Friday, August 14, 2020

ಕೋವಿಡ್: ಮಾನವ ಕೇಂದ್ರಿತ ಸಹಯೋಗಕ್ಕೆ ರಾಷ್ಟ್ರಪತಿ ಕರೆ

 ಕೋವಿಡ್: ಮಾನವ ಕೇಂದ್ರಿತ ಸಹಯೋಗಕ್ಕೆ ರಾಷ್ಟ್ರಪತಿ ಕರೆ

ನವದೆಹಲಿ: ಜಗತ್ತನ್ನು ಬಾಧಿಸಿರುವ ಕೊರೋನಾ ಸಂಕಷ್ಟವನ್ನು ಎದುರಿಸಲು ಅರ್ಥ (ಹಣಕಾಸು) ಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಅತ್ಯಂತ ಮುಖ್ಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2020 ಆಗಸ್ಟ್ 14ರ ಶುಕ್ರವಾರ ಹೇಳಿದರು.

೭೪ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಪ್ರಕೃತಿಯು ಮಾನವರಿಗೆ ಆಧೀನವಾಗಿದೆ ಎಂಬ ಮಿಥ್ಯೆಯನ್ನು ಕಣ್ಣಿಗೆ ಕಾಣದ ವೈರಸ್ ಒಡೆದಿದೆ. ಪ್ರಕೃತಿಯೊಂದಿಗೆ ಸೌಹಾರ್ದವನ್ನು ಆಧರಿಸಿದ ಬದುಕಿನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಸಮರ್ಪಕ ದಾರಿಯಲ್ಲಿ ಸಾಗಲು ಮನುಷ್ಯರಿಗೆ ಈಗಲೂ ಅವಕಾಶವಿದೆ ಎಂಬುದು ನನ್ನ ನಂಬಿಕೆ ಎಂದು ನುಡಿದರು.

೨೦೨೦ನೇ ವರ್ಷದಲ್ಲಿ ನಾವೆಲ್ಲರೂ ಅತ್ಯಂತ ಮಹತ್ವದ ಪಾಠಗಳನ್ನು ಕಲಿತಿದ್ದೇವೆ. ಹವಾಮಾನ ಬದಲಾವಣೆಯಂತೆಯೇ, ವಿಶ್ವ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಹಣೆಬರಹವೂ ಪರಸ್ಪರ ಜೋಡಿಕೊಂಡಿದೆ ಎಂಬ ಪ್ರಜ್ಞೆಯನ್ನು ಸಾಂಕ್ರಾಮಿಕವು ಮೂಡಿಸಿದೆ. ಆದ್ದರಿಂದ ಹಣಕಾಸು ಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಮುಖ್ಯ ಎಂದು ನನ್ನ ನಂಬಿಕೆ ಎಂದು ಅವರು ಹೇಳಿದರು.

ಕೊರೋನಾವೈರಸ್ ವಿರುದ್ಧದ ಹೋರಾಟದ ವೇಳೆಯಲ್ಲಿ ಜೀವ ಮತ್ತು ಜೀವನ ಎರಡನ್ನೂ ರಕ್ಷಿಸುವ ಅಗತ್ಯದ ಬಗ್ಗೆ ಗಮನ ಹರಿಸುವುದು ಮುಖ್ಯ. ಹಾಲಿ ಬಿಕ್ಕಟ್ಟು, ಪ್ರತಿಯೊಬ್ಬನ ಹಿತಾಸಕ್ತಿ, ಮುಖ್ಯವಾಗಿ ರೈತರು ಮತ್ತು ಸಣ್ಣ ಉದ್ಯಮಿಗಳ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಆರ್ಥಿಕತೆಗೆ ಪುನಶ್ಚೇತನ ನೀಡುವ ಸಮರ್ಪಕ ಸುಧಾರಣೆಗಳನ್ನು ತರುವ ಅವಕಾಶವನ್ನು ಒದಗಿಸಿದೆ ಎಂದು ಕೋವಿಂದ್ ನುಡಿದರು.

ವರ್ಷದ ಸ್ವಾತಂತ್ರ್ಯ ದಿನವು ಕೋವಿಡ್-೧೯ ಉಂಟುಮಾಡಿರುವ ಹಿಂದೆಂದೂ ಕಾಣದ ಬಿಕ್ಕಟ್ಟಿನ ಮಧ್ಯೆ ಬಂದಿದೆ. ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನಸಮೂಹ ಸೇರುವುದನ್ನು ನಿವಾರಿಸಲು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಕಳೆದ ತಿಂಗಳು ಮಾರ್ಗಸೂಚಿ ಹೊರಡಿಸಿದೆ ಎಂದು ಅವರು ಹೇಳಿದರು.

೭೪ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದೇಶದ ಒಳಗೆ ಮತ್ತು ಹೊರಗಿರುವ ಭಾರತದ ಎಲ್ಲ ಜನರನ್ನು ಅಭಿನಂದಿಸಲು ನನಗೆ ಅತ್ಯಂತ ಸಂತಸವಾಗುತ್ತದೆ. ಸ್ವತಂತ್ರ ರಾಷ್ಟ್ರದ ಪ್ರಜೆಗಳಾಗಿರುವುದಕ್ಕೆ ಯುವ ಭಾರತವು ವಿಶೇಷವಾಗಿ ಹೆಮ್ಮೆ ಪಡಬೇಕು ಎಂದು ಅವರು ನುಡಿದರು.

ಮಹಾತ್ಮ ಗಾಂಧಿಯವರು ನಮ್ಮ ಸ್ವಾತಂತ್ರ್ಯ ಚಳವಳಿಯ ಮಾರ್ಗದರ್ಶಿ ಬೆಳಕಾಗಿದ್ದರು ಎಂಬುದು ನಮ್ಮ ಅದೃಷ್ಟ. ಸಮಾನತೆ ಮತ್ತು ನ್ಯಾಯಕ್ಕಾಗಿ ಅವರಿಗೆ ಇದ್ದ ಆಸ್ಥೆ ನಮ್ಮ ಗಣರಾಜ್ಯದ ಮಂತ್ರವಾಗಿದೆ. ಗಾಂಧೀಜಿಯವರನ್ನು ಪುನಃ ಕಂಡುಕೊಳ್ಳುತ್ತಿರುವ ಯುವ ತಲೆಮಾರನ್ನು ನೋಡಲು ನನಗೆ ಸಂತಸವಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದರು.

ಅತ್ಯಂತ ಜನ ನಿಬಿಡವಾಗಿರುವ ನಮ್ಮ ವಿಶಾಲವಾದ ದೇಶದಲ್ಲಿ ವಿವಿಧ ಸಂದರ್ಭಗಳ ನಡುವೆ ಸಾಂಕ್ರಾಮಿಕದ ಮುಂದಿಟ್ಟಿರುವ ಸವಾಲು ಎದುರಿಸಲು ಅಸಾಧಾರಣ ಯತ್ನಗಳು ನಮಗೆ ಬಲನೀಡಿವೆ. ರಾಜ್ಯ ಸರ್ಕಾರಗಳು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾರ್ ನಿರ್ವಹಿಸುತ್ತಿದ್ದರೆ, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಕೋವಿಂದ್ ನುಡಿದರು.

ಸಾಂಕ್ರಾಮಿಕದ ಬಲವಾದ ಪೆಟ್ಟು ಬಡವರು, ದಿನಗೂಲಿ ಕಾರ್ಮಿಕರ ಮೇಲೆ ಬಿದ್ದಿದೆ. ಬಿಕ್ಕಟ್ಟಿನ ಯುಗದಲ್ಲಿ ಸಾಂಕ್ರಾಮಿಕವನ್ನು ತಡೆಯುವ ಯತ್ನಗಳ ಜೊತೆಗೇ ಹಲವಾರು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನಾ ಜಾರಿಯ ಮೂಲಕ ಸಾಂಕ್ರಾಮಿಕದ ಪರಿಣಾಮವಾಗಿ ಉದ್ಯೋಗ ಕಳೆದುಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುತ್ತಿರುವ, ಬದುಕು ಅಸ್ತವ್ಯಸ್ತಗೊಂಡಿರುವವರ ನೋವು ತಗ್ಗಿಸಲು ಯತ್ನಿಸುವ ಮೂಲಕ ಕೋಟ್ಯಂತರ ಜನರಿಗೆ ಸರ್ಕಾರವು ಬದುಕು ಕಲ್ಪಿಸಿದೆ ಎಂದು ರಾಷ್ಟ್ರಪತಿ ನುಡಿದರು.


ಯಾವುದೇ ಕುಟುಂಬವೂ ಹಸಿವಿನಿಂದ ನರಳಬಾರದು ಎಂಬ ಕಾರಣಕ್ಕಾಗಿ ಅಗತ್ಯವುಳ್ಳ ಜನರಿಗೆ ಉಚಿತ ಧಾನ್ಯ ನೀಡಲಾಗುತ್ತಿದೆ. ಪ್ರತಿ ತಿಂಗಳೂ ಸುಮಾರು ೮೦ ಕೋಟಿ ಜನರಿಗೆ ಅಭಿಯಾನದ ಮೂಲಕ ಪಡಿತರ ಖಾತರಿ ನೀಡಲಾಗಿದೆ ಎಂದು ಕೋವಿಂದ್ ವಿವರಿಸಿದರು.

ಸಾಂಕ್ರಾಮಿಕದ ಪರಿಣಾಮವಾಗಿ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡ ಜಗತ್ತಿನ ಯಾವುದೇ ಮೂಲೆಯಲ್ಲಿರುವ ನಮ್ಮ ಜನರ ನೆರವಿಗಾಗಿ ಸರ್ಕಾರ ವಂದೇ ಭಾರತ ಮಿಷನ್ ಮೂಲಕ ನೆರವಾಗುತ್ತಿದ್ದು ಅಂತಹ ಲಕ್ಷಾಂತರ ಭಾರತೀಯರನ್ನು ತಾಯ್ನಾಡಿಗೆ ಮರಳಿ ಕರೆತರಲಾಗಿದೆ ಎಂದು ಅವರು ಹೇಳಿದರು.

ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ದಿಟ್ಟ ಯೋಧರು ಕಾರ್ಯದಲ್ಲಿ ಪ್ರಾಣಾರ್ಪಣೆ ಮಾಡುತ್ತಿದ್ದಾರೆ. ಭಾರತ ಮಾತೆಯ ಮಕ್ಕಳು ರಾಷ್ಟ್ರದ ಗೌರವಕ್ಕಾಗಿ ಬದುಕುತ್ತಿದ್ದಾರೆ ಮತ್ತು ಹುತಾತ್ಮರಾಗುತ್ತಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಬಲಿದಾಕ್ಕಾಗಿ ಇಡೀ ರಾಷ್ಟ್ರವೇ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಅವರ ಕುಟುಂಬ ಸದಸ್ಯರ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಕೃತಜ್ಞತೆಯ ಭಾವನೆ ಹೊಂದಿದ್ದಾರೆ ಎಂದು ಕೋವಿಂದ್ ನುಡಿದರು.

ಭಾರತದ ಸ್ವಾವಲಂಬನೆ ಎಂದರೆ ಸ್ವಾವಲಂಬಿಯಾಗಲು ಸಮರ್ಥವಾಗುವುದು, ವಿಶ್ವದಿಂದ ಬೇರ್ಪಡುವುದು ಅಥವಾ ಅಂತರ ನಿರ್ಮಿಸುವುದು ಎಂದಲ್ಲ. ಜಾಗತಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಭಾರತವು ಪಾಲ್ಗೊಳ್ಳುವುದು ಮತ್ತು ಅಲ್ಲಿ ತನ್ನ ವಿಶಿಷ್ಟ ಗುರುತನ್ನು ಉಳಿಸಿಕೊಳ್ಳುವುದು ಕೂಡಾ ಸ್ವಾವಲಂಬನೆಯ ಅರ್ಥವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.

No comments:

Advertisement