ಲಡಾಖ್ : ಟ್ವಿಟ್ಟರಿನ ವಿವರಣೆ ಅಸಮರ್ಪಕ
ನವದೆಹಲಿ: ಟ್ವಿಟ್ಟರ್ ಇಂಡಿಯಾ ಮೈಕ್ರೋಬ್ಲಾಗಿಂಗ್ ಸಂಸ್ಥೆಯು ಲಡಾಖ್ನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿ ತೋರಿಸಿದ ಕೆಲವು ದಿನಗಳ ನಂತರ, ದತ್ತಾಂಶ ಸಂರಕ್ಷಣೆ ಕುರಿತ ಸಂಸದೀಯ ಸಮಿತಿಯು ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ನೀಡಿರುವ ಸ್ಪಷ್ಟೀಕರಣವು ಅಸಮರ್ಪಕವಾಗಿದೆ ಎಂದು 2020 ಅಕ್ಟೋಬರ್ 28ರ ಬುಧವಾರ ಹೇಳಿತು.
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿ ಟ್ವಿಟ್ಟರ್ ಇಂಡಿಯಾ ಜಮ್ಮು ಮತ್ತು ಕಾಶ್ಮೀರವನ್ನು ತೋರಿಸಿದೆ ಎಂದು ಭಾರತ ಮೂಲದ ಥಿಂಕ್ ಟ್ಯಾಂಕ್ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ನ ವಿಶೇಷ ಸಹೋದ್ಯೋಗಿ ಗಮನಸೆಳೆದ ನಂತರ ದೊಡ್ಡ ವಿವಾದವೆದ್ದಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟರ್ ಇಂಡಿಯಾ ಅಧಿಕಾರಿಗಳನ್ನು ಡೇಟಾ ಸಂರಕ್ಷಣೆಗಾಗಿ ಜಂಟಿ ಸಂಸದೀಯ ಸಮಿತಿ ಪ್ರಶ್ನಿಸಿತ್ತು.
ಸಮಿತಿಗೆ ಟ್ವಿಟ್ಟರ್ ನೀಡಿದ ವಿವರಣೆಯು ಅಸಮರ್ಪಕವಾಗಿದೆ ಎಂಬ ಸರ್ವಾನುಮತದ ಅಭಿಪ್ರಾಯ ಸಮಿತಿಯಲ್ಲಿ ವ್ಯಕ್ತವಾಗಿದೆ ಎಂದು ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಲಡಾಖ್ನ್ನು ಚೀನಾದ ಭಾಗವಾಗಿ ತೋರಿಸಿರುವುದು ಕ್ರಿಮಿನಲ್ ಅಪರಾಧವಾಗಿದ್ದು, ಇದಕ್ಕೆ ಏಳು ವರ್ಷಗಳವರೆಗೆ ಸೆರೆವಾಸವನ್ನು ವಿಧಿಸಬಹುದು ಎಂದು ಬಿಜೆಪಿ ಸಂಸದೆ ಹೇಳಿದರು.
ಟ್ವಿಟ್ಟರ್ ಭಾರತದ ಸೂಕ್ಷ್ಮತೆಯನ್ನು ಗೌರವಿಸುತ್ತದೆ ಎಂಬುದಾಗಿ ಟ್ವಿಟ್ಟರ್ ಅಧಿಕಾರಿಗಳು ಹೇಳಿದ್ದಾರೆ ಎಂದು ಲೇಖಿ ಹೇಳಿದರು.
"ಆದರೆ ಈ ವಿವರಣೆ ಅಸಮರ್ಪಕವಾಗಿದೆ, ಇದು ಕೇವಲ ಸೂಕ್ಷ್ಮತೆಯ ಪ್ರಶ್ನೆಯಲ್ಲ.
ಇದು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ವಿರುದ್ಧವಾಗಿದೆ’ ಎಂದು ಲೇಖಿ ಅವರನ್ನು ಉಲ್ಲೇಖಿಸಿದ ವರದಿ ಹೇಳಿತು.
ಟ್ವಿಟ್ಟರ್ ಇಂಡಿಯಾ ಪರವಾಗಿ ಸಮಿತಿಯ ಮುಂದೆ ಸಂಸ್ಥೆಯ ಸಾರ್ವಜನಿಕ ನೀತಿ ಹಿರಿಯ ವ್ಯವಸ್ಥಾಪಕ ಶಗುಫ್ತಾ ಕಮ್ರಾನ್, ಕಾನೂನು ಸಲಹೆಗಾರರಾದ ಆಯುಶಿ ಕಪೂರ್, ನೀತಿ ಸಂವಹನ ಅಧಿಕಾರಿ ಪಲ್ಲವಿ ವಾಲಿಯಾ, ಮತ್ತು ಕಾರ್ಪೊರೇಟ್ ಭದ್ರತೆಯ ಅಧಿಕಾರಿ ಮನ್ವಿಂದರ್ ಬಾಲಿ ಹಾಜರಾಗಿದ್ದರು.
ವಿಶೇಷವೆಂದರೆ, ವಿದ್ಯುನ್ಮಾನ,
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕಾರಿಗಳು ಕೂಡಾ ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡಿದರು.
"ಭೌಗೋಳಿಕತೆಯನ್ನು ಪುನರ್ರಚಿಸಲು ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವೆಂದು ಘೋಷಿಸಲು ಟ್ವಿಟ್ಟರ್ ನಿರ್ಧರಿಸಿದೆ. ಇದು ಭಾರತದ ಕಾನೂನುಗಳ ಉಲ್ಲಂಘನೆಯಾಗದಿದ್ದರೆ, ಬೇರೆ ಯಾವುದು ಭಾರತೀಯ ಕಾನೂನುಗಳ ಉಲ್ಲಂಘನೆಯಾಗುತ್ತದೆ? ಇದಕ್ಕಿಂತಲೂ ಸಣ್ಣ ತಪ್ಪೆಸಗಿದ ಭಾರತದ ನಾಗರಿಕರಿಗೆ ಶಿಕ್ಷೆಯಾಗಿದೆ. ಅಮೆರಿಕದ ಈ ದೊಡ್ಡ ಟೆಕ್ ಸಂಸ್ಥೆಯು ಕಾನೂನನ್ನು ಮೀರಿದೆಯೇ?’ ಎಂದು ಗುಪ್ತಾ ಅಕ್ಟೋಬರ್ ೧೮ ರಂದು ಟೆಲಿಕಾಂ ಮತ್ತು ಐಟಿ ಸಚಿವ ರವಿಶಂಕರ ಪ್ರಸಾದ್ ಅವರನ್ನು ಟ್ಯಾಗ್ ಮಾಡಿ ಬರೆದಿದ್ದರು.
ಇದಕ್ಕೆ ಸ್ಪಂದಿಸಿದ ಹಲವಾರು ನೆಟ್ಟಿಗರು ಟ್ವಿಟರ್ ಇಂಡಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ರವಿಶಂಕರ ಪ್ರಸಾದ್ ಮತ್ತು ಸರ್ಕಾರವನ್ನು ಆಗ್ರ್ರಹಿಸಿದ್ದರು.
"ಇಲ್ಲ ಟ್ವಿಟ್ಟರ್ ಇದು ವಿಲಕ್ಷಣ ಘಟನೆ ಅಲ್ಲ’ ಎಂದು ಗುಪ್ತಾ ಮತ್ತೊಂದು ಟ್ವೀಟಿನಲ್ಲಿ ಬರೆದಿದ್ದರು.
ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲ ಉಂಟಾದ ಬಳಿಕ, ಟ್ವಿಟ್ಟರ್ ಇಂಡಿಯಾ ವಕ್ತಾರರು ಕಳೆದ ವಾರ "ತಾಂತ್ರಿಕ ಸಮಸ್ಯೆಯ’ ಪರಿಣಾಮವಾಗಿ ಟ್ಯಾಗ್ ಸಂಭವಿಸಿದೆ. ಅದನ್ನು ಇತ್ಯರ್ಥ ಪಡಿಸಲಾಗಿದೆ ಎಂದು ದೃಢ ಪಡಿಸಿದ್ದರು.
‘ನಾವು ಈ ತಾಂತ್ರಿಕ ವಿಷಯದ ಬಗ್ಗೆ ಭಾನುವಾರ ತಿಳಿದುಕೊಂಡಿದ್ದೇವೆ ಮತ್ತು ಅದರ ಸುತ್ತಲಿನ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಗೌರವಿಸುತ್ತೇವೆ. ಸಂಬಂಧಪಟ್ಟ ಜಿಯೋಟ್ಯಾಗ್ ಸಮಸ್ಯೆಯನ್ನು ತನಿಖೆ ಮಾಡಲು ಮತ್ತು ಪರಿಹರಿಸಲು ತಂಡಗಳು ಶೀಘ್ರವಾಗಿ ಕೆಲಸ ಮಾಡಿವೆ’ ಎಂದು ಟ್ವಿಟ್ಟರ್ ಇಂಡಿಯಾದ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದರು.
No comments:
Post a Comment