Friday, August 14, 2020

ಅಶೋಕ ಗೆಹ್ಲೋಟ್ ಸರ್ಕಾರಕ್ಕೆ ವಿಶ್ವಾಸಮತ

ಅಶೋಕ ಗೆಹ್ಲೋಟ್ ಸರ್ಕಾರಕ್ಕೆ ವಿಶ್ವಾಸಮತ

ಜೈಪುರ: ತಮ್ಮ ಪಕ್ಷದ ೧೯ ಭಿನ್ನಮತೀಯ ಶಾಸಕರು ಬಂಡಾಯವೆದ್ದು ಸರ್ಕಾರದ ಉಳಿವಿಗೇ ಹಾಕಿದ್ದ ಬೆದರಿಕೆಯ ಒಂದು ತಿಂಗಳ ನಂತರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು 2020 ಆಗಸ್ಟ್ 14ರ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದರು.

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಂಡಾಯ ನಾಯಕ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಗೆಹ್ಲೋಟ್ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು "ರಾಜಸ್ಥಾನದ ಜನರ ಹಿತದೃಷ್ಟಿಯಿಂದ ಮತ್ತು ಜನರಿಗೆ ನೀಡಿದ ಭರವಸೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದೇವೆ ಎಂಬುದಾಗಿ ಘೋಷಿಸಿದ ಒಂದು ದಿನದ ಬಳಿಕ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಿತು.

ಸದನದಲ್ಲಿ ಪಡೆದಿರುವ ಗೆಲುವು ಮುಖ್ಯಮಂತ್ರಿ ಗೆಹ್ಲೋಟ್ ಅವರಿಗೆ ಮನೆಗೆ ಮರಳಿದ ಬಂಡುಕೋರರ ಜೊತೆ ಸಂಬಂಧ ಸುಧಾರಣೆಗೆ ಆರು ತಿಂಗಳ ಕಾಲಾವಕಾಶವನ್ನು ನೀಡಿತು.

ಗೊತ್ತುವಳಿ ಕುರಿತು ಚರ್ಚೆಯನ್ನು ಪ್ರಾರಂಭಿಸಿದ ಧಾರಿವಾಲ್, ಮಧ್ಯಪ್ರದೇಶ, ಮಣಿಪುರ ಮತ್ತು ಗೋವಾ ಸರ್ಕಾರಗಳನ್ನು ಹಣ ಮತ್ತು ಅಧಿಕಾರವನ್ನು ಬಳಸಿಕೊಂಡು "ಉರುಳಿಸಲು" ಪ್ರಯತ್ನಿಸಕಾಗಿದೆ ಎಂದು ದೂಷಿಸಿದರು, ಆದರೆ ರಾಜಸ್ಥಾನದಲ್ಲಿ ಇದೇ ರೀತಿಯ ಪ್ರಯತ್ನವು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.

ಅಕ್ಬರನನ್ನು ಉಲ್ಲೇಖಿಸಿ, ಮೊಘಲ್ ಚಕ್ರವರ್ತಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಅನ್ವೇಷಣೆಯಲ್ಲಿ ರಾಜಸ್ಥಾನದ ಮೇವಾರದಲ್ಲಿ ಸೋಲನ್ನು ಅನುಭವಿಸಬೇಕಾಯಿತು ಎಂದು ಹೇಳಿದರು. ಅಂತೆಯೇ, ಅಶೋಕ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಪ್ರಯತ್ನಗಳು ಸೋಲಲ್ಪಟ್ಟವು ಎಂದು ಅವರು ಹೇಳಿದರು.

ವಿಶ್ವಾಸಾರ್ಹ ಮತ ಗೆದ್ದ ಬಳಿಕ ಪ್ರತಿಕ್ರಿಯಿಸಿದ ಗೆಹ್ಲೋಟ್ ಇದು "ಸತ್ಯದ ವಿಜಯ" ಎಂದು ಹೇಳಿದರು.

"ಸರ್ಕಾರವು ಮಂಡಿಸಿದ ವಿಶ್ವಾಸಮತ ಗೊತ್ತುವಳಿಯನ್ನು ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತದೊಂದಿಗೆ ಅಂಗೀಕರಿಸಲಾಗಿದೆ. ಪ್ರತಿಪಕ್ಷಗಳ ವಿವಿಧ ಪ್ರಯತ್ನಗಳ ಹೊರತಾಗಿಯೂ, ಫಲಿತಾಂಶವು ಸರ್ಕಾರದ ಪರವಾಗಿದೆ ಎಂದು ಮತದಾನದ ನಂತರ ಸಚಿನ್ ಪೈಲಟ್ ಹೇಳಿದರು.

ಇದು ಸರ್ಕಾರದ ಸಂಖ್ಯಾಬಲಕ್ಕೆ ಸಂಬಂಧಿಸಿದ ಎಲ್ಲ ಅನುಮಾನಗಳಿಗೆ ಸಂಪೂರ್ಣ ತೆರೆ ಎಳೆದಿದೆ ಎಂದು ಪೈಲಟ್ ನುಡಿದರು.

"ಎದ್ದಿರುವ ಎಲ್ಲ ಸಮಸ್ಯೆಗಳಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ನನಗೆ ಸಂಪೂರ್ಣ ನಂಬಿಕೆ ಇದೆ, ಮಾರ್ಗಸೂಚಿಯನ್ನು ಸೂಕ್ತ ಕಾಲದಲ್ಲಿ ಘೋಷಿಸಲಾಗುವುದು ಎಂದು ಪೈಲಟ್ ಹೇಳಿದರು. ರಾಜ್ಯಕ್ಕೆ ಮರಳುವ ಮುನ್ನ ಕಾಂಗ್ರೆಸ್ ವರಿಷ್ಠ ಮಂಡಳಿ ಜೊತೆಗೆ ಮಾಡಿಕೊಂಡ ಒಪ್ಪಂದವನ್ನು ಅವರು ಉಲ್ಲೇಖಿಸಿದರು.

ರಾಜಸ್ಥಾನ ಸಂಸದೀಯ ವ್ಯವಹಾರ ಸಚಿವ ಶಾಂತಿ ಧಾರಿವಾಲ್ ಅವರು ಶುಕ್ರವಾರ ಆರಂಭವಾದ  ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಸರ್ಕಾರದ ಪರ ವಿಶ್ವಾಸ ನಿರ್ಣಯ ಮಂಡಿಸಿದರು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾದ ನಂತರ ವಾರ ಕಾಂಗ್ರೆಸ್ಸಿಗೆ  ಮರಳಿದ ಸಚಿನ್ ಪೈಲಟ್, ಪಕ್ಷವು ಈಗ ಒಗ್ಗಟ್ಟಾಗಿದೆ ಮತ್ತು ನಮ್ಮಲ್ಲಿ ೧೦೭ ಮಂದಿ ಇದ್ದಾರೆ ಎಂದು ಹೇಳಿದರು. ಗಾಂಧಿ ದ್ವಯರ ಭೇಟಿಯನ್ನು ಉಲ್ಲೇಖಿಸಿದ ಅವರು "ದೆಹಲಿಯಲ್ಲಿ ವೈದ್ಯರನ್ನು ಸಂಪರ್ಕಿಸಿ ಈಗ ಮರಳಿದ್ದೇವೆ ಎಂದು ಹೇಳಿದರು.

ಸಚಿನ್ ಪೈಲಟ್ ತನ್ನ ಶಾಸಕರ ಹಿಂಡಿನೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಹಿಂತಿರುಗಿದರೂ, ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಬಿಜೆಪಿಯ ಯೋಜನೆಯನ್ನು ಕಾಂಗ್ರೆಸ್ ವಿರೋಧಿಸಿತು. ಅಂತಿಮವಾಗಿ, ಬಿಜೆಪಿ ತನ್ನ ಗೊತ್ತುವಳಿ ಮಂಡಿಸದಿರಲು ನಿರ್ಧರಿಸಿತು.

ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡುವ ನಿರ್ಧಾರವನ್ನು ಗುರುವಾರ ಘೋಷಿಸಲಾಯಿತು. ಸಭೆಯಲ್ಲಿ ಸಚಿನ್ ಪೈಲಟ್ ಮತ್ತು ಇತರ ಬಂಡಾಯ ಶಾಸಕರೂ ಭಾಗವಹಿಸಿದ್ದರು. ಸಭೆ ಅತ್ಯಂತ ಸೌಹಾರ್ದಯುತವಾಗಿ ನಡೆದಿತ್ತು.

ಶಾಸಕಾಂಗ ಪಕ್ಷ ಸಭೆಯಲ್ಲಿ ವಿಶ್ವಾಸ ಮತ ಗೊತ್ತುವಳಿಯನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸುವ ಕುರಿತು ಚರ್ಚೆಗಳು ನಡೆದವು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ಏಕತೆಯೊಂದಿಗೆ ಕೆಲಸ ಮಾಡುವುದಾಗಿ ಎಲ್ಲ ಶಾಸಕರು ವಾಗ್ದಾನ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಹೇಳಿದ್ದರು.

ಇದಕ್ಕೆ ಕೆಲವೇ ಗಂಟೆಗಳ ಮುನ್ನ ವಿರೋಧ ಪಕ್ಷವಾದ ಬಿಜೆಪಿ ಅಧಿವೇಶನದಲ್ಲಿ ತಾನು ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಹೇಳಿತ್ತು.

ಶಾಸಕರನ್ನು ಉದ್ದೇಶಿಸಿ ಮಾತನಾಡುವಾಗ ಪೈಲಟ್ ಬಂಡಾಯವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, "ಏನಾಯಿತು ಎಂಬುದನ್ನು ಮರೆತುಬಿಡಿ" ಎಂದು ಹೇಳಿದ್ದರು. "೧೯ ಶಾಸಕರು ಇಲ್ಲದೆ ಬಹುಮತವನ್ನು ಸಾಬೀತುಪಡಿಸಬಹುದು. ಆದರೆ ಅದು ನಮಗೆ ಸಂತೋಷವನ್ನು ಉಂಟುಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು" ಎಂದು ಮತ್ತೊಬ್ಬ ನಾಯಕ ಹೇಳಿದ್ದರು.

ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಪೈಲಟ್ ಅವರು ಆರು ವರ್ಷಗಳ ಕಾಲ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಎಂದು ಮತ್ತೊಬ್ಬ ಶಾಸಕರು ಮಾಹಿತಿ ನೀಡಿದರು.

ಪಿಸಿಸಿ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿದ ನಂತರ ತಮ್ಮ ಮೊದಲ ಭಾಷಣದಲ್ಲಿ, ಪೈಲಟ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ನಾಯಕರು ರಾಹುಲ್ ಗಾಂಧಿ ಅವರಿಗೆ ಪಕ್ಷದ ರಾಜ್ಯ ಮುಖ್ಯಸ್ಥರಾಗಿ ಇಷ್ಟು ದಿನ ಕೆಲಸ ಮಾಡಲು ಅವಕಾಶ ನೀಡಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಪಿಸಿಸಿ ಮುಖ್ಯಸ್ಥರಾಗಿರುವ ಅವಧಿಯಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ್ದಕ್ಕಾಗಿ ೩೩ ಜಿಲ್ಲೆಗಳ ಶಾಸಕರಿಗೆ ಪೈಲಟ್ ಕೃತಜ್ಞತೆ ಸಲ್ಲಿಸಿದರು ಮತ್ತು ಹೆಚ್ಚು ಸ್ಪಂದಿಸುವವರಿಗೆ ಏನು ಮಾಡಬೇಕೆಂಬುದರ ಬಗ್ಗೆ ಶಾಸಕರು ಏನು ಹೇಳಬೇಕೆಂದು ಪಕ್ಷವು ಆಲಿಸಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.

ಸಭೆ ಮುಗಿದ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಪಕ್ಷವು ಒಗ್ಗೂಡಿ ನಿಲ್ಲುತ್ತದೆ ಮತ್ತು ವಿಧಾನಸಭೆಯಲ್ಲಿ "ಹೋರಾಡುತ್ತೇವೆ" ಎಂದು ಹೇಳಿದ್ದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಮತ್ತು ಅವಿನಾಶ್ ಪಾಂಡೆ, ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೆವಾಲಾ, ಹಿರಿಯ ನಾಯಕ ಅಜಯ್ ಮಾಕೆನ್ ಮತ್ತು ಪಿಸಿಸಿ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸರ ಅವರು ಗೆಹ್ಲೋಟ್ ಮತ್ತು ಪೈಲಟ್ ಅವರೊಂದಿಗಿನ ಸಂಕ್ಷಿಪ್ತ ಸಭೆಯಲ್ಲಿ ಉಪಸ್ಥಿತರಿದ್ದರು. ೨೦೦ ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ ೧೦೭ ಶಾಸಕರನ್ನು ಮತ್ತು ಬಿಜೆಪಿ ೭೨ ಶಾಸಕರನ್ನು ಹೊಂದಿವೆ.

No comments:

Advertisement