Saturday, October 3, 2020

ಹತ್ರಾಸ್ ಪ್ರಕರಣ: ಸಿಬಿಐ ತನಿಖೆಗೆ ಸಿಎಂ ಯೋಗಿ ಆದೇಶ

 ಹತ್ರಾಸ್  ಪ್ರಕರಣ: ಸಿಬಿಐ ತನಿಖೆಗೆ ಸಿಎಂ ಯೋಗಿ ಆದೇಶ

ಆಗ್ರಾ: ಹತ್ರಾಸ್‌ನಲ್ಲಿ ಸಂಭವಿಸಿದ ೧೯ರ ಹರೆಯದ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಸಾವು ಪ್ರಕರಣದ ಸಮಗ್ರ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ 2020 ಅಕ್ಟೋಬರ್ 03ರ ಶನಿವಾರ ರಾತ್ರಿ ಆದೇಶ ನೀಡಿದರು.

ಇದೇ ವೇಳೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹತ್ರಾಸ್ ತಲುಪಿ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.

ಇದಕ್ಕೆ ಮುನ್ನ, ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಾವನ್ನಪ್ಪಿದ ೧೯ ವರ್ಷದ ಸಂತ್ರಸ್ತ ಮಹಿಳೆಯ ಕುಟುಂಬ ಸದಸ್ಯರು ಎತ್ತಿರುವ ಎಲ್ಲ ವಿಷಯಗಳ ಬಗೆಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ಗಮನಿಸಲಿದೆ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ ಶನಿವಾರ ಹತ್ರಾಸ್‌ನಲ್ಲಿ ತಿಳಿಸಿದ್ದರು.

ಗ್ರಾಮಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ಸಾರ್ವಜನಿಕ ಪ್ರತಿನಿಧಿಗಳು ಹಾಗೆ ಮಾಡಬಹುದು ಆದರೆ ಒಂದು ಸಮಯದಲ್ಲಿ ಕೇವಲ ಐದು ಮಂದಿ ಮಾತ್ರ ಭೇಟಿ ನೀಡಬಹುದು ಎಂದು ಅವರು ಸ್ಪಷ್ಟಪಡಿಸಿದರು.

ಅವಸ್ಥಿ ಮತ್ತು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಎಚ್‌ಸಿ ಅವಸ್ಥಿ ಶನಿವಾರ ಹತ್ರಾಸ್ ಗ್ರಾಮಕ್ಕೆ ಆಗಮಿಸಿದ್ದರು. ಅವರು ಸಂತ್ರಸ್ತೆಯ ಮನೆಗೆ ತೆರಳಿ ಮತ್ತು ಕುಟುಂಬ ಸದಸ್ಯರೊಂದಿಗೆ ಸುಮಾರು ಅರ್ಧ ಘಂಟೆ ಮಾತನಾಡಿದರು.

"ಇದು ದುರದೃಷ್ಟಕರ ಘಟನೆಯಾಗಿದೆ. ನಾವು ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಬಂದಿದ್ದೇವೆ ಮತ್ತು ತಪ್ಪಿತಸ್ಥರನ್ನು ರಕ್ಷಿಸಲಾಗುವುದಿಲ್ಲ ಎಂದು ನಾವು ಅವರಿಗೆ ಭರವಸೆ ನೀಡಿದ್ದೇವೆ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು.

"ಹಿರಿಯ ಅಧಿಕಾರಿಗಳನ್ನು ಹೊಂದಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ತನ್ನ ಕಾರ್ಯವನ್ನು ಪ್ರಾರಂಭಿಸಿದೆ ಮತ್ತು ಶುಕ್ರವಾರ ಸಂಜೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ, ಅದರ ಆಧಾರದ ಮೇಲೆ, ಹತ್ರಾಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸರ್ಕಲ್ ಅಧಿಕಾರಿ, ಸಬ್ ಇನ್ಸ್‌ಪೆಕ್ಟರ್, ಹಿರಿಯ ಸಬ್ ಇನ್ಸ್‌ಪೆಕ್ಟರ್ ಮತ್ತು ಹೆಡ್ ಮೊಹರಿರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.

"ನಮ್ಮನ್ನು ಭೇಟಿಯಾದಾಗ, ಕುಟುಂಬ ಸದಸ್ಯರು ಕೆಲವು ವಿಷಯಗಳನ್ನು ಎತ್ತಿದ್ದಾರೆ. ಎಲ್ಲ ವಿಷಯಗಳನ್ನು  ಎಸ್‌ಐಟಿ ಪರಿಹರಿಸಲಿದೆ ಎಂದು ಅವರು ನುಡಿದರು.

"ಗ್ರಾಮದಲ್ಲಿ ನಿರಂತರವಾಗಿ ಭದ್ರತೆ ಒದಗಿಸಲಾಗುವುದು ಎಂದು ಡಿಜಿಪಿ ಭರವಸೆ ನೀಡಿದ್ದಾರೆ, ಇದರಿಂದ ಶಾಂತಿ ಮತ್ತು ಸೌಹಾರ್ದ ಮುಂದುವರೆಯುತ್ತದೆಎಂದು ಅವಸ್ಥಿ ಹೇಳಿದರು.

ಏತನ್ಮಧ್ಯೆ, ಹತ್ರಾತ್ ಜಿಲ್ಲೆಯ ಹೊಸ ಪೊಲೀಸ್ ವರಿಷ್ಠಾಧಿಕಾರಿ ವಿನಿತ್ ಜೈಸ್ವಾಲ್ ಅವರು ಶನಿವಾರ ಕರ್ತವ್ಯಕ್ಕೆ ಹಾಜರಾದರು.

ಹತ್ರಾಸ್: ಸಂತ್ರಸ್ತೆಯ ಕುಟುಂಬ ಭೇಟಿ:

ರಾಹುಲ್ ಗಾಂಧಿ, ಪ್ರಿಯಾಂಕಾಗೆ ಅನುಮತಿ

ನವದೆಹಲಿ: ದೆಹಲಿ-ನೋಯ್ಡಾ ಗಡಿಯಲ್ಲಿ ಸಂಕ್ಷಿಪ್ತವಾಗಿ ತಡೆದ ಬಳಿಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ೧೯ ವರ್ಷದ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡುವ ಸಲುವಾಗಿ ಹತ್ರಾಸ್‌ಗೆ ಪ್ರಯಾಣಿಸಲು 2020 ಅಕ್ಟೋಬರ್ 03ರ ಶನಿವಾರ ಅವಕಾಶ ನೀಡಲಾಯಿತು.

ಮಾಜಿ ಸಂಸತ್ ಸದಸ್ಯ ದೀಪೇಂದರ್ ಸಿಂಗ್ ಹೂಡಾ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಾಯಕರಿಗೆ ಉತ್ತರ ಪ್ರದೇಶ ಪೊಲೀಸರು ಗಡಿ ದಾಟಲು ಅನುಮತಿ ನೀಡಲಾಯಿತು.

ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ರಾಹುಲ್ ಮತ್ತು ಪ್ರಿಯಾಂಕಾ ಅವರು ನಡೆಸಿದ ಎರಡನೇ ಪ್ರಯತ್ನ ಇದಾಗಿದೆ.

ಸೆಕ್ಷನ್ ೧೪೪ ರಡಿ ವಿಧಿಸಲಾದ ನಿರ್ಬಂಧದ ಹಿನ್ನೆಲೆಯಲ್ಲಿ ಗುರುವಾರ ತಮ್ಮ ವಾಹನಗಳನ್ನು ತಡೆದು ನಿಲ್ಲಿಸಿದ ನಂತರ ಉಭಯ ನಾಯಕರೂ ಹತ್ರಾಸ್‌ಗೆ ಮೆರವಣಿಗೆಯಲ್ಲಿ ಹೋಗಲು ಯತ್ನಿಸಿದ್ದರು. ಸೆಕ್ಷನ್ ೧೪೪ ಮತ್ತು ಸಾಂಕ್ರಾಮಿಕ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದಲ್ಲಿ ಅವರನ್ನು ಬಂಧಿಸಿದ ಪೊಲೀಸರು ಬಳಿಕ ಅವರನ್ನು ದೆಹಲಿಗೆ ವಾಪಸ್ ಕಳಿಸಿದ್ದರು.

ಸೆಕ್ಷನ್ ೧೪೪ ಅನ್ನು ಉಲ್ಲೇಖಿಸಿದ ನೋಯ್ಡಾ ಪೊಲೀಸ್ ಆಯುಕ್ತ ಅಲೋಕ್ ಸಿಂಗ್, ಗಾಂಧಿ ಸೇರಿದಂತೆ ಗರಿಷ್ಠ ಏಳು ಜನರಿಗೆ ಗಡಿ ದಾಟಲು ಅವಕಾಶ ನೀಡಲಾಗುವುದು ಎಂದು ಹೇಳಿದರು. ಉಳಿದ ಕಾಂಗ್ರೆಸ್ ಕಾರ್ಯಕರ್ತರನ್ನು ಹಿಂದಿರುಗಿಸುವಂತೆ ಅವರು ಸೂಚಿಸಿದರು.

ಡಿಎನ್‌ಡಿ ಟೋಲ್ ಪ್ಲಾಜಾದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಬೆತ್ತ ಪ್ರಹಾರ ನಡೆಸಿದರು. ಸಾಮಾನ್ಯ ಸಂಚಾರಕ್ಕಾಗಿ ಡಿಎನ್‌ಡಿ ಪ್ಲಾಜಾವನ್ನು ಇನ್ನೂ ತೆರೆದಿಲ್ಲ.

ನಾಯಕರು ಸೆಕ್ಷನ್ ೧೪೪ ಅನ್ನು ಉಲ್ಲಂಘಿಸುತ್ತಿದ್ದಾರೆ ಎಂದು ನೋಯ್ಡಾ ಹೆಚ್ಚುವರಿ ಪೊಲೀಸ್ ಆಯುಕ್ತ ರಣವಿಜಯ್ ಸಿಂಗ್ ಹಿಂದೆ ಹೇಳಿದ್ದರು ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಚದುರುವಂತೆ ಪ್ರದರ್ಶನಕಾರರನ್ನು ಆಗ್ರಹಿಸಿದ್ದರು.

ಅವರು ಸಿಆರ್‌ಪಿಸಿಯ ಸೆಕ್ಷನ್ ೧೪೪ ಅನ್ನು ಉಲ್ಲಂಘಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ಜನರ ಗುಂಪು ಸೇರಿಸುವುದನ್ನು ನಿಯಂತ್ರಿಸಲು ನಾವು ಇಲ್ಲಿ ನಿಯೋಜಿತರಾಗಿದ್ದೇವೆ. ಕೋವಿಡ್ -೧೯ ಸಾಂಕ್ರಾಮಿಕದ ಮಧ್ಯೆ ನಾವು ಶಾಂತಿಗಾಗಿ ಮನವಿ ಮಾಡುತ್ತಿದ್ದೇವೆ ಮತ್ತು ವಿಶಾಲ ಸಾರ್ವಜನಿಕ ಹಿತದೃಷ್ಟಿಯಿಂದ ಚದುರಬೇಕು ಎಂದು ಬೆಂಗಾವಲಿನ ಒಂದು ತಂಡ ಹಾದು ಹೋಗುವುದಕ್ಕೆ ಮುನ್ನ ಸಿಂಗ್ ಹೇಳಿದರು.

No comments:

Advertisement