ ಬಗ್ಗೆ ಹೇಳಿದ್ದೇನೆ. ಏಳು ದಿನಗಳ ಹಿಂದೆ ನಾನು ಅವರಿಗೆ ಬರೆದ ಪತ್ರದ ಬಗ್ಗೆ ನಾನು ಅವರೊಂದಿಗೆ ಮಾತನಾಡಿದ್ದೇನೆ ಎಂದು ಗೆಹ್ಲೋಟ್ ಹೇಳಿದರು. ರಾಜ್ಯಪಾಲರು ತಮಗೆ ಆರು ಪುಟಗಳ ಪ್ರೇಮಪತ್ರ ಕಳುಹಿಸಿದ್ದಾರೆ ಎಂದೂ ಗೆಹ್ಲೋಟ್ ನುಡಿದರು.

ಜುಲೈ ೩೧ ರಿಂದ ವಿಧಾನಸಭೆ ಅಧಿವೇಶನ ಸಭೆ ನಡೆಸುವಂತೆ ಮುಖ್ಯಮಂತ್ರಿ ಗೆಹ್ಲೋಟ್ ಸಲ್ಲಿಸಿದ ಪ್ರಸ್ತಾವನೆಯನ್ನು ಹಿಂದಿರುಗಿಸಿದ್ದ ರಾಜ್ಯಪಾಲರು ಸೋಮವಾರ ಬೆಳಿಗ್ಗೆ ರಾಜ್ಯ ಸರ್ಕಾರದಿಂದ ಅಧಿವೇಶನಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿದ್ದಾರೆ.

ಮಧ್ಯೆ, ಸಂವಿಧಾನದ ಸ್ಥಾಪಿತ ಸಂಪ್ರದಾಯಗಳು, ಸಂಸದೀಯ ಪ್ರಜಾಪ್ರಭುತ್ವದ ತತ್ವಗಳು, ಸಂವಿಧಾನದ ಸಂಬಂಧಿತ ವಿಧಿಗಳು ಮತ್ತು ಸುಪ್ರೀಂ ಕೋರ್ಟ್‌ನ ಅಧಿಕೃತ ಘೋಷಣೆಗಳ ಪ್ರಕಾರ, ಅಧಿವೇಶನ ನಡೆಸುವ ವಿಷಯದಲ್ಲಿ ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಲು ರಾಜ್ಯಪಾಲರು ಬದ್ಧರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂವರು ಮಾಜಿ ಕಾನೂನು ಮಂತ್ರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

೧೯೭೪ ರಲ್ಲಿ ಶಂಶರ್ ಸಿಂಗ್ ಪ್ರಕರಣದಲ್ಲಿ ಮತ್ತು ಇತ್ತೀಚೆಗೆ ೨೦೧೬ ರಲ್ಲಿ ನಬಮ್ ರೆಬಿಯಾ ಪಕರಣದಲ್ಲಿ ರಾಜ್ಯಪಾಲರ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಕಾಂಗ್ರೆಸ್ ನಾಯಕರು ಉಲ್ಲೇಖಿಸಿದ್ದಾರೆ.

ನಬಾಮ್ ರೆಬಿಯಾ ಪ್ರಕರಣದಲ್ಲಿ, ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಸದನ ಸಮಾವೇಶಕ್ಕೆ ಸಂಪುಟದ ಸಹಾಯ ಮತ್ತು ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉನ್ನತ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆದಿರುವ ಬಗ್ಗೆ ಮತ್ತು ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಶಾಸಕರನ್ನು ಅಪಹರಿಸಿದೆ ಎಂದು ಆರೋಪಿಸಿ ಕಳೆದ ವಾರ, ಗೆಹ್ಲೋಟ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಗೆಹ್ಲೋಟ್ ಅವರು ಪತ್ರದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನೂ ಹೆಸರಿಸಿದ್ದರು.

ಬಿಜೆಪಿಯ ಫಿತೂರಿಯನ್ನು ಸೋಲಿಸಲು ರಾಷ್ಟ್ರಪತಿಯವರ ದೆಹಲಿಯಲ್ಲಿನ ಅಧಿಕೃತ ನಿವಾಸವಾದ ರಾಜಭವನಕ್ಕೆ ತೆರಳಲು ಮತ್ತು ಪ್ರಧಾನ ಮಂತ್ರಿಯ ನಿವಾಸದ ಮುಂದೆ ಧರಣಿ ನಡೆಸಲೂ ತಾವು ಸಿದ್ಧ ಎಂದು ಗೆಹ್ಲೋಟ್ ಹೇಳಿದ್ದರು. ಬಂಡೆಯಂತೆ ಸ್ಥಿರವಾಗಿ ನಿಲ್ಲಿ ಎಂದು ಬೆಂಬಲಿಗ ಶಾಸಕರಿಗೆ ಅವರು ಕರೆ ಕೊಟ್ಟಿದ್ದರು.

No comments:

Advertisement