ಲಡಾಖ್‌ಗೆ ಹೊಸ ಸರ್ವ
ಋತು ಮಾರ್ಗ: ಭಾರತ ಕ್ರಮ
ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಘರ್ಷಣೆಯ ಹಿನ್ನೆಲೆಯಲ್ಲಿ ಲಡಾಖ್ ತಲುಪಲು ಸರ್ವ ಋತು ಮಾರ್ಗ ರಚನೆಯನ್ನು ಪೂರ್ಣಗೊಳಿಸಲು ಭಾರತದ ರಾಷ್ಟ್ರೀಯ ಭದ್ರತಾ ಯೋಜಕರು ಶ್ರಮಿಸುತ್ತಿದ್ದಾರೆ. ಇದು ಹಿಮಾಚಲ ಪ್ರದೇಶದ ದಾರ್ಚಾವನ್ನು ಕಾರ್ಗಿಲ್‌ನ ಝನ್ಸ್ಕರ್ ಕಣಿವೆಯ ಪಡುಮ್ ಮೂಲಕ ನಿಮುವಿಗೆ ಸಂಪರ್ಕಿಸುತ್ತದೆ ಎಂದು ವರದಿಗಳು 2020 ಆಗಸ್ಟ್ 25ರ ಮಂಗಳವಾರ ತಿಳಿಸಿದವು.
ನಿಮು ಲೇಹ್ ಪಟ್ಟಣದಿಂದ ೩೫ ಕಿಲೋಮೀಟರ್ ದೂರದಲ್ಲಿದೆ ಮತ್ತು ಪೂರ್ವ ಲಡಾಕ್ ಮತ್ತು ಸಿಯಾಚಿನ್ ಹಿಮನದಿಯ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿರುವ ೧೪ ಕೋರ್‌ನ ಪ್ರಧಾನ ಕಚೇರಿಯನ್ನು ಹೊಂದಿದೆ.
ಈ ಮಾರ್ಗವು ಈಗಾಗಲೇ ಇತರ ಎರಡು ಮಾರ್ಗಗಳಿಂದ ಸಂಪರ್ಕ ಹೊಂದಿದ ಲಡಾಖ್‌ಗೆ ಮೊತ್ತ ಮೊದಲ ಸರ್ವ ಋತು ಮಾರ್ಗವಾಗಿದೆ. ಮೊದಲನೆಯದು ಜಮ್ಮು ಮತ್ತು ಕಾಶ್ಮೀರದ ಜೊಜಿ ಲಾ ಮೂಲಕ ಇರುವ ಮಾರ್ಗವಾದರೆ, ಎರಡನೆಯದು ಹಿಮಾಚಲದ ಮನಾಲಿ-ಉಪಶಿ-ಲೇಹ್ ಅಕ್ಷದ ಮೂಲಕ ಸಾಗುವ ಮಾರ್ಗವಾಗಿದೆ. ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು ೪೬ ಕಿ.ಮೀ ಕಡಿಮೆ ಮಾಡುವ ರೋಹ್ಟಾಂಗ್ ಲಾದಲ್ಲಿರುವ ೯.೦೨ ಕಿಲೋಮೀಟರ್ ಅಟಲ್ ಸುರಂಗವು ಮುಂದಿನ ತಿಂಗಳು ಕಾರ್‍ಯಾಚರಣೆಗೆ ಲಭ್ಯವಾಗಲಿದೆ.
ಪಾಕಿಸ್ತಾನ ಮತ್ತು ಅದರ ಸರ್ವಋತು ಸ್ನೇಹಿತ ಚೀನಾವು ಸಿಯಾಚಿನ್ ಹಿಮನದಿ ಮತ್ತು ದೌಲತ್ ಬೇಗ್ ಓಲ್ಡಿ ಮೇಲೆ ಹೇಗೆ ಕಣ್ಣಿಟ್ಟಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಲಡಾಖ್‌ನ್ನು ಸಂಪರ್ಕಿಸಲು ಮೂರನೆಯ ಮಾರ್ಗವನ್ನು ತುರ್ತಾಗಿ ರಚಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಮಿಲಿಟರಿ ಕಮಾಂಡರುಗಳು ತಿಳಿಸಿದ್ದಾರೆ.
ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾ ಜೊತೆಗೆ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಸೇನೆ ಜಮಾವಣೆ ಆರಂಭಿಸಿದ ಬಳಿಕ ರಕ್ಷಣಾ ಸಚಿವಾಲಯದ ರಸ್ತೆ ಯೋಜನೆಗೆ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮತ್ತು ಅವರ ಸಹೋದ್ಯೋಗಿ ಜನರಲ್ ವಿಕೆ ಸಿಂಗ್ ಒತ್ತು ನೀಡುತ್ತಿದ್ದಾರೆ. ಸೇನೆ ವಾಪಸಾತಿ ಸಂಬಂಧ ಮಾತುಕತೆ ನಡೆಸುತ್ತಿದ್ದರೂ, ಸೈನಿಕರನ್ನು ಹಿಂಪಡೆಯಲು ಚೀನಾವು ಹಿಂಜರಿಯುತ್ತಿರುವುದನ್ನೂ ಭಾರತ ಗಮನದಲ್ಲಿ ಇಟ್ಟುಕೊಂಡಿದೆ.
ಮೂರನೇ ಮಾರ್ಗದಲ್ಲಿ ಡಾರ್ಚಾ-ಪಡುಮ್-ನಿಮು ಚಾರಣ ಮಾರ್ಗವನ್ನು ಮೆಟಲ್ಡ್ ರಸ್ತೆಯಾಗಿ ನವೀಕರಿಸುವ ಮತ್ತು ಮತ್ತು ಡಾರ್ಚಾ-ಪಾಡುಮ್ ಮಾರ್ಗದಲ್ಲಿ ಶಿಂಗೊ ಲಾ ಅಡಿಯಲ್ಲಿ ೪.೫ ಕಿಲೋಮೀಟರ್ ಸುರಂಗವನ್ನು ನಿರ್ಮಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ದಶಕದಿಂದ ನೆನೆಗುದಿಯಲ್ಲಿದ್ದ ಈ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.
ಯೋಜನೆಯು ತನ್ನ ಎರಡು ವರ್ಷಗಳ ಗಡುವನ್ನು ಪೂರೈಸುವುದನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ ರೋಹ್ಟಾಂಗ್ ಲಾದಲ್ಲಿ ೯.೦೨ ಕಿ.ಮೀ ಸುರಂಗವನ್ನು ನಿರ್ಮಿಸಿದ ಕಂಪನಿಗೆ ಕಾಲಮಿತಿಯಲ್ಲಿ ಪೂರೈಸುವ ಷರತ್ತಿನ ಮೇಲೆ ಸುರಂಗವನ್ನು ನಿರ್ಮಿಸುವ ಕೆಲಸವನ್ನು ನೀಡಬೇಕೆಂದು ಗಡ್ಕರಿ ಅವರ ಸಚಿವಾಲಯವು ಪ್ರಸ್ತಾಪಿಸಿದೆ.
ಮಿಲಿಟರಿ ಕಮಾಂಡರ್‌ಗಳ ಪ್ರಕಾರ, ವರ್ಷಪೂರ್ತಿ ರಸ್ತೆಯನ್ನು ಮುಕ್ತವಾಗಿ ಇಡಬೇಕಾದರೆ ಈಗಿರುವ ಮನಾಲಿ-ಲೇ ಮಾರ್ಗದಲ್ಲಿ ಇನ್ನೂ ನಾಲ್ಕು ಎತ್ತರದ ಪರ್ವತ ಮಾರ್ಗಗಳ ಅಡಿಯಲ್ಲಿ ಸುರಂಗ ಮಾರ್ಗದ ಅಗತ್ಯವಿದೆ. ಈ ಮಾರ್ಗದಲ್ಲಿ ರೋಹ್ಟಾಂಗ್ ಲಾದಲ್ಲಿರುವ ಅಟಲ್ ಸುರಂಗವನ್ನು ೧೦,೧೭೧ ಅಡಿ ಎತ್ತರದಲ್ಲಿ ನಿರ್ಮಿಸಲಾಗಿz. ಇದು ಇಷ್ಟೊಂದು ಎತ್ತರದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತ್ಯಂತ ಉದ್ದವಾದ ಸುರಂಗವಾಗಿದೆ.
ಅಸ್ತಿತ್ವದಲ್ಲಿರುವ ಮನಾಲಿ-ಲೇ ಮಾರ್ಗದಲ್ಲಿ ಸುರಂಗಗಳ ಅಗತ್ಯವಿರುವ ನಾಲ್ಕು ಪಾಸ್‌ಗಳು ಅತ್ಯಂತ ಎತ್ತರದಲ್ಲಿವೆ: ಬಾರಾಲಾಚಾ ಲಾ (೧೬,೫೦೦ ಅಡಿ), ನಕೀ ಲಾ (೧೫,೫೪೭ ಅಡಿ), ಲಾಚುಂಗ್ ಲಾ (೧೬,೬೧೬ ಅಡಿ), ಮತ್ತು ಟ್ಯಾಂಗ್ಲಾಂಗ್ ಲಾ (೧೭,೪೮೦ ಅಡಿ). ಈ ಕಣಿವೆಗಳು ಮೇ ಮಧ್ಯದಿಂದ ನವೆಂಬರ್ ಮಧ್ಯದ ನಡುವಿನ ಸಂಚಾರಕ್ಕೆ ಮಾತ್ರ ತೆರೆದಿರುತ್ತವೆ ಮತ್ತು ವರ್ಷದ ಇತರ ಸಮಯದಲ್ಲಿ ಇದು ಸಂಪೂರ್ಣವಾಗಿ ಹಿಮಾವೃತವಾಗಿರುತ್ತವೆ.
ಏನಿದ್ದರೂ, ಡಾರ್ಚಾ-ಪಡುಮ್-ನಿಮು ಮಾರ್ಗವು ಡಾರ್ಚಾ ಮತ್ತು ಪಡುಮ್ ನಡುವಿನ ೧೬,೫೭೦ ಅಡಿ ಶಿಂಗೊ ಲಾ ಮೂಲಕ ಸಾಗಲು ಕೇವಲ ೪.೫ ಕಿ.ಮೀ ಸುರಂಗದ ಅಗತ್ಯವಿರುತ್ತದೆ, ಚಳಿಗಾಲದಲ್ಲಿ ಕೇವಲ ಎರಡು ತಿಂಗಳು ಮಾತ್ರ ರಸ್ತೆಯನ್ನು ಮುಚ್ಚಬೇಕಾಗುತ್ತದೆ. ಡಾರ್ಚಾವು ಮನಾಲಿಯಿಂದ ೧೪೭ ಕಿಲೋಮೀಟರ್ ದೂರದಲ್ಲಿದೆ ಮತ್ತು ಲೆಹ್ ಹೆದ್ದಾರಿಯಲ್ಲಿ ಜಿಸ್ಪಾ ಮತ್ತು ಕೀಲಾಂಗ್ ನಂತರ ಇದೆ.
೨೩೦ ಕಿ.ಮೀ ಉದ್ದದ ಸಿಂಗಲ್ ಲೇನ್ ರಸ್ತೆಯ ಮೂಲಕ ಕಾರ್ಗಿಲ್‌ಗೆ ಸಂಪರ್ಕ ಹೊಂದಿದ ಝನ್ಸ್ಕರ್ ಉಪವಿಭಾಗ ಪಟ್ಟಣದೊಂದಿಗೆ ಡಾರ್ಚಾ ಮತ್ತು ಪಡುಮ್ ನಡುವಿನ ಅಂತರವು ಸುಮಾರು ೧೪೮ ಕಿಲೋಮೀಟರಿನಷ್ಟು ಇದೆ. ಲಡಾಖ್‌ನ ೧೪ ಕೋರ್ ಕೇಂದ್ರ ಕಚೇರಿಯಾದ ಪಡುಮ್ ಮತ್ತು ನಿಮು ನಡುವೆ ಇನ್ನೊಂದು ೨೬೦ ಕಿ.ಮೀ ರಸ್ತೆಯ ಕಾಮಗಾರಿಗಳೊಂದಿಗೆ ದಾರ್ಚಾ-ಪಡುಮ್ ರಸ್ತೆಯನ್ನು ನಿರ್ಮಿಸುವ ಕೆಲಸ ಈಗಾಗಲೇ ನಡೆಯುತ್ತಿದೆ.
“ನಾವು ಲಮಾಯೂರು ಮಠದ ಸುತ್ತಲಿನ ಲೇಹ್-ಕಾರ್ಗಿಲ್ ಹೆದ್ದಾರಿಯನ್ನು ವಿಭಜಿಸುವ ಮತ್ತು ದರ್ಚಾವನ್ನು ಪಡುಮ್ ಮೂಲಕ ಸಂಪರ್ಕಿಸುವ ರಸ್ತೆಯನ್ನು ನಿರ್ಮಿಸಲು ನೋಡುತ್ತಿದ್ದೇವೆ. ಈ ರಸ್ತೆಯು ಭಾರತೀಯ ಮಿಲಿಟರಿ ಮತ್ತು ಸ್ಥಳೀಯ ಜನರಿಗೆ ವರ್ಷಪೂರ್ತಿ ಸರಬರಾಜುಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಮಾಜಿ ಸೇನಾ ಮುಖ್ಯಸ್ಥರು ಹೇಳಿದರು.
ಸಿಯಾಚಿನ್, ಕಾರ್ಗಿಲ್ ಮತ್ತು ಡಿಬಿಒ ಕ್ಷೇತ್ರಗಳಿಗೆ ಮಿಲಿಟರಿ ಕಾವಲುಗಾರರಿಗೆ ಸರಬರಾಜು ಮಾರ್ಗಗಳನ್ನು ಮುಕ್ತವಾಗಿರಿಸುವುದರ ಹೊರತಾಗಿ, ಡಾರ್ಚಾ-ನಿಮು ಮಾರ್ಗವು ತನ್ನ ಜನರ ಆಕಾಂಕ್ಷೆಗಳಿಗೆ ಸರಿಹೊಂದುವಂತೆ ನೂತನ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ
ನೆರವಾಗಲಿದೆ.
No comments:
Post a Comment