ಚೀನಾ, ಪಾಕ್ ಜೊತೆ ದ್ವಿಮುಖ ಹೋರಾಟಕ್ಕೆ ಭಾರತ ಸಿದ್ಧ
ನವದೆಹಲಿ: ಚೀನಾ ಮತ್ತು ಪಾಕಿಸ್ತಾನ ಎರಡೂ ಕಡೆಯಿಂದ ನಡೆಯಬಹುದಾದ ದ್ವಿಮುಖ ಹೋರಾಟ ಸೇರಿದಂತೆ ಸೇರಿದಂತೆ ಯಾವುದೇ ಸಂಘರ್ಷಕ್ಕೆ ಭಾರತ ಸಿದ್ಧವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅವರು 2020 ಅಕ್ಟೋಬರ್ 05ರ ಸೋಮವಾರ ಹೇಳಿದರು.
"ನಾವು ಪೂರ್ವ ಲಡಾಖ್ನಲ್ಲಿ ನಮ್ಮ ಪಡೆಗಳನ್ನು ಬಲವಾಗಿ ನಿಯೋಜಿಸಿದ್ದೇವೆ. ಪೂರ್ವ ಲಡಾಖ್ನಲ್ಲಿ ಚೀನಾದ ಯಾವುದೇ ಬೆದರಿಕೆ ಎದುರಿಸಲು ಸಿದ್ಧರಿದ್ದೇವೆ’ ಎಂದು ಅಕ್ಟೋಬರ್ ೮ ರಂದು ನಡೆಯಲಿರುವ ವಾಯುಪಡೆ ದಿನಾಚರಣೆಯ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಭದೌರಿಯಾ ನುಡಿದರು.
ಭಾರತೀಯ ವಾಯುಪಡೆಯು ತ್ವರಿತಗತಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ ಎಂದು ಅವರು ಪ್ರತಿಪಾದಿಸಿದರು.
"ದೇಶವು ಎದುರಿಸುತ್ತಿರುವ ಬೆದರಿಕೆಯ ವ್ಯೂಹವು ಸಂಕೀರ್ಣವಾಗಿದೆ’ ಎಂದು ಅವರು ಹೇಳಿದರು,
"ಉದಯೋನ್ಮುಖ ಬೆದರಿಕೆಗಳು ಭಾರತೀಯ ವಾಯುಪಡೆಯ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ನಮಗೆ ಆದೇಶ ನೀಡುತ್ತವೆ. ಭಾರತವು ಚೀನಾ ವಿರುದ್ಧದ ವೈಮಾನಿಕ ದಾಳಿಯ ಸಮೀಪಕ್ಕೆ ಬಂದಿಲ್ಲವಾದರೂ, ಅದಕ್ಕಾಗಿ ಸನ್ನದ್ಧವಾಗಿಯೇ ಇದೆ’ ಎಂದು ಅವರು ಹೇಳಿದರು. ರಫೇಲ್ ಜೆಟ್Uಳು ನಮಗೆ ಕಾರ್ಯಾಚರಣೆಗೆ ಭೀಮಬಲ ನೀಡಿವೆ ಎಂದು ಅವರು ನುಡಿದರು.
ಪೂರ್ವ ಲಡಾಖ್ನ ಎಲ್ಎಸಿಯಲ್ಲಿ ಭಾರತ ಮತ್ತು ಚೀನಾ ಮಧ್ಯೆ ಉಂಟಾಗಿರುವ ಐದು ತಿಂಗಳ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಯಪಡೆದ ಮುಖ್ಯಸ್ಥರ ಹೇಳಿಕೆ ಮಹತ್ವ ಪಡೆದಿದೆ. ಹಲವಾರು ಹಂತದ ಮಾತುಕತೆಗಳ ಹೊರತಾಗಿಯೂ, ಯಾವುದೇ ಪ್ರಗತಿಯಾಗಿಲ್ಲ ಮತ್ತು ಬಿಕ್ಕಟ್ಟು ಸಂಬಂಧಿತ ನೆನೆಗುದಿ ಮುಂದುವರೆದಿದೆ.
"ಪೂರ್ವ ಲಡಾಖ್ನಲ್ಲಿ ಏನಾಗುತ್ತದೆ ಎಂಬುದು ಮಾತುಕತೆಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರಗತಿ ನಿಧಾನವಾಗಿದೆ, ಆದರೆ ಎರಡೂ ಕಡೆಗಳಲ್ಲಿ ಸ್ಪಷ್ಟ ಉದ್ದೇಶವಿದೆ’ ಎಂದು ಅವರು ಹೇಳಿದರು.
ಇದೇ ವೇಳೆಗೆ, ನೈಜ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೈನಿಕರಿಂದ ನಡೆದಿರುವ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ೧೭ ವರ್ಷಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿರುವುದರಿಂದ ದ್ವಿಮುಖ ಸಮರದ ಬೆದರಿಕೆ ತೀವ್ರಗೊಂಡಿದೆ. ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿನಲ್ಲಿ ಮಂಡಿಸಲಾದ ವರದಿಯಲ್ಲಿ ಪಾಕಿಸ್ತಾನ ಸೇನೆಯು ಈ ವರ್ಷ ಜನವರಿ ೧ ಮತ್ತು ಸೆಪ್ಟೆಂಬರ್ ೭ರ ನಡುವಣ ಅವಧಿಯಲ್ಲಿ ಭಾರತ-ಪಾಕ್ ಗಡಿಯಲ್ಲಿ ೩,೧೮೬ ಕದನ ವಿರಾಮ ಉಲ್ಲಂಘನೆಗಳನ್ನು ನಡೆಸಿದೆ ಎಂದು ತಿಳಿಸಲಾಗಿದೆ.
ಇದಲ್ಲದೆ, ೨೪೨ ಗಡಿಯಾಚೆಯಿಂದ ಗುಂಡು ಹಾರಾಟ ನಡೆಸಿದ ಪ್ರಕರಣಗಳು ವರದಿಯಾಗಿವೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿಯಾಚೆಯಿಂದ ಗುಂಡಿನ ದಾಳಿ ನಡೆದಿದೆ. ಪಾಕಿಸ್ತಾನ ಸೇನೆಯ ದಾಖಲೆಯ ಕದನ ವಿರಾಮ ಉಲ್ಲಂಘನೆ ಮತ್ತು ಚೀನೀ ಸೇನೆಯ ಇತ್ತೀಚಿನ ಆಕ್ರಮಣಗಳು ಭಾರತಕ್ಕೆ ಎರಡು-ಬದಿಯಲ್ಲಿ ಯುದ್ಧದ ಬೆದರಿಕೆಯನ್ನು ಇನ್ನಷ್ಟು ಹೆಚ್ಚಿಸಿವೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಜೊತೆಗಿನ ಘರ್ಷಣೆಯಿಂದಾಗಿ ಜೂನ್ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತದ ೨೦ ಯೋಧರು ಹುತಾತ್ಮರಾದರು. ಗಾಲ್ವಾನ್ ಕಣಿವೆಯಲ್ಲಿ ಗಸ್ತು ತಿರುಗುವ ಪಾಯಿಂಟ್ ೧೪ ರ ಆಸುಪಾಸಿನಲ್ಲಿ ಚೀನಾ ಕಣ್ಗಾವಲು ಠಾಣೆ ನಿರ್ಮಿಸುವುದನ್ನು ವಿರೋಧಿಸಿದಾಗ ಚೀನೀ ಸೈನಿಕರು ಭಾರತೀಯ ಸೈನಿಕರ ಮೇಲೆ ಕ್ರೂರ ದಾಳಿ ನಡೆಸಲು ಕಲ್ಲುಗಳು, ಮುಳ್ಳಿನ ಸಲಾಕೆಗಳು, ಕಬ್ಬಿಣದ ಸರಳುಗಳು ಇತ್ಯಾದಿ ಮಾರಕ ಆಯುಧಗಳನ್ನು ಬಳಸಿದ್ದರು.
ಮೊಲ್ಡೊದಲ್ಲಿ ಭಾರತದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ ವೇಳೆ ನಡೆದ ಘರ್ಷಣೆಯಲ್ಲಿ ತನ್ನ ಐದು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾ ಸೆಪ್ಟೆಂಬರ್ನಲ್ಲಿ ತಿಳಿಸಿದೆ. ಮಾತುಕತೆಗಳ ಬಗ್ಗೆ ತಿಳಿದಿರುವ ಸೌತ್ ಬ್ಲಾಕ್ನ ಉನ್ನತ ಸರ್ಕಾರಿ ಮೂಲವೊಂದರ ಪ್ರಕಾರ ಮೃತರಾದ ಚೀನೀ ಸೈನಿಕರ ಸಂಖ್ಯೆ ಇನ್ನೂ ಹೆಚ್ಚು.
ಕಳೆದ ತಿಂಗಳು, ಪೂರ್ವ ಲಡಾಖ್ನಲ್ಲಿ ನಾಲ್ಕು ತಿಂಗಳ ಕಾಲದ ಸೇನಾ ಬಿಕ್ಕಟ್ಟು ಪರಿಹರಿಸಲು ಉಭಯ ದೇಶಗಳು ಐದು ಅಂಶಗಳ ಒಮ್ಮತವನ್ನು ಬಂದು,
"ಶೀಘ್ರವಾಗಿ ಸೇನಾ ವಾಪಸಾತಿಗೆ’ ಒಪ್ಪಿಕೊಂಡವು, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಉದ್ವಿಗ್ನತೆಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮವನ್ನು ತಪ್ಪಿಸಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಾಸ್ಕೋದಲ್ಲಿ ನಡೆಯಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಅವರ ಚೀನಾದ ತತ್ಸಮಾನ ಅಧಿಕಾರಿ ವಾಂಗ್ ಯಿ ನಡುವಣ ಸಭೆಯಲ್ಲಿ, ಗಡಿ ಪ್ರದೇಶಗಳ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಒಪ್ಪಂದಗಳಿಗೆ ಸಂಪೂರ್ಣ ಅನುಸರಣೆ ನಿರೀಕ್ಷಿಸಲಾಗಿದೆ. ಈ ಸಂದರ್ಭದಲ್ಲ್ತಿ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ಒಪ್ಪುವುದಿಲ್ಲ ಎಂದು ಭಾರತೀಯ ಕಡೆಯವರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಲಡಾಖ್ನ ಪರಿಸ್ಥಿತಿಯ ಕುರಿತು ಮುಂದಿನ ದಾರಿ ಕುರಿತು ಚರ್ಚಿಸಲು ಭಾರತ ಮತ್ತು ಚೀನಾ ಅಕ್ಟೋಬರ್ ೧೨ ರಂದು ಏಳನೇ ಸುತ್ತಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಿವೆ.
No comments:
Post a Comment