Thursday, October 22, 2020

ಜಾಧವ್ ಮರಣದಂಡನೆ ಪುನರ್ ಪರಿಶೀಲನೆ ಮಸೂದೆಗೆ ಪಾಕ್ ಅಸ್ತು

 ಜಾಧವ್ ಮರಣದಂಡನೆ ಪುನರ್ ಪರಿಶೀಲನೆ ಮಸೂದೆಗೆ ಪಾಕ್ ಅಸ್ತು

ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ನೀಡಿರುವ ಮರಣ ದಂಡನೆಯನ್ನು ಪುನರ್ ಪರಿಶೀಲಿಸುವ ಮಸೂದೆಗೆ ಪಾಕಿಸ್ತಾನದ ಸಂಸದೀಯ ಸಮಿತಿ ಅನುಮೋದನೆ ನೀಡಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು.

ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೂ ಅಂತಾರಾಷ್ಟ್ರೀಯ ನ್ಯಾಯಾಲಯ (ವಿಮರ್ಶೆ ಮತ್ತು ಮರುಪರಿಶೀಲನೆ) ಸುಗ್ರೀವಾಜ್ಞೆ‘’ ಶೀರ್ಷಿಕೆಯ ಕರಡು ಮಸೂದೆಯನ್ನು 2020 ಅಕ್ಟೋಬರ್ 21ರ ಬುಧವಾರ ಕಾನೂನು ಮತ್ತು ನ್ಯಾಯಾಂಗ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಅಂಗೀಕರಿಸಿದೆ.

ಚರ್ಚೆಯಲ್ಲಿ ಭಾಗವಹಿಸಿದ ಫೆಡರಲ್ ಕಾನೂನು ಮತ್ತು ನ್ಯಾಯಾಂಗ ಸಚಿವ ಫರೋಗ್ ನಸೀಮ್, ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನಿರ್ದೇಶನಗಳಿಗೆ ಅನುಸಾರವಾಗಿ ಮಸೂದೆಯನ್ನು ಮಂಡಿಸಲಾಗಿದೆ ಎಂದು ಹೇಳಿದರು.

ಸಂಸತ್ತು ಮಸೂದೆಯನ್ನು ಅಂಗೀಕರಿಸದಿದ್ದಲ್ಲಿ ಐಸಿಜೆ ತೀರ್ಪನ್ನು ಪಾಲಿಸದ ಕಾರಣಕ್ಕಾಗಿ ಪಾಕಿಸ್ತಾನವು ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಐವತ್ತು ವರ್ಷದ ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್ ಅವರಿಗೆ ೨೦೧೭ರ ಏಪ್ರಿಲ್ ತಿಂಗಳಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಮರಣದಂಡನೆ  ವಿಧಿಸಿತ್ತು.

೨೦೧೭ರಲ್ಲಿ, ಜಾಧವ್ ಅವರ ಜೊತೆ ರಾಜತಾಂತ್ರಿಕ  ಭೇಟಿಗೆ ಪಾಕಿಸ್ತಾನ ಅವಕಾಶ ನಿರಾಕರಿಸಿದ ಕಾರಣ, ಭಾರತವು ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಗಿತ್ತು. ಮರಣದಂಡನೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು.

No comments:

Advertisement