ಜಗತ್ತಿನ ಮೊದಲ ಕೋವಿಡ್ ಲಸಿಕೆಗೆ ರಷ್ಯಾ ಅಸ್ತು
ಪುತ್ರಿಗೆ ಮೊದಲ ಲಸಿಕೆ: ಅಧ್ಯಕ್ಷ ಪುಟಿನ್
ಮಾಸ್ಕೊ: ರಷ್ಯಾದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ವಿಶ್ವದ ಪ್ರಪ್ರಥಮ ಕೋವಿಡ್-೧೯ ಲಸಿಕೆ ’ಸ್ಪುಟ್ನಿಕ್-ವಿ’ಗೆ ರಷ್ಯಾದ ಆರೋಗ್ಯ ಸಚಿವಾಲಯ 2020 ಆಗಸ್ಟ್ 11ರ ಮಂಗಳವಾರ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಿದ್ದು ಜನರ ಬಳಕೆಗೆ ಬಿಡುಗಡೆಯಾಗಲಿದೆ. ರಷ್ಯಾ ಅಧ್ಯಕ್ಷ ವ್ಯಾಡಿಮೀರ್ ಪುಟಿನ್ ಅವರ ಪುತ್ರಿಗೆ ಲಸಿಕೆಯನ್ನು ನೀಡಲಾಗಿದೆ.
ಕೊರೋನವೈರಸ್ ವಿರುದ್ಧ "ಸುಸ್ಥಿರ ರೋಗ ನಿರೋಧಕ ಶಕ್ತಿ’ ನೀಡುವ ಮೊದಲ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಕಟಿಸಿದರು.
ಸೋವಿಯತ್ ಉಪಗ್ರಹದ ನಂತರ ಮಾಸ್ಕೋ ತನ್ನ ಹೊಸ ಕೊರೋನವೈರಸ್ ಲಸಿಕೆಯನ್ನು "ಸ್ಪುಟ್ನಿಕ್ ವಿ" ಎಂಬುದಾಗಿ ಹೆಸರು ನೀಡಿದೆ ಎಂದು ಪುಟಿನ್ ಹೇಳಿದರು.
"ಇಂದು ಬೆಳಗ್ಗೆ, ವಿಶ್ವದಲ್ಲೇ ಮೊದಲ ಬಾರಿಗೆ ರಷ್ಯಾದಲ್ಲಿ ಹೊಸ ಕೊರೋನವೈರಸ್ ವಿರುದ್ಧ ಲಸಿಕೆ ನೋಂದಾಯಿಸಲಾಗಿದೆ’ ಎಂದು ಪುಟಿನ್ ಸರ್ಕಾರಿ ಮಂತ್ರಿಗಳೊಂದಿಗೆ ನಡೆಸಿದ ದೂರದರ್ಶನದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಿಳಿಸಿದರು.
"ನನ್ನ ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಈ ಲಸಿಕೆ ನೀಡಲಾಗಿದೆ’ ಎಂದು ಪುಟಿನ್ ನುಡಿದರು. ಲಸಿಕೆಯ ಅಭಿವೃದ್ಧಿಗೆ ಕೆಲಸ ಮಾಡಿದ ಎಲ್ಲರಿಗೂ ಪುಟಿನ್ ಅವರು ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಇದನ್ನು "ಜಗತ್ತಿಗೆ ಬಹಳ ಮುಖ್ಯವಾದ ಹೆಜ್ಜೆ" ಎಂದು ಬಣ್ಣಿಸಿದರು. ದೇಶದ ಸಂಶೋಧನಾ ಸಂಸ್ಥೆ ಶೀಘ್ರದಲ್ಲೇ ಕೊರೋನವೈರಸ್ ಲಸಿಕೆಯ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ ಎಂದು ಅವರು ಆಶಿಸಿದರು.
ಕೊರೊನಾವೈರಸ್ ಲಸಿಕೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ರಷ್ಯಾ ತೀವ್ರ ಶ್ರಮ ವಹಿಸಿತ್ತು ಮತ್ತು ಈ ತಿಂಗಳ ಆರಂಭದ ವಾರಗಳಲ್ಲಿ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸಲು ಮತ್ತು ಮುಂದಿನ ವರ್ಷದ ವೇಳೆಗೆ ತಿಂಗಳಿಗೆ "ಹಲವಾರು ಮಿಲಿಯನ್" ಪ್ರಮಾಣದಷ್ಟು ಲಸಿಕೆ ಉತ್ಪಾದಿಸುವ ಆಶಯ ಹೊಂದಿದೆ ಎಂದು ಪುಟಿನ್ ಹೇಳಿದರು.
ಮಾಸ್ಕೊದ ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ಲಸಿಕೆ ಅಭಿವೃದ್ಧಿ ಪಡಿಸಿವೆ. ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ.
ದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೊರೊನಾ ವೈರಸ್ ಲಸಿಕೆಯನ್ನು ಬಳಕೆಗೆ ನೋಂದಾಯಿಸಲಾಗಿದೆ ಹಾಗೂ ಒಬ್ಬಳು ಮಗಳಿಗೆ ಆಗಲೇ ಲಸಿಕೆ ನೀಡಲಾಗಿದೆ ಎಂದು ಪುಟಿನ್ ನುಡಿದರು.
ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ ೩೮ ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ. ಜೂನ್ ೧೮ರಿಂದ ಕ್ಲಿನಿಕಲ್ ಟ್ರಯಲ್‌ಗಳನ್ನು (ಮನುಷ್ಯರ ಮೇಲೆ) ಆರಂಭಿಸಲಾಗಿತ್ತು. ಪ್ರಯೋಗಕ್ಕೆ ಒಳಗಾದವರ ಪೈಕಿ ಮೊದಲ ಗುಂಪು ಜುಲೈ ೧೫ರಂದು ಸಂಶೋಧನಾ ಕೇಂದ್ರಗಳಿಂದ ಬಿಡುಗಡೆಯಾಗಿದೆ ಹಾಗೂ ಎರಡನೇ ಗುಂಪು ಜುಲೈ ೨೦ರಂದು ಮನೆಗೆ ಮರಳಿದೆ.
‘ಈ ಲಸಿಕೆಯನ್ನು ವಿವಿಧ ಹಂತಗಳ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅದರ ಸಾಮರ್ಥ್ಯ ಸಾಬೀತಾಗಿದೆ. ಲಸಿಕೆ ಪಡೆದ ವ್ಯಕ್ತಿಯ ದೇಹದಲ್ಲಿ ಪ್ರತಿಕಾಯಗಳ ಸಂಖ್ಯೆ ಹೆಚ್ಚಳವಾಗಿ, ಆ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಸಿರುವುದು ಕಂಡು ಬಂದಿದೆ’ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನುಡಿದರು.
‘ಸೆಪ್ಟೆಂಬರಿನಿಂದ ಈ ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಆರಂಭಿಸಲಾಗುವುದು. ಅಕ್ಟೋಬರಿನಲ್ಲಿ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು’ ಎಂದೂ ಪುಟಿನ್ ಹೇಳಿದರು.
ಆದರೆ, ವಿಶ್ವದ ವೈದ್ಯಕೀಯ ಸಮುದಾಯ ಮಾತ್ರ ಈ ಬಗ್ಗೆ ಸಂದೇಹ ವ್ಯಕ್ತಪಡಿಸಿದೆ. ರಷ್ಯಾ ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳು, ಲಸಿಕೆಯನ್ನು ತರಾತುರಿಯಲ್ಲಿ ಬಳಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
‘ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳ್ಳುವ ಮೊದಲೇ ಲಸಿಕೆಯನ್ನು ವ್ಯಾಪಕವಾಗಿ ಬಳಸುವುದು ಸರಿಯಲ್ಲ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಖ್ಯ ಘಟ್ಟ. ಸಾವಿರಾರು ಜನರ ಮೇಲೆ ನಡೆಯುವ ಈ ಪ್ರಯೋಗ ಪೂರ್ಣಗೊಂಡು ಫಲಿತಾಂಶ ಬರಲು ಹಲವು ತಿಂಗಳುಗಳೇ ಬೇಕು’ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕೊರೋನಾವೈರಸ್ ಸಾಂಕ್ರಾಮಿಕವು ವಿಶ್ವಾದ್ಯಂತ ಈಗಾಗಲೇ ೨೦ ಮಿಲಿಯನ್‌ಗೂ (೨ ಕೋಟಿ) ಹೆಚ್ಚು ಜನರನ್ನು ಬಾಧಿಸಿದೆ. ಸುಮಾರು ೭,೫೦,೦೦೦ ಜನರು ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕು ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಜಾಗತಿಕ ಆರ್ಥಿಕತೆಗಳನ್ನು ಕುಂಠಿತಗೊಳಿಸಿದೆ.
ಲಸಿಕೆ ಯೋಜನೆಗೆ ಹಣಕಾಸು ಒದಗಿಸುವ ರಷ್ಯಾದ ನೇರ ಹೂಡಿಕೆ ನಿಧಿಯ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್, ೩ ನೇ ಹಂತದ ಪ್ರಯೋಗಗಳು ಬುಧವಾರದಿಂದ ಪ್ರಾರಂಭವಾಗಲಿವೆ, ಕೈಗಾರಿಕಾ ಉತ್ಪಾದನೆಯನ್ನು ಸೆಪ್ಟೆಂಬರ್‌ನಿಂದ ನಿರೀಕ್ಷಿಸಲಾಗಿದೆ ಮತ್ತು ೨೦ ದೇಶಗಳು ಒಂದು ಬಿಲಿಯನ್‌ಗಿಂತ ಹೆಚ್ಚಿನ ಪ್ರಮಾಣಕ್ಕಾಗಿ ಮೊದಲೇ ಆದೇಶಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಇದಲ್ಲದೆ, ಕೋವಿಡ್ -೧೯ ಲಸಿಕೆ ಬಗ್ಗೆ ಮಾಹಿತಿ ನೀಡುವಂತೆ ಅಧ್ಯಕ್ಷರು ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಅರಿಗೆ ಮನವಿ ಮಾಡಿದ್ದಾರೆ.
ಆದಾಗ್ಯೂ, ಲಸಿಕೆಯ ನೋಂದಣಿ ಷರತ್ತುಬದ್ಧವಾಗಿದೆ ಮತ್ತು ಉತ್ಪಾದನೆ ನಡೆಯುತ್ತಿರುವಾಗ ಪ್ರಯೋಗಗಳು ಮುಂದುವರಿಯುತ್ತವೆ ಎಂದು ಮುರಾಶ್ಕೊ ಹೇಳಿದರು.
ಕೊರೋನವೈರಸ್ ವಿರುದ್ಧದ ರಷ್ಯಾದ ಮೊದಲ ಲಸಿಕೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ಬಿನ್ನೋಫಾರ್ಮ್ ಎಂಬ ಎರಡು ತಾಣಗಳಲ್ಲಿ ಉತ್ಪಾದಿಸಲು ಪ್ರಾರಂಭಿಸಲಾಗುವುದು ಎಂದು ಮುರಾಶ್ಕೊ ಹೇಳಿದರು.
"ಎರಡು ಹಂತದ ಚುಚ್ಚುಮದ್ದಿನ ಯೋಜನೆಯು ಶಾಶ್ವತವಾದ ರೋಗನಿರೋಧಕ ಶಕ್ತಿಯನ್ನು ರೂಪಿಸಲು ಸಹಾಯ ಮಾಡುತ್ತದೆ. ವೆಕ್ಟರ್ ಲಸಿಕೆಗಳು ಮತ್ತು ಎರಡು-ಹಂತದ ಯೋಜನೆಯ ಅನುಭವವು ಪ್ರತಿರಕ್ಷೆಯು ಎರಡು ವರ್ಷಗಳವರೆಗೆ ಇರುತ್ತದೆ ಎಂದು ತೋರಿಸುತ್ತz’" ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ಪ್ರಸ್ತುತ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ರಷ್ಯಾದ ಆರೋಗ್ಯ ಅಧಿಕಾರಿಗಳು ಹೊಸದಾಗಿ ಅಂಗೀಕರಿಸಿದ ಕೋವಿಡ್ -೧೯ ಲಸಿಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವಭಾವಿ ಅರ್ಹತೆ ಪಡೆಯುವ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಡಬ್ಲ್ಯುಎಚ್‌ಒ ವಕ್ತಾರರು ತಿಳಿಸಿದರು.
No comments:
Post a Comment