Friday, August 21, 2020

ನೀಟ್, ಜೆಇಇ, ಪರೀಕ್ಷೆ ಮುಂದೂಡಿಕೆ ?

 ನೀಟ್, ಜೆಇಇ, ಪರೀಕ್ಷೆ ಮುಂದೂಡಿಕೆ ?

ಆಗಸ್ಟ್ ೨೫ರ ಬಳಿಕ ಸರ್ಕಾರದ ನಿರ್ಧಾರ

ನವದೆಹಲಿ: ವಿದ್ಯಾರ್ಥಿಗಳ ಆಗ್ರಹದ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ ಮತ್ತು ನೀಟ್ ಪರೀಕ್ಷಾ ದಿನಾಂಕಗಳು ಇನ್ನೂ ಕೆಲವು ದಿನಗಳ ಕಾಲ ವಿಳಂಬವಾಗುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು 2020 ಆಗಸ್ಟ್ 21ರ ಶುಕ್ರವಾರ ತಿಳಿಸಿದವು.

ಪ್ರವೇಶ ಪರೀಕ್ಷೆಗಳ ದಿನಾಂಕವನ್ನು ಮುಂದೂಡುವ ಬಗ್ಗೆ ಸರ್ಕಾರವು ಆಗಸ್ಟ್ ೨೫ರ ಬಳಿಕ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು ಹೇಳಿದವು.

ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪರೀಕ್ಷೆ ವೇಳೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಧರಿಸಲು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಆರೋಗ್ಯ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಿದ್ದಾರೆ ಎಂದೂ ಮೂಲಗಳು ಹೇಳಿದವು.

ಪರೀಕ್ಷಾ ದಿನಾಂಕ ಮುಂದೂಡಿಕೆಗೆ ಸುಪ್ರೀಂಕೋರ್ಟ್ ನಿರಾಕರಿಸಿದ ಬಳಿಕ, ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ನಡೆಸಲಾಗುವ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಸೆಪ್ಟೆಂಬರಿನಲ್ಲಿ ನಡೆಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ನಿಗದಿಯಾಗಿರುವ ಪ್ರಕಾರ ಸೆಪ್ಟೆಂಬರ್ ೧ರಿಂದ ೬ರವರೆಗೆ ಜೆಇಇ (ಮೆಯಿನ್), ಸೆಪ್ಟೆಂಬರ್ ೨೭ರಂದು ಜೆಇಇ (ಅಡ್ವಾನ್ಸಿಡ್) ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯು (ನೀಟ್) ಸೆಪ್ಟೆಂಬರ್ ೧೩ಕ್ಕೆ ನಿಗದಿಯಾಗಿದೆ.

ಕಳೆದ ವರ್ಷ ,೫೪೬ರಷ್ಟಿದ್ದ ನೀಟ್ ಕೇಂದ್ರಗಳ ಸಂಖ್ಯೆಯನ್ನು ವರ್ಷ ,೮೪೩ಕ್ಕೆ ಏರಿಸಲಾಗಿದೆ ಎಂದು ಮೂಲಗಳು ಹೇಳಿದವು.

ಆದಾಗ್ಯೂ, ವಿದ್ಯಾರ್ಥಿಗಳು ಸಾಂಕ್ರಾಮಿಕದ ಜೊತೆಗೆ ಹಲವಾರು ರಾಜ್ಯಗಳಲ್ಲಿ ಸಂಭವಿಸುತ್ತಿರುವ ಭಾರೀ ಮಳೆ, ಪ್ರವಾಹಗಳ ಹಿನ್ನೆಲೆಯಲ್ಲಿ ಯಾವುದೇ ದುರಂತ ನಿವಾರಣೆ ಸಲುವಾಗಿ ಪರೀಕ್ಷಾ ದಿನಾಂಕಗಳನ್ನು ವಿಳಂಬಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ನೀಟ್ ಪರೀಕ್ಷೆಗೆ ಸಜ್ಜಾಗುತ್ತಿರುವ ವಂದಿತಾ ರಾಷ್ಟೋಗಿ ಅವರು ಸುದ್ದಿ ಸಂಸ್ಥೆ ಒಂದರ ಜೊತೆ ಮಾತನಾಡುತ್ತಾಈಗ ಆರೋಗ್ಯ ಅತ್ಯಂತ ಅಪಾಯಕರ ಸ್ಥಿತಿಯಲ್ಲಿದೆ. ಕಳೆದ ಕೆಲವು ತಿಂಗಳುಗಳಿಂದ ನಾವು ಮಾನಸಿಕ ಕಾತರ ಮತ್ತು ಒತ್ತಡಕ್ಕೆ ಒಳಗಾಗಿದ್ದೇವೆ. ಅಧಿಕಾರಿಗಳು ನಮ್ಮ ಮನವಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಿದರು.

ಸಾಮಾನ್ಯ ಸಮಯದಲ್ಲಾಗಿದ್ದರೆ, ಐಐಟಿಗಳು ತಮ್ಮ ಹೊಸ ಶೈಕ್ಷಣಿಕ ವರ್ಷವನ್ನು ಜುಲೈ ತಿಂಗಳಲ್ಲಿ ಆರಂಭಿಸುತ್ತಿದ್ದವು. ಆದರೆ ಈಗ ಪರೀಕ್ಷೆಯೇ ಸೆಪ್ಟೆಂಬರಿನಲ್ಲಿ ನಡೆಯುತ್ತಿದೆ. ತರಗತಿಗಳು ಡಿಸೆಂಬರಿನಲ್ಲಷ್ಟೇ ಆರಂಭವಾಗಬಹುದು. ವಿದ್ಯಾರ್ಥಿಗಳು ಈಗಾಗಲೇ ಒಂದು ಸೆಮ್ಟೆಸ್ಟರಿನಷ್ಟು ಹಿಂದೆ ಬಿದ್ದಿದ್ದಾರೆ. ಇನ್ನಷ್ಟು ವಿಳಂಬವಾದರೆ ಅದು ಅವರನ್ನು ಒಂದು ವರ್ಷದಷ್ಟು ಹಿಂದಕ್ಕೆ ತಳ್ಳಬಹುದು.

ಪ್ರಸ್ತುತ ವರ್ಷ ಜೆಇಇ ಪರೀಕ್ಷೆಯನ್ನು ನಡೆಸಬೇಕಾಗಿರುವ ಐಐಟಿ ದೆಹಲಿಯ ನಿರ್ದೇಶಕ ವಿ ರಾಮಗೋಪಾಲ ರಾವ್ ಅವರು, ’ಪರೀಕ್ಷೆಗಳು ಇನ್ನಷ್ಟು ವಿಳಂಬವಾದರೆ, ವಿದ್ಯಾರ್ಥಿಗಳ ಒಂದು ತಂಡಕ್ಕೆ ಪ್ರವೇಶಗಳನ್ನು ರದ್ದು ಪಡಿಸಬೇಕಾಗಿ ಬರಬಹುದು. ಏಕೆಂದರೆ, ಏಕ ಕಾಲಕ್ಕೆ ಎರಡು ತಂಡಗಳಿಗೆ ಅವಕಾಶ ಕಲ್ಪಿಸುವುದು ಕಷ್ಟವಾಗುತ್ತದೆ. ನಾವು ಮುಂದಿನ ವರ್ಷ ಬೇಸಿಗೆ ಪೂರ್ತಿ ದುಡಿಯುವ ಮೂಲಕ ನಷ್ಟವಾಗಿರುವ ಸಮಯವನ್ನು ಭರ್ತಿ ಮಾಡುವ ನಿರೀಕ್ಷೆಯಲ್ಲಿ ಇದ್ದೇವೆ ಎಂದು  ಹೇಳಿದರು.

ಕೋವಿಡ್-೧೯ ಈಗ ಉತ್ತುಂಗ ಸ್ಥಿತಿಯಲ್ಲಿದೆ. ಮುನ್ನವೇ ನಿರ್ದೇಶಕರು ತಿಳಿಸಿದಂತೆ ಸೇರ್ಪಡೆಯು ವಿಳಂಬವಾಗಬಹುದು. ಹಾಗಿರುವಾಗ ಎಲ್ಲ ಗೊಂದಲಗಳ ಮಧ್ಯೆ ಪರೀಕ್ಷೆ ನಡೆಸಲು ತರಾತುರಿ ಏಕೆ ಎಂಬುದಾಗಿ ದೆಹಲಿ ಐಐಟಿಯ ನಿರ್ದೇಶಕ ಪ್ರಹ್ಲಾದ ಶಂಕರ್ ಅವರನ್ನು ಜೆಇಇ ಅಭ್ಯರ್ಥಿಯೊಬ್ಬರು ಪ್ರಶ್ನಿಸಿದ್ದಾರೆ.

ಆನ್ ಲೈನ್ ಆದರೂ ತರಗತಿಗಳನ್ನು ಆರಂಭಿಸುವುದು ಮಹತ್ವದ್ದಾಗಿದೆ. ಎಂ.ಟೆಕ್ ತರಗತಿಗಳು ಆನ್ ಲೈನಿನಲ್ಲಿ ಈಗಾಗಲೇ ಆರಂಭವಾಗಿವೆ. ಇದು ಕ್ಯಾಂಪಸ್ಸಿನಲ್ಲಿ ಭೌತಿಕವಾಗಿ ಇರುವುದಕ್ಕೆ ಸಂಬಂಧಿಸಿದ್ದಲ್ಲ. ಇದು ಆನ್ ಲೈನಿನಲ್ಲಾದರೂ ಶೈಕ್ಷಣಿಕ ತರಗತಿ ಆರಂಭಕ್ಕೆ ಸಂಬಂಧಿಸಿದ ವಿಷಯ ಎಂದು ನಿರ್ದೇಶಕರು ಹೇಳಿದರು.

ಜೆಇಇ ಮೆಯಿನ್ ೨೦೨೦ ಮತ್ತು ನೀಟ್ ೨೦೨೦ ಪ್ರವೇಶ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ವಿದ್ಯಾರ್ಥಿಗಳು ಮತ್ತು ಪೋಷಕ ಸಮೂಹವೊಂದು ಸಲ್ಲಿಸಿದ್ದ ಮನವಿಯನ್ನು ವಾರಾgಂಭದಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಸಂಪೂರ್ಣ ಶೈಕ್ಷಣಿಕ ವರ್ಷವೇ ಅಯೋಮಯವಾಗಿರುವ ಕಾರಣ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

No comments:

Advertisement