ಗೆಹ್ಲೋಟ್ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ
ಜೈಪುರ: ಸಚಿನ್ ಪೈಲಟ್ ಮತ್ತು ಬೆಂಬಲಿಗರ ಬಂಡಾಯ ಶಮನದೊಂದಿಗೆ ನಿರಾಳತೆಯ ಉಸಿರೆಳೆದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಸರ್ಕಾರದ ವಿರುದ್ಧ ಇನ್ನೊಂದು ಬಿರುಗಾಳಿ ಏಳುತ್ತಿದ್ದು, ಗೆಹ್ಲೋಟ್ ಸರ್ಕಾರದ ವಿರುದ್ಧ ಆಗಸ್ಟ್ ೧೪ರಂದು ವಿಧಾನಸಭಾ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ಬಿಜೆಪಿ 2020 ಆಗಸ್ಟ್ 13ರ ಗುರುವಾರ ತೀರ್ಮಾನಿಸಿತು.
ಬಿಜೆಪಿ ಶಾಸಕಾಂಗ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ಪ್ರಕಟಿಸಿದರು.
ಸಭೆಯ ನಂತರ, ಸುದ್ದಿಗಾರರ ಜೊತೆ ಮಾತನಾಡಿದ ಕಟಾರಿಯಾ ’ಶುಕ್ರವಾರದಿಂದ ಪ್ರಾರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗುವುದು. ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗುತ್ತಿದೆ’ ಎಂದು ಹೇಳಿದರು.
"ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಎಸ್ಒಜಿಯಿಂದ (ವಿಶೇಷ ಕಾರ್ಯಾಚರಣೆ ಗುಂಪು) ಯಿಂದ ಬಂಧಿಸಲ್ಪಟ್ಟವರಿಗೆ ಬಿಜೆಪಿ ಸಂಪರ್ಕವಿದೆ ಎಂದು ಹುಯಿಲು ಎಬ್ಬಿಸುವ ಪ್ರಯತ್ನಗಳು ನಡೆದವು. ಆದರೆ ಸರ್ಕಾರ ವಿಫಲವಾಗಿದೆ. ಈ ಎಲ್ಲ ವಿಷಯಗಳನ್ನು ನಾವು ಗೊತ್ತುವಳಿ ಚರ್ಚೆ ವೇಳೆ ಉಲ್ಲೇಖಿಸುತ್ತೇವೆ’ ಎಂದು ಕಟಾರಿಯಾ ನುಡಿದರು.
ಕಾಂಗ್ರೆಸ್ ಪಕ್ಷದ ರಾಜಕೀಯ ಬಿಕ್ಕಟ್ಟು ಬಗೆಹರಿದಿದ್ದರೂ, ಆ ಪಕ್ಷದಲ್ಲಿ "ಒಬ್ಬರು ಪೂರ್ವಕ್ಕೆ ಮತ್ತು ಇನ್ನೊಬ್ಬರು ಪಶ್ಚಿಮಕ್ಕೆ’ ಹೋಗುತ್ತಿದ್ದಾರೆ. ಎಲ್ಲವೂ ಇನ್ನೂ ಬಗೆಹರಿದಿಲ್ಲ ಎಂದು ಅವರು ಹೇಳಿದರು. ಶುಕ್ರವಾರ ಗೊತ್ತುವಳಿಯನ್ನು ಮಂಡಿಸಲಾಗುವುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನೈ ಹೇಳಿದರು.
ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾಗಿರುವ ರಾಷ್ಟ್ರ ಲೋಕತಾಂತ್ರಿಕ ಪಕ್ಷ (ಆರ್ಎಲ್ಪಿ) ಒಟ್ಟು ೭೫ ಶಾಸಕರನ್ನು ಹೊಂದಿದ್ದು, ಅವರಲ್ಲಿ ೭೪ ಮಂದಿ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಶಾಸಕಾಂಗ ಸಭೆಯಲ್ಲಿ ಹಾಜರಿದ್ದರು ಎಂದು ಅವರು ಹೇಳಿದರು.
ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಕೂಡ ಉಪಸ್ಥಿತರಿದ್ದರು ಮತ್ತು ಕೃಷಿ ಸಂಬಂಧಿತ ವಿಷಯಗಳ ಬಗ್ಗೆ ಮಾತನಾಡಿದರು.
ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯ ಸರ್ಕಾರ "ವಿರೋಧಾಭಾಸಗಳ ಸರ್ಕಾರ" ಎಂದು ಪೂನಿಯಾ ಆರೋಪಿಸಿದರು. ಆರು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಶಾಸಕರನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸುವುದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿರುವ ಬಿಜೆಪಿ ಶಾಸಕ ಮದನ್ ದಿಲಾವರ್, ರಾಜಸ್ಥಾನ ಸರ್ಕಾರ "ಕೋಮಾ ಸ್ಥಿತಿಗೆ" ಹೋಗಿದೆ. ಆದ್ದರಿಂದ ವಿರೋಧ ಪಕ್ಷವು ಯಾವುದೇ ಕ್ರಮವನ್ನು ಕೈಗೊಳ್ಳಬೇಕಾಗಿಲ್ಲ ಎಂದು ಹೇಳಿದರು.
"ಈ ಸರ್ಕಾರ ಅಸ್ಥಿರವಾಗಿದೆ ಮತ್ತು ಜನರ ಕೆಲಸಗಳು ನಡೆಯುತ್ತಿಲ್ಲ. ನಾವು ಈಗಾಗಲೇ ಅವಿಶ್ವಾಸ ನಿರ್ಣಯ ಮಂಡನೆಗೆ ನಮ್ಮ ಸಿದ್ಧತೆಗಳನ್ನು ನಡೆಸಿದ್ದೇವೆ. ಆದರೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಅದನ್ನು ಈದಿನದ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ" ಎಂದು ಅವರು ಹೇಳಿದರು.
ಎಲ್ಲಾ ೭೫ ಬಿಜೆಪಿ ಮತ್ತು ಆರ್ಎಲ್ಪಿ ಶಾಸಕರು ಈ ನಿರ್ಣಯವನ್ನು ಬೆಂಬಲಿಸುತ್ತಾರೆ ಎಂದು ದಿಲಾವರ್ ಹೇಳಿದರು.
ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ರಾಜ್ಯ ಉಸ್ತುವಾರಿ ಅವಿನಾಶ್ ಖನ್ನಾ ಮತ್ತು ಇತರ ಹಿರಿಯ ಮುಖಂಡರು ಉಪಸ್ಥಿತರಿದ್ದರು. ರಾಜಸ್ಥಾನದಲ್ಲಿ ಸುಮಾರು ಒಂದು ತಿಂಗಳ ಕಾಲ ರಾಜಕೀಯ ಬಿಕ್ಕಟ್ಟು ಇತ್ಯರ್ಥಗೊಳಿಸುವ "ಸೌಹಾರ್ದಯುತ ನಿರ್ಣಯ" ದ ನಂತರ ವಿರೋಧ ಪಕ್ಷವು ಅವಿಶ್ವಾಸ ನಿರ್ಣಯ ಮಂಡನೆಯ ನಿರ್ಧಾರಕ್ಕೆ ಬಂದಿದೆ.
ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಮತ್ತು ಪಕ್ಷದ ಇತರ ೧೮ ಶಾಸಕರು ಕಳೆದ ತಿಂಗಳು ಮುಖ್ಯಮಂತ್ರಿ ಗೆಹ್ಲೋಟ್ ವಿರುದ್ಧ ಬಹಿರಂಗವಾಗಿ ಬಂಡಾಯ ಎದ್ದಿದ್ದರು. ನಂತರ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಮತ್ತು ಪಕ್ಷದ ರಾಜಸ್ಥಾನ ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಲಾಗಿತ್ತು.
ರಾಜಸ್ಥಾನದ ಬಿಕ್ಕಟ್ಟು "ಮುಗಿದ ಅಧ್ಯಾಯವಾಗಿದ್ದು" ಎಲ್ಲ ಶಾಸಕರು ತಮ್ಮ ಸರ್ಕಾರವನ್ನು ಬೆಂಬಲಿಸುವರು ಹಾಗೂ ಕೋವಿಡ್-೧೯ ಮತ್ತಿತರ ಆರ್ಥಿಕ ವಿಪತ್ತುಗಳ ವಿರುದ್ಧದ ಹೋರಾಟಕ್ಕೆ ಬಲ ನೀಡುವರು ಎಂದು ಕಾಂಗ್ರೆಸ್ ಹೇಳಿದೆ.
No comments:
Post a Comment