Monday, August 24, 2020

ಪಕ್ಷದ ಮುಖ್ಯಸ್ಥೆಯಾಗಿ ಸೋನಿಯಾ ಮುಂದುವರಿಕೆ

 ಪಕ್ಷದ ಮುಖ್ಯಸ್ಥೆಯಾಗಿ ಸೋನಿಯಾ ಮುಂದುವರಿಕೆ

ನವದೆಹಲಿ
: ಪಕ್ಷದ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಹಂಗಾಮಿ ಮುಖ್ಯಸ್ಥರಾಗಿ ಉಳಿಯಲಿದ್ದಾರೆ.

ಪಕ್ಷದ ಹಿರಿಯ ಮುಖಂಡ ಪಿ.ಎಲ್.ಪುನಿಯಾ ಅವರು 2020 ಆಗಸ್ಟ್ 24ರ ಸೋಮವಾರ ಇಲ್ಲಿ ವಿಚಾರವನ್ನು ತಿಳಿಸಿದರು.

ಕಾರ್‍ಯಕಾರಿ ಸಮಿತಿಯ ಮುಂದಿನ ಸಭೆಯನ್ನು "ಶೀಘ್ರದಲ್ಲೇ, ಬಹುಶಃ ಆರು ತಿಂಗಳಲ್ಲಿ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಲುವಾಗಿ ಕರೆಯಲಾಗುವುದು ಎಂದು ಪುನಿಯಾ ನುಡಿದರು.

"ಸದಸ್ಯರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ನಂಬಿಕೆ ವ್ಯಕ್ತಪಡಿಸಿದರು ಮತ್ತು ಪ್ರಮುಖ ಪಕ್ಷವನ್ನು ಮುನ್ನಡೆಸಬೇಕೆಂದು ಒತ್ತಾಯಿಸಿದರು, ಉಭಯ ನಾಯಕರು ಅದಕ್ಕೆ ಒಪ್ಪಿಕೊಂಡರು ಎಂದು ಪುನಿಯಾ ಹೇಳಿದರು.

ಹಳೆಯ ಮಹಾನ್ ಪಕ್ಷವನ್ನು (ಗ್ರ್ಯಾಂಡ್ ಓಲ್ಡ್ ಪಾರ್ಟಿ) ಮುನ್ನಡೆಸುವಂತೆ ಪಕ್ಷದ ವಿವಿಧ ಘಟಕಗಳು ಕೂಡಾ ಸೋನಿಯಾ ಗಾಂಧಿಯವರನ್ನು ಕೋರಿದವು ಎಂದು ಅವರು ನುಡಿದರು.

ಬೆಳಗ್ಗೆ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಮುಖ್ಯಸ್ಥರ ಬದಲಾವಣೆ  ಪ್ರಕ್ರಿಯೆಯನ್ನು ಪ್ರಾರಂಭಿಸಲು ಪಕ್ಷವನ್ನು ಕೋರಿದ್ದರು. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಂಗಿತವನ್ನು ಸಮಿತಿ ಸಭೆಯಲ್ಲಿ ಅವರು ವ್ಯಕ್ತ ಪಡಿಸಿದರು. ಆದರೆ ಮಾಜಿ ಪ್ರಧಾನಿ ಮತ್ತು ಹಿರಿಯ ಸಹೋದ್ಯೋಗಿ ಮನಮೋಹನ್ ಸಿಂಗ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಸೋನಿಯಾಗಾಂಧಿ ಅವರನ್ನು ಕೋರಿದ್ದರು.

ಮಾಜಿ ಸಚಿವರು ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು "ನಾಯಕತ್ವದಲ್ಲಿ ಬದಲಾವಣೆಗಳನ್ನು ಮಾಡಬೇಕು ಎಂದು ಒತ್ತಾಯಿಸಿ ಪತ್ರ ಬರೆದ ನಂತರ ನಿರ್ಧಾರ ತೆಗೆದುಕೊಳ್ಳಲಾಯಿತು. ಮಾಜಿ ಸಚಿವರು ಮತ್ತು ಕೆಲವು ಸಂಸದರು ಬರೆದಿರುವರೆನಲಾದ ಪತ್ರವನ್ನು ಕೆಲವು ವಾರಗಳ ಹಿಂದೆ ಬರೆಯಲಾಗಿದೆ ಎಂದು ನಂಬಲಾಗಿದೆ.

ಮಾಜಿ ಸಚಿವರು ಮತ್ತು ಸಂಸದರನ್ನು ಒಳಗೊಂಡ ಒಂದು ವರ್ಗವು ಸಾಮೂಹಿಕ ನಾಯಕತ್ವವನ್ನು ಕೋರಿದರೆ, ಮತ್ತೊಂದು ಗುಂಪು ರಾಹುಲ್ ಗಾಂಧಿ ಅವರು ಪಕ್ಷದ ಚುಕ್ಕಾಣಿ ಹಿಡಿಯಬೇಕು ಆಂದು ಆಗ್ರಹಿಸಿತ್ತು.

ಪಕ್ಷದ ೨೩ ಸದಸ್ಯರು ಬರೆದ ಪತ್ರವು ಪಕ್ಷದ ನಶಿಸುವಿಕೆಯನ್ನು ತಡೆಯಲು "ಸಕ್ರಿಯ" ಮತ್ತು "ಗೋಚರಿಸುವ ನಾಯಕತ್ವವನ್ನು ಬಯಸಿತ್ತು ಎನ್ನಲಾಗಿದೆ.

ಚುನಾವಣಾ ಸೋಲುಗಳು, ಯುವ ನಾಯಕರ ಪಕ್ಷ ತೊರೆಯುವಿಕೆ ಸೇರಿದಂತೆ ಹಲವಾರು ಅಂಶಗಳನ್ನು ಪತ್ರ ಪ್ರಸ್ತಾಪಿಸಿತ್ತು ಎಂದು ವರದಿಗಳು ಹೇಳಿವೆ.

ಹಿಂದೆ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ತಮ್ಮ ಸಹೋದರ ರಾಹುಲ್ ಗಾಂಧಿ ಹೇಳಿದ್ದನ್ನು ಬೆಂಬಲಿಸಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನೀಡಿದ್ದ ಹಳೆಯ ಸಂದರ್ಶನವೊಂದು ಕೂಡಾ, ಕಾಂಗ್ರೆಸ್ ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳಿಗೆ ನೀರೆರೆದಿತ್ತು.

"ಬಹುಶಃ (ರಾಜೀನಾಮೆ) ಪತ್ರದಲ್ಲಿ ಅಲ್ಲ, ಆದರೆ ಬೇರೆಡೆ, ರಾಹುಲ್ ಗಾಂಧಿಯವರು ನಮ್ಮಲ್ಲಿ ಯಾರೂ ಪಕ್ಷದ ಅಧ್ಯಕ್ಷರಾಗಬಾರದು ಎಂದು ಹೇಳಿದ್ದರು. ನಾನು ಅವರೊಂದಿಗೆ ಸಂಪೂರ್ಣ ಸಹಮತ ಹೊಂದಿದ್ದೇನೆ ಎಂದು

"ಪಕ್ಷವು ತನ್ನದೇ ಆದ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದರು.

ವಿವಾದಾತ್ಮಕ ನಾಯಕತ್ವದ ವಿಷಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್ಸಿನ ಉನ್ನತ ನಿರ್ಧಾರ ತೆಗೆದುಕೊಳ್ಳುವ ಘಟಕವಾದ ಕಾಂಗ್ರೆಸ್ ಕಾರ್‍ಯಕಾರಿಣಿ ಸಭೆ ನಡೆಯುತ್ತಿದ್ದಾಗಲೇ ಪಕ್ಷದ ಹಲವಾರು ಕಾರ್ಯಕರ್ತರು ಸೋಮವಾರ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಜಮಾಯಿಸಿ ಗಾಂಧಿ ಕುಟುಂಬದ ಪರವಾಗಿ ಘೋಷಣೆ ಕೂಗಿದರು. ಗಾಂಧಿ ಕುಟುಂಬವನ್ನು ಹೊರತುಪಡಿಸಿ ಯಾರೂ ಪಕ್ಷದ ಮುಖ್ಯಸ್ಥರಾಗಿ ಸ್ವೀಕಾರಾರ್ಹ ಅಲ್ಲ ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ೨೪ ಅಕ್ಬರ್ ರಸ್ತೆ ಕಚೇರಿಯ ಹೊರಗೆ ಜಮಾಯಿಸಿ "ಗಾಂಧಿ ಕೆ ಅಲಾವ ಕೋಯಿ ಅಧ್ಯಕ್ಷ್ ಮಂಜೂರ್ ನಹಿ (ಗಾಂಧಿಯವರನ್ನು ಹೊರತುಪಡಿಸಿ ಯಾರೂ ಅಧ್ಯಕ್ಷರಾಗಿ ಸ್ವೀಕಾರಾರ್ಹವಲ್ಲ)" ಮತ್ತು "ಗಾಂಧಿ ಪರಿವಾರ್ ಕೆ ಅಲಾವ  ಕೋಯಿ ಅಧ್ಯಾಕ್ಷ ಬನಾ, ತೋ ಪಾರ್ಟಿ ಟೂಟ್ ಹೋ ಜಾಯೇಗಿ (ಗಾಂಧಿ ಕುಟುಂಬದ ಹೊರಗಿನ ಯಾರಾದರೂ ಮುಖ್ಯಸ್ಥರಾದರೆ, ಪಕ್ಷ ಛಿದ್ರವಾಗುತ್ತದೆ) ಎಂದೂ ಕಾರ್‍ಯಕರ್ತರು ಘೋಷಣೆಗಳನ್ನು ಕೂಗಿದರು.

ಪಕ್ಷದ ಪ್ರಧಾನ ಕಚೇರಿಯಲ್ಲಿನ ದೃಶ್ಯಗಳು ನಾಯಕತ್ವದ ವಿಷಯದಲ್ಲಿ ಪಕ್ಷವನ್ನು ಆಳವಾಗಿ ವಿಭಜಿಸಿರುವ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚುತ್ತಿರುವ ಕೋಲಾಹಲವನ್ನು ಸೂಚಿಸುತ್ತದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು.

No comments:

Advertisement