Thursday, July 9, 2020

ಭಾರತ-ಚೀನಾ ಸೇನಾ ಮಾತುಕತೆ ಮುಂದಿನ ವಾರ

ಭಾರತ-ಚೀನಾ ಸೇನಾ ಮಾತುಕತೆ ಮುಂದಿನ ವಾರ

ನವದೆಹಲಿ: ನೈಜ ನಿಯಂತ್ರಣ ರೇಖೆಯಲ್ಲಿನ ಸೇನಾ ಪಡೆಗಳ ವಾಪಸಾತಿ ಪ್ರಕ್ರಿಯೆಯನ್ನು ಇನ್ನಷ್ಟು ಮುಂದಕ್ಕೆ ಒಯ್ಯುವ ಸಲುವಾಗಿ ಭಾರತ ಮತ್ತು ಚೀನಾ ಮುಂದಿನ ವಾರ ಹೊಸ ಸುತ್ತಿನ ಮಾತುಕತೆ ನಡೆಸಲಿದೆ ಎಂದು ಸರ್ಕಾರೀ ಮೂಲಗಳು 2020 ಜುಲೈ 09ರ ಗುರುವಾರ ತಿಳಿಸಿವೆ.

ಲೆಹ್ ನೆಲೆಯ ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ಚೀನಾದ ತತ್ಸಮಾನ ಅಧಿಕಾರಿ ಪಶ್ಚಿಮ ಥಿಯೇಟರ್ ಕಮಾಂಡ್ ಚೀಫ್ ಲೆಫ್ಟಿನೆಂಟ್ ಜನರಲ್ ಕ್ಷು ಕ್ವಿಲಿಂಗ್ ಅವರು ಮುಂದಿನ ವಾರದ ಆದಿಯಲ್ಲಿ  ಹೊಸ ಸುತ್ತಿನ ಮಾತುಕತೆಗಳನ್ನು ನಡೆಸಲು ಸಭೆ ಸೇರಲಿದ್ದಾರೆ ಎಂದು ಮೂಲಗಳು ಹೇಳಿದವು.

ಜೂನ್ ೩೦ರ ಒಪ್ಪಂದದಲ್ಲಿ ಗಲ್ವಾನ್ ಕಣಿವೆಯಲ್ಲಿನ ನೈಜ ನಿಯಂತ್ರಣ ರೇಖೆಯ ಪ್ರದೇಶದ ಮೇಲಿನ ಚೀನೀ ಹಕ್ಕನ್ನು ಒಪ್ಪಿಕೊಳ್ಳಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ರಾಜಕೀಯ ವಾಕ್ಸಮರದ ಮಧ್ಯೆ ಹೊಸ ಮಾತುಕತೆಗೆ ಸಿದ್ಧತೆ ಆರಂಭವಾಗಿದೆ. ಗಲ್ವಾನ್ ಕಣಿವೆಯ ಸದರಿ ಸ್ಥಳದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ ) ಜೊತೆಗೆ ಸಂಭವಿಸಿದ ಘರ್ಷಣೆಯಲ್ಲಿ ಭಾರತದ ೨೦ ಮಂದಿ ಯೋಧರು ಹುತಾತ್ಮರಾಗಿದ್ದರು. ೧೯೬೭ರ ಬಳಿಕ ಉಭಯ ರಾಷ್ಟ್ರಗಳ ಮಧ್ಯೆ ನಡೆದ ಅತ್ಯಂತ ಭೀಕರ ಘರ್ಷಣೆ ಇದಾಗಿತ್ತು.

ಒಪ್ಪಂದವು ಉಭಯ ಸೇನೆಗಳನ್ನು ಭೌತಿಕವಾಗಿ ಆಕ್ರಮಿಸಿಕೊಳ್ಳಲಾಗಿದ್ದ ಸ್ಥಳಗಳಿಂದ ಒಂದು ಕಿಲೊ ಮೀಟರಿನಷ್ಟು ಹಿಂದಕ್ಕೆ ಸಾಗುವುದಕ್ಕೆ ಮಾತ್ರವೇ ಸಂಬಂಧಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಘರ್ಷಣೆಯ ಸ್ಥಳಗಳಿಂದ ಪಡೆಗಳ ವಾಪಸಾತಿ ಕ್ರಮವು ಉಭಯ ಸೇನೆಗಳ ನಡುವಣ ಹಿಂಸಾಚಾರದ ಅಪಾಯವನ್ನು ತಗ್ಗಿಸುವ ಉದ್ದೇಶದ್ದಾಗಿದೆ ಮತ್ತು ಎಲ್ ಎಸಿ ಬಗ್ಗೆ ಉಭಯ ರಾಷ್ಟ್ರಗಳು ಮಾಡುತ್ತಿರುವ ಹಕ್ಕು ಪ್ರತಿಪಾದನೆಗಳನ್ನು ಪೂರ್ವಾಗ್ರಹದಿಂದ ಹೊರತಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಗಲ್ವಾನ್ ನಲ್ಲಿ ಸಂಭವಿಸಿದ ಘಟನೆಯ ಸರಿ ಮತ್ತು ತಪ್ಪುಗಳ ವಿಚಾರವು ಮಾತುಕತೆಗಳ ವಿಷಯವಾಗಿರಲಿಲ್ಲ. ಯಾವುದೇ ಹೊಸ ಘರ್ಷಣೆ ಅಥವಾ ಹಿಂಸಾಚಾರ ಸಂಭವಿಸಿದಂತೆ ತಡೆಯುವ ಸೀಮಿತ ಉದ್ದೇಶ ಮಾತ್ರ ಮಾತುಕತೆಯ ಹಿಂದಿತ್ತು ಎಂದು ಅವರು ನುಡಿದರು.

ಚೀನಾದ ಪೀಪಲ್ಸ್ ಲಿಬರೇಶನ್ ಅರ್ಮಿಯು ಪಹರೆ ಪಾಯಿಂಟ್ ೧೪ ಎಂಬುದಾಗಿ ಕರೆಯಲಾಗುವ ಸ್ಥಳದಲ್ಲಿ ಡೇರೆಗಳನ್ನು ಹಾಕಿದ ಬಳಿಕ ಕಳೆದ ತಿಂಗಳ ಗಲ್ವಾನ್ ಘರ್ಷಣೆ ಸಂಭವಿಸಿತು. ಮಾತುಕತೆಯ ಬಳಿಕ ಒಪ್ಪಂದದಂತೆ ಚೀನೀ ಪಡೆಗಳು ಎಲ್ ಎಸಿಯ ಚೀನೀ ಭಾಗದಿಂದ ಹಿಂದಕ್ಕೆ ಹೋಗಬೇಕು ಎಂದು ಭಾರತ ಪಟ್ಟು ಹಿಡಿಯಿತು. ಇದಕ್ಕೆ ಪ್ರತಿಯಾಗಿ ಪಿಎಲ್, ಭಾರತೀಯ ಸೇನೆಯು  ಎಲ್ ಎಸಿ ಸಮೀಪ ನಿರ್ಮಾಣ ಚಟುವಟಿಕೆ ನಿಷೇಧಿಸಿದ ಶಿಷ್ಟಾಚಾರವನ್ನು ಉಲ್ಲಂಘಿಸಿ ಪಾಯಿಂಟ್ ೧೪ರವರೆಗೆ ರಸ್ತೆ ನಿರ್ಮಿಸಲು ಹೊರಟದ್ದರಿಂದ ಚೀನೀ ಪಡೆಗಳು ಮುಂದಕ್ಕೆ ಚಲಿಸಿದವು ಎಂದು ಪ್ರತಿಪಾದಿಸಿತ್ತು.

No comments:

Advertisement