೨೦೨೧ರ ಆದಿಯಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ: ಡಾ. ಹರ್ಷ ವರ್ಧನ್
ನವದೆಹಲಿ: ”ಮುಂದಿನ ವರ್ಷದ ಆದಿಯಲ್ಲಿ ಭಾರತಕ್ಕೆ ವಿವಿಧ ಮೂಲಗಳಿಂದ ಕೊರೊನಾವೈರಸ್ ವಿರುದ್ಧದ ಲಸಿಕೆ ಲಭ್ಯವಾಗುವ ಸಾಧ್ಯತೆ ಇದ್ದು, ದೇಶದಾದ್ಯಂತ ಲಸಿಕೆಯನ್ನು ಹೇಗೆ ಪೂರೈಸಬೇಕು ಎಂಬುದರ ಬಗ್ಗೆ ತಜ್ಞರ ಗುಂಪು ಯೋಜನೆ ರೂಪಿಸುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ 2020 ಅಕ್ಟೋಬರ್ 13ರ ಮಂಗಳವಾರ ಹೇಳಿದ್ದಾರೆ.
’ಲಭ್ಯವಾಗಲಿರುವ ಲಸಿಕೆಗಳ ಪ್ರಮಾಣ ಹಾಗೂ ಭಾರತದ ಜನಸಂಖ್ಯೆಯ ಗಾತ್ರವನ್ನು ಹೋಲಿಸಿ ನೋಡಿದಾಗ, ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸಬೇಕಾದರೆ ಒಂದಕ್ಕಿಂತ ಹೆಚ್ಚು ಲಸಿಕೆ ತಯಾರಕರೊಂದಿಗೆ ನಾವು ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಹರ್ಷವರ್ಧನ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರೂ ‘ಈ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದ ವೇಳೆಗೆ ನೋಂದಣಿ ಮಾಡಿಸಲು ಲಸಿಕೆ ಸಿದ್ಧವಾಗಲಿದೆ’ ಎಂದು ಹೇಳಿದ್ದಾರೆ.
’ಪ್ರಸ್ತುತ ಸುಮಾರು ೪೦ ಕಂಪನಿಗಳು ತಾವು ಅಭಿವೃದ್ಧಿಪಡಿಸಿರುವ ಲಸಿಕೆಗಳನ್ನು ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸುತ್ತಿವೆ. ಅವುಗಳಲ್ಲಿ ೧೦ ಕಂಪನಿಗಳ ಲಸಿಕೆಗಳು ಮೂರನೇ ಹಂತದ ಪ್ರಯೋಗದಲ್ಲಿವೆ. ಇದು ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗ. ಈ ಹಂತದಲ್ಲಿ ಲಸಿಕೆಗಳ ಪರಿಣಾಮಕಾರಿ ಮತ್ತು ಸುರಕ್ಷತೆ ಬಗ್ಗೆ ಫಲಿತಾಂಶ ಲಭ್ಯವಾಗಲಿದೆ’ ಎಂದು ಸೌಮ್ಯ ತಿಳಿಸಿದ್ದಾರೆ.
ಈ ಹಿಂದೆ ಹರ್ಷವರ್ಧನ್ ಅವರು, ’ಲಸಿಕೆಯನ್ನು ಸಮರ್ಪಕವಾಗಿ ಪೂರೈಸುವುದಕ್ಕಾಗಿ ರಾಜ್ಯ ಸರ್ಕಾರಗಳಿಂದ ದತ್ತಾಂಶಗಳನ್ನು ಸಂಗ್ರಹಿಸುತ್ತಿದೆ’ ಎಂದು ಹೇಳಿದ್ದರು. ’ದೇಶದ ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ’ ಎಂದೂ ಹೇಳಿದ್ದರು.
No comments:
Post a Comment