ಕೇಂದ್ರ ನೌಕರರಿಗೆ ದಸರಾ ಕೊಡುಗೆ, 3737 ಕೋಟಿ ರೂ. ಬೋನಸ್
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ವಿಜಯದಶಮಿಗೆ ಮುನ್ನವೇ ದಸರಾ ಉಡುಗೊರೆಯಾಗಿ ೨೦೧೯-೨೦೨೦ನೇ ಸಾಲಿನ ಬೋನಸ್‌ನ್ನು ಕೇಂದ್ರ ಸರ್ಕಾರ 2020 ಅಕ್ಟೋಬರ್ 21ರ ಬುಧವಾರ ಘೋಷಿಸಿದೆ. ಗೆಜೆಟೆಡ್ ಅಲ್ಲದ ೩೦.೬೭ ಲಕ್ಷ ಮಂದಿ ನೌಕರರಿಗೆ ಇದರ ಲಾಭ ಸಿಗಲಿದ್ದು, ಸರ್ಕಾರ ಇದಕ್ಕಾಗಿ ೩,೭೩೭ ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ.
ಹಬ್ಬದ ಅವಧಿಯಲ್ಲಿ ಖರ್ಚನ್ನು ಉತ್ತೇಜಿಸುವ ಉದ್ದೇಶದಿಂದ ೨೦೧೯-೨೦೨೦ರ ಸಾಲಿನ ಬೋನಸ್ ನೀಡುವ ನಿರ್ಣಯಕ್ಕೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ ವಿಷಯವನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು ಸಚಿವ ಸಂಪುಟ ಸಭೆಯ ಬಳಿಕ ಪ್ರಕಟಿಸಿದರು.
ಉತ್ಪಾದಕತೆ ಸಂಬಂಧಿತ ಬೋನಸ್ ಮತ್ತು ಉತ್ಪಾದಕತೆ ಸಂಬಂಧಿತವಲ್ಲದ ಬೋನಸ್ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಜಾವಡೇಕರ್ ಹೇಳಿದರು.
ಕೋವಿಡ್ -೧೯ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಬೋನಸ್ ಘೋಷಣೆಯ ಬಗೆಗಿನ ಅನಿಶ್ಚಿತತೆಯಿಂದ ಚಿಂತಿತರಾಗಿದ್ದ ಸರ್ಕಾರಿ ನೌಕರರಲ್ಲಿ ಕೇಂದ್ರ ಸರ್ಕಾರದ ಪ್ರಕಟಣೆಯು ಹೊಸ ಉತ್ಸಾಹವನ್ನು ತುಂಬಿಸುತ್ತದೆ.
ಈ ಬೋನಸ್‌ಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ದಸರಾ ಹಬ್ಬಕ್ಕೆ ಮುಂಚಿತವಾಗಿ ಘೋಷಿಸಲಾಗುತ್ತದೆ. ಆದರೆ ಈ ವರ್ಷ ಬುಧವಾರದವರೆಗೂ ಯಾವುದೇ ಪ್ರಕಟಣೆ ಬಾರದೇ ಇದ್ದುದರಿಂದ ಈ ಬಾರಿ ಬೋನಸ್ ಸಿಗು ಸಾಧ್ಯತೆಗಳಿಲ್ಲ ಎಂದು ಸರ್ಕಾರಿ ನೌಕರರು ನಿರಾಶೆಗೊಂಡಿದ್ದರು.
ಬೋನಸ್ಸನ್ನು ಒಂದೇ ಕಂತಿನಲ್ಲಿ ವಿಜಯ ದಶಮಿಗೆ ಮುಂಚಿತವಾಗಿ ನೇರ ಲಾಭ ವರ್ಗಾವಣೆಯ ಮೂಲಕ ವಿತರಿಸಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದರು.
ರೈಲ್ವೇ, ಅಂಚೆ ಕಚೇರಿ, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ), ಇಎಸ್‌ಐಸಿ ಮುಂತಾದ ವಾಣಿಜ್ಯ ಸಂಸ್ಥೆಗಳ ೧೭ ಲಕ್ಷ ಗೆಜೆಟೆಡ್ ಅಲ್ಲದ ನೌಕರರು ತಮ್ಮ ಉತ್ಪಾದಕತೆ-ಸಂಬಂಧಿತ ಬೋನಸ್ ಪಡೆಯುತ್ತಾರೆ ಮತ್ತು ಇತರ ೧೩ ಲಕ್ಷ ಸರ್ಕಾರಿ ನೌಕರರು ತಮ್ಮ ಉತ್ಪಾದಕತೆ-ಸಂಬಂಧಿತವಲ್ಲದ ಬೋನಸ್ ಪಡೆಯುತ್ತಾರೆ.
ಬೋನಸ್ಸನ್ನು ತತ್ ಕ್ಷಣ ವಿತರಿಸುವಂತೆ ಒತ್ತಾಯಿಸಿ ರೈಲ್ವೇ ಸಿಬ್ಬಂದಿ ಒಕ್ಕೂಟವಾದ ಆಲ್ ಇಂಡಿಯಾ ರೈಲ್ವೆ ಫೆಡರೇಶನ್ ಅಕ್ಟೋಬರ್ ೨೨ ರಂದು ಎರಡು ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಕರೆ ನೀಡಿತ್ತು. ಈ ವರ್ಷದ ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ೨೦೧೯-೨೦ಕ್ಕೆ ಸಂಬಂಧಿಸಿದ ಬೋನಸ್ಸನ್ನು ಸರ್ಕಾರ ನಿರಾಕರಿಸಬಾರದು ಎಂದು ಒಕ್ಕೂಟ ಹೇಳಿತ್ತು.
"ಹಬ್ಬದ ಋತುವಿನಲ್ಲಿ ಮಧ್ಯಮ ವರ್ಗದ ಜನರು ತಮ್ಮ ಕೈಯಲ್ಲಿ ಹಣವನ್ನು ಹೊಂದಿದ್ದರೆ, ಬೇಡಿಕೆಗಳು ಹೆಚ್ಚಾಗುತ್ತವೆ’ ಎಂದು ಸಚಿವರು ಸಚಿವ ಸಂಪುಟದ ನಿರ್ಧಾರವನ್ನು ಪ್ರಕಟಿಸುತ್ತಾ ವಿವರಿಸಿದರು.
"ಕೇಂದ್ರ ಕ್ಯಾಬಿನೆಟ್ ೨೦೧೯-೨೦೨೦ರಲ್ಲಿ ಉತ್ಪಾದಕತೆ-ಸಂಬಂಧಿತ ಬೋನಸ್ ಮತ್ತು ಉತ್ಪಾದಕತೆ ಸಂಬಂಧಿತವಲ್ಲದ ಬೋಸ್ಸನ್ನು ಅನುಮೋದಿಸಿದೆ. ಬೋನಸ್ ಪ್ರಕಟಣೆಯಿಂದ ೩೦ ಲಕ್ಷಕ್ಕೂ ಹೆಚ್ಚು ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ ಲಾಭವಾಗಲಿದೆ ಮತ್ತು ಒಟ್ಟು ಬೊಕ್ಕಸದ ಮೇಲೆ ೩,೭೩೭ ಕೋಟಿ ರೂ.ಹೊರೆ ಬೀಳಲಿದೆ’ ಎಂದು ಅವರು ನುಡಿದರು.
ಈ ತಿಂಗಳ ಆರಂಭದಲ್ಲಿ, ಹಣಕಾಸು ಸಚಿವರು ಮುಂಬರುವ ಹಬ್ಬದ ಋತುವಿನಲ್ಲಿ ಸರ್ಕಾರಿ ನೌಕರರನ್ನು ಖರ್ಚು ಮಾಡಲು ಪ್ರೇರೇಪಿಸುವ ಹಲವಾರು ಕ್ರಮಗಳನ್ನು ಘೋಷಿಸಿದ್ದರು, ಇದರಲ್ಲಿ ’ಎಲ್ಟಿಸಿ ನಗದು ಚೀಟಿ ಯೋಜನೆ’ ಮತ್ತು ’ವಿಶೇಷ ಉತ್ಸವ ಮುಂಗಡ ಯೋಜನೆ’ ಸೇರಿದ್ದವು.
No comments:
Post a Comment