ರಾಮಮಂದಿರಕ್ಕೆ ಪ್ರಧಾನಿ ಶಿಲಾನ್ಯಾಸ:
ಸುವರ್ಣ
ಅಧ್ಯಾಯಕ್ಕೆ
ನಾಂದಿ
ಅಯೋಧ್ಯಾ: ಬೆಳ್ಳಿಯ ಇಟ್ಟಿಗೆಗಳನ್ನು ಶಾಸ್ತ್ರೋಕ್ತವಾಗಿ ಪೂಜಿಸುವ ಮೂಲಕ ಇಲ್ಲಿನ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 2020 ಆಗಸ್ಟ್ 05ರ ಬುಧವಾರ ಅಡಿಪಾಯ ಹಾಕಿದ ಪ್ರಧಾನಿ ನರೇಂದ್ರ ಮೋದಿ ಅವರು ’ಆಗಸ್ಟ್ 05 ಭಾರತದ ಇತಿಹಾಸದಲ್ಲಿ ‘ಸುವರ್ಣ ದಿನ’ ಎಂದು ಘೋಷಿಸಿದರು.
ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಅಭಿಜಿನ್ ಮುಹೂರ್ತ, ಭೂಮಿ ಕರಣ, ಶತಭಿಷ ನಕ್ಷತ್ರದಲ್ಲಿ ಭೂಮಿಪೂಜೆ ನೆರವೇರಿತು. ಶಿಲಾನ್ಯಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು ೨೨.೬ ಕೆಜಿ ತೂಕದ ಐದು ಇಟ್ಟಿಗೆಗಳನ್ನು ಬಳಸಿದರು.
ವೇದಘೋಷಗಳ ಮಧ್ಯೆ ಸಂಭ್ರಮೋತ್ಸಾಹದೊಂದಿಗೆ ನಡೆದ ಸರಳ ಸಮಾರಂಭದಲ್ಲಿ ಪ್ರಧಾನಿಯವರು ಐದು ಬೆಳ್ಳಿಯ ಇಟ್ಟಿಗೆ ಮತ್ತು ಭೂಮಿ ಅಗೆಯುವ ಸಲಕರಣೆಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಭೂಮಿ ಪೂಜೆಯ ಕೊನೆಗೆ ದೇಶದ ಸರ್ವಜನರೂ ಕೊರೋನಾವೈರಸ್ ಸಾಂಕ್ರಾಮಿಕದಿಂದ ಮುಕ್ತರಾಗಲಿ’ ಎಂದೂ ಪ್ರಾರ್ಥಿಸಿದರು.
’ಶತಮಾನಗಳ ಕಾಯುವಿಕೆ ಕೊನೆಗೊಳ್ಳುತ್ತಿದೆ. ಈ ದಿನದೊಂದಿಗೆ ಭಾರತದ ಇತಿಹಾಸದ ಹೊಸ ಅಧ್ಯಾಯ ಆರಂಭಗೊಳ್ಳುತ್ತಿದೆ.. ಕೆಡಹುವ ಮತ್ತು ಕಟ್ಟುವ ಪ್ರಕ್ರಿಯೆಯಿಂದ ರಾಮ ಮುಕ್ತನಾಗಲಿದ್ದಾನೆ’
ಎಂದು ಪ್ರಧಾನಿ ಭೂಮಿ ಪೂಜೆಯ ಬಳಿಕ ನಡೆದ ಸಮಾರಂಭದಲ್ಲಿ ಹೇಳಿದರು.
ರಾಮಮಂದಿರ ಆಂದೋಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ೯೨ರ ಹರೆಯದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಪಕ್ಷದ ಹಿರಿಯ ನಾಯಕ ೮೬ರ ಹರೆಯದ ಮುರಳಿ ಮನೋಹರ ಜೋಶಿ ಅವರು ತಮ್ಮ ಮನೆಗಳಿಂದಲೇ ನೇರ ಪ್ರಸಾರವನ್ನು ವೀಕ್ಷಿಸಿ ಸಮಾರಂಭವನ್ನು ಕಣ್ತುಂಬಿಕೊಂಡರು. ಕೊರೊನಾವೈರಸ್ ಸೋಂಕಿದ ಹಿನ್ನೆಲೆಯಲ್ಲಿ ಗುರುಗ್ರಾಮದ ಆಸ್ಪತ್ರೆಗೆ ದಾಖಲಾಗಿರುವ ಗೃಹ ಸಚಿವ ಅಮಿತ್ ಶಾ ಅವರು ಆಸ್ಪತ್ರೆಯಲ್ಲಿನ ತಮ್ಮ ಹಾಸಿಗೆಯಿಂದಲ್ಲೇ ಸಮಾರಂಭಕ್ಕೆ ಸಾಕ್ಷಿಯಾದರು.
ಸಾಂಪ್ರದಾಯಿಕ ಸ್ವರ್ಣಬಣ್ಣದ ಕುರ್ತಾ ಮತ್ತು ಬಿಳಿಯ ಧೋತಿ ಉಟ್ಟುಕೊಂಡು ಮುಖಗವಸು (ಮಾಸ್ಕ್) ಧರಿಸಿಕೊಂಡೇ ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೆಲವೇ ಕೆಲವು ಅಂಗರಕ್ಷಕರೊಂದಿಗೆ ಮೊದಲು ಹನುಮಾನ್ ಗರ್ಹಿಗೆ ತೆರಳಿ ಮುಖ್ಯಪ್ರಾಣನಿಗೆ ಪೂಜೆ ಲ್ಲಿಸಿದರು. ಬಳಿಕ ರಾಮಲಲ್ಲಾ (ಬಾಲರಾಮ) ವಿಗ್ರಹವನ್ನು ಇರಿಸಲಾಗಿರುವ ’ಬಾಲಾಲಯ’ಕ್ಕೆ ತೆರಳಿ ಬಾಲರಾಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಹೂ ಹಾರ, ಬಿಡಿ ಹೂ ಇರಿಸಿ ಆರತಿ ಬೆಳಗಿದರು.
ಭೂಮಿ ಪೂಜೆಯ ಬಳಿಕ ನಡೆದ ಸಮಾರಂಭದಲ್ಲಿ ‘ಜೈ ಸಿಯಾ ರಾಮ್’ ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಮೋದಿ, ಆಗಸ್ಟ್ ೫ರ ಈ ದಿನವನ್ನು ಸ್ವಾತಂತ್ರ್ಯ ದಿನವಾದ ಆಗಸ್ಟ್ ೧೫ರ ದಿನಕ್ಕೆ ಹೋಲಿಸಿದರು.
‘ಅನೇಕ ತಲೆಮಾರುಗಳು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಎಲ್ಲವನ್ನೂ ತ್ಯಾಗ ಮಾಡಿವೆ. ಆಗಸ್ಟ್ ೧೫ ಲಕ್ಷಾಂತರ ಜನರು ಮಾಡಿದ ತ್ಯಾಗಕ್ಕೆ ಸಾಕ್ಷಿಯಾಗಿದ್ದರೆ, ರಾಮ ಮಂದಿರವು ಶತಮಾನಗಳ ಹೋರಾಟಕ್ಕೆ ಸಾಕ್ಷಿಯಾಗಿದೆ’ ಎಂದು ಪ್ರಧಾನಿ ಹೇಳಿದರು.
"ಭಾರತವನ್ನು ಮುಕ್ತಗೊಳಿಸಲು ಸಮಾಜದ ಎಲ್ಲಾ ವರ್ಗದ ಜನರು ಮಹಾತ್ಮ ಗಾಂಧಿಯವರ ಹಿಂದೆ ಒಟ್ಟುಗೂಡಿದಂತೆಯೇ, ಸಾಮಾಜಿಕವಾಗಿ ಹಿಂದುಳಿದವರು, ದಲಿತರು, ಆದಿವಾಸಿಗಳು, ಪ್ರತಿಯೊಂದು ವರ್ಗವೂ ರಾಮಮಂದಿರಕ್ಕೆ ಅಡಿಪಾಯ ಹಾಕಲು ನೆರವಾಗಿದೆ’ ಎಂದು ಪ್ರಧಾನಿ ನುಡಿದರು.
ರಾಮ ಜನ್ಮಭೂಮಿ ಇಂದು ಮುಕ್ತವಾಗಿದೆ. ಎಲ್ಲಿ ಕೆಡವಲಾಗಿತ್ತೋ ಅಲ್ಲೇ ಮಂದಿರ ಮೇಲೆದ್ದು ನಿಲ್ಲಲಿದೆ, ಜೈ ಶ್ರೀರಾಮ್ ಎಂದು ಮೋದಿ ಹೇಳಿದರು.
‘ಪ್ರಭು ರಾಮಚಂದ್ರ ಮತ್ತು ಸೀತಾದೇವಿಯನ್ನು ನೆನಪಿಸಿಕೊಂಡು ನನ್ನ ಮಾತು ಆರಂಭಿಸುತ್ತೇನೆ. ದೇಶದ ಕೋಟಿಕೋಟಿ ರಾಮಭಕ್ತರಿಗೆ ಈ ಶುಭದಿನದ ಕೋಟಿಕೋಟಿ ಶುಭಾಶಯಗಳು’ ಎಂದು ಮೋದಿ ಹೇಳಿದರು.
‘ಈ ಮಹತ್ವದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾಗಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿಗೆ ನಾನು ಹೃದಯಪೂರ್ವಕ ಆಭಾರಿಯಾಗಿದ್ದೇನೆ. ಭಾರತವು ಇಂದು ಸೂರ್ಯನ ಸನ್ನಿಧಿಯಲ್ಲಿ, ಸರಯೂ ನದಿಯ ತೀರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಪೂರ್ಣ ದೇಶವು ಇಂದು ರಾಮಮಯವಾಗಿದೆ. ಇಡೀದೇಶ ರೋಮಾಂಚಿತವಾಗಿದೆ. ಪ್ರತಿ ಮನಸ್ಸಿನಲ್ಲಿಯೂ ಜ್ಯೋತಿ ಬೆಳಗುತ್ತಿದೆ. ಪೂರ್ತಿ ಭಾರತ ಭಾವುಕವಾಗಿದೆ’ ಎಂದು ಪ್ರಧಾನಿ ನುಡಿದರು.
ಹಲವು ವರ್ಷಗಳ ಕಾಯುವಿಕೆ ಇಂದು ಅಂತ್ಯವಾಗಿದೆ. ಕೋಟ್ಯಂತರ ಜನರು ಈ ಪವಿತ್ರ ದಿನ ನೋಡಲೆಂದು ಉಸಿರು ಬಿಗಿ ಹಿಡಿದಿದ್ದರು. ಹಲವಾರು ವರ್ಷಗಳಿಂದ ಡೇರೆಯೊಳಗೆ ಕಾಲ ಕಳೆದ ನಮ್ಮ ರಾಮಲಲ್ಲಾನಿಗಾಗಿ ಒಂದು ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು.
‘ಸ್ವಾತಂತ್ರ್ಯ ಹೋರಾಟದ ಸಂದರ್ಭ ಸಾಕಷ್ಟು ಜನರು ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದರು. ದೇಶದ ಎಲ್ಲ ಭೂಭಾಗಗಳಲ್ಲಿಯೂ ಹೋರಾಟ ನಡೆದಿತ್ತು. ಆಗಸ್ಟ್ ೧೫ ಎನ್ನುವುದು ಇಂಥ ಲಕ್ಷಾಂತರ ಬಲಿದಾನಗಳ ಪ್ರತೀಕ. ಸ್ವಾತಂತ್ರ್ಯ ಗಳಿಸಬೇಕೆನ್ನುವ ಭಾವನೆಗಳ ಪ್ರತೀಕ. ಇದೂ ಅಷ್ಟೇ. ರಾಮಮಂದಿರಕ್ಕಾಗಿ ಹಲವು ಪೀಳಿಗೆಗಳು ಅಖಂಡವಾಗಿ ಪ್ರಯತ್ನಿಸಿದ್ದವು. ಈ ದಿನವು ಅವರ ತ್ಯಾಗ ಮತ್ತು ಸಂಕಲ್ಪದ ಪ್ರತೀಕ. ರಾಮ ಮಂದಿರಕ್ಕಾಗಿ ನಡೆದ ಆಂದೋಲನದಲ್ಲಿ ಅರ್ಪಣೆ ಮತ್ತು ತರ್ಪಣ ಇತ್ತು. ಸಂಘರ್ಷ ಮತ್ತು ಸಂಕಲ್ಪ ಇತ್ತು. ಅವರ ತ್ಯಾಗ ಮತ್ತು ಬಲಿದಾನ ಮತ್ತು ಸಂಘರ್ಷದಿಂದ ಈ ಕನಸು ಇಂದು ನನಸಾಗುತ್ತಿದೆ. ಅವರ ಬದುಕು ರಾಮಮಂದಿರದ ಕನಸಿನೊಂದಿಗೆ ಬೆಸೆದುಕೊಂಡಿತ್ತು. ಅವರೆಲ್ಲರಿಗೂ ದೇಶದ ೧೩೦ ಕೋಟಿ ದೇಶವಾಸಿಗಳ ಪರವಾಗಿ ಕೈಮುಗಿದು ನಮಿಸುತ್ತೇನೆ’ ಎಂದು ಪ್ರಧಾನಿ ನುಡಿದರು.
ಸಂಪೂರ್ಣ ಸೃಷ್ಟಿಯ ಶಕ್ತಿ ರಾಮಜನ್ಮಭೂಮಿಯ ಪವಿತ್ರ ಆಂದೋಲನದೊಂದಿಗೆ ಜೋಡಿಸಿಕೊಂಡಿತ್ತು. ಬದುಕಿನ ಪ್ರೇರಣೆಗಾಗಿ ಇಂದಿಗೂ ನಾವು ರಾಮನತ್ತ ನೋಡುತ್ತೇವೆ. ಇತಿಹಾಸದ ಪುಟಗಳಲ್ಲಿ ಏನೆಲ್ಲಾ ಆಗಿದ್ದರೂ ರಾಮ ಇಂದಿಗೂ ನಮ್ಮ ಮನದಲ್ಲಿ ವಿರಾಜಮಾನನಾಗಿದ್ದಾನೆ, ನಮ್ಮ ಸಂಸ್ಕೃತಿಯ ಆಧಾರವಾಗಿದ್ದಾನೆ. ರಾಮನ ಭವ್ಯದಿವ್ಯ ಮಂದಿರಕ್ಕಾಗಿ ಇಂದು ಭೂಮಿಪೂಜೆ ಆಗಿದೆ. ಇಲ್ಲಿಗೆ ಬರುವ ಮೊದಲು ನಾನು ಹನುಮಂತನ ಗುಡಿಗೆ ಹೋಗಿದ್ದೆ. ರಾಮನ ಕೆಲಸಗಳನ್ನು ಹನುಮ ಶ್ರದ್ಧೆಯಿಂದ ಮಾಡುತ್ತಿದ್ದ. ರಾಮನ ಮಂದಿರ ನಿರ್ಮಾಣದಿಂದ ಅಯೋಧ್ಯೆಯ ಭವ್ಯತೆ ಹೆಚ್ಚಾಗುವುದಷ್ಟೇ ಅಲ್ಲ. ಇಲ್ಲಿನ ವಾತಾವರಣವೇ ಬದಲಾಗಲಿದೆ. ಇಡೀ ಜಗತ್ತಿನಿಂದ ಜನರು ಪ್ರಭು ರಾಮ ಮತ್ತು ಜಾನಕಿಯ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ. ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಯು ದೇಶವನ್ನು ಜೋಡಿಸುವ ಯತ್ನ. ಇದು ವಿಶ್ವಾಸವನ್ನು ವಿದ್ಯಮಾನದೊಂದಿಗೆ ಜೋಡಿಸುವ ಯತ್ನ ಎಂದು ಮೋದಿ ಹೇಳಿದರು.
ಕೋಟ್ಯಂತರ ರಾಮಭಕ್ತರ ಸಂಕಲ್ಪ ಸತ್ಯವಾದ ದಿನ ಇದು. ಸತ್ಯ, ಅಹಿಂಸೆ, ಆಸ್ಥಾ ಮತ್ತು ಬಲಿದಾನಕ್ಕೆ ನ್ಯಾಯಪ್ರಿಯ ಭಾರತ ಗೌರ ಕೊಟ್ಟಿದೆ. ಸುಪ್ರೀಂಕೋರ್ಟ್ ತೀರ್ಪು ಕೊಟ್ಟಾಗ ದೇಶವಾಸಿಗಳು ಶಾಂತಿಯಿಂದ ನಡೆದುಕೊಂಡರು. ಇಂದೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಈ ಮಂದಿರದೊಂದಿಗೆ ಹೊಸ ಇತಿಹಾಸ ಬರೆಯುವುದಷ್ಟೇ ಅಲ್ಲ, ಸ್ವತಃ ಇತಿಹಾಸವು ತನ್ನನ್ನು ತಾನು ಸರಿಪಡಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು.
ವಾನರರು ರಾಮನಿಗೆ, ಮಕ್ಕಳು ಕೃಷ್ಣನಿಗೆ, ವನವಾಸಿಗಳು ಶಿವಾಜಿಗೆ ನೆರವಾದಂತೆ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳು ಸೇರಿದಂತೆ ಎಲ್ಲರ ಒತ್ತಾಸೆಯಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ರಾಮಾಯಣ ಕಾಲದಲ್ಲಿ ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದು ರಾಮಸೇತು ನಿರ್ಮಿಸಲಾಯಿತು. ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮನ ಹೆಸರು ಬರೆದಿದ್ದ ಇಟ್ಟಿಗೆಗಳು ಇಲ್ಲಿಗೆ ಬಂದವು. ಇಂತಹ ಸಂದರ್ಭ ನ ಭೂತೋ ನ ಭವಿಷ್ಯತಿ. ನಮ್ಮ ಸಾಮೂಹಿಕ ಶಕ್ತಿ ಇಡೀ ಜಗತ್ತಿಗೆ ಅಧ್ಯಯನದ ವಿಷಯ ಎಂದು ಮೋದಿ ನುಡಿದರು.
’ರಾಮನು ತೇಜಕ್ಕೆ ಸೂರ್ಯ, ಕ್ಷಮೆಗೆ ಭೂಮಿ, ಬುದ್ಧಿಗೆ ಗುರು, ಯಶಸ್ಸಿನಲ್ಲಿ ಇಂದ್ರನಿಗೆ ಸಮಾನ. ಸತ್ಯವನ್ನು ಆಧರಿಸಿದ ಬದುಕು ನಡೆಸಿ ಎಂಬುದೇ ರಾಮನ ಜೀವನ ನಮಗೆ ಕೊಡುವ ಸಂದೇಶ. ರಾಮನ ಆಡಳಿತಕ್ಕೆ ಆಧಾರವಾಗಿದ್ದ ಅಂಶ ಸಾಮಾಜಿಕ ಸಾಮರಸ್ಯ. ವಿಶ್ವಾಸದ ಆಡಳಿತ ರಾಮನದು. ರಾಮನ ಅಭೂತಪೂರ್ವ ವ್ಯಕ್ತಿತ್ವ, ಧೈರ್ಯ ಹಲವು ಯುಗಗಳಿಗೆ ಪ್ರೇರಣಾದಾಯಕ’ ಎಂದು ಮೋದಿ ಹೇಳಿದರು.
’ರಾಮನು ಎಲ್ಲ ಪ್ರಜೆಗಳನ್ನು ಒಂದೇ ರೀತಿ ಕಾಣುತ್ತಿದ್ದ. ಬಡವರು ಮತ್ತು ದೀನ, ದುಃಖಿತರನ್ನು ಹೆಚ್ಚು ಪ್ರೀತಿಯಿಂದ ಕಾಣುತ್ತಿದ್ದ. ಭಾರತದ ನಂಬಿಕೆಯಲ್ಲಿ, ಆದರ್ಶಗಳಲ್ಲಿ, ದಿವ್ಯತೆಯಲ್ಲಿ, ದರ್ಶನದಲ್ಲಿ ರಾಮನಿದ್ದಾನೆ. ರಾಮನ ಕಥೆ ಹಲವು ಮಹಾಕಾವ್ಯಗಳಿಗೆ ವಸ್ತು, ಅದೇ ರಾಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧಿಜಿಯವರ ಭಜನೆಗಳ ಮೂಲಕ ಜನರಿಗೆ ಪ್ರೇರಣೆ ನೀಡಿದ. ವಿವಿಧತೆಯಲ್ಲಿ ಏಕತೆ ಎನ್ನುವುದು ಭಾರತದ ಜೀವನ ಚರಿತ್ರೆ. ತಮಿಳು, ಕನ್ನಡ, ತೆಲುಗು, ಒಡಿಶಾ, ಮಲಯಾಳಂ, ಕಾಶ್ಮೀರಿ, ಬಾಂಗ್ಲಾ ಭಾಷೆಗಳಲ್ಲಿ ರಾಮಾಯಣಗಳು ಸ್ವತಂತ್ರ ಕೃತಿಗಳಾಗಿವೆ. ಗುರುಗೋವಿಂದ ಸಿಂಗ್ ಅವರು ಸ್ವತಃ ರಾಮಾಯಣ ಬರೆದಿದ್ದರು. ದೇಶ ವಿವಿಧೆಡೆ ವಿವಿಧ ರೀತಿಯ ರಾಮಾಯಣ ಕೃತಿಗಳು ಇವೆ. ರಾಮ ಎಲ್ಲೆಡೆ ಇದ್ದಾನೆ. ವಿವಿಧತೆಯಲ್ಲಿ ಏಕತೆ ಎನ್ನುವುದಕ್ಕೆ ರಾಮನೇ ಪ್ರತೀಕ ಎಂದು ಪ್ರಧಾನಿ ಹೇಳಿದರು.
ವಿಶ್ವದಲ್ಲಿ ಅತಿಹೆಚ್ಚು ಮುಸ್ಲಿಮರು ಇರುವ ಇಂಡೊನೇಷ್ಯಾದಲ್ಲಿಯೂ ಸಾಕಷ್ಟು ರಾಮಾಯಣ ಕೃತಿಗಳಿವೆ. ರಾಮ ಇಂದಿಗೂ ಅಲ್ಲಿ ಪೂಜನೀಯ ವ್ಯಕ್ತಿ. ಕಾಂಬೋಡಿಯಾ, ವಾಲೋ, ಮಲೇಷ್ಯಾ, ಥಾಯ್ಲೆಂಡ್, ಇರಾನ್ ಮತ್ತು ಚೀನಾಗಳಲ್ಲಿಯೂ ರಾಮಾಯಣಗಳಿವೆ. ರಾಮ ಕಥೆಯನ್ನು ಆ ಜನರು ಭಕ್ತಿಯಿಂದ ನೆನೆಯುತ್ತಾರೆ. ನೇಪಾಳದಲ್ಲಿ ರಾಮನಿಗಿಂತಲೂ ಸೀತೆಯ ಭಕ್ತರು ಹೆಚ್ಚು. ಅವರು ಸೀತೆಯೊಂದಿಗೆ ಭಾವುಕ ನಂಟು ಹೊಂದಿದ್ದಾರೆ ಎಂದು ಪ್ರಧಾನಿ ನುಡಿದರು.
ಭಾರತದಂತೆಯೇ ವಿಶ್ವದ ಹಲವು ದೇಶಗಳಲ್ಲಿ, ಹಲವು ಭಾಷೆಗಳಲ್ಲಿ ಇಂದಿಗೂ ರಾಮಾಯಣ ಪ್ರಚಲಿತದಲ್ಲಿದೆ. ಇವರೆಲ್ಲರಿಗೂ ರಾಮಮಂದಿರ ನಿರ್ಮಾಣದಿಂದ ಸಂತೋಷವಾಗುತ್ತಿದೆ ಎಂದು ಮೋದಿ ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ದೇಶದ ಭವ್ಯ ಸಂಸ್ಕೃತಿಯ ಪ್ರತೀಕವಾಗಲಿದೆ. ಇದು ಅನಂತ ಕಾಲದವರೆಗೆ ಸಂಪೂರ್ಣ ಮಾನವ ಕುಲಕ್ಕೆ ಪ್ರೇರಣೆಯಾಗಲಿದೆ. ಶ್ರೀರಾಮ ಮತ್ತು ರಾಮ ಮಂದಿರದ ಸಂದೇಶವನ್ನು ಪೂರ್ಣ ಜಗತ್ತಿಗೆ ನಿರಂತರ ತಲುಪುವಂತೆ ಮಾಡುವುದು ಹೇಗೆ ಎಂಬುದು ನಮ್ಮ ಮುಂದಿನ ತಲೆಮಾರಿನ ವಿಶೇಷ ಜವಾಬ್ದಾರಿ ಎಂದು ಪ್ರಧಾನಿ ನುಡಿದರು.
ದೇಶದಲ್ಲಿ ರಾಮ ಎಲ್ಲೆಲ್ಲಿ ಓಡಾಡಿದ್ದನೋ ಅವೆಲ್ಲವನ್ನೂ ರಾಮ ಸರ್ಕೀಟ್ ಹೆಸರಿನಲ್ಲಿ ಜೋಡಿಸಲಾಗುತ್ತಿದೆ. ಅಯೋಧ್ಯೆ ರಾಮನ ಸ್ವಂತದ, ಪ್ರೀತಿಯ ನಗರ. ರಾಮನ ಅಯೋಧ್ಯೆಯ ಭವ್ಯತೆ, ದಿವ್ಯತೆ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಇಡೀ ಜಗತ್ತಿನಲ್ಲಿ ರಾಮನಂತಹ ರಾಜ ಇರಲಿಲ್ಲ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ರಾಮನ ಆಡಳಿತದಲ್ಲಿ ಯಾರೂ ದುಃಖಿಗಳು, ಬಡವರು ಇರಲಿಲ್ಲ. ಎಲ್ಲ ಸ್ತ್ರೀ-ಪುರುಷರು ಸಮಾನ ಸುಖಿಗಳಾಗಿದ್ದರು ಎಂಬುದು ರಾಮನ ಆಡಳಿತದ ವೈಭವ. ರಾಮನ ಆಡಳಿತದಲ್ಲಿ ರೈತರು, ಪಶುಪಾಲಕರು ಖುಷಿಯಾಗಿ ಜೀವನ ಸಾಗಿಸುತ್ತಿದ್ದರು. ವೃದ್ಧರು, ಬಾಲಕರು, ರೋಗಿಗಳಿಗೂ ರಾಮನ ಆಡಳಿತದಲ್ಲಿ ಬೆಚ್ಚನೆ ರಕ್ಷೆಯಿತ್ತು ಎಂದು ಪ್ರಧಾನಿ ಹೇಳಿದರು.
‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ (ಮಾತೆ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಹೆಚ್ಚು) ಎನ್ನವುದು ರಾಮನ ಸಂದೇಶ. ನಮ್ಮ ದೇಶ ಎಷ್ಟು ಬೆಳೆದರೂ ನೀತಿಯ ಹಾದಿಯಿಂದ ಹಿಂದೆ ಸರಿಯುವುದಿಲ್ಲ. ಇದು ರಾಮನ ಆದರ್ಶ. ರಾಷ್ಟ್ರಪಿತ ಮಹಾತ್ಮಗಾಂಧಿ ಇದೇ ಸೂತ್ರಗಳನ್ನು ಆಧರಿಸಿದ ರಾಮರಾಜ್ಯದ ಕನಸು ಕಂಡಿದ್ದರು ಎಂದು ಮೋದಿ ನುಡಿದರು.
ಕೋಟ್ಯಂತರ ಜನರ ಭಾವನೆಗಳಿಗೆ ಗೌರವ: ಯೋಗಿ ಆದಿತ್ಯನಾಥ್
ಪ್ರಧಾನಿ ಭಾಷಣಕ್ಕೆ ಮುನ್ನ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ’೧೩೦ ಕೋಟಿ ಭಾರತೀಯರು ಮತ್ತು ಭಾರತದ ಬಗ್ಗೆ ಗೌರವವಿರುವ ಕೋಟ್ಯಂತರ ಜನರ ಭಾವನೆಗಳಿಗೆ ಗೌರವ ಕೊಟ್ಟ ದಿನ ಇದು ಎಂದು ಹೇಳಿದರು.
’ಸಂವಿಧಾನ ಬದ್ಧವಾಗಿ, ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಭಾರತೀಯರಿಗೆ ಶಕ್ತಿಯಿದೆ. ದೇಶದ ವಿವಿಧೆಡೆಗಳಲ್ಲಿರುವ ಕೋಟ್ಯಂತರ ರಾಮಭಕ್ತರು ಈ ಕಾರ್ಯಕ್ರಮವನ್ನು ಶ್ರದ್ಧೆಯಿಂದ ನೋಡುತ್ತಿದ್ದಾರೆ. ಅವರೆಲ್ಲರಿಗೂ ನಮಿಸುತ್ತೇನೆ ಎಂದು ತಿಳಿಸಿದರು.
ರಾಮ ಮಂದಿರಕ್ಕಾಗಿ ಸಂತರು ಬಲಿದಾನ ಮಾಡಿದ್ದರು. ಮಂದಿರ ನಿರ್ಮಾಣದ ಆಶಯವನ್ನು ಜೀವಂತ ಇರಿಸಿಕೊಳ್ಳುವ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿತ್ತು. ಹಿಂಸಾಚಾರಕ್ಕೆ ಅವಕಾಶವಿಲ್ಲದೆ ಈ ಆಶಯ ಶಾಂತಿಯುತವಾಗಿ ಈಡೇರಿದೆ. ಇದಕ್ಕಾಗಿ ಪ್ರಧಾನಿಯನ್ನು ಅಭಿನಂದಿಸುವೆ ಎಂದು ಅವರು ನುಡಿದರು.
’ಇದು ಅವಧಪುರಿ (ಅಯೋಧ್ಯೆ). ದೀಪಾವಳಿಯನ್ನು ಅಯೋಧ್ಯೆಯೊಂದಿಗೆ ಜೋಡಿಸಿ ದೀಪೋತ್ಸವ ಆಚರಿಸಿದ್ದೆವು. ನಮ್ಮ ಸಂಭ್ರಮ ಹೆಚ್ಚಿಸುವ ಕೆಲಸ ಇಂದು ಆಗಿದೆ. ರಾಮ ಮಂದಿರದ ಭೂಮಿಪೂಜೆ ಇಂದು ನಡೆದಿದೆ. ಇದು ಅತ್ಯಂತ ಭಾವನಾತ್ಮಕ, ಮಹತ್ವಪೂರ್ಣ ದಿನ. ಭಗವಾನ್ ರಾಮಮಂದಿರವು ದೇಶದ ಕೀರ್ತಿ ಕಳಶದ ರೂಪದಲ್ಲಿ ಇಲ್ಲಿ ಅರಳಿ ನಿಲ್ಲಲಿದೆ’ ಎಂದು ಮುಖ್ಯಮಂತ್ರಿ ಹೇಳಿದರು.
ಅವಧಪುರಿಯನ್ನು ವಿಶ್ವದ ಸಂಪದ್ಭರಿತ ನಗರವಾಗಿಸುವ ಸಂಕಲ್ಪವನ್ನು ನಾವು ಮಾಡಿದ್ದೇವೆ. ರಾಮಾಯಣ ಪರ್ಯಟನೆ, ಸ್ವದೇಶ ದರ್ಶನದ ಯೋಜನೆಗಳಡಿ ಇಲ್ಲಿ ಸಾಕಷ್ಟು ಕೆಲಸಗಳು ಆಗಿವೆ ಎಂದ ಅವರು, ಜೈಜೈ ಶ್ರೀರಾಮ್ ಘೋಷಣೆಯೊಂದಿಗೆ ಭಾಷಣ ಮುಗಿಸಿದರು.
ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಆರ್ಎಸ್ಎಸ್ ಸರಸಂಘಚಾಲಕ ಮೋಹನ ಭಾಗವತ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಅಧ್ಯಕ್ಷ ಮಹಂತ ನೃತ್ಯ ಗೋಪಾಲ ದಾಸ್ಜಿ ಮಹಾರಾಜ್, ವಿವಿಧ ಪಂಥ ಮತ್ತು ಸಂಪ್ರದಾಯಗಳ ಸನ್ಯಾಸಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ರಸ್ತೆಗಳಿಗೆ ಬ್ಯಾರಿಕೇಡ್
ಅಯೋಧ್ಯೆಯ ಮುಖ್ಯ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗಿತ್ತು. ಸುಮಾರು ೩,೦೦೦ ಅರೆಸೈನಿಕ ಸಿಬ್ಬಂದಿ ನಗರವನ್ನು ಕಾವಲು ಕಾಯುತ್ತಿದ್ದರು, ಎಲ್ಲ ಅಂಗಡಿಗಳು ಮತ್ತು ವ್ಯವಹಾರಗಳು ಮುಚ್ಚಲ್ಪಟ್ಟಿದ್ದವು. ಕಳೆದ ವಾರ, ರಾಮಮಂದಿರ ನಿವೇಶನದ ಬಳಿ ಒಬ್ಬ ಅರ್ಚಕ ಮತ್ತು ೧೫ ಮಂದಿ ಪೊಲೀಸ್ ಅಧಿಕಾರಿಗಳಿಗೆ ಕೊರೋನಾವೈರಸ್ ಸೋಂಕು ತಗುಲಿತು.
ಭಾರತದಲ್ಲಿ ೧೯ ಲಕ್ಷ ಮಂದಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು, ೩೯,೦೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
"ಈ ಕಾರ್ಯಕ್ರಮವನ್ನು ಸಾಮಾನ್ಯ ದಿನಗಳಲ್ಲಿ ನಡೆಸಿದ್ದರೆ ಈ ಎಲ್ಲಾ ರಸ್ತೆಗಳು ಜನಸಂದಣಿಯಿಂದ ಕೂಡಿರುತ್ತಿತ್ತು. ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಲಕ್ಷಾಂತರ ಜನರು ಅಯೋಧ್ಯೆಗೆ ಬರುತ್ತಿದ್ದರು’ ಎಂದು ದೇವಾಲಯದ ಅರ್ಚಕ ಹರಿ ಮೋಹನ್ ಹೇಳಿದರು.
ಸಮಾರಂಭಕ್ಕೆ ಕೇವಲ ೧೭೫ ಧಾರ್ಮಿಕ ಸಂತರು, ಪುರೋಹಿತರು ಮತ್ತು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು.
ವಿವಿಧ ಹಿಂದೂ ದೇವಾಲಯಗಳು ಮತ್ತು ಸಿಖ್ ದೇವಾಲಯಗಳು ಕಳುಹಿಸಿದ ೨,೦೦೦ ಮಣ್ಣಿನ ಮಡಕೆಗಳಲ್ಲಿ ಭಾರತೀಯ ನದಿಗಳಿಂದ ನೀರನ್ನು ಭೂಮಿ ಪೂಜಾ ಸಮಾರಂಭಕ್ಕೆ ಬಳಸಲಾಯಿತು.
ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ ಖಟ್ಲೆಯಲ್ಲಿ ಪ್ರಮುಖ ಮುಸ್ಲಿಂ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೂ ಸಮಾರಂಭಕ್ಕೆ ಆಹ್ವಾನ ನೀಡಲಾಗಿದ್ದು, ಅವರು ಈಗ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿದ್ದಾರೆ.
No comments:
Post a Comment