೩೫ ದಿನಗಳಲ್ಲಿ ೧೦ ಕ್ಷಿಪಣಿ ಪರೀಕ್ಷೆ: ಕಾಕತಾಳೀಯವಲ್ಲ, ಚೀನಾಕ್ಕೆ ಭಾರತದ ಉತ್ತರ
ನವದೆಹಲಿ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಮುಂದಿನ ವಾರ ೮೦೦ ಕಿ.ಮೀ ವ್ಯಾಪ್ತಿಯ ನಿರ್ಭಯ ಸಬ್-ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಹಾರಿಸಲಿದೆ. ಇದು ಸೇನೆ ಮತ್ತು ನೌಕಾಪಡೆಗೆ ಔಪಚಾರಿಕವಾಗಿ ಸೇರ್ಪಡೆಯಾಗುವುದಕ್ಕೆ ಮುನ್ನ ಘನ ರಾಕೆಟ್ ಬೂಸ್ಟರ್ ಕ್ಷಿಪಣಿಯ ಪರೀಕ್ಷೆಗಳಲ್ಲಿ ಕೊನೆಯದು ಎಂದು ಸುದ್ದಿ ಮೂಲಗಳು 2020 ಅಕ್ಟೋಬರ್ 10ರ ಶನಿವಾರ ತಿಳಿಸಿವೆ.
ಕಳೆದ ೩೫ ದಿನಗಳಲ್ಲಿ ಭಾರತದ ಪ್ರಮುಖ ರಕ್ಷಣಾ ಸಂಶೋಧನಾ ಸಂಸ್ಥೆ ನಡೆಸಿದ ಹತ್ತನೇ ಕ್ಷಿಪಣಿ ಪರೀಕ್ಷೆ ಇದಾಗಲಿದೆ.
ಚೀನಾವು ವಾಸ್ತವ ನಿಯಂತ್ರಣ ರೇಖೆಯಿಂದ ಹಿಂದೆ ಸರಿಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ‘ಮೇಡ್ ಇನ್ ಇಂಡಿಯಾ’ ಕಾರ್ಯತಂತ್ರದ ಅಡಿಯಲ್ಲಿ ಪರಮಾಣು ಮತ್ತು ಸಾಂಪ್ರದಾಯಿಕ ಕ್ಷಿಪಣಿಗಳ ಅಭಿವೃದ್ಧಿಗೆ ಡಿಆರ್‌ಡಿಒ ಮಾಡಿದ ಪ್ರಯತ್ನದ ಫಲವಾಗಿ ಸುಮಾರು ಒಂದು ತಿಂಗಳಲ್ಲಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ಭಾರತವು ಪರೀಕ್ಷಾ ಕ್ಷಿಪಣಿಯನ್ನು ಹಾರಿಸಿದೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ಈ ವರ್ಷದ ಮೇ ೫ ರಂದು ಲಡಾಖ್‌ನ ಪ್ಯಾಂಗೊಂಗ್ ತ್ಸೋ ಸರೋವರದ ಉತ್ತರದ ದಂಡೆಯಲ್ಲಿ ಭಾರತೀಯ ಸೈನಿಕರೊಂದಿಗೆ ಘರ್ಷಣೆ ನಡೆಸಿ, ಪೂರ್ವ ಲಡಾಖ್‌ನ ನಾಲ್ಕು ಸ್ಥಳಗಳಿಗೆ ಕ್ಷೀಪ್ರವಾಗಿ ಸೇನೆಯನ್ನು ವಿಸ್ತರಿಸಿತ್ತು.
ಜೂನ್ ತಿಂಗಳಿನಲಿ ರಕ್ತಸಿಕ್ತ ಘರ್ಷಣೆಗೆ ನಿಂತು ಎರಡೂ ಕಡೆಗಳಲ್ಲೂ ಸೈನಿಕರ ಬಲಿದಾನವಾಗುವಂತೆ ಮಾಡಿತು. ನಾಲ್ಕು ದಶಕಗಳಲ್ಲಿ ಉಭಯ ದೇಶಗಳು ಈ ಗಡಿಯಲ್ಲಿ ಸೈನಿಕರನ್ನು ಕಳೆದುಕೊಂಡಿರುವುದು ಇದೇ ಮೊದಲು.
ಎರಡು ತಿಂಗಳ ನಂತರ, ೭೦೦ ಚದರ ಕಿ.ಮೀ ಉದ್ದಕ್ಕೆ ಹರಡಿರುವ ಸುಂದರವಾದ ಉಪ್ಪುನೀರಿನ ಸರೋವರದ ಉತ್ತರ ದಂಡೆಯಲ್ಲಿ ಭಾರತೀಯ ಸೈನಿಕರು ಎತ್ತರವನ್ನು ಆಕ್ರಮಿಸಿದಾUಲೂ ಪೀಪಲ್ಸ್ ಲಿಬರೇಶನ್ ಆರ್ಮಿ ಗುಂಡುಗಳನ್ನು ಹಾರಿಸಿತು.
ಉಭಯ ದೇಶಗಳು ರಾಜತಾಂತ್ರಿಕರು, ಮಿಲಿಟರಿ ಅಧಿಕಾರಿಗಳು ಮತ್ತು ಮಂತ್ರಿಗಳ ಮಟ್ಟದಲ್ಲಿ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿವೆ, ಮತ್ತೊಂದು ಸುತ್ತಿನ ಮಾತುಕತೆಯನ್ನು ಸೋಮವಾರ ನಡೆಸಲು ನಿಗದಿಪಡಿಸಲಾಗಿದೆ. ಆದರೆ ಉದ್ವಿಗ್ನತೆಯನ್ನು ಹೆಚ್ಚಿಸುವ ಮುನ್ನ ಇದ್ದ ತನ್ನ ಸ್ಥಾನಗಳಿಗೆ ಮರಳಲು ಚೀನಾ ಹಿಂಜರಿಯುತ್ತಿದೆ.
ಚೀನೀ ಕಮ್ಯುನಿಸ್ಟ್ ಪಕ್ಷದ ‘ಕೆಟ್ಟ ನಡವಳಿಕೆಯ’ ಉದಾಹರಣೆಯಾಗಿ ಭಾರತದ ಗಡಿಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸೇನೆಯ ಆಕ್ರಮಣವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆಯೋ ಅವರು ಉಲ್ಲೇಖಿಸಿ ಎತ್ತಿ ತೋರಿಸಿದ್ದಾರೆ. ಲಡಾಖ್‌ನಾದ್ಯಂತ ಚೀನಾ ಸುಮಾರು ೬೦,೦೦೦ ಸೈನಿಕರನ್ನು ಆಳವಾದ ಸ್ಥಳಗಳಲ್ಲಿ ಸಜ್ಜುಗೊಳಿಸಿದೆ ಎಂದು ಅಮೆರಿಕ ಅಂದಾಜು ಮಾಡಿದೆ.
ಗಡಿಯಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಚೀನಾದ ಬದ್ಧತೆಯ ಬಗ್ಗೆ ಭಾರತ ಸರ್ಕಾರಕ್ಕೆ ಸಂದೇಹವಿರುವುದರಿಂದ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ತನ್ನ ಕ್ಷಿಪಣಿ ಕಾರ್ಯಕ್ರಮವನ್ನು ಕ್ಷಿಪ್ರಗೊಳಿಸುವಂತೆ ಸದ್ದಿಲ್ಲದೆ ತಿಳಿಸಲಾಯಿತು ಎಂದು ಯೋಜನೆಗಳಿಗೆ ಸಂಬಂಧಿಸಿದ ಕ್ಷಿಪಣಿ ತಜ್ಞರು ಹೇಳಿದ್ದಾರೆ.
ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವೆಹಿಕಲ್‌ನ್ನು (ಎಚ್ಎಸ್ಟಿಡಿವಿ) ಸೆಪ್ಟೆಂಬರ್ ೭ ರಂದು ಮೊತ್ತ ಮೊದಲನೆಯದಾಗಿ ಉಡಾಯಿಸಲಾಯಿತು. ಮುಂದಿನ ನಾಲ್ಕು ವಾರಗಳಲ್ಲಿ, ೪೦೦ ಕಿ.ಮೀ ದೂರದಲ್ಲಿರುವ ಗುರಿಗಳನ್ನು ಸ್ಫೋಟಿಸಬಲ್ಲ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್‌ನ ವಿಸ್ತೃತ ಶ್ರೇಣಿಯ ಆವೃತ್ತಿಯನ್ನು, ಶಬ್ದದ ವೇಗಕ್ಕಿಂತ ಎರಡರಿಂದ ಮೂರು ಪಟ್ಟು ವೇಗದಲ್ಲಿ ಚಲಿಸಬಲ್ಲ ಪರಮಾಣು ಸಾಮರ್ಥ್ಯದ ಶೌರ್ಯ ಸೂಪರ್ಸಾನಿಕ್ ಕ್ಷಿಪಣಿಗಳನ್ನು ಮತ್ತು ಜಲಾಂತರ್ಗಾಮಿಗಳನ್ನು ಗುರಿಯಾಗಿಟ್ಟು ದಾಳಿ ನಡೆಸಲು ನೆರವಾಗುವ ಸೂಪರ್ಸಾನಿಕ್ ಕ್ಷಿಪಣಿ ಟಾರ್ಪೆಡೋ ಮತ್ತು ಲೇಸರ್-ಗೈಡೆಡ್ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನು ಕೇವಲ ೧೦ ದಿನಗಳ ಅಂತರದಲ್ಲಿ ಪರೀಕ್ಷಿಸಿತು.
ಈ ನಡುವೆ, ಡಿಆರ್‌ಡಿಒ ಪರಮಾಣು-ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ -೨ ರ ರಾತ್ರಿಯ ಪ್ರಯೋಗವನ್ನು ಸಹ ನಡೆಸಿತು. ಈ ಕ್ಷಿಪಣಿಯು ಮೇಲ್ಮೈಯಿಂದ ಮೇಲ್ಮೈಗೆ ೩೦೦ ಕಿ.ಮೀ ವ್ಯಾಪ್ತಿಯಲ್ಲಿ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಮೇಲ್ಮೈಯಿಂದ ಮೇಲ್ಮೈಗೆ ಹಾರುವ ಕಾರ್‍ಯತಂತ್ರವನ್ನು ಹೊಂದಿರುವ ಭಾರತದ ದೇಶೀ ನಿರ್ಮಿತ ಚೊಚ್ಚಲ ಕ್ಷಿಪಣಿ.
ತ್ವರಿತ ಅಭಿವೃದ್ಧಿ ಮತ್ತು ಪರೀಕ್ಷೆಯು ಲಡಾಖ್ ಗಡಿಯುದ್ದಕ್ಕೂ ಭೂಪ್ರದೇಶ-ಅಪ್ಪುಗೆಯ ಸಬ್‌ಸಾನಿಕ್ ನಿರ್ಭಯ್ ಕ್ಷಿಪಣಿಯನ್ನು ಸೀಮಿತ ಸಂಖ್ಯೆಯಲ್ಲಿ ನಿಯೋಜಿಸಲು ಸಾಧ್ಯವಾಗಿಸಿದೆ.
"ಶೌರ್ಯ ಕ್ಷಿಪಣಿ ಮುಂದಿನದು" ಎಂದು ಅಧಿಕಾರಿಯೊಬ್ಬರು ಹೊಸ ಯುಗದ ಶಸ್ತ್ರಾಸ್ತ್ರದ ಬಗ್ಗೆ ಹೇಳಿದರು, ಅದು ಸುಮಾರು ೨೦೦ ಕೆಜಿ ತೂಕದ ಪರಮಾಣು ಸಿಡಿತಲೆ ಸಾಗಿಸಬಲ್ಲದು ಮತ್ತು ಸೆಕೆಂಡಿಗೆ ೨.೪ ಕಿ.ಮೀ ವೇಗದಲ್ಲಿ ಹಾರಬಲ್ಲುದು.
ಈ ಕ್ಷಿಪಣಿಗಳನ್ನು ಸೇನೆಗೆ ಸೇರ್ಪಡೆ ಮಾಡಲು ಸರ್ಕಾರ ಅನುಮತಿ ನೀಡಿದೆ. ರಾಷ್ಟ್ರೀಯ ಕಾರ್ಯತಂತ್ರ ಮಂಡಳಿಯ ಮಾರ್ಗದರ್ಶನದಲ್ಲಿ ಭಾರತೀಯ ಕಾರ್ಯತಂತ್ರದ ಪಡೆಗಳ ಕಮಾಂಡ್ ತನ್ನ ನಿಯೋಜನೆಯ ಸ್ಥಳಗಳನ್ನು ನಿರ್ಧರಿಸಲಿದೆ.
ಪರೀಕ್ಷಾ ಕ್ಷಿಪಣಿ: ಭಾರತದ ಹೆಜ್ಜೆ
* ಹೈಪರ್‌ಸಾನಿಕ್ ತಂತ್ರಜ್ಞಾನ ಪ್ರದರ್ಶನ ವಾಹನ: ಸೆಪ್ಟೆಂಬರ್ ೭.
* ಅಭ್ಯಾಸ್-ಹೈ ಸ್ಪೀಡ್ ವಿಸ್ತರಿಸಬಹುದಾದ ವೈಮಾನಿಕ ಗುರಿ: ಸೆಪ್ಟೆಂಬರ್ ೨೨.
* ಲೇಸರ್ ಗೈಡೆಡ್ ಆಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿ: ಸೆಪ್ಟೆಂಬರ್ ೨೨.
* ಆಯಕಟ್ಟಿನ ಕ್ಷಿಪಣಿ ಪೃಥ್ವಿಯ ರಾತ್ರಿ ಪ್ರಯೋಗ: ಸೆಪ್ಟೆಂಬರ್ ೨೩.
* ಸೂರ್‌ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ: ಸೆಪ್ಟೆಂಬರ್ ೩೦.
* ಲೇಸರ್ ಗೈಡೆಡ್ ಆಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿ: ಅಕ್ಟೋಬರ್ ೧.
* ಸೂರ್‌ಸಾನಿಕ್ ಶೌರ್ಯ ಕಾರ್ಯತಂತ್ರದ ಕ್ಷಿಪಣಿ: ಅಕ್ಟೋಬರ್ ೩.
* ಸೂಪರ್‌ಸಾನಿಕ್ ಕ್ಷಿಪಣಿ ಸಹಾಯದ ಟಾರ್ಪೆಡೊ ಬಿಡುಗಡೆ: ಅಕ್ಟೋಬರ್ ೫.
* ವಿಕಿರಣ ನಿರೋಧಿ ಕ್ಷಿಪಣಿ: ಅಕ್ಟೋಬರ್ ೯.
No comments:
Post a Comment