ಕೃಷಿ ಮಸೂದೆ: ಸುಪ್ರೀಂಕೋರ್ಟಿಗೆ ಕೇರಳ ಸಂಸದನಿಂದ ಅರ್ಜಿ
ನವದೆಹಲಿ: ಸಂಸತ್ ಅನುಮೋದನೆ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತ ಬಿದ್ದಿರುವ ಕೇಂದ್ರದ ಕೃಷಿ ಮಸೂದೆಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ 2020 ಸೆಪ್ಟೆಂಬರ 28ರ ಸೋಮವಾರ ಇನ್ನಷ್ಟು ತೀವ್ರಗೊಂಡಿದ್ದು, ಕೇರಳದ ಸಂಸತ್ ಸದಸ್ಯ ಟಿ.ಎನ್. ಪ್ರತಾಪನ್ ಅವರು ವಿವಾದಾತ್ಮಕ ಮಸೂದೆಗಳ ವಿರುದ್ಧ ಸುಪ್ರೀಂಕೋರ್ಟಿಗೆ ಮೊತ್ತ ಮೊದಲ ಅರ್ಜಿ ಸಲ್ಲಿಸಿದರು.
ಇದೇ ವೇಳೆಗೆ ತಮ್ಮ ಸರ್ಕಾರ ಕೂಡಾ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಕೂಡಾ ನ್ಯಾಯಾಲಯದ ಕಟ್ಟೆ ಏರುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೃಷಿ ಕಾಯ್ದೆಗಳು ರೈತರ ಪಾಲಿನ ನೇಣುಗಂಬ ಎಂದು ಟ್ವೀಟ್ ಮೂಲಕ ಟೀಕಿಸಿದರು.
ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ ಸೇರಿದಂತೆ ಮೂರು ಮಸೂದೆಗಳ ಪೈಕಿ ಎರಡು ಮಸೂದೆಗಳ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಎರಡು ಕಾನೂನುಗಳನ್ನು ಅಸಾಂವಿಧಾನಿಕ ಮತ್ತು ಕಾನೂನು ಬಾಹಿರ ಎಂಬುದಾಗಿ ಘೋಷಿಸಿ ರದ್ದು ಪಡಿಸಬೇಕು ಎಂದು ಪ್ರತಾಪನ್ ಅವರ ಅರ್ಜಿ ಕೋರಿದೆ.
ರೈತರು ಮತ್ತು ಕೈಗಾರಿಕಾ ಕಾರ್ಮಿಕರಿಗಾಗಿ ಪ್ರತ್ಯೇಕ ನ್ಯಾಯಮಂಡಳಿಗಳನ್ನು ರಚಿಸಬೇಕು ಎಂದೂ ಅರ್ಜಿ ಮನವಿ ಮಾಡಿದೆ.
ಮೂರೂ ಕೃಷಿ ಮಸೂದೆಗಳನ್ನು ಸಂಸತ್ತು ಕಳೆದ ವಾರ ಅಂಗೀಕರಿಸಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಮಸೂದೆಗಳಿಗೆ ತಮ್ಮ ಅಂಕಿತ ಹಾಕಿದ್ದು, ಅವು ಈಗ ಕಾಯ್ದೆಗಳಾಗಿ ಜಾರಿಗೊಂಡಿವೆ.
ಕೇಂದ್ರದ ಈ ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕದ ರೈತ ಹಾಗೂ ರೈತ ಪರ ಸಂಘಟನೆಗಳು ಸೋಮವಾರ ರಾಜ್ಯಾದ್ಯಂತ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಕರ್ನಾಟಕ ಬಂದ್ ಆಯೋಜಿಸಿದ್ದವು. ಕಾರ್ಮಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯತೀತ) ಬಂದ್ ಕರೆಗೆ ತಮ್ಮ ಬೆಂಬಲ ನೀಡಿದ್ದವು.
ತಮಿಳುನಾಡಿನಲ್ಲಿ ಡಿಎಂಕೆ ರಾಜ್ಯವ್ಯಾಪಿ ಆಂದೋಲನ ನಡೆಸುತ್ತಿದ್ದು, ರೈತರ ಬೇಡಿಕೆಗಳನ್ನು ಬೆಂಬಲಿಸಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಧರಣಿ ನಡೆಸಿದರು. ಪಂಜಾಬಿನಲ್ಲಿ ಮಸೂದೆಗಳ ವಿರುದ್ಧ ಪ್ರತಿಭಟನೆಗಳೂ ತೀವ್ರಗೊಂಡವು.
ಒಡಿಶಾ, ಗೋವಾ, ತೆಲಂಗಾಣ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಂದಲೂ ರೈತರು ಮತ್ತು ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ಪ್ರತಿಭಟನೆಗಳು ನಡೆದ ಬಗ್ಗೆ ವರದಿಗಳು ಬಂದಿವೆ.
ಹೊಸ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಶುಕ್ರವಾರ ಭಾರತ್ ಬಂದ್ ಆಯೋಜಿಸಿದ ಎರಡು ದಿನಗಳ ನಂತರ ಸೋಮವಾರ ವ್ಯಾಪಕ ಪ್ರತಿಭಟನೆಗಳು ನಡೆದವು.
ಈ ಹೊಸ ಕೃಷಿ ಕಾನೂನುಗಳ ಪರಿಣಾಮವಾಗಿ ರೈತರು ತಮ್ಮ ಬೆಳೆಗಳಿಗೆ ಖಾತರಿಪಡಿಸಿದ ಖರೀದಿ ಬೆಲೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಕಾರ್ಪೋರೇಟ್ ಸಂಸ್ಥೆಗಳು ಇದರ ಲಾಭ ಪಡೆಯುತ್ತವೆ ಎಂದು ಮಸೂದೆಗಳ ಟೀಕಾಕಾರರು ಆಪಾದಿಸಿದ್ದಾರೆ. ದೇಶಾದ್ಯಂತ ಬಹುತೇಕ ವಿರೋಧ ಪಕ್ಷಗಳು ಮತ್ತು ರೈತ ಸಂಘಟನೆಗಳು ಮಸೂದೆಗಳನ್ನು ತೀವ್ರವಾಗಿ ವಿರೋಧಿಸಿವೆ.
ಕಳೆದ ವಾರ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ಬಗ್ಗೆ ಸರ್ಕಾರದ ವಿರುದ್ಧ ಆಂದೋಲನ ನಡೆಸುತ್ತಿರುವ ರೈತರಿಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಬೆಂಬಲ ಘೋಷಿಸಿದ್ದಾರೆ.
ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್ ನಲ್ಲಿ ಪ್ರತಿಭಟನೆ ನಡೆಸಿದರು. ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ಕಾಂಗ್ರೆಸ್, ಎಸ್‌ಎಡಿ, ಟಿಎಂಸಿ ಮತ್ತು ಇತರರು ಸೇರಿದಂತೆ ಪ್ರತಿಪಕ್ಷಗಳು ವಿರೋಧಿಸಿವೆ.
ವಿವಾದಾತ್ಮಕ ಕಾನೂನುಗಳಿಂದ ರೈತರನ್ನು ರಕ್ಷಿಸಲು ಪಂಜಾಬ್ ಕಾನೂನುಗಳನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ ಎಂದು ಅಮರೀಂದರ್ ಸಿಂಗ್ ಹೇಳಿದರು. "ನಾವು ಈಗಾಗಲೇ ಕಾನೂನು ಮತ್ತು ಕೃಷಿ ತಜ್ಞರು ಮತ್ತು ಈ ಕಾನೂನಿನ ಪರಿಣಾಮಕ್ಕೆ ಒಳಗಾಗುವವರ ಜೊತೆಗೆ ಭವಿಷ್ಯದ ಕ್ರಮ ರೂಪಿಸಲು ಸಮಾಲೋಚಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಹೊಸ ಕಾನೂನುಗಳನ್ನು ವಿರೋಧಿಸಿ ಸೋಮವಾರ ಮುಂಜಾನೆ, ದೆಹಲಿಯ ಇಂಡಿಯಾ ಗೇಟ್ ಬಳಿ ಜನರ ಗುಂಪೊಂದು ಟ್ರ್ಯಾಕ್ಟರಿಗೆ ಬೆಂಕಿ ಹಚ್ಚಿತು. ಪೊಲೀಸರ ಪ್ರಕಾರ, ೧೫-೨೦ ಜನರ ಗುಂಪು ಟ್ರ್ಯಾಕ್ಟರಿನೊಂದಿಗೆ ಮಾನ್ ಸಿಂಗ್ ರಸ್ತೆಯನ್ನು ತಲುಪಿ ಘೋಷಣೆಗನ್ನು ಕೂಗುತ್ತಾ ಟ್ರ್ಯಾಕ್ಟರಿಗೆ ಬೆಂಕಿ ಹಚ್ಚಿತು. ನಂತರ ಈ ಕೃತ್ಯದಲ್ಲಿ ಭಾಗಿಯಾದವರು ಸ್ಥಳದಿಂದ ಪರಾರಿಯಾದರು, ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.
No comments:
Post a Comment