Wednesday, October 7, 2020

ಹತ್ರಾಸ್‌ಗೆ ತೆರಳುತ್ತಿದ್ದ ಕೇರಳ ಪತ್ರಕರ್ತ, ಪಿಎಫ್‌ಐ ವ್ಯಕ್ತಿಗಳ ಬಂಧನ

 ಹತ್ರಾಸ್ಗೆ ತೆರಳುತ್ತಿದ್ದ ಕೇರಳ ಪತ್ರಕರ್ತ, ಪಿಎಫ್ಐ ವ್ಯಕ್ತಿಗಳ ಬಂಧನ

ನವದೆಹಲಿ: ಕೇರಳ ಮೂಲದ ಪತ್ರಕರ್ತ ಮತ್ತು ತೀವ್ರವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್) ಜೊತೆಗೆ ಸಂಪರ್ಕ ಹೊಂದಿದ್ದ ಇತರ ಮೂವರನ್ನು 2020 ಅಕ್ಟೋಬರ್ 07 ಬುಧವಾರ ದೆಹಲಿಯಿಂದ ಹತ್ರಾಸ್ಗೆ ತೆರಳುತ್ತಿದ್ದಾಗ ಮಥುರಾದಲ್ಲಿ ಬಂಧಿಸಿ ಅವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ೧೪ ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು.

ವರ್ಷದ ಆರಂಭದಲ್ಲಿ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಗೆ ಹಣ  ಒದಗಿಸಿದ ಆರೋಪ ಪಿಎಫ್ ಮೇಲಿದೆ. ಉತ್ತರ ಪ್ರದೇಶದ ಪೊಲೀಸರು ಸಂಘಟನೆಯನ್ನು ನಿಷೇಧಿಸುವಂತೆ ಕೋರಿದ್ದರು.

ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿ ದಲಿತ ಮಹಿಳೆ ಸಾವನ್ನಪ್ಪಿದ್ದ ಹತ್ರಾಸ್ಗೆ ಆರೋಪಿಗಳು ದೆಹಲಿಯಿಂದ ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

"ಅಕ್ಟೋಬರ್ ರಂದು ಮಥುರಾದಲ್ಲಿ ಬಂಧಿಸಲ್ಪಟ್ಟ ಮತ್ತು ಪಿಎಫ್ ಜೊತೆ ಸಂಪರ್ಕ ಹೊಂದಿದ್ದ ನಾಲ್ವರು ಶಾಂತಿಯನ್ನು ಭಂಗಗೊಳಿಸುವ ದೊಡ್ಡ ಫಿತೂರಿಯ ಭಾಗವಾಗಿ ಹತ್ರಾಸ್ಗೆ ಹೋಗುತ್ತಿದ್ದರು ಎಂದು ಅವರ ವಿರುದ್ಧ ದಾಖಲಾದ ಎಫ್ಐಆರ್ ಹೇಳಿದೆ.

ದೆಹಲಿಯಿಂದ ಹತ್ರಾಸ್ಗೆ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ತೆರಳುತ್ತಿದ್ದಾರೆ ಎಂಬ ಸುಳಿವು ದೊರೆತ ನಂತರ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರು ಮಥುರಾದ ಮಠ ಟೋಲ್ ಪ್ಲಾಜಾದಲ್ಲಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿಸಲ್ಪಟ್ಟಿರುವ ನಾಲ್ವರು ಕಾರಿನಲ್ಲಿದ್ದರು ಮತ್ತು ತಮ್ಮನ್ನು ಮುಜಾಫರ್ ನಗರದ ಅತೀಕ್-ಉರ್ ರೆಹಮಾನ್, ಮಲಪ್ಪುರಂನ ಸಿದ್ದೀಕ್, ಬಹ್ರೇಚ್ ಮಸೂದ್ ಅಹ್ಮದ್ ಮತ್ತು ರಾಂಪುರದ ಆಲಂ ಎಂದು ಗುರುತಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾg.

ಬಂಧಿತರಿಂದ ಶಾಂತಿ ಸುವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದಾದ ಸಾಹಿತ್ಯ, ಮೊಬೈಲ್ ಫೋನ್, ಲ್ಯಾಪ್ಟಾಪ್ ವಶ ಪಡಿಸಿಕೊಳ್ಳಲಾಗಿದೆ.

ವಿಚಾರಣೆ ವೇಳೆ, ಬಂಧಿತರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್) ಮತ್ತು ಅದರ ಸಹವರ್ತಿ ಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್) ಜೊತೆಗೆ ಸಂಪರ್ಕ ಹೊಂದಿದ್ದುದು ಬೆಳಕಿಗೆ ಬಂದಿದೆ. ಅವರ ಬಗ್ಗೆ ಇನ್ನಷ್ಟು ವ್ಯಾಪಕ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯುಜೆ) ಸಂಘಟನೆಯು ಸಿದ್ದೀಕ್ ತನ್ನ ಸದಸ್ಯ ಹಾಗೂ ಕಾರ್ಯದರ್ಶಿ ಎಂದು ಪ್ರತಿಪಾದಿಸಿದೆ. ಉತ್ತರ ಪ್ರದೇಶ ಪೊಲೀಸರ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಕಟ್ಟೆ ಏರಲು ಪತ್ರಕರ್ತರ ಸಂಘಟನೆಯ ಸದಸ್ಯರು ಇದೀಗ ಮುಂದಾಗಿದ್ದಾರೆ.

ಹತ್ರಾಸ್ ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡುವ ಮೂಲಕ ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸಿದ ಆಪಾದನೆಯಲ್ಲಿ ಭಾನುವಾರ ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೆ ಒಳಗಾಗಿ, ದೇಶದ್ರೋಹ, ಕ್ರಿಮಿನಲ್ ಫಿತೂರಿಗಾಗಿ ರಾಷ್ಟ್ರದ್ರೋಹ ಪ್ರಕರಣ ದಾಖಲಾಗಿರುವ ಅಪರಿಚಿತ ವ್ಯಕ್ತಿಗಳ ಗುಂಪಿನಲ್ಲಿ ಇನ್ನೊಬ್ಬ ಪತ್ರಕರ್ತ ಮತ್ತು ಹೆಸರು ತಿಳಿಯದ ಒಬ್ಬ ರಾಜಕಾರಣಿಯೂ ಸೇರಿರುವುದಾಗಿ ಮೂಲಗಳು ಹೇಳಿವೆ.

ಚಾಂದಪಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಪತ್ರಿಕಾ ವರದಿ ತಿಳಿಸಿದೆ. ಹತ್ರಾಸ್ನಲ್ಲಿ ದಾಖಲಾದ ಇತರ ಮೂರು ಎಫ್ಐಆರ್ಗಳಲ್ಲಿ ಸೆಕ್ಷನ್ ೧೪೪ ಉಲ್ಲಂಘನೆಗಾಗಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ ೬೮೦ ಜರ ಹೆಸರುಗಳನ್ನು ದಾಖಲಿಸಲಾಗಿದೆ.

No comments:

Advertisement