Thursday, August 13, 2020

ಗೆಹ್ಲೋಟ್ ನಿವಾಸಕ್ಕೆ ಸಚಿನ್ ಪೈಲಟ್

 ಗೆಹ್ಲೋಟ್ ನಿವಾಸಕ್ಕೆ  ಸಚಿನ್ ಪೈಲಟ್

ನವದೆಹಲಿ/ ಜೈಪುರ: ಆಗಸ್ಟ್ ೧೪ರಂದು ಪ್ರಾರಂಭವಾಗಲಿರುವ ರಾಜಸ್ಥಾನ ವಿಧಾನಸಭಾ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ 2020 ಆಗಸ್ಟ್ 13ರ ಗುರುವಾರ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ  ಜೈಪುರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ  ನಡೆದಿದ್ದು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತ ಇತರ ಭಿನ್ನಮತೀಯ ಶಾಸಕರು ಮಹತ್ವದ ಸಭೆಯಲ್ಲಿ ಪಾಲ್ಗೊಂಡರು ಎಂದು ಪಕ್ಷ ಮೂಲಗಳು ತಿಳಿಸಿದವು.

ಅಸೆಂಬ್ಲಿ ಅಧಿವೇಶನ ಪ್ರಾರಂಭವಾಗುವ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವ ಯಾವುದೇ ಯೋಜನೆ ಇಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ಭಿನ್ನಮತೀಯ ಶಾಸಕರು ಮರಳಿ ಮನೆಗೆ ಹಿಂದಿರುಗಿದ ಹಿನ್ನೆಲೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸಭೆ ಕರೆಯಲಾಗಿತ್ತು.

"ಆಗಸ್ಟ್ ೧೪ ರಂದು ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿದೆ, ಅಧಿವೇಶನದಲ್ಲಿ, ರಾಜ್ಯದಲ್ಲಿನ ಕೊರೋನವೈರಸ್ ಬಿಕ್ಕಟ್ಟಿನ ಪರಿಸ್ಥಿತಿ ಮತ್ತು ದಿಗ್ಬಂಧನ (ಲಾಕ್ ಡೌನ್) ನಂತರ ಉಂಟಾದ ಆರ್ಥಿಕ ಸ್ಥಿತಿಗತಿಗಳನ್ನು ನಾವು ಬಹಿರಂಗವಾಗಿ ಚರ್ಚಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಉತ್ತಮ ಆಡಳಿತವನ್ನು ನೀಡುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಬೆಂಬಲ ಇರುತ್ತದೆ ಮತ್ತು ಇದು ರಾಜ್ಯದ ಜನರಿಗೆ ಹೊಸ ವಿಶ್ವಾಸವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಹಿಂದೆ ಟ್ವೀಟ್ ಮಾಡಿದ್ದರು.

ಈಗ ಒಂದು ಒಪ್ಪಂದದತ್ತ ಸಾಗುತ್ತಿರುವಂತೆ ತೋರುತ್ತಿರುವ, ಸುಮಾರು ಒಂದು ತಿಂಗಳ ರಾಜಕೀಯ ಪ್ರಕ್ಷುಬ್ಧತೆಯ ನಂತರ, ಶಾಸಕರು ಅಸಮಾಧಾನಗೊಳ್ಳುವುದು ಸಹಜ. ಹೊರಟು ಹೋಗಿದ್ದಸ್ನೇಹಿತರು ಈಗ ಹಿಂತಿರುಗಿದ್ದಾರೆ ಎಂದು ಗೆಹ್ಲೋಟ್ ಬುಧವಾರ ಹೇಳಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ "ತಪ್ಪು ತಿಳುವಳಿಕೆ" ಏನೇ ಇರಲಿ, ನಾಯಕರು ಮುಂದೆ ಸಾಗಬೇಕಾದರೆ ಅದನ್ನು "ಕ್ಷಮಿಸಬೇಕು ಮತ್ತು ಮರೆತುಬಿಡಬೇಕು" ಎಂದು ಅವರು ಒತ್ತಿ ಹೇಳಿದರು. ರಾಜ್ಯದಲ್ಲಿ ತನ್ನ ಸರ್ಕಾರವನ್ನು ಉರುಳಿಸುವ ಬೆದರಿಕೆ ಹಾಕಿದ್ದ ರಾಜಕೀಯ ಬಿಕ್ಕಟ್ಟನ್ನು ಹೂತುಹಾಕುವ ಪ್ರಯತ್ನವಾಗಿ ಅವರು ಗುರುವಾರ ಎರಡನೇ ಬಾರಿಗೆ ಮಂತ್ರವನ್ನು ಪುನರಾವರ್ತಿಸಿದರು.

ಆದಾಗ್ಯೂ, ತಮ್ಮೊಂದಿಗೆ ಅಧಿಕಾರದ ಕಹಿ ಸಮರ ನಡೆಸಿದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಗೆಹ್ಲೋಟ್ ಆಗಿಲ್ಲ.

"ಕಳೆದ ಒಂದು ತಿಂಗಳಲ್ಲಿ ಪಕ್ಷದಲ್ಲಿ ಯಾವುದೇ ತಪ್ಪು ತಿಳುವಳಿಕೆ ಸಂಭವಿಸಿದ್ದರೂ, ದೇಶ, ರಾಜ್ಯ, ಜನರ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ನಾವು ಕ್ಷಮಿಸಬೇಕು ಮತ್ತು ಮರೆಯಬೇಕು" ಎಂದು ಗೆಹ್ಲೋಟ್ ಟ್ವೀಟ್ ನಲ್ಲಿ ತಿಳಿಸಿದರು.

ವಾರದ ಆರಂಭದಲ್ಲಿ ಬಂಡಾಯ ನಾಯಕ ಸಚಿನ್ ಪೈಲಟ್ ಅವರನ್ನು ಭೇಟಿಯಾದ ಪಕ್ಷದ ಉನ್ನತ ನಾಯಕಿ, ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಧ್ಯಸ್ಥಿಕೆಯಿಂದ ರಾಜಸ್ಥಾನದಲ್ಲಿನ ಕಾಂಗ್ರೆಸ್ ಬಿಕ್ಕಟ್ಟು ಕೊನೆಗೊಂಡಿತ್ತು.

ಕಳೆದ ತಿಂಗಳು ಇತರ ೧೮ ಕಾಂಗ್ರೆಸ್ ಶಾಸಕರೊಂದಿಗೆ ಪೈಲಟ್ ಅವರು ಗೆಹ್ಲೋಟ್ ವಿರುದ್ಧ ಬಹಿರಂಗವಾಗಿ ಬಂಡಾಯ ಎದ್ದಿದ್ದರು. ನಂತರ ಅವರನ್ನು ಉಪಮುಖ್ಯಮಂತ್ರಿ ಮತ್ತು ಪಕ್ಷದ ರಾಜಸ್ಥಾನ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು.

ಇದಕ್ಕೂ ಮುನ್ನ ಭಾರತೀಯ ಜನತಾ ಪಕ್ಷವು (ಬಿಜೆಪಿ) ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ಕಾಂಗ್ರೆಸ್ ಶಾಸಕರನ್ನು ಬೇಟೆಯಾಡಲು ಯತ್ನಿಸುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಆಪಾದಿಸಿದ್ದರು.

No comments:

Advertisement