Tuesday, August 4, 2020

ರಾಮಮಂದಿರಕ್ಕೆ ಭೂಮಿ ಪೂಜೆ: ಅಯೋಧ್ಯೆ ಸಜ್ಜಾಗಿದೆ ಹೀಗೆ..

ರಾಮಮಂದಿರಕ್ಕೆ ಭೂಮಿ ಪೂಜೆ: ಅಯೋಧ್ಯೆ ಸಜ್ಜಾಗಿದೆ ಹೀಗೆ..

ಅಯೋಧ್ಯೆ: ಅಯೋಧ್ಯೆಯು 2020 ಆಗಸ್ಟ್ ೫ರ ಬುಧವಾರ ರಾಮಮಂದಿರ ಶಿಲಾನ್ಯಾಸಕ್ಕಾಗಿ ಸಜ್ಜಾಗಿದ್ದು, ಕಾರ್ಯಕ್ರಮಕ್ಕಾಗಿ ವ್ಯಾಪಕ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆಯ ನಂತರ ಬೆಳ್ಳಿಯ ಇಟ್ಟಿಗೆಗಳನ್ನು ಸಾಂಕೇತಿಕವಾಗಿ ಇಡುವ ಮೂಲಕ ಭವ್ಯ ಮಂದಿರಕ್ಕೆ ಅಡಿಪಾಯ ಹಾಕಲಿದ್ದಾರೆ.

ದೇವಾಲಯಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯ ಗೋಪಾಲ ದಾಸ್ ಅವರು ೪೦ ಕೆಜಿ ಬೆಳ್ಳಿ ಇಟ್ಟಿಗೆಯನ್ನು ದಾನ ಮಾಡಿದ್ದಾರೆ, ಪ್ರಧಾನಿಯವರು ಇದೇ ಇಟ್ಟಿಗೆಯನ್ನು ಬಳಸಲಿದ್ದಾರೆ. ಏನಿದ್ದರೂ, ಭೂಮಿ ಪೂಜೆಯ ನಂತರ ಇಟ್ಟಿಗೆಯನ್ನು ತೆಗೆಯಲಾಗುತ್ತದೆ.

ತಮಿಳುನಾಡಿನ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿಗೆಶ್ರೀರಾಮನ ಲಕ್ಷ್ಮಣ, ಸೀತೆ, ಹನುಮಂತರ ಚಿತ್ರಗಳನ್ನು ಒಳಗೊಂಡ ಬೆಳ್ಳಿ ನಾಣ್ಯಗಳನ್ನು ಕಳುಹಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ದಿವಂಗತ ಅಧ್ಯಕ್ಷ ಅಶೋಕ ಸಿಂಘಾಲ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಅಶೋಕ ಸಿಂಘಾಲ್ ಪ್ರತಿಷ್ಠಾನದ ಪರವಾಗಿ ಜಯೇಂದ್ರ ಸರಸ್ವತಿ ಅವರು ನಾಣ್ಯಗಳನ್ನು ಕಳುಹಿಸಿದ್ದಾರೆ.

ನಾಣ್ಯಗಳನ್ನು ಭೂಮಿ ಪೂಜೆಗೆ ಹಾಜರಾಗುವ ಸಂತರಿಗೆ ಬುಧವಾರ ವಿತರಿಸಲಾಗುವುದು.

ಬುಧವಾರ ನಡೆಯುವ ಸಮಾರಂಭದಲ್ಲಿ ಅಶೋಕ ಸಿಂಘಾಲ್ ಅವರ ಸೋದರಳಿಯ ಸಲಿಲ್ ಸಿಂಘಾಲ್ ಭಾಗವಹಿಸಲಿದ್ದಾರೆ.

ರಾಮ್ ಕಿ ಪೈಡಿ ಅಲಂಕಾರ

ಸರಯೂ ನದಿಯಲ್ಲಿರುವ ಭವ್ಯವಾದ ರಾಮ್ ಕಿ ಪೈಡಿ ಘಾಟ್ (ನದಿ ತೀರ) ಭೂಮಿ ಪೂಜೆಗಾಗಿ ವರ್ಣರಂಜಿತ ದೀಪಗಳಿಂದ ಝಗಮಗಿಸುತ್ತಿರುವುದರ ಜೊತೆಗೆ ರಂಗೋಲಿಯಿಂದ ಅಲಂಕರಿಸಲ್ಪಟ್ಟಿದೆ.

ಫೈಜಾಬಾದ್‌ನ ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಹಲವಾರು ಎನ್‌ಜಿಒಗಳ ಸ್ವಯಂಸೇವಕರು ರಾಮ್ ಕಿ ಪೈಡಿಯನ್ನು ರಂಗೋಲಿಯಿಂದ ಅಲಂಕರಿಸಿದ್ದಾರೆ. ವಾನಿ ವಿಕ್ಲಾಂಗ್ ಸೇವಾ ಸಂಸ್ಥೆ ಎಂಬ ಎನ್‌ಜಿಒ ಸದಸ್ಯರು ಅಲಂಕಾರದಲ್ಲಿ ಭಾಗಿಯಾಗಿದ್ದಾರೆ.

ಸಂದರ್ಭವನ್ನು ಆಚರಿಸಲು ಬುಧವಾರ ಘಾಟ್‌ನಲ್ಲಿ ಸುಮಾರು ಒಂದು ಲಕ್ಷ ದಿಯಾಗಳನ್ನು (ಮಣ್ಣಿನ ಹಣತೆಗಳು) ಬೆಳಗಿಸಲಾಗುವುದು.

ಲಾಡು ತಯಾರಿಕೆ

ಭೂಮಿ ಪೂಜೆಯ ನಂತರ ಸ್ಥಳೀಯರಿಗೆ ವಿತರಿಸಲು ಮಣಿ ರಾಮ್ ದಾಸ್ ಛಾವ್ನಿ ಪೀಠದಲ್ಲಿ ಸುಮಾರು .೧೧ ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬುಧವಾರದ ಸಮಾರಂಭದ ನಂತರ ಒಂದು ಲಕ್ಷ ಪೊಟ್ಟಣಗಳಷ್ಟು ಲಾಡು ವಿತರಣೆಗೆ ಆದೇಶಿಸಿದೆ. ಪ್ರತಿ ಪೊಟ್ಟಣದಲ್ಲಿ ನಾಲ್ಕು ಲಾಡುಗಳು ಇರುತ್ತವೆ. ಟ್ರಸ್ಟ್ ಲಾಡುಗಳನ್ನು ನವದೆಹಲಿಯ ಎಲ್ಲಾ ರಾಯಭಾರ ಕಚೇರಿಗಳಿಗೆ ಕಳುಹಿಸಲಿದೆ.

ನವದೆಹಲಿ ಮತ್ತು ಲಖನೌದಲ್ಲಿನ ಪ್ರಮುಖ ಸಿಹಿ ತಯಾರಿ ಅಂಗಡಿUಳಿಗೆ ಬಿಕಾನೆರಿ ಲಾಡು ತಯಾರಿ ಆದೇಶವನ್ನು ಟ್ರಸ್ಟ್ ನೀಡಿದೆ. ಭೂಮಿ ಪೂಜೆಯ ನಂತರ, ಟ್ರಸ್ಟ್ ಅವುಗಳನ್ನು ಅಯೋಧ್ಯೆಯ ಸ್ಥಳೀಯರಿಗೆ ವಿತರಿಸುತ್ತದೆ. ಬಿಕಾನೆರಿ ಲಾಡು ಜೊತೆಗೆ, ಮೋಟಿಕೂರ್ ಲಾಡಿಗೂ ಟ್ರಸ್ಟ್ ಆದೇಶವನ್ನು ನೀಡಿದೆ.

ಸಂತರು ಮತ್ತು ಸ್ಥಳೀಯರಿಗೆ ಲಾಡು ವಿತರಣೆಯ ಉಸ್ತುವಾರಿಯನ್ನು ಅಯೋಧ್ಯೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೇಣಿಯ ಅಧಿಕಾರಿಗೆ ವಹಿಸಲಾಗಿದೆ.

No comments:

Advertisement