ವೈದ್ಯಕೀಯ ನೊಬೆಲ್ ಪ್ರಶಸ್ತಿ ಅಮೆರಿಕ, ಬ್ರಿಟನ್ ವಿಜ್ಞಾನಿಗಳಿಗೆ
ಸ್ಟಾಕ್ ಹೋಮ್: ’ಹೆಪಟೈಟಿಸ್ ಸಿ ವೈರಸ್’ ಪತ್ತೆ ಮಾಡಿದ್ದಕ್ಕಾಗಿ ಅಮೆರಿಕದ ಹಾರ್ವೆ ಜೆ.ಆಲ್ಟರ್, ಚಾರ್ಲ್ಸ್ ಎಂ.ರೈಸ್ ಮತ್ತು ಬ್ರಿಟನ್ನಿನ ಮೈಕೆಲ್ ಹೌಟನ್ ಹಾಗೂ ಅವರಿಗೆ ಜಂಟಿಯಾಗಿ ಪ್ರಸಕ್ತ ಸಾಲಿನ ವೈದ್ಯಕೀಯ ಅಥವಾ ಶರೀರಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು 2020 ಅಕ್ಟೋಬರ್ 05ರ ಸೋಮವಾರ ಘೋಷಿಸಲಾಯಿತು.
ಇತಿಹಾಸದಲ್ಲಿ ಮೊದಲ ಬಾರಿಗೆ ಹೆಪಟೈಟಿಸ್ ಸಿ ವೈರಸ್ ಶಮನಗೊಳಿಸುವುದು ಈ ವಿಜ್ಞಾನಿಗಳ ಸಂಶೋಧನೆಗಳಿಂದ ಸಾಧ್ಯವಾಯಿತು. ಹೆಪಟೈಟಿಸ್ ಎ ಮತ್ತು ಬಿ ಸಂಶೋಧನೆಗಳ ನಂತರವೂ ದೀರ್ಘಕಾಲದವರೆಗೂ ಕಾಡುವ ಯಕೃತಿನ ಸಮಸ್ಯೆಗೆ ಪೂರ್ಣ ಪರಿಹಾರ ದೊರೆತಿರಲಿಲ್ಲ. ಹೆಪಟೈಟಿಸ್ ಸಿ ವೈರಸ್ ಕುರಿತು ಪತ್ತೆಯಾದ ನಂತರದಲ್ಲಿ ಅದಕ್ಕೆ ಅಗತ್ಯವಿರುವ ರಕ್ತ ಪರೀಕ್ಷೆಗಳು ಹಾಗೂ ಹೊಸ ಔಷಧಗಳ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಜನರ ಜೀವ ಉಳಿದಿದೆ ಎಂದು ನೊಬೆಲ್ ಸಮಿತಿಯ ಮುಖ್ಯಸ್ಥ ಥಾಮಸ್ ಪರ್ಲ್ಮನ್ ಹೇಳಿಕೆ ತಿಳಿಸಿತು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಸುಮಾರು ೭ ಕೋಟಿ ಹೆಪಟೈಟಿಸ್ ಪ್ರಕರಣಗಳಿದ್ದು, ಪ್ರತಿ ವರ್ಷ ಹೆಪಟೈಟಿಸ್ ವೈರಸ್ನಿಂದಾಗಿ ೪ ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.
ದೀರ್ಘಾವಧಿವರೆಗೂ ಕಾಡುವ ಹೆಪಟೈಟಿಸ್ ಕಾಯಿಲೆಯು ಕ್ಯಾನ್ಸರ್ ಮತ್ತು ಯಕೃತ್ತಿನ ಸಮಸ್ಯೆ ಉಂಟು ಮಾಡುತ್ತದೆ.
ನೊಬೆಲ್ ಪ್ರಶಸ್ತಿಯು ಚಿನ್ನದ ಪದಕ ಮತ್ತು ೧೦ ಮಿಲಿಯನ್ ಸ್ಪೀಡಿಶ್ ಕ್ರೊನಾ (ಅಂದಾಜು ೮.೨೨ ಕೋಟಿ ರೂಪಾಯಿ) ಒಳಗೊಂಡಿರುತ್ತದೆ.
ಕೊರೊನಾ ವೈರಸ್ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿರುವ ಹೊತ್ತಿನಲ್ಲಿ ಹೆಪಟೈಟಿಸ್ ಸಿ ವೈರಸ್ ಪತ್ತೆ ಹಚ್ಚಿದವರಿಗೆ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಲಭಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಇದು ವೈದ್ಯಕೀಯ ಸಂಶೋಧನೆಯು ವಿಶ್ವದಾದ್ಯಂತದ ಸಮಾಜಗಳು ಮತ್ತು ಆರ್ಥಿಕತೆಗಳಿಗೆ ಇರುವ ಮಹತ್ವವನ್ನು ಎತ್ತಿ ತೋರಿಸಿದೆ.
ಅಕ್ಟೋಬರ್ ೧೨ರ ವರೆಗೂ ಆರು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿರುವವರಿಗೆ ನೊಬೆಲ್ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಸಾಧನೆ ತೋರಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಇದು ೧೨೪ ವರ್ಷಗಳ ಹಿಂದೆ ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.
No comments:
Post a Comment