ಗೆಹ್ಲೋಟ್ ಹೇಳ್ತಾರೆ: ಅಪ್ನೆ, ಅಪ್ನೆ ಹೋತೆ ಹೈ..!
ಜೈಪುರ: ೧೯ ಬಂಡಾಯ ಶಾಸಕರು ಇಲ್ಲದಿದ್ದರೂ ತಮಗೆ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಸಾಧ್ಯವಿತ್ತು, ಆದರೆ ಈಗ ಇರುವಷ್ಟು ಖುಷಿ ಇರುತ್ತಿರಲಿಲ್ಲ, ಏನಿದ್ದರೂ ನಮ್ಮವರು ನಮ್ಮವೇ ಆಗಿರುತ್ತಾರೆ.. ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ 2020 ಆಗಸ್ಟ್ 13ರ ಗುರುವಾರ ಹೇಳಿದರು.
"ಏನಾಯಿತು, ಅದನ್ನು ಹಿಂದಕ್ಕೆ ಬಿಟ್ಟು ಬಿಡೋಣ. ಈ ೧೯ ಶಾಸಕರು ಇಲ್ಲದೆಯೇ ನಾವು ನಮ್ಮ ಬಹುಮತವನ್ನು ಸಾಬೀತುಪಡಿಸುತ್ತಿದ್ದೆವು, ಆದರೆ ಅದು ನಮಗೆ ಯಾವುದೇ ಸಂತೋಷವನ್ನು ನೀಡುತ್ತಿರಲಿಲ್ಲ. ಕ್ಯೋಂಕಿ ಅಪ್ನೆ ತೋ ಅಪ್ನೆ ಹೀ ಹೋತೆ ಹೈ’ ಎಂದು ಮುಖ್ಯಮಂತ್ರಿ ಹೇಳಿದರು.
ಶುಕ್ರವಾರ ನಡೆಯಲಿರುವ ವಿಧಾನಸಭೆ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ, ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೆಹ್ಲೋಟ್ ಮತ್ತು ಅವರಿಂದ ವಜಾಗೊಂಡಿದ್ದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಭೇಟಿಯಾದ ಬಳಿಕ ಮುಖ್ಯಮಂತ್ರಿಯಿಂದ ಈ ಹೇಳಿಕೆ ಬಂದಿತು.
ಪಕ್ಷದ ಮುಖಂಡರಾದ ಕೆ ಸಿ ವೇಣುಗೋಪಾಲ್, ಅವಿನಾಶ್ ಪಾಂಡೆ, ರಣದೀಪ್ ಸುರ್ಜೆವಾಲಾ, ಅಜಯ್ ಮಾಕೆನ್ ಮತ್ತು ಗೋವಿಂದ್ ಸಿಂಗ್ ದೋಟಾಸ್ರಾ ಕೂಡ ಸಭೆಯಲ್ಲಿದ್ದರು, ಮುಖ್ಯಮಂತ್ರಿಯವರು ತಮ್ಮ ಅಧಿಕೃತ ನಿವಾಸದಲ್ಲಿ ಕ್ಯಾಮೆರಾಗಳಿಗೆ ಸಚಿನ್ ಜೊತೆಗೆ ಪೋಸ್ ನೀಡಿದರು.
ವಜಾಗೊಂಡಿದ್ದ ರಾಜ್ಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಪೈಲಟ್ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾದ ನಂತರ ಸೋಮವಾರ ಪೈಲಟ್ ಮತ್ತು ಕಾಂಗ್ರೆಸ್ ನಡುವೆ ರಾಜಿ ಒಪ್ಪಂದವನ್ನು ಘೋಷಿಸಲಾಗಿತ್ತು. ಪೈಲಟ್ ಮತ್ತು ಬೆಂಬಲಿಗರ ದುಮ್ಮಾನಗಳನ್ನು ಬಗೆ ಹರಿಸಲಾಗುವುದು ಎಂದು ವರಿಷ್ಠ ನಾಯಕರು ಭರವಸೆ ನೀಡಿದ್ದಲ್ಲದೆ, ಸೋನಿಯಾ ಗಾಂಧಿಯವರು ಇದಕ್ಕಾಗಿ ಉನ್ನತ ನಾಯಕರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನೂ ರಚಿಸಿದ್ದರು.
No comments:
Post a Comment